ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆ: ಪಾಟ್ನಾ ಹೈಕೋರ್ಟ್‌ ಗರಂ

ಶುಕ್ರವಾರ, ಮೇ 24, 2019
29 °C

ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆ: ಪಾಟ್ನಾ ಹೈಕೋರ್ಟ್‌ ಗರಂ

Published:
Updated:

ಪಾಟ್ನಾ: ಮಾಜಿ ಮುಖ್ಯಮಂತ್ರಿಗಳಿಗೆ ಜೀವಮಾನವಿಡಿ ಸರ್ಕಾರಿ ವಸತಿ ಸೌಲಭ್ಯ ಒದಗಿಸುವ ನಿಯಮ ಕೈಬಿಡುವಂತೆ ಪಾಟ್ನಾ ಹೈಕೋರ್ಟ್‌ ಮಂಗಳವಾರ ಬಿಹಾರ ಸರ್ಕಾರಕ್ಕೆ ಆದೇಶ ನೀಡಿದೆ.

ಮಾಜಿ ಮುಖ್ಯಮಂತ್ರಿಗಳಿಗೆ ಈ ರೀತಿ ಸೌಲಭ್ಯ ಒದಗಿಸುವುದು ‘ಅಸಂವಿಧಾನಿಕ‘ ಮತ್ತು ಸಾರ್ವಜನಿಕರ ಹಣ ‘ದುರ್ಬಳಕೆ‘ ಮಾಡಿದಂತೆ ಎಂದು ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಎ.ಪಿ.ಸಾಹಿ ಮತ್ತು ನ್ಯಾಯಮೂರ್ತಿ ಅಂಜನ ಮಿಶ್ರಾ ಅವರಿದ್ದ ಪೀಠವು, ಮುಖ್ಯಮಂತ್ರಿಯಾಗಿದ್ದವರ ಅಧಿಕಾರಾವಧಿ ಒಮ್ಮೆ ಮುಗಿದು, ಅವರು ಕಚೇರಿ ತೊರೆದ ಮೇಲೂ ಅವರಿಗೆ ಸರ್ಕಾರಿ ಬಂಗಲೆ ಸೇರಿದಂತೆ ಹಾಲಿ ಮುಖ್ಯಮಂತ್ರಿಗೆ ನೀಡುವ ಸೌಲಭ್ಯಗಳನ್ನು ಮುಂದುವರಿಸುವುದು ಸಂಪೂರ್ಣ ತಪ್ಪು ಎಂದು ಹೇಳಿದೆ.

ಹೈಕೋರ್ಟ್‌ನ ಈ ತೀರ್ಪು, ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್‌ ಮತ್ತು ಅವರ ಪತ್ನಿ ರಾಬ್ಡಿ ದೇವಿ, ಜಗನ್ನಾಥ್‌ ಮಿಶ್ರಾ, ಸತೀಶ್‌ ಪ್ರಸಾದ್‌ ಸಿಂಗ್‌ ಮತ್ತು ಜಿತನ್‌ ರಾಮ್‌ ಮಾಂಝಿ ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಮಾಜಿ ಮುಖ್ಯಮಂತ್ರಿಗಳಿಗೆ ಅವರ ಜೀವಿತಾವಧಿವರೆಗೂ ಸರ್ಕಾರಿ ಬಂಗಲೆ ಒದಗಿಸಲು ಬಿಹಾರ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಾವಳಿಗಳನ್ನು ಸ್ವಯಂ ಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡು ಹೈಕೋರ್ಟ್‌ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್‌ ಯಾದವ್‌ ಅವರು ಸಲ್ಲಿಸಿದ್ದ ಮನವಿಯಂತೆ ವಿಭಾಗೀಯ ಪೀಠವು, ಸರ್ಕಾರದ ನಿಯಮಾವಳಿಗಳನ್ನು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡು, ಈ ಆದೇಶ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !