ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40ರ ಒಳಗಿನವರಿಗೆ ಮಾತ್ರ ಪಿಂಚಣಿಗೆ ಆಕ್ರೋಶ

ಹೊಸ ಪಿಂಚಣಿ ನಿಯಮಕ್ಕೆ ಕಾರ್ಮಿಕ ಸಂಘಟನೆಗಳ ಅಸಮಾಧಾನ
Last Updated 10 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಅಸಂಘಟಿತ ವಲಯದ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ, ಇದು 40 ವರ್ಷದ ಒಳಗಿನ ಕಾರ್ಮಿಕರಿಗೆ ಮಾತ್ರ ಅನ್ವಯ ಎಂದು ಸರ್ಕಾರದ ಅಧಿಸೂಚನೆ ಹೇಳಿದೆ. ಹೀಗಾಗಿ ದೊಡ್ಡ ಸಂಖ್ಯೆಯ ಕಾರ್ಮಿಕರು ಈ ಯೋಜನೆಯಿಂದ ಹೊರಗೆ ಉಳಿಯುತ್ತಾರೆ.

ಸರ್ಕಾರದ ಈ ನಿಯಮವು ಕಾರ್ಮಿಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರವು ಕಾರ್ಮಿಕರಿಂದ ಹಣ ಸಂಗ್ರಹಿಸಿ ಖಾಸಗಿ ಕಂಪನಿಗಳಿಗೆ ನೀಡಲು ಉದ್ದೇಶಿಸಿದೆ. ನಿಜವಾಗಿಯೂ ಸಾಮಾಜಿಕ ಭದ್ರತೆಯ ಅಗತ್ಯ ಇರುವ ಕಾರ್ಮಿಕರನ್ನು ಹೊರಗಿಟ್ಟಿದೆ ಎಂದು ಈ ಸಂಘಟನೆಗಳು ಹೇಳಿವೆ.

20 ವರ್ಷಗಳ ಬಳಿಕವಷ್ಟೇ ಫಲಾನುಭವಿಗೆ ಮೊದಲ ಪಿಂಚಣಿ ದೊರೆಯಲಿದೆ. ಆದರೆ, ಇಷ್ಟೂ ವರ್ಷ ಕಾರ್ಮಿಕರು ಹಣ ಕಟ್ಟುತ್ತಲೇ ಬರಬೇಕು ಎಂಬುದು ಕಾರ್ಮಿಕ ಸಂಘಟನೆಗಳ ಆಕ್ಷೇಪವಾಗಿದೆ. ಅಸಂಘಟಿತ ವಲಯದಲ್ಲಿ ಸುಮಾರು 42 ಕೋಟಿ ಕಾರ್ಮಿಕರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಐದು ವರ್ಷಗಳಲ್ಲಿ ಕನಿಷ್ಠ 10 ಕೋಟಿ ಕಾರ್ಮಿಕರು ಈ ಯೋಜನೆಗೆ ಸೇರಬಹುದು ಎಂಬ ನಿರೀಕ್ಷೆಯನ್ನು ಸರ್ಕಾರ ಇರಿಸಿಕೊಂಡಿದೆ.

‘ಅಸಂಘಟಿತ ವಲಯಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಯೋಜನೆ ಘೋಷಿಸಲಾಗಿದೆ. ಆದರೆ, ಕಾರ್ಮಿಕರು ನೀಡುವ ಹಣದಿಂದಾಗಿ ಇದು ಸರ್ಕಾರದ ಆರ್ಥಿಕ ಭದ್ರತೆ ಯೋಜನೆಯಾಗಿ ಪರಿವರ್ತನೆಯಾಗಿದೆ. ಕಾರ್ಮಿಕರು ಸರ್ಕಾರಕ್ಕೆ20 ವರ್ಷ ಹಣ ನೀಡುತ್ತಲೇ ಇರಬೇಕು. ಸಾಮಾಜಿಕ ಭದ್ರತೆಯ ಹೆಸರಿನಲ್ಲಿ ಕಾರ್ಮಿಕರ ಹಣವನ್ನು ಸರ್ಕಾರ ಪಡೆದುಕೊಳ್ಳುತ್ತದೆ’ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎ.ಆರ್‌. ಸಿಂಧು ಹೇಳಿದ್ದಾರೆ.

ಅಸುರಕ್ಷಿತ ವೃತ್ತಿಗಳಲ್ಲಿರುವ ಹಲವು ಕಾರ್ಮಿಕರು 60 ವರ್ಷದವರೆಗೆ ಬದುಕುವುದೇ ಇಲ್ಲ. ಅಭದ್ರ ಕೆಲಸದಲ್ಲಿ ಇರುವ ವ್ಯಕ್ತಿಗೆ 60 ವರ್ಷದ ಬಳಿಕ ತಿಂಗಳಿಗೆ ₹3 ಸಾವಿರ ಸಿಕ್ಕಿ ಏನು ಪ್ರಯೋಜನ? ಮಧ್ಯ ಮಧ್ಯದಲ್ಲಿ ಕೆಲಸ ಕಳೆದುಕೊಳ್ಳುವ ಕಾರ್ಮಿಕರಿಗೆ ಪಿಂಚಣಿಯ ಕಂತು ತುಂಬುವುದೇ ದೊಡ್ಡ ಹೊರೆಯಾಗಲಿದೆ ಎಂದು ಸಿಪಿಐ (ಎಂಎಲ್‌) ಪಾಲಿಟ್‌ ಬ್ಯೂರೊ ಸದಸ್ಯೆ ಕವಿತಾ ಕೃಷ್ಣನ್‌ ಹೇಳಿದ್ದಾರೆ.

ಯೋಜನೆಗೆ ಅಗತ್ಯ ಇರುವಷ್ಟು ಹಣವನ್ನು ಕೂಡ ಕೇಂದ್ರ ಸರ್ಕಾರ ಮೀಸಲಿಟ್ಟಿಲ್ಲ ಎಂದು ಸಿಂಧು ಆಕ್ಷೇಪ
ವ್ಯಕ್ತಪಡಿಸಿದ್ದಾರೆ. ಯೋಜನೆಗೆ ಗೋಯಲ್‌ ಅವರು ₹500 ಕೋಟಿ ಮೀಸಲಿಟ್ಟಿದ್ದಾರೆ. ಮುಂದೆ, ಅಗತ್ಯ ಬಿದ್ದಾಗ ಹಣ ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದಾರೆ.

40 ವರ್ಷ ದಾಟಿದವರಿಗೇ ಇಂತಹ ಯೋಜನೆಯ ಅಗತ್ಯ ಹೆಚ್ಚು. ಹಾಗಿರುವಾಗ ಅವರನ್ನೇ ಹೊರಗಿಟ್ಟರೆ ಏನು ಪ್ರಯೋಜನ ಎಂದು ಕಾರ್ಮಿಕ ಸಂಘಟನೆಗಳು ಪ್ರಶ್ನಿಸಿವೆ.

ಯೋಜನೆಗೆ ಸೇರಲು ಬಯಸುವ ಕಾರ್ಮಿಕರು ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಸಂಖ್ಯೆ ಹೊಂದಿರಬೇಕು. ಬೇರೆ ಯಾವುದಾದರೂ ಪಿಂಚಣಿ ಯೋಜನೆಯಲ್ಲಿ ಇರುವವರಿಗೆ ಹೊಸ ಪಿಂಚಣಿ ಯೋಜನೆಗೆ ಸೇರಲು ಅರ್ಹತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT