ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4.94 ಕಿ.ಮೀ. ಉದ್ದದ ರಸ್ತೆ–ರೈಲು ಬೋಗಿಬೀಲ್‌ ಸೇತುವೆ ಲೋಕಾರ್ಪಣೆ

ಅಸ್ಸಾಂ– ಅರುಣಾಚಲ ಪ್ರದೇಶಕ್ಕೆ ಸಂಪರ್ಕ
Last Updated 25 ಡಿಸೆಂಬರ್ 2018, 19:03 IST
ಅಕ್ಷರ ಗಾತ್ರ

ಬೋಗಿಬೀಲ್‌, ಅಸ್ಸಾಂ: ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ದೇಶದ ಅತ್ಯಂತ ಉದ್ದದ ರಸ್ತೆ–ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಾರ್ಪಣೆಗೊಳಿಸಿದರು.

ಬ್ರಹ್ಮಪುತ್ರ ನದಿಯ ಉತ್ತರ ಮತ್ತು ದಕ್ಷಿಣ ತೀರದ ಜನರಿಗೆ ಸಂಪರ್ಕ ಕಲ್ಪಿಸುವ 4.94 ಕಿ.ಮೀ. ಉದ್ದದ ಈ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.

ರಾಜ್ಯಪಾಲ ಜಗದೀಶ್‌ ಮುಖಿ ಮತ್ತು ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಅವರ ಜೊತೆಗೆ ಸೇತುವೆಯ ಮೇಲೆ ಮೋದಿ ಹೆಜ್ಜೆ ಹಾಕಿದರು.

ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶದ ಗಡಿ ಭಾಗಗಳಿಗೆ ಸೇನಾ ವಾಹನಗಳ ತ್ವರಿತ ರವಾನೆಗೆ ಈ ಸೇತುವೆ ನೆರವಾಗಲಿದೆ. ಈ ಸೇತುವೆಯು ಅರುಣಾಚಲ ಪ್ರದೇಶದ ಗಡಿ ಗ್ರಾಮಗಳ ಸಂಪರ್ಕದ ಪ್ರಮುಖ ಕೊಂಡಿಯಾಗಿದೆ.

1997ರಲ್ಲಿ ಅಂದಿನ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 2002ರ ಏಪ್ರಿಲ್‌ನಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು.ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. ಡಿಸೆಂಬರ್‌ 2ರಂದು ಸೇತುವೆಯ ಮೇಲೆ ಮೊದಲ ಬಾರಿಗೆ ಸರಕು ಸಾಗಿಸುವ ರೈಲು ಸಂಚಾರ ನಡೆಸಿತ್ತು.21 ವರ್ಷಗಳ ಬಳಿಕ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿದೆ.

ಅಭಿವೃದ್ಧಿ ಚುರುಕು: ‘ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆ ಸರಿಯಲ್ಲ. ನಮ್ಮ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬೋಗಿಬೀಲ್‌ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ನಂತರ ಇಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಮೊದಲು ಅಭಿವೃದ್ಧಿ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದೇ, ಕಾಗದದಲ್ಲಿಯೇ ಉಳಿಯುತ್ತಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದು ಹಿಂದಿನ ಯುಪಿಎ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.

ಅಟಲ್‌ ಬಿಹಾರಿ ವಾಜಪೇಯಿ ಅವರು ಎರಡನೇ ಅವಧಿಗೂ ಪ್ರಧಾನಿಯಾಗಿದ್ದರೆ, 2008–2009ರಲ್ಲಿಯೇ ಈ ಸೇತುವೆರಾಷ್ಟ್ರಕ್ಕೆ ಸಮರ್ಪಣೆ ಆಗುತ್ತಿತ್ತು. ನಂತರ ಬಂದ ಸರ್ಕಾರ ಈ ಬಗ್ಗೆ ಯಾವುದೇ ಗಮನ ಹರಿಸಲಿಲ್ಲ. 2014ರಲ್ಲಿ ಮತ್ತೆ ಇದಕ್ಕೆ ಚಾಲನೆ ಸಿಕ್ಕಿತು ಎಂದು ಮೋದಿ ಹೇಳಿದರು.

ಇದೇ ಸಂದರ್ಭದಲ್ಲಿ ತಿನ್ಸುಕಿಯಾ–ನಹರ್ಲಾಗನ್‌ ಇಂಟರ್‌ಸಿಟಿ ಎಕ್ಸಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದರು.

ಸೇತುವೆಗೆ 35 ಸಾವಿರ ಟನ್‌ ಉಕ್ಕು ಪೂರೈಸಿದ ಎಸ್‌ಎಐಎಲ್‌

ನವದೆಹಲಿ: ಬೋಗಿಬೀಲ್‌ ರಸ್ತೆ– ರೈಲು ಸೇತುವೆ ನಿರ್ಮಾಣಕ್ಕೆ ಭಾರತೀಯ ಉಕ್ಕು ಪ್ರಾಧಿಕಾರ ನಿಗಮ (ಎಸ್‌ಎಐಎಲ್‌) 35,400 ಟನ್‌ ಉಕ್ಕು ಪೂರೈಸಿದೆ.

ಸೇತುವೆಗೆ ಬಳಕೆಯಾದ ಒಟ್ಟು ಉಕ್ಕಿನ ಪ್ರಮಾಣದಲ್ಲಿ ಎಸ್‌ಎಐಎಲ್‌ಶೇ 50 ರಷ್ಟು ಉಕ್ಕು ಪೂರೈಸಿದೆ. ಭಾರತದ ಮತ್ತೊಂದು ಉದ್ದದ ಧೋಲಾ– ಸಾದಿಯಾ ಸೇತುವೆ ನಿರ್ಮಾಣಕ್ಕೂ ಎಸ್‌ಎಐಎಲ್‌ ಶೇ 90 ರಷ್ಟು ಉಕ್ಕು ಪೂರೈಸಿತ್ತು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

* ಇದು ಕೇವಲ ಸೇತುವೆ ಅಲ್ಲ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೋಟ್ಯಂತರ ಜನರ ಜೀವನಾಡಿ

ನರೇಂದ್ರ ಮೋದಿ,ಪ್ರಧಾನಿ

ದಿಬ್ರುಗರ್‌ಗೆ ಮಧ್ಯಾಹ್ನ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಚಾಪರ್‌ ಮೂಲಕಬೋಗೀಬೀಲ್‌ ತಲುಪಿದ್ದು, ಬ್ರಹ್ಮಪುತ್ರ ನದಿಯ ದಕ್ಷಿಣ ತೀರದಲ್ಲಿ ಸೇತುವೆಯ ಉದ್ಘಾಟನೆ ನೆರವೇರಿಸಿದರು. ಅಸ್ಸಾಂ ರಾಜ್ಯಪಾಲ ಜಗದೀಶ್‌ ಮುಖಿ ಮತ್ತು ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಅವರ ಜೊತೆಗೆ ಸೇತುವೆಯ ಮೇಲೆ ಮೋದಿ ಸ್ವಲ್ಪ ದೂರ ಸಾಗಿದರು.

ವಿಶೇಷಗಳು

*42 ಆಧಾರ ಕಂಬಗಳು

* 126 ಮೀಟರ್ ಎರಡು ಕಂಬಗಳ ನಡುವಣ ಅಂತರ

* 32 ಮೀಟರ್ ನೀರಿನ ಮಟ್ಟದಿಂದ ಸೇತುವೆಯ ಎತ್ತರ

* 4.94 ಕಿ.ಮೀ. ಸೇತುವೆಯ ಉದ್ದ

* 2 ಬ್ರಾಡ್‌ಗೇಜ್‌ ರೈಲು ಮಾರ್ಗಗಳು

* 3 ಪಥದ ರಸ್ತೆ

* 1997ರಲ್ಲಿ ಆಗಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಂದ ಶಿಲಾನ್ಯಾಸ

* 2002ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕಾಮಗಾರಿಗೆ ಚಾಲನೆ

* 7 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು

* 2007ರಲ್ಲಿ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ ಯುಪಿಎ ಸರ್ಕಾರ

* ಆದರೆ, ವಿವಿಧ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಳ್ಳಲಿಲ್ಲ; 2018ರ ಮಾರ್ಚ್‌ಗೆ ಪೂರ್ಣಗೊಳಿಸುವ ಗಡುವು ಹಾಕಿಕೊಳ್ಳಲಾಗಿತ್ತು

* ಮತ್ತೆ ವಿಳಂಬವಾಗಿ ಈಗ ಕಾಮಗಾರಿ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT