ಶನಿವಾರ, ಜುಲೈ 31, 2021
20 °C
ಸುಪ್ರೀಂ ಕೋರ್ಟ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಈ ಮಾಹಿತಿ ಇಲ್ಲ * ಅಂತಿಮ ದರ ನಿಗದಿಪಡಿಸಿದ್ದು ಪ್ರಧಾನಿ ಮೋದಿ ನೇತೃತ್ವದ ಸಮಿತಿ

ಮುಗಿಯದ ರಫೇಲ್ ಚರ್ಚೆ: ಅಂತಿಮ ದರ ನಿಗದಿ ವೇಳೆ ನಿಯಮ ಕಡೆಗಣಿಸಿದ್ರಾ ಮೋದಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತೀರ್ಪು ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರವನ್ನು ನಿರಾಳವಾಗಿಸಿರಬಹದು. ಆದರೆ, ಪ್ರಕರಣ ಇಲ್ಲಿಗೇ ಸಂಪೂರ್ಣವಾಗಿ ಬಗೆಹರಿದಂತೆ ಗೋಚರಿಸುತ್ತಿಲ್ಲ. ರಫೇಲ್ ಒಪ್ಪಂದದ ಅಂತಿಮ ದರ ನಿಗದಿ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಕ್ಷಣಾ ವ್ಯವಹಾರಗಳ ಸಚಿವ ಸಂಪುಟ ಸಮಿತಿಯೇ ಅಂತಿಮ ದರ ನಿಗದಿಪಡಿಸಿದೆ. ಈ ವಿಚಾರ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಒಳಗೊಂಡಿರಲಿಲ್ಲ ಎಂದು ದಿ ಕ್ಯಾರವಾನ್ ನಿಯತಕಾಲಿಕ ವರದಿ ಮಾಡಿದೆ.

ಈ ವಿಚಾರ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಮತ್ತೆ ಚರ್ಚೆ ಹುಟ್ಟುಹಾಕುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂಬ ಕಾಂಗ್ರೆಸ್ ಆಗ್ರಹಕ್ಕೆ ಇದು ಇನ್ನಷ್ಟು ಪುಷ್ಟಿ ನೀಡಲಿದೆ.

ಇದನ್ನೂ ಓದಿ: ರಫೇಲ್ ಒಪ್ಪಂದ: ಕೇಂದ್ರಕ್ಕೆ ನಿರಾಳತೆ ಒದಗಿಸಿದ ‘ಸುಪ್ರೀಂ’ ತೀರ್ಪು

ಆರಂಭದಲ್ಲಿ ರಫೇಲ್‌ ಒಪ್ಪಂದದ ದರ 520 ಕೋಟಿ ಯುರೋ (ಅಂದಾಜು ₹4 ಲಕ್ಷ ಕೋಟಿಗೂ ಹೆಚ್ಚು) ಎಂದು ನಿಗದಿಯಾಗಿತ್ತು. ಆದರೆ, 2016ರಲ್ಲಿ ಪ್ರಧಾನಿ ಮೋದಿ ಒಪ್ಪಂದಕ್ಕೆ ಸಹಿ ಹಾಕಿದಾಗ ನಿಗದಿಯಾಗಿದ್ದ ದರ ಆರಂಭದ ದರಕ್ಕಿಂತ 250 ಕೋಟಿ (ಸುಮಾರು ₹2 ಲಕ್ಷ ಕೋಟಿ) ಯುರೋದಷ್ಟು ಹೆಚ್ಚು ಮೊತ್ತದ್ದಾಗಿತ್ತು ಎಂಬುದನ್ನು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರಿಂದ ಖಚಿತಪಡಿಸಿರುವುದಾಗಿ ಕ್ಯಾರವಾನ್ ವರದಿ ಉಲ್ಲೇಖಿಸಿದೆ.

ಆರಂಭದ ಬೆಲೆಯಲ್ಲಿ ಒಪ್ಪಂದ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದಿನ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ನೇತೃತ್ವದ ರಕ್ಷಣಾ ಉಪಕರಣಗಳ ಖರೀದಿ ಸಮಿತಿ (Defence Acquisition Council- DAC) ಬೆಲೆ ನಿಗದಿ ಮರು ಪರಿಶೀಲನೆಗೆ ಮಾರ್ಗಸೂಚಿ ರೂಪಿಸಲು ಸಲಹೆ ನೀಡಿತು. ಆದರೆ, ಈ ಹಿಂದೆ ಅನುಸರಿಸುತ್ತಿದ್ದ ಕಡ್ಡಾಯ ಪ್ರಕ್ರಿಯೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಬೆಲೆ ಮರುನಿಗದಿಗೆ ಕ್ರಮ ಅನುಸರಿಸಲಾಗಿತ್ತು. ಹೀಗೆ ಬೆಲೆ ಮರು ನಿಗದಿ ಮಾಡಿದ್ದಕ್ಕೆ ಮೋದಿ ನೇತೃತ್ವದ ರಕ್ಷಣಾ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿತ್ತು. ಇವಿಷ್ಟೂ ವಿಚಾರಗಳು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಒಳಗೊಂಡಿಲ್ಲ ಎಂದು ವರದಿ ಹೇಳಿದೆ.

2016ರ ಆಗಸ್ಟ್ 24ರಂದು ಅಂತಿಮ ದರಕ್ಕೆ ಪ್ರಧಾನಿ ಅನುಮೋದನೆ ನೀಡಿದ್ದರು. ಬಿಜೆಪಿ ಸರ್ಕಾರವೇ ನಿಯೋಜಿಸಿದ್ದ ತಜ್ಞರು ನಿಗದಿಪಡಿಸಿದ್ದ ದರವನ್ನೇ ಮೀರಿ ಪ್ರಧಾನಿ ಈ ತೀರ್ಮಾನ ಕೈಗೊಂಡಿದ್ದರು. ಈ ಸಂದರ್ಭ, ರಕ್ಷಣಾ ಉಪಕರಣಗಳ ಖರೀದಿ (ಡಿಪಿಪಿ) ಪ್ರಕ್ರಿಯೆಯ ಅನ್ವಯ 2013ರಲ್ಲಿ ನಿಗದಿ‍ಪಡಿಸಲಾಗಿದ್ದ ಪ್ರಕ್ರಿಯೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. 

ಡಿಪಿಪಿ ಪ್ರಕಾರ 36 ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದದ ದರ ನಿಗದಿಪಡಿಸಲು 2015ರಲ್ಲಿ ಭಾರತೀಯ ಸಂಧಾನ ತಂಡ (ಐಎನ್‌ಟಿ) ರಚಿಸಲಾಗಿತ್ತು. 2013ರ ರಕ್ಷಣಾ ಉಪಕರಣಗಳ ಖರೀದಿ ಪ್ರಕ್ರಿಯೆಯ ಅನ್ವಯ ಐಎನ್‌ಟಿಯಲ್ಲಿ ಏಳು ಸದಸ್ಯರಿದ್ದರು. ಈ ಕುರಿತು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ಸಲ್ಲಿಸಿದೆ.

‘ಭಾರತೀಯ ಸಂಧಾನ ತಂಡ (ಐಎನ್‌ಟಿ) ರಚಿಸಲಾಗಿದೆ. ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ, ಜಂಟಿ ಕಾರ್ಯದರ್ಶಿ ಮತ್ತು ಖರೀದಿ ಮ್ಯಾನೇಜರ್ (ವಾಯುಪಡೆ), ರಕ್ಷಣಾ ಇಲಾಖೆಯ ದೇಶಿ ಕಂಪನಿಗಳ ನಿರ್ವಹಣೆ ವಿಭಾಗದ ಜಂಟಿ ಕಾರ್ಯದರ್ಶಿ, ವಾಯುಪಡೆಯ ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಹಣಕಾಸು ಸಲಹೆಗಾರ, ಹಣಕಾಸು ಮ್ಯಾನೇಜರ್, ವಾಯುಪಡೆಯ ಸಲಹೆ ವಿಭಾಗ ಮತ್ತು ಸಹಾಯಕ ಮುಖ್ಯಸ್ಥರು ಸರ್ಕಾರದ ಕಡೆಯಿಂದ ಐಎನ್‌ಟಿ ಸದಸ್ಯರಾಗಿದ್ದಾರೆ. ಫ್ರಾನ್ಸ್‌ ಸರ್ಕಾರದ ಕಡೆಯಿಂದ ರಕ್ಷಣಾ ಇಲಾಖೆಯ ಪ್ರಧಾನ ನಿರ್ದೇಶಕರ ನೇತೃತ್ವವಿದೆ. 2015ರ ಮೇನಲ್ಲಿ ಮಾತುಕತೆ ಆರಂಭವಾಗಿದ್ದು, 2016ರ ಏಪ್ರಿಲ್‌ ವರೆಗೆ ಮುಂದುವರಿದಿದೆ. ಒಟ್ಟು 74 ಬಾರಿ ಮಾತುಕತೆ ನಡೆದಿದೆ. ಈ ಅವಧಿಯಲ್ಲಿ 48 ಆಂತರಿಕ ಐಎನ್‌ಟಿ ಸಭೆ ಮತ್ತು ಫ್ರಾನ್ಸ್‌ ಕಡೆಯಿಂದ 26 ಬಾರಿ ಸಭೆ ನಡೆದಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ‍ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ರಕ್ಷಣಾ ಉಪಕರಣಗಳ ಖರೀದಿ ಸಮಿತಿ ಕಡ್ಡಾಯ ಮಾಡಿರುವಂತೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ. ದರ, ವಿತರಣಾ ವೇಳಾಪಟ್ಟಿ, ನಿರ್ವಹಣೆ ನಿಯಮಗಳು, ದೇಶಿ ಪಾಲುದಾರ ಕಂಪನಿ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸುದೀರ್ಘ ಕಥನ: ‘ರಫೇಲ್‌ ಡೀಲ್’ ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು