ಮೀ–ಟೂ: ಅನುಭವ ಹಂಚಿಕೊಂಡ ನಿಹಾರಿಕಾ

7

ಮೀ–ಟೂ: ಅನುಭವ ಹಂಚಿಕೊಂಡ ನಿಹಾರಿಕಾ

Published:
Updated:
Deccan Herald

ಮುಂಬೈ: ಮಾಜಿ ಮಿಸ್ ಇಂಡಿಯಾ ಹಾಗೂ ನಟಿ ನಿಹಾರಿಕಾ ಸಿಂಗ್ ಅವರು ಬಾಲಿವುಡ್ ಖ್ಯಾತನಾಮರಾದ ನವಾಜುದ್ದೀನ್ ಸಿದ್ದಿಕಿ, ಸಾಜಿದ್ ಖಾನ್‌ ಹಾಗೂ ಭೂಷಣ್ ಕುಮಾರ್ ಅವರಿಂದ ತಮಗಾದ ಮೀ– ಟೂ ಅನುಭವಗಳನ್ನು ಟ್ವಿಟರ್‌ ಮೂಲಕ ಹೇಳಿಕೊಂಡಿದ್ದಾರೆ.

ಪತ್ರಕರ್ತೆ ಸಂಧ್ಯಾ ಮೆನನ್‌ ಈ ಟ್ವಿಟರ್‌ ಪೋಸ್ಟ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

‘ಶೋಷಣೆ ಎಂದರೆ ಏನು, ಯಾರಿಗೆ ಶಿಕ್ಷೆ ನೀಡುತ್ತೇವೆ, ಯಾರನ್ನು ಕ್ಷಮಿಸಲು ಮುಂದಾಗುತ್ತೇವೆ ಎನ್ನುವ ನನ್ನ ಅರ್ಥೈಸುವಿಕೆಯನ್ನು ವಿಸ್ತರಿಸಿಕೊಳ್ಳಲು’ ಈ ಅನುಭವಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾಗಿ ನಿಹಾರಿಕಾ ಹೇಳಿಕೊಂಡಿದ್ದಾರೆ. 

‘ಮಾಡೆಲಿಂಗ್ ಹಾಗೂ ಚಿತ್ರೋದ್ಯಮದಲ್ಲಿ ಹೆಸರು ಮಾಡಲು ಮುಂಬೈಗೆ ಬಂದು ನೆಲೆಯೂರಿದ ಬಳಿಕ ಸಂಕಷ್ಟಗಳು ಆರಂಭವಾದವು. ರಾಜ್ ಕನ್ವರ್‌ ನನ್ನ ಮೊದಲ ಬಾಲಿವುಡ್ ಚಿತ್ರ ನಿರ್ಮಿಸಲು ಮುಂದಾಗಿದ್ದರು. ಆದರೆ ಅದು ಆರಂಭವಾಗಲೇ ಇಲ್ಲ. ಬಳಿಕ 'A New Love Ishtory' ಚಿತ್ರದ ಮೂಲಕ ಟಿ–ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ನನಗೆ ಮೊದಲ ಅವಕಾಶ ನೀಡಲು ಮುಂದಾದರು. ಅವರ ಕಚೇರಿಗೆ ಕರೆಸಿ ಮುಂಗಡ ಹಣ ನೀಡಿ, ರಾತ್ರಿ ನನಗೆ ಮೆಸೇಜ್ ಕಳುಹಿಸಿದ ಭೂಷಣ್, ನಿನ್ನ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಸಲುವಾಗಿ ಒಟ್ಟಿಗೇ ಸಮಯ ಕಳೆಯಲು ಬಯಸುತ್ತೇನೆ ಎಂದರು. ಅದಕ್ಕೆ ಉತ್ತರಿಸಿದ ನಾನು, ಖಂಡಿತಾ ನೀವು ನಿಮ್ಮ ಪತ್ನಿಯನ್ನು ಕರೆತನ್ನಿ, ನಾನು ನನ್ನ ಬಾಯ್‌ಫ್ರೆಂಡ್ ಜತೆ ಬರುತ್ತೇನೆ. ಒಟ್ಟಿಗೇ ಸಮಯ ಕಳೆಯೋಣ ಎಂದೆ. ನಂತರ ಅವರು ನನಗೆ ಎಂದೂ ಮೆಸೇಜ್ ಮಾಡಲಿಲ್ಲ’ ಎಂದು ನಿಹಾರಿಕಾ ನೆನಪಿಸಿಕೊಂಡಿದ್ದಾರೆ.

ಚಿತ್ರ ನಿರ್ದೇಶಕ ಸಾಜಿದ್ ಖಾನ್‌ ಜತೆಗೆ ತಮಗಾದ ಅನುಭವಗಳನ್ನು ಕೊನೆಯಲ್ಲಿ ನಿಹಾರಿಕಾ ಹಂಚಿಕೊಂಡಿದ್ದಾರೆ. 

‘ನನಗೂ ಪರಿಚಯವಿದ್ದ ನಟಿಯೊಬ್ಬಳ ಜತೆ ಸಾಜಿದ್ ಆಗ ಗೆಳೆತನ ಹೊಂದಿದ್ದರು. ನನ್ನ ಸ್ನೇಹಿತೆಯೊಬ್ಬಳು ಎರಡನೇ ರೆಸ್ಟೋರೆಂಟ್ ಆರಂಭಿಸುತ್ತಿದ್ದ ವೇಳೆ ಆ ಗೆಳತಿಯ ಜತೆಗೆ ಅಲ್ಲಿಗೆ ಬಂದಿದ್ದ ಸಾಜಿದ್, ಕೆಲವು ಹೇಳಿಕೆ ನೀಡಿದ್ದರು’ ಎಂದಿರುವ ನಿಹಾರಿಕಾ ಅವುಗಳನ್ನು ಉಲ್ಲೇಖಿಸಿದ್ದಾರೆ.

‘ಈ ರೆಸ್ಟೋರೆಂಟ್ ವರ್ಷದೊಳಗೆ ಮುಚ್ಚಿಹೋಗುತ್ತದೆ ಎನ್ನುವ ನನ್ನ ಮಾತನ್ನು ಬರೆದಿಟ್ಟುಕೊಳ್ಳಿ. ನನ್ನ ಬೆಂಬಲ ಇಲ್ಲದೆ ಈ ನನ್ನ ಗೆಳತಿ ಬಾಲಿವುಡ್‌ನಲ್ಲಿ ಒಂದು ದಿನವೂ ನೆಲೆಯೂರಲು ಸಾಧ್ಯವಿಲ್ಲ ಹಾಗೂ ನಿಹಾರಿಕಾ ಶೀಘ್ರವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ– ಎಂದು ಸಾಜಿದ್ ಹೇಳಿದ್ದರು. ನನ್ನ ಸ್ನೇಹಿತೆ ಈಗ ನಾಲ್ಕನೇ ರೆಸ್ಟೋರೆಂಟ್ ಆರಂಭಿಸುತ್ತಿದ್ದಾಳೆ. ಸಾಜಿದ್ ಗೆಳತಿಯಾಗಿದ್ದ ಆ ನಟಿ, ಅವರ ಜತೆಗಿನ ಗೆಳೆತನ ಬಿಟ್ಟ ನಂತರ ಅದ್ಭುತ ವೃತ್ತಿಜೀವನ ಹೊಂದಿದ್ದಾಳೆ. ನಾನು ಇನ್ನೂ ಜೀವಂತವಾಗಿದ್ದೇನೆ’ ಎಂದು ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.  

‘ಖಚಿತತೆ ಇರಲಿಲ್ಲ’
‘2009ರಲ್ಲಿ ‘ಮಿಸ್‌ ಲವ್ಲಿ’ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಜತೆಗೆ ಅಭಿನಯಿಸಿದೆ. ಹಿಂದಿನ ನನ್ನ ಅನುಭವಗಳಿಗೆ ಹೋಲಿಸಿದರೆ ಇವರಲ್ಲಿ ನೈಜತೆ ಇರುವುದು ತಿಳಿಯಿತು. ಬಳಿಕ ಇಬ್ಬರೂ ಆತ್ಮೀಯರಾದೆವು. ಒಂದು ದಿನ ಬೆಳಗಿನ ಉಪಾಹಾರಕ್ಕೆ ಅವರನ್ನು ಮನೆಗೆ ಆಹ್ವಾನಿಸಿದೆ. ಆಗ ನನ್ನನ್ನು ತಬ್ಬಿಕೊಳ್ಳಲು ಮುಂದಾದ ಅವರ ಜತೆ ಕೊಂಚ ಸಂಘರ್ಷವಾಯಿತು. ಆದರೆ ಕೊನೆಗೆ ಸುಮ್ಮನಾದೆ. ಈ ಸಂಬಂಧದ ಕುರಿತು ಏನು ಮಾಡಬೇಕೆಂದು ನನಗೆ ಖಚಿತತೆ ಇರಲಿಲ್ಲ’ ಎಂದು ನಿಹಾರಿಕಾ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಮಿಸ್ ಇಂಡಿಯಾ ಅಥವಾ ಕಲಾವಿದೆ ತನ್ನ ಪತ್ನಿಯಾಗಬೇಕು ಎನ್ನುವ ಕನಸಿತ್ತು ಎಂದು ನವಾಜುದ್ದೀನ್ ಹೇಳಿದರು. ಅವರ ಈ ಸಣ್ಣ ತಪ್ಪೊಪ್ಪಿಗೆ ನನಗೆ ತಮಾಷೆ ಎನಿಸಿದರೂ ಸ್ಫೂರ್ತಿದಾಯಕವಾಗಿಯೂ ತೋರಿತು. ತನ್ನ ರೂಪ, ಬಣ್ಣದ ಕುರಿತು ಜನ ಆಡಿಕೊಳ್ಳುವುದು ಹಾಗೂ ನಿರರ್ಗಳ ಇಂಗ್ಲಿಷ್ ತಿಳಿಯದೆ ಇರುವುದನ್ನು ಟೀಕಿಸುವ ಕುರಿತು ಅವರು ಸದಾ ದೂರುತ್ತಿದ್ದರು. ಅಭದ್ರತಾ ಭಾವನೆಗಳಿಂದ ಹೊರಬರಲು ಅವರಿಗೆ ಸಹಾಯ ಮಾಡಲು ಮುಂದಾದೆ. ಆದರೆ ತಾನು ಬಲಿಪಶು ಎನ್ನುವ ಭಾವನೆ ಅವರಲ್ಲಿ ಬೇರೂರಿತ್ತು’ ಎಂದು ನೆನಪಿಸಿಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !