ಮಂಗಳವಾರ, ಏಪ್ರಿಲ್ 7, 2020
19 °C

ಮೋದಿ–ಟ್ರಂಪ್‌ ರೋಡ್‌ ಷೋನಲ್ಲಿ ಪಾಲ್ಗೊಳ್ಳುವುದು 70 ಲಕ್ಷ ಜನರಲ್ಲ ಬರೀ 1 ಲಕ್ಷ!

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ನಗರದಲ್ಲಿ ಫೆ. 24ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 22 ಕಿ.ಮೀ. ಉದ್ದದ ರೋಡ್‌ ಷೋನಲ್ಲಿ ಸುಮಾರು ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟ್ರಂಪ್‌ ಅವರು ಹೇಳಿದ ಸಂಖ್ಯೆಗೂ ಗುಜರಾತ್‌ ಅಧಿಕಾರಿಗಳು ಕೊಟ್ಟ ಸಂಖ್ಯೆಗೂ ಅಜಗಜಾಂತರವಿದೆ. ‘70 ಲಕ್ಷ ಜನ ರೋಡ್‌ ಷೋನಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಟ್ರಂಪ್‌ ಹೇಳಿದ್ದರು.

ಗಮನಿಸಬೇಕಾದ ಅಂಶವೆಂದರೆ ಅಹಮದಾಬಾದ್‌ನ ಒಟ್ಟು ಜನಸಂಖ್ಯೆಯೇ 70–80 ಲಕ್ಷದಷ್ಟಿದೆ. ನಗರ ಪಾಲಿಕೆ ಆಯುಕ್ತ ವಿಜಯ್‌ ನೆಹ್ರಾ, ‘ರೋಡ್‌ ಷೋನಲ್ಲಿ ಸುಮಾರು ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ನೆಹ್ರಾ ಫೆ. 16ರಂದು ಮಾಡಿದ ಟ್ವೀಟ್‌ನಲ್ಲಿ ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ ಎಂದೇ ಬರೆದಿದ್ದರು.

ಅಹಮದಾಬಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟ್ರಂಪ್‌ ಮತ್ತು ಮೋದಿ ನೇರವಾಗಿ ಸಬರಮತಿ ಆಶ್ರಮಕ್ಕೆ ತೆರಳಲಿದ್ದಾರೆ. ಅಲ್ಲಿಂದ ಮೊಟೆರಾ ಕ್ರೀಡಾಂಗಣಕ್ಕೆ ಹೊರಡಲಿದ್ದಾರೆ.


ತಾಜ್‌ ಮಹಲ್‌ ಮುಂದಿನ ಕಾರಂಜಿ ಕೊಳವನ್ನು ಕಾರ್ಮಿಕರು ಗುರುವಾರ ಸ್ವಚ್ಛ ಮಾಡಿದರು –ಪಿಟಿಐ ಚಿತ್ರ

ತಾಜ್‌ಗೆ ಕಳೆ, ಯಮುನೆಗೆ ನೀರು
ಮಥುರಾ (ರಾಯಿಟರ್ಸ್):
ಟ್ರಂಪ್ ಭೇಟಿ ನಿಮಿತ್ತ ದೆಹಲಿ, ಅಹಮದಾಬಾದ್, ಆಗ್ರಾ ನಗರಗಳು ಸ್ವಚ್ಛಗೊಳ್ಳುತ್ತಿವೆ. ಅಮೆರಿಕದ ಅಧ್ಯಕ್ಷರು ಆಗ್ರಾದ ‍ಪ್ರಸಿದ್ಧ ತಾಜ್‌ಮಹಲ್‌ನಲ್ಲಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ಸ್ಮಾರಕಕ್ಕೆ ಹೊಂದಿಕೊಂಡಿರುವ ಯಮುನಾ ನದಿ ಸ್ವಚ್ಛತೆಗೆ ಸರ್ಕಾರ ಮುಂದಾಗಿದೆ.

ನದಿ ಭಾಗದ ಪರಿಸರವನ್ನು ಉತ್ತಮಪಡಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ಯಮುನಾ ನದಿಗೆ 500 ಕ್ಯೂಸೆಕ್‌ ನೀರು ಹರಿಸಿದೆ. ನದಿಯ ನೀರು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಆಗ್ರಾ ತಲುಪಲಿದೆ.

₹18,460 ಕೋಟಿ ಹೆಲಿಕಾಪ್ಟರ್‌
ಅಮೆರಿಕದಿಂದ 24 ಎಂಎಚ್‌ –60 ರೋಮಿಯಾ ಬಹೂಪಯೋಗಿ ಹೆಲಿಕಾಪ್ಟರ್‌ಗಳ ಖರೀದಿಗೆ ಭದ್ರತಾ ವ್ಯವಹಾರಗಳ ಸಂಪುಟ ಸಮಿತಿಯು ಒಪ್ಪಿಗೆ ನೀಡಿದೆ. ಇದು ಭಾರತ ಮತ್ತು ಅಮೆರಿಕ ಸರ್ಕಾರಗಳ ನಡುವಣ ಒಪ್ಪಂದ. ಖರೀದಿಯ ಒಟ್ಟು ಮೊತ್ತ ಸುಮಾರು ₹18,460 ಕೋಟಿ. 

ಭಾರತ ಮತ್ತು ಅಮೆರಿಕ ನಡುವೆ 2018ರಲ್ಲಿ ಸಂವಹನ ಸಮನ್ವಯ ಮತ್ತು ಭದ್ರತಾ ಒಪ್ಪಂದ ಆಗಿದೆ. ಸೇನಾ ಬಳಕೆಯ ವಿದ್ಯುನ್ಮಾನ ಮತ್ತು ಸಂಹವನ ಸಲಕರಣೆಗಳ ಮಾರಾಟಕ್ಕೆ ಈ ಒಪ್ಪಂದವು ಅವಕಾಶ ನೀಡುತ್ತದೆ. ಅದರ ಬಳಿಕ ಆಗುತ್ತಿರುವ ಸೇನಾ ಸಲಕರಣೆ ಹಸ್ತಾಂತರದ ಮೊದಲ ವಹಿವಾಟು ಇದಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು