ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದ ನಿರೀಕ್ಷೆಯಲ್ಲಿ ‘ನಿರ್ಭಯಾ’

Last Updated 15 ಡಿಸೆಂಬರ್ 2019, 19:56 IST
ಅಕ್ಷರ ಗಾತ್ರ

ಕಾಲಮಿತಿಯಲ್ಲಿ ನ್ಯಾಯ ನಿರ್ಭಯಾ ಪೋಷಕರ ಬೇಡಿಕೆ

ನವದೆಹಲಿ: ದೆಹಲಿಯ ಯುವತಿ ನಿರ್ಭಯಾ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ದುರುಳರಿಂದ ಬಸ್‌ನಿಂದ
ಹೊರದಬ್ಬಿಸಿಕೊಂಡ ಆ ದಿನಕ್ಕೆ ಈಗ 7 ವರ್ಷಗಳು (2012ರ ಡಿಸೆಂಬರ್ 16). ಆದರೆ ನಿರ್ಭಯಾ ಪೋಷಕರು ಈಗಲೂ ನ್ಯಾಯದ ನಿರೀಕ್ಷೆಯಲ್ಲಿ ಇದ್ದಾರೆ.

ನಿರ್ಭಯಾ ಪ್ರಕರಣದ ಬಳಿಕ ದೆಹಲಿಗೆ ಅತ್ಯಾಚಾರದ ರಾಜಧಾನಿ ಎಂಬ ಹಣೆಪಟ್ಟಿ ಬಿದ್ದಿತು. ಆದರೆ ಈ ಕಾರಣಕ್ಕೆ ರಾಷ್ಟ್ರ ರಾಜಧಾನಿಯನ್ನು ದ್ವೇಷಿಸುವುದಿಲ್ಲ ಎನ್ನುತ್ತಾರೆ ನಿರ್ಭಯಾ ಪೋಷಕರು. ಅತ್ಯಾಚಾರ ಮನಸ್ಥಿತಿಯು ದೇಶವ್ಯಾಪಿಯಾಗಿದೆ. ಇಂತಹ ಘಟನೆ ನಡೆಯದ ಜಾಗ ಎಲ್ಲಿದೆ ಎಂದು ಪ್ರಶ್ನಿಸುವ ಅವರು, ಕಾಲಮಿತಿಯೊಳಗೆ ಅಪರಾಧಿಗಳನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸುತ್ತಾರೆ.

ಏಳು ವರ್ಷಗಳಿಂದ ನ್ಯಾಯದ ನಿರೀಕ್ಷೆಯಲ್ಲಿರುವ ಅವರಿಗೆ ಕೆಲ ದಿನಗಳಿಂದ ಭರವಸೆಯೊಂದು ಮೂಡಿದೆ. ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಶೀಘ್ರವೇ ನೇಣಿನ ಕುಣಿಕೆಗೆ ಹಾಕುವ ವರದಿಗಳು ಪ್ರಕಟವಾಗುತ್ತಿದ್ದು, ಪೋಷಕರಲ್ಲಿ ಒಂದಷ್ಟು ಸಮಾಧಾನ ತಂದಿದೆ.

‘ಇನ್ನುಳಿದ ‘ನಿರ್ಭಯ’ರ ಪರವಾಗಿ ಹೋರಾಟ ಮುಂದುವರಿಸುತ್ತೇನೆ ಎನ್ನುತ್ತಾರೆ’ ನಿರ್ಭಯಾ ತಂದೆ. ಈ ಏಳು ವರ್ಷಗಳಲ್ಲಿ ಕಾನೂನಿನ ಲೋಪದೋಷಗಳು ಗೊತ್ತಾಗಿವೆ. ಕಾಲಮಿತಿಯೊಳಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಡ ಹೇರಲು ಹೋರಾಟ
ಮುಂದುವರಿಸುತ್ತೇವೆ ಎನ್ನುತ್ತಾರೆ ಅವರು.

ಎರಡೂ ಕಡೆಯವರ ವಾದ ಆಲಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಲು ವಿಚಾರಣಾ ನ್ಯಾಯಾಲಯಗಳಿಗೆ ಸಮಯ ಹಿಡಿಯುತ್ತದೆ. ಆದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ 15 ದಿನಗಳಲ್ಲಿ, ಕೆಳಗಿನ ನ್ಯಾಯಾಲಯಗಳು ನೀಡಿದ ತೀರ್ಪು ಪರಿಶೀಲಿಸಬೇಕು ಎಂದು ನಿರ್ಭಯಾ ತಂದೆ ಅಭಿಪ್ರಾಯಪಡುತ್ತಾರೆ.

‘ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದನ್ನು ದೇಶದ ಜನ ಸಂಭ್ರಮಿಸಿದರು. ಇದು ಕಾಲಮಿತಿಯೊಳಗೆ ನ್ಯಾಯ ಸಿಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಕಡಿಮೆ ಅವಧಿಯಲ್ಲಿ ಯಾವುದೋ ಒಂದು ರೀತಿಯಲ್ಲಿ ನ್ಯಾಯ ದೊರಕಿದ ಸಮಾಧಾನ ಜನರಲ್ಲಿದೆ’ ಎನ್ನುತ್ತಾರೆ ಅವರು.

ಮಹಿಳೆಯರನ್ನು ಗೌರವಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸುವ ದೊಡ್ಡ ಜವಾಬ್ದಾರಿ ಪೋಷಕರ ಮೇಲಿದೆ ಎನ್ನುತ್ತಾರೆ ನಿರ್ಭಯಾ ತಾಯಿ.

***

‘ನಿರ್ಭಯಾ’: ಇಂದಿನವರೆಗೆ...

-2012ರ ಡಿಸೆಂಬರ್ 16ರ ರಾತ್ರಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

-ಯುವತಿ ಮೇಲೆ ಬರ್ಬರ ಹಲ್ಲೆ ನಡೆಸಿ, ಚಲಿಸುವ ಬಸ್‌ನಿಂದ ಎಸೆದಿದ್ದ ದುಷ್ಕರ್ಮಿಗಳು

-ಗಂಭೀರ ಸ್ಥಿತಿಯಲ್ಲಿದ್ದ ‘ನಿರ್ಭಯಾ’ ಡಿ.29ರಂದು ಸಿಂಗಪುರದ ಆಸ್ಪತ್ರೆಯಲ್ಲಿ ಸಾವು

-ಆರು ಆರೋಪಿಗಳ ಪೈಕಿ ರಾಮ್‌ಸಿಂಗ್ ಎಂಬಾತ ಜೈಲಿನಲ್ಲಿ ಖಿನ್ನತೆಯಿಂದ ಆತ್ಮಹತ್ಯೆ

-ಬಾಲಾಪರಾಧಿಗೆ ಮೂರು ವರ್ಷ ರಿಮಾಂಡ್‌ ಹೋಮ್‌ನಲ್ಲಿ ಶಿಕ್ಷೆ; ಬಿಡುಗಡೆ

-ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು 2017ರಲ್ಲಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

-ಮೂವರ ಮರುಪರಿಶೀಲನೆ ಅರ್ಜಿಗಳು ತಿರಸ್ಕೃತ; ಅಕ್ಷಯ್ ಎಂಬಾತನ ಅರ್ಜಿ ಮಂಗಳವಾರ ವಿಚಾರಣೆ

****

ರಕ್ತದಲ್ಲಿ ಪತ್ರ ಬರೆದ ಶೂಟರ್

ಲಖನೌ: ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ ನೇಣು ಹಾಕಲು ತಮಗೆ ಅವಕಾಶ ನೀಡಬೇಕು ಎಂದು ಕೋರಿ ಶೂಟರ್ ವರ್ತಿಕಾ ಸಿಂಗ್ ಅವರು ರಕ್ತದಲ್ಲಿ ಪತ್ರ ಬರೆದಿದ್ದಾರೆ.

ನೇಣಿಗೇರಿಸಲು ಅವಕಾಶ ನೀಡಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದಾರೆ.

‘ಭಾರತದಲ್ಲಿ ಮಹಿಳೆಯರನ್ನು ದೇವತೆಯಂತೆ ನೋಡುವ ದೃಷ್ಟಿಕೋನಕ್ಕೆ ಈ ಕ್ರಮದಿಂದ ಇನ್ನಷ್ಟು ಬಲ ಬರಲಿದೆ. ಮಹಿಳೆಯೊಬ್ಬರು ನೇಣಿಗೆ ಹಾಕಬಲ್ಲಳು ಎಂಬ ಅಂಶ ಅತ್ಯಾಚಾರಿಗಳಿಗೆ ತಿಳಿಯಲಿ’ ಎಂದು ಅವರು ಹೇಳಿದ್ದಾರೆ.

***

ಖಿನ್ನತೆಗೆ ಜಾರಿದ ಅಪರಾಧಿಗಳು

ನಿರ್ಭಯಾ ಅತ್ಯಾಚಾರಿಗಳನ್ನು ಸದ್ಯದಲ್ಲೇ ನೇಣಿಗೇರಿಸಲಾಗುತ್ತದೆ ಎಂಬ ವದಂತಿಗಳಿಂದ ಕಂಗೆಟ್ಟಿರುವ ನಾಲ್ವರು ಅಪರಾಧಿಗಳು ಖಿನ್ನತೆಗೆ ಜಾರಿದ್ದಾರೆ.ಅವರು ಊಟವನ್ನೂ ಕಡಿಮೆ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಷಯ್, ಮುಖೇಶ್, ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಈಗ ತಿಹಾರ್ ಜೈಲಿನಲ್ಲಿದ್ದಾರೆ. ಪ್ರತಿ ಅಪರಾಧಿಯ ಮೇಲೆ ನಾಲ್ವರು ಭದ್ರತಾ ಸಿಬ್ಬಂದಿಯ ಕಣ್ಗಾವಲು ಹಾಕಲಾಗಿದೆ.

2013ರಲ್ಲಿ ಆರೋಪಿ ರಾಮ್‌ಸಿಂಗ್ ಖಿನ್ನತೆಯಿಂದ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಬಳಿಕ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಜೈಲಿನ ದೂರವಾಣಿಗಳ ಮೇಲೆ ನಿಗಾ ವಹಿಸಲಾಗಿದೆ.

****

ಹತಾಶೆಯಲ್ಲಿ ಅಪರಾಧಿಯ ತಾಯಿ

ಅಪರಾಧಿ ವಿನಯ್ ಶರ್ಮಾನ ತಾಯಿ ಮಾನಸಿಕವಾಗಿ ಕುಸಿದಿದ್ದಾರೆ. ಮಗ ಎಸಗಿದ ಹೀನ ಕೃತ್ಯ ಹಾಗೂ ಅವನಿಗೆ ಎದುರಾಗಿರುವ ಮರಣದಂಡನೆಯಿಂದ ಆಕೆ ಗಾಸಿಗೊಂಡಿದ್ದಾರೆ. ತಮ್ಮ ಹೆಸರು ಹೇಳಲೂ ಈಗ ಅವರು ಇಚ್ಛಿಸುತ್ತಿಲ್ಲ.

ಮಗ ಮಾಡಿದ ತಪ್ಪಿಗಾಗಿ ಏಳು ವರ್ಷಗಳಿಂದ ಪೊಲೀಸ್ ಠಾಣೆ, ಕೋರ್ಟ್, ಜೈಲು ಎಂದು ತಿರುಗಾಡಿ ದಣಿದಿದ್ದಾರೆ. ಮಗನಿಗೆ ಗಲ್ಲು ಸನ್ನಿಹಿತವಾಗಿದ್ದು, ಮನೆಗೆ ಮಾಧ್ಯಮ ಪ್ರತಿನಿಧಿಗಳ ದಂಡು ಭೇಟಿ ನೀಡುತ್ತಿದೆ.

ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ
ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರ ಪೈಕಿ ವಿನಯ್ ಕೂಡಾ ಒಬ್ಬ. ಈ ನಾಲ್ವರೂ ದೆಹಲಿಯ ಸುಸಜ್ಜಿತ ಆರ್‌.ಕೆ. ಪುರಂಗೆ ಅಂಟಿಕೊಂಡ ರವಿದಾಸ್‌ ಕ್ಯಾಂಪ್‌ನ ನಿವಾಸಿಗಳು.

ರಾಮ್‌ ಸಿಂಗ್ ಹಾಗೂ ಮುಖೇಶ್ ಸಿಂಗ್‌ನ ಕುಟುಂಬದವರು ದೆಹಲಿಯನ್ನು ತೊರೆದು, ರಾಜಸ್ಥಾನಕ್ಕೆ ಸ್ಥಳ ಬದಲಿಸಿದ್ದಾರೆ. ವಿನಯ್ ಹಾಗೂ ಪವನ್ ಗುಪ್ತಾನ ಕುಟುಂಬ ಕೊಳೆಗೇರಿಯಲ್ಲಿ ವಾಸವಿದೆ.

‘ನನ್ನ ಮಗಳು ಆಸ್ಪತ್ರೆಯಲ್ಲಿದ್ದಾಗ
ಯಾರೂ ಸಹಾಯಕ್ಕೆ ಬರಲಿಲ್ಲ. ಈಗ ಗಲ್ಲು ಸನ್ನಿಹಿತವಾಗಿದ್ದು, ಈಗ ಎಲ್ಲರೂ ಬಂದು, ಹೇಗಿದ್ದೀರಿ ಎಂದು ಕೇಳುತ್ತಿದ್ದಾರೆ. ಅನಾರೋಗ್ಯದಿಂದ ನನಗೆ ಮಾತನಾಡಲೂ ಆಗುತ್ತಿಲ್ಲ’ ಎನ್ನುತ್ತಾರೆ ವಿನಯ್ ತಾಯಿ.
ಹಣ್ಣು ಮಾರಿ ಜೀವನ ಸಾಗಿಸುವ ಪವನ್ ಗುಪ್ತಾ ಕುಟುಂಬದವರು ‘ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಿದ್ದಾರೆ.

***

ಖರ್ಚಾಗದ ‘ನಿರ್ಭಯಾ ನಿಧಿ’

ಮಹಿಳೆಯರ ಸುರಕ್ಷತೆಗೆಂದು 2013ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ನಿರ್ಭಯಾ ನಿಧಿ’ ನಿರೀಕ್ಷೆಯಷ್ಟು ಖರ್ಚಾಗಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

lಕೇಂದ್ರದಿಂದ ಮಂಜೂರಾದ ₹1,649 ಕೋಟಿ ಪೈಕಿ ₹147 ಕೋಟಿ ಮಾತ್ರ ಬಳಕೆ

lಒಂದು ರೂಪಾಯಿಯನ್ನೂ ಖರ್ಚು ಮಾಡದ ಮಹಾರಾಷ್ಟ್ರ, ಮೇಘಾಲಯ, ಮಣಿಪುರ ಸಿಕ್ಕಿಂ, ತ್ರಿಪುರಾ

lಕರ್ನಾಟಕಕ್ಕೆ ಮಂಜೂರಾದ ₹191 ಕೋಟಿ ಪೈಕಿ ₹13.62 ಕೋಟಿ ಖರ್ಚು

lನಿರ್ಭಯಾ ಅತ್ಯಾಚಾರ ನಡೆದ ದೆಹಲಿಯಲ್ಲಿ ಶೇ 5ಕ್ಕಿಂತ ಕಡಿಮೆ ನಿಧಿ ಬಳಕೆ

***

ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರ ಪ್ರಮಾಣ ಶೇ 32ರಷ್ಟಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‌ಸಿಆರ್‌ಬಿ) ಮಾಹಿತಿ ನೀಡಿದೆ.

ಪ್ರಕರಣ;1.46 ಲಕ್ಷ

ಶಿಕ್ಷೆ; 5,822

***

ಉನ್ನಾವ್: ಇಂದು ತೀರ್ಪು

2017ರಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ತೀರ್ಪನ್ನು ದೆಹಲಿ ಕೋರ್ಟ್ ಸೋಮವಾರ ಪ್ರಕಟಿಸಲಿದೆ. ಬಿಜೆಪಿಯ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಸೇರಿದಂತೆ 9 ಮಂದಿ ಈ ಪ್ರಕರಣದ ಆರೋಪಿಗಳು.

ಸಂತ್ರಸ್ತ ಮಹಿಳೆಯು ಕುಟುಂಬ ಸಹಿತವಾಗಿ ಪ್ರಯಾಣಿ ಸುತ್ತಿದ್ದ ಕಾರು ಅಪಘಾತಕ್ಕೆ ಯತ್ನಿಸಲಾಗಿತ್ತು. ಇದೂ ಸೇರಿದಂತೆ ಐದು ಪ್ರಕರಣಗಳಲ್ಲಿ ಸೆಂಗರ್ ಆರೋಪಿ. ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ಲಖನೌ ಕೋರ್ಟ್‌ನಿಂದ ದೆಹಲಿಗೆ ಪ್ರಕರಣ ವರ್ಗವಾಗಿತ್ತು.

***

ಏಳು ವರ್ಷಗಳಿಂದ ನಾನು ‘ಕರ್ಮ ಸಿದ್ಧಾಂತ’ರದಲ್ಲಿ ನಂಬಿಕೆ ಬೆಳೆಸಿಕೊಂಡಿದ್ದೇನೆ. ದೇವರ ಮೇಲಿನ ನಂಬಿಕೆ ಕಳೆದುಕೊಳ್ಳುವುದಿಲ್ಲ. ನಾನೇಕೆ ಇಂತಹ ಸ್ಥಿತಿ ಎದುರಿಸುತ್ತಿದ್ದೇನೆ ಎಂಬಂತಹ ಪ್ರಶ್ನೆಗಳೂ ಆಗಾಗ್ಗೆ ಹುಟ್ಟುತ್ತವೆ
-ನಿರ್ಭಯಾ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT