ಶನಿವಾರ, ಜುಲೈ 31, 2021
28 °C

ಬಾಕಿ ವೇತನ ಪಾವತಿಗೆ ವೈದ್ಯರ ಆಗ್ರಹ: ಸಾಮೂಹಿಕ ರಾಜೀನಾಮೆ ಬೆದರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂರು ತಿಂಗಳ ವೇತನ ಬಿಡುಗಡೆ ಕುರಿತು ದೆಹಲಿಯ ಎರಡು ಮುನಿಸಿಪಲ್‌ ಆಸ್ಪತ್ರೆಗಳ ಸ್ಥಾನಿಕ ವೈದ್ಯರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿರುವ ವೈದ್ಯರ ಸಂಘವು, ವಾರದಲ್ಲಿ ಈ ಬೇಡಿಕೆ ಈಡೇರದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದೆ.

ಮುನಿಸಿಪಲ್‌ ವೈದ್ಯರ ಸಂಘವು (ಎಂಸಿಡಿಎ) ಈ ಬಗ್ಗೆ ದೆಹಲಿಯ ಲೆಫ್ಟಿನಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಅವರಿಗೆ ಪತ್ರ ಬರೆದಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೋರಿದೆ.

ಮನವಿಯ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೂ ಕಳುಹಿಸಿದೆ.

ದೆಹಲಿಯ ಕಸ್ತೂರಬಾ ಆಸ್ಪತ್ರೆ‌ ಮತ್ತು ಹಿಂದೂರಾವ್ ಆಸ್ಪತ್ರೆಗಳ ಸ್ಥಾನಿಕ ವೈದ್ಯರು ತಮಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿದ್ದಾರೆ. ಈ ಎರಡೂ ಆಸ್ಪತ್ರೆಗಳಲ್ಲಿ ಹಲವು ವೈದ್ಯರು ಮತ್ತು ಸಿಬ್ಬಂದಿಗೂ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ.

ಎಂಸಿಡಿಎ ಅಧ್ಯಕ್ಷ ಆರ್.ಆರ್.ಗೌತಮ್‌ ಅವರು, ‘ವೈದ್ಯರು ತಮ್ಮ ಮತ್ತು ಕುಟುಂಬದ ಜೀವ ಪಣಕ್ಕಿಟ್ಟು ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ವೈದ್ಯರ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ವೈದ್ಯರ ಬೇಡಿಕೆಗೆ ನಮ್ಮ ಸಂಘದ ಬೆಂಬಲವಿದೆ. ವಾರದಲ್ಲಿ ಬೇಡಿಕೆ ಈಡೇರದಿದ್ದರೆ ಕಠಿಣ ನಿಲುವು ಕೈಗೊಳ್ಳಬೇಕಾಗುತ್ತದೆ. ಅಥವಾ ಸಾಮೂಹಿಕವಾಗಿ ವಿಆರ್‌ಎಸ್‌ ತೆಗೆದುಕೊಳ್ಳಲು ನಮಗೆ ಅನುಮತಿ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು