ಶುಕ್ರವಾರ, ನವೆಂಬರ್ 15, 2019
22 °C
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ‘ಮರುಜೀವ’ ನೀಡಲು ಆದ್ಯತೆ

‘ಸಿಂಗ್‌, ರಾಜನ್‌ ಅವಧಿ ಬ್ಯಾಂಕ್‌ಗಳ ಕೆಟ್ಟಕಾಲ’: ನಿರ್ಮಲಾ ಸೀತಾರಾಮನ್

Published:
Updated:
Prajavani

ನ್ಯೂಯಾರ್ಕ್‌: ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ಮತ್ತು ರಘುರಾಮ್‌ ರಾಜನ್‌ ಅವರು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಆಗಿದ್ದ ಅವಧಿಯು ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ‘ಅತ್ಯಂತ ಕೆಟ್ಟ ಕಾಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

ಕೊಲಂಬಿಯಾ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಇಂಟರ್‌ನ್ಯಾಷನಲ್‌ ಎಂಡ್‌ ಪಬ್ಲಿಕ್‌ ಅಫೇರ್ಸ್‌ನಲ್ಲಿ ಅವರು ಬುಧವಾರ ಉಪನ್ಯಾಸ ನೀಡಿದರು. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ‘ಮರುಜೀವ’ ಕೊಡುವುದೇ ತಮ್ಮ ಪ್ರಾಥಮಿಕ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ.

‘ದೊಡ್ಡ ವಿದ್ವಾಂಸರಾಗಿರುವ ರಘುರಾಮ್‌ ರಾಜನ್‌ ಬಗ್ಗೆ ನನಗೆ ಗೌರವ ಇದೆ. ಭಾರತದ ಆರ್ಥಿಕತೆಯು ಅತ್ಯುತ್ತಮವಾಗಿದ್ದ ಕಾಲದಲ್ಲಿ ರಘುರಾಮ್‌ ಅವರು ಆರ್‌ಬಿಐನ ಗವರ್ನರ್‌ ಆಗಿದ್ದರು’ ಎಂದು ನಿರ್ಮಲಾ ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದ ಮೊದಲ ಅವಧಿಯಲ್ಲಿ ಸರ್ಕಾರವು ಅತಿಯಾಗಿ ಕೇಂದ್ರೀಕೃತವಾಗಿತ್ತು. ಆರ್ಥಿಕ ಪ್ರಗತಿಯ ಸಾಧನೆ ಹೇಗೆ ಎಂಬ ಬಗ್ಗೆ ಸರ್ಕಾರಕ್ಕೆ ಖಚಿತವಾದ ದೃಷ್ಟಿಕೋನ ಇರಲಿಲ್ಲ. ಆರ್ಥಿಕ ಪ್ರಗತಿ ಕುಸಿತಕ್ಕೆ ಇದು ಕೂಡ ಕಾರಣ ಎಂದು ರಘುರಾಮ್‌ ಅವರು ಇತ್ತೀಚೆಗೆ ಹೇಳಿದ್ದರು. ಈ ಬಗ್ಗೆ ನಿರ್ಮಲಾ ಅವರ ಪ್ರತಿಕ್ರಿಯೆ ಕೇಳಲಾಯಿತು. ‘ರಘುರಾಮ್‌ ರಾಜನ್‌ ಅವರು ಆರ್‌ಬಿಐ ಗವರ್ನರ್‌ ಆಗಿದ್ದಾಗ ಬ್ಯಾಂಕ್‌ಗಳ ಸಾಲಕ್ಕೆ ಸಂಬಂಧಿಸಿ ಭಾರಿ ಸಮಸ್ಯೆಗಳಿದ್ದವು’ ಎಂದು ನಿರ್ಮಲಾ ಪ್ರತಿಕ್ರಿಯೆ ನೀಡಿದರು. 

‘ರಾಜಕೀಯ ನಾಯಕರ ಫೋನ್‌ ಕರೆಗಳ ಆಧಾರದಲ್ಲಿಯೇ ರಾಜನ್‌ ಅವರ ಕಾಲದಲ್ಲಿ ಬ್ಯಾಂಕುಗಳು ಸಾಲ ನೀಡುತ್ತಿದ್ದವು. ಈ ಸಂಕಷ್ಟದಿಂದ ಪಾರಾಗಲು ಬ್ಯಾಂಕುಗಳು ಈಗ ಸರ್ಕಾರ ನೀಡುವ ಪುನರ್ಧನವನ್ನು ಅವಲಂಬಿಸುವಂತಾಗಿದೆ. ಮನಮೋಹನ್‌ ಅವರು ಆಗ ಪ್ರಧಾನಿಯಾಗಿದ್ದರು. ಭಾರತದ ಬಗ್ಗೆ ಮನಮೋಹನ್‌ ಅವರಿಗೆ ಸ್ಪಷ್ಟ ದೃಷ್ಟಿಕೋನ ಇತ್ತು ಎಂಬುದನ್ನು ರಘುರಾಮ್‌ ಒಪ್ಪಿಕೊಳ್ಳುತ್ತಾರೆ ಎಂಬುದು ನನಗೆ ಖಚಿತವಿದೆ’ ಎಂದು ನಿರ್ಮಲಾ ಹೇಳಿದ್ದಾರೆ. ಹೀಗಂದಾಗ ಸಭಿಕರು ಜೋರಾಗಿ ನಕ್ಕರು.

‘ನಾನು ಯಾರನ್ನೂ ಗೇಲಿ ಮಾಡುತ್ತಿಲ್ಲ, ನನಗೆ ಅವರ ಬಗ್ಗೆ ಗೌರವ ಇದೆ. ಆದರೆ, ಅವರ ಹೇಳಿಕೆಗೆ ಈ ರೀತಿಯ ಪ್ರತಿಕ್ರಿಯೆಯನ್ನೇ ಕೊಡಬೇಕಾಗಿದೆ’ ಎಂದು ನಿರ್ಮಲಾ ಹೇಳಿದರು.

‘ಬ್ಯಾಂಕುಗಳ ಸ್ಥಿತಿಗತಿಯ ಪರಾಮರ್ಶೆ ಆರಂಭಿಸಿದ್ದಕ್ಕಾಗಿ ರಾಜನ್‌ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ಬ್ಯಾಂಕುಗಳ ಇಂದಿನ ಸ್ಥಿತಿಗೆ ಕಾರಣವೇನು  ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗಿದೆ. ಈ ಸಮಸ್ಯೆಯು ಎಲ್ಲಿಂದ ಬಂತು ಎಂದೂ ಕೇಳಬೇಕಾಗಿದೆ’ ಎಂದು ಹೇಳಿದ್ದಾರೆ.

‘ಅತಿ ಪ‍್ರಜಾಪ್ರಭುತ್ವದಿಂದ ಭ್ರಷ್ಟಾಚಾರ’
ಈಗ ಅತ್ಯಂತ ಕೇಂದ್ರೀಕೃತ ನಾಯಕತ್ವ ಇದೆ ಎಂದಾದರೆ, ಅತ್ಯಂತ ಪ್ರಜಾಸತ್ತಾತ್ಮಕ ನಾಯಕತ್ವವು ಭಾರಿ ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು. ಪ್ರಧಾನಿಯು ಸಚಿವ ಸಂಪುಟದ ಸಮಾನರ ನಡುವೆ ಮೊದಲಿಗ ಮಾತ್ರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

‘ಭಾರತದಂತಹ ವೈವಿಧ್ಯಮಯ ದೇಶಕ್ಕೆ ಪರಿಣಾಮಕಾರಿ ನಾಯಕತ್ವ ಬೇಕು. ಅತಿ ಪ್ರಜಾಪ್ರಸತ್ತಾತ್ಮಕ ನಾಯಕತ್ವವು ಬಹುಶಃ ಹಲವಾರು ಉದಾರವಾದಿಗಳ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಹಿಂದಿನ ಸರ್ಕಾರವು ಎಷ್ಟೊಂದು ಭ್ರಷ್ಟಾಚಾರ ನಡೆಸಿತ್ತು ಎಂದರೆ ಇಂದಿಗೂ ನಾವು ಅದನ್ನು ಸ್ವಚ್ಛ ಮಾಡುತ್ತಿದ್ದೇವೆ’ ಎಂದು ನಿರ್ಮಲಾ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)