ಭಾರತ ನನ್ನಪ್ಪನ ದೇಶ, ಇಲ್ಲಿಂದ ಯಾರೂ ಬಲವಂತವಾಗಿ ಓಡಿಸಬೇಕಾಗಿಲ್ಲ: ಒವೈಸಿ

7

ಭಾರತ ನನ್ನಪ್ಪನ ದೇಶ, ಇಲ್ಲಿಂದ ಯಾರೂ ಬಲವಂತವಾಗಿ ಓಡಿಸಬೇಕಾಗಿಲ್ಲ: ಒವೈಸಿ

Published:
Updated:

ಹೈದರಾಬಾದ್: ಭಾರತ ನನ್ನಪ್ಪನ ದೇಶ, ಯಾರೊಬ್ಬರೂ ನನ್ನನ್ನು ಇಲ್ಲಿಂದ ಬಲವಂತವಾಗಿ ಓಡಿಸಬೇಕಾಗಿಲ್ಲ ಎಂದು ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಪ್ರತಿಕ್ರಿಯಿಸಿದ್ದಾರೆ.  ‘ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒವೈಸಿ ಹೈದರಾಬಾದ್‌ ಬಿಟ್ಟು ಓಡಬೇಕು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಕ್ಕೆ ಒವೈಸಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರವಾದಿ ಆಡಂ ಸ್ವರ್ಗದಿಂದ ಭೂಮಿಗೆ ಬಂದು ಆಮೇಲೆ ಭಾರತಕ್ಕೆ ಬಂದರು ಎಂದು ನನ್ನ ಧರ್ಮದಲ್ಲಿ ನಂಬಿಕೆ ಇದೆ. ಹಾಗಾಗಿ  ಭಾರತ ನನ್ನ ಅಪ್ಪನ ದೇಶ ಮತ್ತು ಇಲ್ಲಿಂದ ಯಾರೂ ನನ್ನನ್ನು ಬಲವಂತವಾಗಿ ಓಡಿಸಬೇಕಾಗಿಲ್ಲ ಎಂದು  ಮಜಲಿಸ್ ಇ ಇತ್ತೇಹದುಲ್ ಮುಸ್ಲಿಮೀನ್ (ಎಂಐಎಂ) ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಹೈದರಾಬಾದ್ ಸಂಸದ ಒವೈಸಿ ಹೇಳಿದ್ದಾರೆ.

ನಿಜಾಂ ಮಿರ್ ಒಸ್ಮಾನ್ ಅಲಿ ಖಾನ್ ಹೈದರಾಬಾದ್‍ಗೆ ಓಡಿಕೊಂಡು ಬಂದಿಲ್ಲ, ಅವರನ್ನು ರಾಜ್ ಪ್ರಮುಖ್ ಮಾಡಲಾಗಿತ್ತು. ಚೀನಾದೊಂದಿಗೆ ಯುದ್ಧ ನಡೆದ ವೇಳೆ ಅವರು ತಮ್ಮ ಚಿನ್ನವನ್ನು ಭಾರತಕ್ಕೆ ಕೊಟ್ಟಿದ್ದರು. 
ನಾನು ಯೋಗಿ ಬೆದರಿಕೆಗೆ ಹೆದರುವುದಿಲ್ಲ ಎಂದು ಹೇಳಿದ ಒವೈಸಿ, ಈ ಭಾಷಣ ಮಾತ್ರ ಯೋಗಿ ಅವರದ್ದು, ಇದರಲ್ಲಿನ ಭಾಷೆ ಮತ್ತು ಮನಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಅವರದ್ದು ಎಂದಿದ್ದಾರೆ.

ಆದಿತ್ಯನಾಥ ಅವರ ಕ್ಷೇತ್ರದಲ್ಲಿ  ಪ್ರತಿ ವರ್ಷ ಮೆದುಳುಜ್ವರದಿಂದ 150 ಮಕ್ಕಳು ಸಾವಿಗೀಡಾಗುತ್ತಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮೊದಲು ಆ ಬಗ್ಗೆ ಗಮನ ಹರಿಸಲಿ ಎಂದು ಒವೈಸಿ ಹೇಳಿದ್ದಾರೆ. ಏತನ್ಮಧ್ಯೆ, ಯೋಗಿ ಮಾತಿನ ಬಗ್ಗೆ ಅಸಾದುದ್ದೀನ್ ಒವೈಸಿ ಅವರ ತಮ್ಮ ಅಕ್ಬರುದ್ದೀನ್ ಒವೈಸಿ ಕೂಡಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಾವು ಓಡಿ ಹೋಗುವ ಜಾಯಮಾನದವರಲ್ಲ. ನಮ್ಮ 1000 ತಲೆಮಾರು ಇಲ್ಲಿ ಬದುಕು ಮುಂದುವರಿಸುತ್ತದೆ ಎಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅಕ್ಬರುದ್ದೀನ್ ಒವೈಸಿ ಹೇಳಿದ್ದಾರೆ.

ತಾಂಡೂರಿನಲ್ಲಿ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಆದಿತ್ಯನಾಥ, ‘ಒವೈಸಿ ಅಂಥವರನ್ನು ಹೊರಹಾಕಲು ಬಿಜೆಪಿಗೆ ಅಧಿಕಾರ ನೀಡುವ ಅಗತ್ಯವಿದೆ. ಜೊತೆಗೆ ರಾಷ್ಟ್ರದ ಗಡಿ ರಕ್ಷಣೆ ಹಾಗೂ ಆಂತರಿಕ ಭದ್ರತೆ ಒದಗಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ಪಾಕಿಸ್ತಾನದ ಉಗ್ರರಿಗೆ ಅವರ ಭಾಷೆಯಲ್ಲಿಯೇ ಗುಂಡುಗಳಿಂದ ಉತ್ತರ ನೀಡಿದ್ದೇವೆ’ ಎಂದಿದ್ದರು.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !