ಶುಕ್ರವಾರ, ಜನವರಿ 24, 2020
21 °C

ಎನ್‌ಆರ್‌ಸಿಗೆ ಆಂಧ್ರ ಪ್ರದೇಶದ ಬೆಂಬಲವಿಲ್ಲ: ಜಗನ್‌ ಮೋಹನ ರೆಡ್ಡಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಜಾರಿಗೆ ಅವಕಾಶ ನೀಡುವುದಿಲ್ಲ ಎಂಬ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಹೇಳಿಕೆಗೆ ಸದ್ಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್‌ ಜಗನ್‌ ಮೋಹನ ರೆಡ್ಡಿ ಅವರೂ ಧ್ವನಿಗೂಡಿಸಿದ್ದಾರೆ. 

ಯಾವುದೇ ಸಂದರ್ಭದಲ್ಲೂ ಆಂಧ್ರ ಪ್ರದೇಶ ಎನ್‌ಆರ್‌ಸಿಯನ್ನು ಬೆಂಬಲಿಸುವುದಿಲ್ಲ ಎಂದು ಜಗನ್‌ ಮೋಹನ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. 

‘ಎನ್‌ಆರ್‌ಸಿ ಬಗ್ಗೆ ನೀವು ಸ್ಪಷ್ಟ ನಿಲುವು ಹೊಂದಬೇಕು ಎಂದು ಹಲವು ಮುಸ್ಲಿಂ ಸೋದರರು ನನ್ನನ್ನು ಕೇಳಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಎನ್‌ಆರ್‌ಸಿಗೆ ನಮ್ಮ ಸಹಮತವಿಲ್ಲ. ಅದನ್ನು ಬೆಂಬಲಿಸುವುದಿಲ್ಲ. ಯಾವುದೇ ಸಂದರ್ಭದಲ್ಲೂ ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡುವುದಿಲ್ಲ,’ ಎಂದು ಅವರು ಹೇಳಿದ್ದಾರೆ. 

ಕಡಪಾ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. 

‘ಆಂಧ್ರ ಸರ್ಕಾರದ ಉಪ ಮುಖ್ಯಮಂತ್ರಿ ಅಝ್ಮತ್‌ ಬಾಷಾ ಶೇಖ್‌ ಬೇಪರಿ ಅವರು ನನ್ನನ್ನು ಭೇಟಿ ಮಾಡಿ ಎನ್‌ಆರ್‌ಸಿಗೆ ನಮ್ಮ ಸರ್ಕಾರದ ಬೆಂಬಲವಿಲ್ಲ ಎಂದು ಘೋಷಿಸಬೇಕು ಎಂದು ಕೋರಿದ್ದಾರೆ,’ ಎಂದೂ ಅವರು ತಿಳಿಸಿದರು. 

‘ಕೇಂದ್ರಕ್ಕೆ ನೀವು ನೀಡುತ್ತಿರುವ ಬೆಂಬಲದ ಬಗ್ಗೆ ಮರುಪರಿಶೀಲನೆ ಮಾಡಿ,’ ಎಂದು ಜಗನ್‌ ಮೋಹನ ರೆಡ್ಡಿ ಕುರಿತು ಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್‌ ಓವೈಸಿ ಅವರೂ ಹೇಳಿಕೆ ನೀಡಿದ್ದರು. 

ಇನ್ನಷ್ಟು... 

ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ಸಮ್ಮತವಿಲ್ಲ: ನಿತೀಶ್‌ ಕುಮಾರ್‌

ರಾಜಸ್ಥಾನದಲ್ಲಿ ಎನ್‌ಆರ್‌ಸಿ, ಸಿಎಎ ಜಾರಿಗೆ ಅವಕಾಶವಿಲ್ಲ: ಅಶೋಕ್‌ ಗೆಹ್ಲೋಟ್

ಮಹಾರಾಷ್ಟ್ರದಲ್ಲಿ ಎನ್‌ಆರ್‌ಸಿ, ಸಿಎಎ ಜಾರಿ ಬೇಡ: ಶರದ್‌ ಪವಾರ್‌

ಪೌರತ್ವ ಕಾಯ್ದೆ, ಎನ್‌ಆರ್‌ಸಿ ತಡೆಯಬಲ್ಲ ಎರಡು ಮಾರ್ಗ ತಿಳಿಸಿದ ಪ್ರಶಾಂತ್‌ ಕಿಶೋರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು