ಶುಕ್ರವಾರ, ಮಾರ್ಚ್ 5, 2021
29 °C
ರಫೇಲ್‌ ಒಪ್ಪಂದ

ಮೋದಿಯಿಂದ ದೇಶದ್ರೋಹ: ಪ್ರಧಾನಿ ವಿರುದ್ಧ ರಾಹುಲ್ ಗಂಭೀರ ಆರೋಪ

ಪಿಟಿಐ/ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘‍ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ‘ಅಧಿಕೃತ ರಹಸ್ಯ ಕಾಯ್ದೆ’ಯನ್ನು ಉಲ್ಲಂಘಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ್ರೋಹದ ಕೆಲಸ ಮಾಡಿದ್ದಾರೆ. ಈ ತಪ್ಪಿಗಾಗಿ ಮೋದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

‘ರಫೇಲ್ ಒಪ್ಪಂದವನ್ನು ಘೋಷಿಸುವುದಕ್ಕೂ ಹತ್ತು ದಿನ ಮೊದಲು ಅನಿಲ್ ಅಂಬಾನಿ ಪ್ಯಾರಿಸ್‌ಗೆ ತೆರಳಿದ್ದರು. ಅಲ್ಲಿ ಫ್ರಾನ್ಸ್‌ನ ರಕ್ಷಣಾ ಸಚಿವರ ಜತೆ ಅಂಬಾನಿ ಮಾತುಕತೆ ನಡೆಸಿದ್ದರು’ ಎಂದು ರಾಹುಲ್ ಗಾಂಧಿ ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಅನಿಲ್ ಅಂಬಾನಿ ಅವರು ಫ್ರಾನ್ಸ್ ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದರ ಬಗ್ಗೆ ಏರ್‌ಬಸ್‌ ಸಿಇಒ ತನ್ನ ಅಧೀನ ಅಧಿಕಾರಿಗಳಿಗೆ ಮಾಹಿತಿ ನೀಡಲು ರವಾನಿಸಿರುವ ಇ–ಮೇಲ್ ಅನ್ನು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.

‘ಈ ಒಪ್ಪಂದದಲ್ಲಿ ಮೋದಿ ಅವರು ಅನಿಲ್ ಅಂಬಾನಿಯ ಪರ ಮಧ್ಯವರ್ತಿಯಂತೆ ಕೆಲಸ ಮಾಡಿದ್ದಾರೆ. ಮೋದಿಯ ಪ್ಯಾರಿಸ್ ಭೇಟಿ ವೇಳೆ ರಫೇಲ್ ಒಪ್ಪಂದ ಘೋಷಣೆಯಾಗುತ್ತದೆ ಎಂಬುದು ಅಂದಿನ ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್ ಮತ್ತು ಅಂದಿನ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ಅವರಿಗೇ ತಿಳಿದಿರಲಿಲ್ಲ. ಪ್ರಧಾನಿ ಮೋದಿಯನ್ನು ಹೊರತುಪಡಿಸಿ ಮತ್ಯಾರಿಗೂ ಈ ಒಪ್ಪಂದದ ಬಗ್ಗೆ ಗೊತ್ತಿರಲಿಲ್ಲ. ಹಾಗಿದ್ದ ಮೇಲೆ ಫ್ರಾನ್ಸ್‌ ರಕ್ಷಣಾ ಸಚಿವರ ಜತೆ ಈ ಒಪ್ಪಂದದ ಬಗ್ಗೆ ಅನಿಲ್ ಅಂಬಾನಿ ಮಾತನಾಡಿದ್ದು ಹೇಗೆ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

‘ಮುಂದಿನ 10 ದಿನಗಳಲ್ಲಿ ಜಗತ್ತಿನ ಅತ್ಯಂತ ದೊಡ್ಡ ರಕ್ಷಣಾ ಒಪ್ಪಂದದ ಗುತ್ತಿಗೆ ತನಗೆ ದೊರೆಯಲಿದೆ ಎಂಬುದನ್ನು ಅನಿಲ್ ಅಂಬಾನಿಗೆ ಪ್ರಧಾನಿ ಮೋದಿಯೇ ಹೇಳಿದ್ದಾರೆ. ಒಬ್ಬ ಗೂಢಾಚಾರಿ ಮಾಡುವ ಕೆಲಸವನ್ನು ಮೋದಿ ಮಾಡಿದ್ದಾರೆ. ಸಂಬಂಧವೇ ಇಲ್ಲದ ವ್ಯಕ್ತಿಗೆ ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಧಾನಿ ನೀಡಿದ್ದಾರೆ. ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ’ ಎಂದು ರಾಹುಲ್ ಆರೋಪಿಸಿದ್ದಾರೆ.

* ರಫೇಲ್ ಹಗರಣ ಈವರೆಗೆ ಭ್ರಷ್ಟಾಚಾರ ಮತ್ತು ಅವ್ಯವಹಾರದ ಪ್ರಕರಣವಷ್ಟೇ ಆಗಿತ್ತು. ಈಗ ಇದು ದೇಶದ್ರೋಹದ ಪ್ರಕರಣ. ಪ್ರಧಾನಿಯನ್ನು ಜೈಲಿಗೆ ಕಳುಹಿಸಲು ಇಷ್ಟು ಸಾಕು

–ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

* ಕಾಂಗ್ರೆಸ್ ಬರೀ ಸುಳ್ಳು ಹೇಳುತ್ತದೆ. ರಾಹುಲ್ ಗಾಂಧಿಗೆ ಏರ್‌ಬಸ್‌ನ ಆಂತರಿಕ ಇ–ಮೇಲ್ ಹೇಗೆ ದೊರೆಯಿತು? ಆ ಕಂಪನಿ ‍ಪರ ಕಾಂಗ್ರೆಸ್ ಲಾಬಿ ಮಾಡುತ್ತಿದ್ದುದ್ದರ ಪ್ರತಿಫಲವೇ ಇದು?

- ರವಿಶಂಕರ್ ಪ್ರಸಾದ್, ಕೇಂದ್ರ ಕಾನೂನು ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು