ಸೋಮವಾರ, ಜನವರಿ 20, 2020
20 °C
ದೆಹಲಿ ಚುನಾವಣೆಗೆ ಸಿದ್ಧತೆ

ಕಾಂಗ್ರೆಸ್ ಟೇಪ್ ಕೇಳದಿರಿ, ನಮ್ಮ ಟ್ರ್ಯಾಕ್‌ ರೆಕಾರ್ಡ್‌ ನೋಡಿ: ಮೋದಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೆಗಾ ರ್‍ಯಾಲಿಯಲ್ಲಿ ಭಾಷಣ ಮಾಡುವ ಮೂಲಕ ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ದೇಶದಾದ್ಯಂತ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ವ್ಯಾಪಕವಾಗಿ ನಡೆಯುತ್ತಿರುವುದರಿಂದ ಈ ರ‍್ಯಾಲಿ ಮತ್ತು ಪ್ರಧಾನಿಯ ಭಾಷಣ ದೇಶದಲ್ಲಿ ಕುತೂಹಲ ಮೂಡಿಸಿದೆ. ಪ್ರಧಾನಿ ಭಾಷಣದ ತಾಜಾ ಅಪ್‌ಡೇಟ್ ಇಲ್ಲಿ ಲಭ್ಯ

3.21: ಮೋದಿ ಭಾಷಣ ಮುಕ್ತಾಯ.

3.20: ಹಿಂಸೆಯಿಂದ ದೂರ ಇರಿ. ಈ ದೇಶ ನಮ್ಮದು. ಇಲ್ಲಿನ ಜನರ ಭವಿಷ್ಯದೊಂದಿಗೆ ನಮ್ಮೆಲ್ಲರ ಭವಿಷ್ಯವೂ ಜೋಡಣೆಗೊಂಡಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಭಾರತ್ ಮಾತಾ ಕಿ ಜೈ ಎಂದು ಹೇಳಿ. –ನರೇಂದ್ರ ಮೋದಿ

3.18: ಕಾಲೊನಿ ಜನರೊಂದಿಗೆ ನಾನು ಏನೋ ಒಂದನ್ನು ಕೇಳಬೇಕು ಅಂತ ಅಂದ್ಕೊಡಿದ್ದೇನೆ. ನೀವು ದೆಹಲಿಯಲ್ಲಿ ಯಾವುದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರಿ. ಜೊತೆಜೊತೆಗೆ ಸ್ವಚ್ಛತಾ ಅಭಿಯಾನವನ್ನೂ ಶುರು ಮಾಡಿ. ಜನವರಿ 1ರ ಹೊಸ ವರ್ಷವನ್ನು ಸ್ವಚ್ಛತಾ ಅಭಿಯಾನದ ಮೂಲಕ ಮಾಡಿ. ಎರಡನೇ ಕೆಲಸ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಕೆಲಸ ಮಾಡಿ. ನಿಮ್ಮ ಕಾಲೊನಿ ಸ್ವಚ್ಛ ಮಾಡಲು ಕೆಲಸ ಮಾಡಿ. ಇದು ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಾವು ಮಾಡಬೇಕಾದ ಕೆಲಸ.

3.14: ಕಾಂಗ್ರೆಸ್‌ನ ಟೇಪ್ ರೆಕಾರ್ಡರ್‌ ಕೇಳಬೇಡಿ. ನಮ್ಮ ಟ್ರ್ಯಾಕ್‌ ರೆಕಾರ್ಡ್‌ ಗಮನಿಸಿ. ನನ್ನ ಎಲ್ಲ ದೇಶವಾಸಿಗಳಿಗೂ ನಾನು ಸೇವಕ. ದೇಶಕ್ಕಾಗಿ, ದೇಶದ ಏಕತೆಗಾಗಿ, ಶಾಂತಿ ಮತ್ತು ಸದ್ಭಾವನೆ ಕಾಪಾಡಲು ನಾನು ಕೈಲಾದ ಎಲ್ಲವನ್ನೂ ಮಾಡ್ತೀನಿ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. –ಮೋದಿ

3.13: ಬಾಂಗ್ಲಾದೇಶದಲ್ಲಿ ಹಲವು ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾರತ ಸಹವರ್ತಿ ದೇಶವಾಗಿದೆ. ಮೋದಿಗೆ ಮುಸ್ಲಿಂ ದೇಶಗಳ ಬೆಂಬಲ ಸಿಗ್ತಿದೆ ಅನ್ನೋದು ಕಾಂಗ್ರೆಸ್ ಆತಂಕಕ್ಕೆ ಕಾರಣ. ಇದೇ ಕಾರಣಕ್ಕೆ ಅವರು ಮುಸ್ಲಿಮರನ್ನು ಹೆದರಿಸಲು ಪ್ರಯತ್ನಿಸುತ್ತಾರೆ. ವಿಶ್ವದ ಮುಸ್ಲಿಮರನ್ನು ಮೋದಿಯನ್ನು ಪ್ರೀತಿಸಿದರೆ ಭಾರತದ ಮುಸ್ಲಿಮರು ಮೋದಿಯನ್ನು ಕಂಡರೆ ಹೆದರುವಂತೆ ಮಾಡುವುದು ಹೇಗೆ ಆಂತ ಅವರು ಯೋಚಿಸುತ್ತಾರೆ. –ಮೋದಿ

3.09: ತ್ರಿವರ್ಣ ಧ್ವಜ ಹಿಡಿಯುವುದು ನಮ್ಮ ಹಕ್ಕು. ಅದು ನಮಗೆ ಕರ್ತವ್ಯಗಳನ್ನು ನೆನಪಿಸಿಕೊಡುತ್ತೆ. 

ಮೋದಿಗೆ ಈಗ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿಯೂ ಮಾನ್ಯತೆ ಇದೆ. ನಾನು ಸರ್ಕಾರ ರಚಿಸಿದ ಮೇಲೆ ಪಾಕ್ ಪ್ರಧಾನಿಗೆ ಸ್ನೇಹ ಹಸ್ತ ಚಾಚಿದ್ದೆ. ಲಾಹೋರ್‌ ತನಕ ಹೋಗಿದ್ದೆ. ಆದರೆ ಅದರ ಬದಲಾಗಿ ನನಗೆ ಮೋಸವಾಯ್ತು. ಆದರೆ ಈಗ ಗಲ್ಫ್‌ ಸೇರಿದಂತೆ ಇಸ್ಲಾಮಿಕ್ ದೇಶಗಳಲ್ಲಿ ಭಾರತದ ಸಂಬಂಧ ಚೆನ್ನಾಗಿದೆ.

ಇದಕ್ಕೆ ಉದಾಹರಣೆ ಕೆಲವು ಕಡೆ ನೋಡಲು ಸಿಗುತ್ತೆ. ಪ್ಯಾಲಸ್ಟೀನ್, ಇರಾನ್, ಜೋರ್ಡಾನ್‌ ಸೇರಿದಂತೆ ಹಲವು ದೇಶಗಳೊಂದಿಗೆ ನಮ್ಮ ಸಂಬಂಧ ಚೆನ್ನಾಗಿ ಆಗ್ತಿದೆ. ಅಫ್ಗಾನಿಸ್ತಾನ್, ಅರಬ್, ಮಾಲ್ಡೀಮ್ಸ್‌, ಬಹರೇನ್‌ಗಳು ಭಾರತೀಯರನ್ನು ಗೌರವಿಸಿವೆ.

3.06: ಕೇಂದ್ರ ಸರ್ಕಾರದ ಕಾನೂನುಗಳನ್ನು ವಿರೋಧಿಸಿ ನಡೆಸುವ ಹೋರಾಟಗಾರರು ಕೆಲವರ ಕೈಲಿ ತ್ರಿವರ್ಣ ಧ್ವಜ ಕಾಣಿಸುತ್ತೆ. ಅಂಥ ಸಂದರ್ಭದಲ್ಲಿ ನನಗೆ ಭರವಸೆ ಕಾಣಿಸುತ್ತೆ. ಅಂಥವರು ಎಂದಿಗೂ ಹಿಂಸಾಚಾರಕ್ಕೆ ಅನುವು ಮಾಡಿಕೊಡುವವರ ಜೊತೆಗೆ ಕೈಜೋಡಿಸುವುದಿಲ್ಲ ಎನ್ನುವ ವಿಶ್ವಾಸವಿದೆ.  –ಮೋದಿ

3.04: ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ನಮ್ಮ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಜಾರಿ ಮಾಡಲ್ಲ ಅಂತ ಹೇಳ್ತಿದ್ದಾರೆ. ಇದು ಎಂದಾದರೂ ಸಾಧ್ಯವೇ? ನೀವು ತೆಗೆದುಕೊಂಡಿರುವ ಪ್ರತಿಜ್ಞೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ತ್ರಿವರ್ಣ ಧ್ವಜದ ಕೆಳಗೆ ನೀವು ನಿಲ್ತೀರಿ –ಮೋದಿ

3.01: ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳಾ–ಪುರುಷರಿಗೆ ಪ್ರತ್ಯೇಕ ಆಸ್ತಿ ಹಕ್ಕು ಇದ್ದಾಗ ಇವರಿಗೆ ಏನೂ ಅನ್ನಿಸಿರಲಿಲ್ಲ. ಆದರೆ ಈಗ ಇವರಿಗೆ ಹೊಟ್ಟ ಉರೀತಿದೆ? ಅಂಥ ಭೇದಭಾವ ಭಾರತ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಇತ್ತೆ? –ಮೋದಿ

2.58: ಬಂಗಾಳದಲ್ಲಿ ಸೇನೆಯ ತಾಲೀಮು ನಡೆಯುತ್ತಿದ್ದಾಗ ದೀದಿಗೆ ಒಮ್ಮೆ ಗಾಬರಿಯಾಗಿತ್ತು. ಅಯ್ಯೋ ಏನಾಗಿದೆ ದೀದಿ ನಿಮಗೆ? ದೇಶದ ಕಾನೂನು ಅರ್ಥ ಮಾಡಿಕೊಳ್ಳಿ. ಯಾರನ್ನು ವಿರೋಧಿಸುತ್ತಿದ್ದೀರಿ ಮತ್ತು ಯಾರನ್ನು ಸಮರ್ಥಿಸುತ್ತಿದ್ದೀರಿ ಅಂತ ಇಡೀ ದೇಶ ನೋಡುತ್ತಿದೆ. 

2.56: ಈಗ ನೋಡಿ, ನಮ್ಮ ಮಮತಾ ದೀದಿ, ನೇರಾನೇರ ಕೊಲ್ಕತ್ತಾದಿಂದ ವಿಶ್ವಸಂಸ್ಥೆಗೆ ಹೊರಟುಬಿಟ್ಟರು. ಆದರೆ ಕೆಲ ವರ್ಷಗಳ ಹಿಂದೆ ಇದೇ ಮಮತಾ ದೀದಿ ಸಂಸತ್ತಿನಲ್ಲಿ ನಿಂತು ‘ಬಾಂಗ್ಲಾದಿಂದ ಬರುವ ನಿರಾಶ್ರಿತರಿಗೆ ಬದುಕಲು ಅವಕಾಶ ಕೊಡಬೇಕು’ ಎಂದು ಕೂಗುತ್ತಿದ್ದರು. ಅದರೆ ದೀದಿ ಇವತ್ತು ಏನಾಗಿದೆ ನಿಮಗೆ? ನೀವು ಏಕೆ ಬದಲಾದಿರಿ? ಏಕೆ ಹೀಗೆ ಮಾತಾಡ್ತಿದ್ದೀರಿ? ಚುನಾವಣೆಗಳು ಬರುತ್ವೆ ಹೋಗುತ್ವೆ. ಅಧಿಕಾರ ಬರುತ್ತೆ–ಹೋಗುತ್ತೆ. ನಿಮಗೆ ಭಯವೇಕೆ? ಬಂಗಾಳ ಜನರ ಮೇಲೆ ನಿಮಗೆ ವಿಶ್ವಾಸ ಏಕೆ ಹೋಯಿತು? –ಮೋದಿ

2.55: ರಾಜಸ್ತಾನದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಈ ಹಿಂದೆ ಪಾಕಿಸ್ತಾನದಿಂದ ಬಂದ ಹಿಂದು–ಸಿಖ್ಖರಿಗೆ ಪೌರತ್ವ ಕೊಡಬೇಕು ಎಂದು ಹೇಳಿದ್ದರು. ಆದರೆ ಈಗ ಮಾತು ಬದಲಿಸಿದ್ದಾರೆ. ಇದು ಸರಿಯೇ? –ಮೋದಿ

2.54: ಹಿಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಹ ಸಂಸತ್ತಿನಲ್ಲಿ ಹೇಳಿದ್ದರು. ಯಾರು ತಮ್ಮ ಧಾರ್ಮಿಕ ನಂಬಿಕೆಗಳ ಕಾರಣಗಳಿಗೆ ಇದ್ದ ದೇಶಗಳಿಂದ ಹೊರಗೆ ಬಂದರೆ ಅವರಿಗೆ ಪೌರತ್ವ ಕೊಡಬೇಕು ಎಂದಿದ್ದರು. ಮನಮೋಹನ್ ಹೇಳಿದ್ದನ್ನು ಮಾಡಿದರೆ ಮೋದಿ ಮೇಲೆ ಏಕೆ ಸಿಟ್ಟು? ಬಾಂಗ್ಲಾದಲ್ಲಿ ಯಾರ ಮೇಲೆ ಅತ್ಯಾಚಾರ ನಡೆಯುತ್ತಿದೆಯೋ ಅವರು ಬಂದರೆ ಸಹಾಯ ಮಾಡಬೇಕು ಎನ್ನುವುದು ಓರ್ವ ಕಾಂಗ್ರೆಸ್ ಮುಖ್ಯಮಂತ್ರಿಯ ಮಾತು ಸಹ ಆಗಿತ್ತು. –ಮೋದಿ

2.51: ಪಾಕಿಸ್ತಾನದಲ್ಲಿರುವ ಹಿಂದೂ, ಸಿಖ್ಖರು ಯಾವಾಗ ಭಾರತಕ್ಕೆ ಬಂದರೂ ಸ್ವಾಗತಿಸಬೇಕು ಎಂದು ಗಾಂಧಿ ಹೇಳಿದ್ದರು. ನೀವು ಮೋದಿ ಮಾತು ಕೇಳದಿದ್ದರೂ ಪರವಾಗಿಲ್ಲ. ಕನಿಷ್ಠ ಗಾಂಧಿಯ ಭಾವನೆಗಳನ್ನಾದರೂ ಗೌರವಿಸಿ. ಮೋದಿ ಸರ್ಕಾರದ ಕಾನೂನುಗಳನ್ನು ಏಕೆ ವಿನಾಕಾರಣ ವಿರೋಧಿಸುತ್ತಿದ್ದೀರಿ. ನಿಮ್ಮ ಕೈಲಿ ಮಾಡಲು ಆಗಲಿಲ್ಲ. ನಮ್ಮ ಕೈಲಿ ಮಾಡಲು ಆಯ್ತು ಅಂತ ವಿರೋಧಿಸುತ್ತಿದ್ದೀರಿ. –ಮೋದಿ

2.49: ನಿರಾಶ್ರಿತರ ಬದುಕು ಹೇಗಿರುತ್ತೆ? ಯಾವುದೇ ಖಾತ್ರಿಯಿಲ್ಲದೆ ಮನೆಗಳಿಂದ ಹೊರಗೆ ಬಂದವರ ಬದುಕು ಹೇಗಿರುತ್ತೆ? ಇದು ದೆಹಲಿ ವಾಸಿಗಳಿಗೆ ಚೆನ್ನಾಗಿ ಗೊತ್ತು. ಅಂಥವರ ಹೊಟ್ಟೆ ಮೇಲೆ ಹೊಡೆಯುವುದು ಪಾಪವಲ್ಲವೇ? ನಾನು ಮತ್ತೆ ಸ್ಪಷ್ಟಪಡಿಸಲು ಇಷ್ಟಪಡ್ತೀನಿ. ಪೌರತ್ವ ತಿದ್ದುಪಡಿ ಕಾನೂನು ಸಂವಿಧಾನ ಬದ್ಧವಾಗಿದೆ. ಅದು ಯಾರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ. ಪೌರತ್ವ ಕೊಡುವುದು ಅದರ ಉದ್ದೇಶ. ಬೇರೆ ದೇಶಗಳಲ್ಲಿ ದೌರ್ಜನ್ಯ ಅನುಭವಿಸಿ ಬಂದವರಿಗೆ ತುಸು ಸಹಾಯ ಮಾಡುವುದು ನಮ್ಮ ಉದ್ದೇಶ.

ಇದು ಕೇವಲ ಮೋದಿ ಒಬ್ಬರ ಯೋಚನೆ ಅಲ್ಲ. ಅದು ಮಹಾತ್ಮಾ ಗಾಂಧಿಯವರ ಭಾವನೆಗೆ ಅನುಗುಣವಾಗಿದೆ. 

2.46: ಯಾವುದೇ ಶರಣಾರ್ಥಿ ದೇಶದ ಗಡಿ ದಾಟಿ ಒಳಗೆ ಬಂದರೆ ಮೊದಲು ಸರ್ಕಾರಿ ಅಧಿಕಾರಿಯ ಮುಂದೆ ಕೈಮುಗಿದು ನಿಲ್ತಾನೆ. ಅವರು ಅದನ್ನು ನಿರಾಕರಿಸುವುದಿಲ್ಲ. ನಮಗೆ ಮೂಲ ನೆಲೆಯಿಂದ ಹೊರಗೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು ಅಂತ ಹೇಳ್ತಾರೆ. ಆದರೆ ನುಸುಳುಕೋರರು ಹಾಗಲ್ಲ. ಅವರು ಅಧಿಕಾರಿಗಳ ಕಣ್ಣಿನಿಂದ ತಪ್ಪಿಸಿಕೊಂಡು ಬದುಕಲು ಯತ್ನಿಸುತ್ತಾರೆ. ಶರಣಾರ್ಥಿಗೂ ನುಸುಳುಕೋರರಿಗೂ ವ್ಯತ್ಯಾಸವಿದೆ. –ಮೋದಿ

2.44: ದೇಶದಲ್ಲಿ ವರ್ಷಗಳಿಂದ ವಾಸವಿರುವ ಜನರ ಬದುಕು ಸುಧಾರಿಸಲು ಅವಕಾಶವಿದೆ. ಅವರ ಧರ್ಮ, ಗೌರವ, ಹೆಣ್ಣುಮಕ್ಕಳ ಗೌರವ ಕಾಪಾಡಿಕೊಳ್ಳಲು ಅವರು ಇಲ್ಲಿದ್ದಾರೆ. ನಾನು ಪ್ರತಿಪಕ್ಷಗಳನ್ನು ಕೇಳಲು ಇಚ್ಛಿಸುತ್ತೇನೆ. ಅಂಥವರ ಜೊತೆಗೆ ನಿಮಗೆ ವೈರತ್ವ ಏನು? –ಮೋದಿ

2.43: ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಮೇಲೆ,  ಅಲ್ಪಸಂಖ್ಯಾತರ ಮೇಲೆ ಹಲ್ಲೆ ಹೇಗೆ ನಡೆಯುತ್ತೆ ಎನ್ನುವುದನ್ನು ಜಗತ್ತಿನ ಎದುರು ತೆರೆದಿಡಲು ಸಂಸತ್ತಿನಲ್ಲಿ ಉತ್ತಮ ಅವಕಾಶ ಇತ್ತು. ಆದರೆ ಅವರಿಗೆ ದೇಶ ಅಲ್ಲ, ತಮ್ಮ ಪಕ್ಷವೇ ಮುಖ್ಯವಾಗುತ್ತೆ. ಹೀಗಾಗಿಯೇ ಅವರು ಅಂಥ ಅತ್ಯುತ್ತಮ ಅವಕಾಶ ಹಾಳುಮಾಡಿಕೊಂಡರು. –ಮೋದಿ

2.40: ಸುಳ್ಳು ಹೇಳಲು ಇವರು ಎಲ್ಲೀತನಕ ಹೋಗ್ತಾರೆ ನೋಡಿ. ಮೋದಿ ಎಂದಿಗೂ ಬಡವರ ವಿರೋಧಿ ಆಗಿರಲಿಲ್ಲ. ಬಡವರನ್ನು ದೇಶದಿಂದ ಓಡಿಸುವ ಆಲೋಚನೆ ಮೋದಿ ಎಂದಿಗೂ ಮಾಡಲಾರ. ಬಡವರಿಗೆ ಮನೆ ಕೊಡಬೇಕು, ಆಸ್ತಿ ಹಕ್ಕು ಕೊಡಬೇಕು ಎನ್ನುವ ಮೋದಿ ಹೀಗೆ ಎಂದಾದರೂ ಮಾಡ್ತಾನಾ?

ಪಾಕಿಸ್ತಾನ್, ಅಫ್ಗಾನಿಸ್ತಾನ್ ಮತ್ತು ಬಾಂಗ್ಲಾದೇಶಗಳಿಂದ ಧಾರ್ಮಿಕ ಕಾರಣಗಳಿಂದ ದೌರ್ಜನ್ಯ ಎದುರಿಸುತ್ತಿರುವವರಿಗೆ ಸುರಕ್ಷೆ ಕೊಡಲು ಈ ಕಾನೂನು ತಂದಿದ್ದೇವೆ. ಕೆಲ ದಲಿತ ನೇತಾರರನ್ನೂ ಇವರು ದಾರಿ ತಪ್ಪಿಸಿದ್ದಾರೆ. ಪಾಕಿಸ್ತಾನದಿಂದ ಬಂದಿರುವ ಬಹುತೇಕ ಹಿಂದೂಗಳು ದಲಿತ ಕುಟುಂಬಗಳಿಗೆ ಸೇರಿದವರಾಗಿದ್ದಾರೆ.

ದಲಿತರು ಯಾವುದೇ ಹೋಟೆಲ್‌ನಲ್ಲಿ ಚಹಾ ಕುಡಿದರೆ ಚಹಾ ಜೊತೆಗೆ ಲೋಟದ ಹಣವನ್ನೂ ಕೊಡಬೇಕು. ಲೋಟ ಮನೆಗೆ ತೆಗೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. –ಮೋದಿ

2.37: ಭಾರತದ ಮಣ್ಣಿನಲ್ಲಿರುವ ಮುಸ್ಲಿಮರು ಭಾರತಮಾತೆಯ ಸಂತಾನ. ಅವರ ಮೇಲೆ ಪೌರತ್ವ ಕಾನೂನು, ಎನ್‌ಆರ್‌ಸಿ ಅನ್ವಯವಾಗುವ ಆಲೋಚನೆಯೇ ಇಲ್ಲ. ಭಾರತದಲ್ಲಿ ಡಿಟೆನ್ಷನ್ ಸೆಂಟರ್ ಇಲ್ಲವೇ ಇಲ್ಲ. ಮುಸ್ಲಿಮರನ್ನು ಅಲ್ಲಿಗೆ ಕಳಿಸುವುದನ್ನು ನಾನು ಯೋಚಿಸುವುದೂ ಇಲ್ಲ. –ಮೋದಿ

2.35: ಕಾಂಗ್ರೆಸ್ ಮತ್ತು ಅದರ ಸಹಚರರು, ನಗರಗಳಲ್ಲಿ ವಾಸಿಸುವ ಕೆಲ ನಕ್ಸಲರು ಹೇಳ್ತಿದ್ದಾರೆ. ದೇಶದ ಎಲ್ಲ ಮುಸ್ಲಿಮರನ್ನು ಡಿಟೆನ್ಷನ್‌ ಸೆಂಟರ್‌ಗಳಿಗೆ ಹಾಕ್ತಾರೆ ಅಂತ ಹೇಳ್ತಿದ್ದಾರೆ. ಡಿಟೆನ್ಷನ್‌ ಸೆಂಟರ್ ಮಾಡಬೇಕು ಅಂತ ಎಲ್ಲಿದೆ? ಇನ್ನಾದರೂ ಸರಿಯಾಗಿ ಓದಿಕೊಳ್ಳಿ. ಆಮೇಲೆ ಮಾತನಾಡಿ. ಕಾಂಗ್ರೆಸ್‌–ನಗರ ನಕ್ಸಲರು ಹೇಳುತ್ತಿರುವ ಡಿಟೆನ್ಷನ್ ಸೆಂಟರ್‌ ಸಂಪೂರ್ಣ ಸುಳ್ಳು. ಅದನ್ನು ನಂಬಬೇಡಿ. ಅದು ಸುಳ್ಳು ಸುಳ್ಳು ಸುಳ್ಳು. –ಮೋದಿ

2.35: 2014ರಿಂದ ಇಲ್ಲಿಯವರೆಗೆ ನನ್ನ ಸರ್ಕಾರ ಬಂದ ಮೇಲೆ ಎಲ್ಲಿಯೂ ಎನ್‌ಆರ್‌ಸಿ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಸುಪ್ರೀಂ ಕೋರ್ಟ್‌ ಅಸ್ಸಾಂನಲ್ಲಿ ಮಾಡು ಎಂದಾಗ ಮಾಡಬೇಕಾಯಿತು.

2.34: ಎನ್‌ಆರ್‌ಸಿ ನಮ್ಮ ಸರ್ಕಾರ ರೂಪಿಸಿದ ಕಾನೂನು ಅಲ್ಲವೇ ಅಲ್ಲ. ಕಾಂಗ್ರೆಸ್ ಆಡಳಿತದ ಕಾಲದಲ್ಲಿಯೇ ಅದು ಸಿದ್ಧವಾಗಿತ್ತು. ಆಗ ಏಕೆ ಸುಮ್ಮನಿದ್ದರಿ? 

2.31: ದೇಶದ ಜನರ ವಿರುದ್ಧ ಹಳೆಯ ಆಯುಧ ಹೊರಗೆ ತಂದಿರುವ ಕೆಲವರು ಜನರಲ್ಲಿ ಭೇದಭಾವ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಯಾವುದೇ ಪೌರನಿಗೆ, ಹಿಂದೂ ಅಥವಾ ಮುಸ್ಲಿಂ ಆಗಿರಲಿ ಅವನಿಗೆ ಸಂಬಂಧಿಸಿದ್ದೇ ಅಲ್ಲ. ಈ ಮಾತನ್ನು ಸಂಸತ್ತಿನಲ್ಲಿಯೇ ಹೇಳಲಾಗಿದೆ. –ಮೋದಿ

2.29: ಹಿಂಸೆ ಬಿಡಲು ಒಂದು ಮಾತು ಹೇಳಲೂ ಪ್ರತಿಪಕ್ಷಗಳು ತಯಾರಿಲ್ಲ. ಪೊಲೀಸರ ಮೇಲೆ ಸತತ ಹಲ್ಲೆ ನಡೆಯುತ್ತಿದೆ. ಪೊಲೀಸರಿಗೆ ಗೌರವ ಸಿಗಬೇಕೋ ಬೇಡವೋ ನೀವು ಹೇಳಿ (ಜನರನ್ನು ಕೇಳಿದ ಮೋದಿ). ಪೊಲೀಸರಿಗೆ ಗೌರವ ಸಿಕ್ಕರೆ ನಮ್ಮ ಸಮಾಜ ಸುಖವಾಗಿರುತ್ತೆ.

‘ಶಹೀದೋ ಅಮರ್‌ ರಹೋ’ (ಹುತಾತ್ಮರು ಅಮರರಾದರು– ಘೋಷಣೆ ಮೊಳಗಿಸಿದ ಮೋದಿ)  ಎಲ್ಲ ಹುತಾತ್ಮ ಪೊಲೀಸರಿಗೂ ನಾವು ಗೌರವ ಸಲ್ಲಿಸುತ್ತೇವೆ. ಹುತಾತ್ಮ ಪೊಲೀಸರಿಗೆ ಗೌರವ ನೀಡಲು ನಾವು ಸ್ವಾರಕ ನಿರ್ಮಿಸಿದ್ದೇವೆ. ನೀವೆಲ್ಲರೂ ಅಲ್ಲಿಗೆ ಹೋಗಿ ಗೌರವ ಸಲ್ಲಿಸಬೇಕು. –ಮೋದಿ

2.26: ಈ ಪ್ರತಿಭಟನೆಗಳ ಹಿಂದಿರುವವರನ್ನು ನಾನು ಕೇಳ್ತೀನಿ? ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಅವರ ಮೇಲೆ ಹಿಂಸಾಚಾರ ನಡೆಸಿದರೆ ನಿಮಗೆ ಏನು ಸಿಗುತ್ತೆ? ಸರ್ಕಾರಗಳು ಬದಲಾಗಬಹುದು ಆದರೆ ಪೊಲೀಸರು ಬದಲಾಗ್ತಾರಾ? ಅವರು ಯಾವಾಗಲೂ ಸಮಾಜದ ಸ್ನೇಹಿತರು. ಅವರಿಗೆ ಗೌರವ ಕೊಡಿ. ಸ್ವಾತಂತ್ರ್ಯ ಬಂದ ಮೇಲೆ ಸಾಕಷ್ಟು ಪೊಲೀಸರು ಬಲಿದಾನ ಮಾಡಿದ್ದಾರೆ. ಅದು ಕಡಿಮೆ ಸಂಖ್ಯೆಯಲ್ಲ. ಅವರೆಲ್ಲರ ಬಗ್ಗೆ ನಮಗೆ ಗೌರವ ಇರಬೇಕು. ನಿಮಗೆ ಸಂಕಟ ಬಂದಾಗ ಪೊಲೀಸರೇ ಬೇಕು. ಆಗ ಪೊಲೀಸರು ನಿಮ್ಮ ಧರ್ಮ ಕೇಳ್ತಾರಾ? ಜಾತಿ ಕೇಳ್ತಾರಾ? ನಿಮ್ಮ ನೆರವಿಗಾಗಿ ನಿಮ್ಮೊಂದಿ ನಿಲ್ತಾರೆ. –ಮೋದಿ

2.22: ಮೋದಿಯನ್ನು ದೇಶದ ಜನರು ಚುನಾಯಿಸಿದ್ದು ನಿಮಗೆ ಇಷ್ಟವಾಗದಿದ್ರೆ ಮೋದಿಯನ್ನು ವಿರೋಧಿಸಿ, ನಿಂದಿಸಿ. ಎಷ್ಟು ಹೊಡೀಬೇಕೋ ಅನ್ಸುತ್ತೋ ಅಷ್ಟು ಹೊಡೀರಿ. ಮೋದಿಯ ಪ್ರತಿಕೃತಿ ಸುಟ್ಟು ಹಾಕಿ. ಬಡವರ ಗುಡಿಸಲು, ಆಟೊ ರಿಕ್ಷಾ ಸುಡಬೇಡಿ ಅಂತ ನನ್ನ ವಿರೋಧಿಗಳಲ್ಲಿ ವಿನಂತಿಸಿಕೊಳ್ಳುವೆ. –ಮೋದಿ

2.21: ದೇಶದಲ್ಲಿ ಹಿಂಸಾಚಾರ ಅಗತ್ಯವೇ? ಭಾರತದ ನಿಷ್ಠಾವಂತ ತೆರಿಗೆದಾರನ ಹಣ ಹಾಳಾಗ್ತಿದೆ. ಜನರ ಬದುಕಿನ ಮೇಲೆ ಪರಿಣಾಮ ಬೀರ್ತಿದೆ. ಇಂಥ ರಾಜಕಾರಿಣಿಗಳ ಉದ್ದೇಶವಾದರೂ ಏನು?

ಇಂಥವರಿಗೆ ನಾನು ಹೇಳಲು ಇಷ್ಟಪಡುವುದು ಇಷ್ಟೇ. ಮೊದಲ ಬಾರಿ ನಾನು ಗೆದ್ದು ಬಂದಾಗ ಹಲವರಿಗೆ ಇವರು ಹೇಗೆ ಗೆದ್ದರು ಅಂತ್ಲೇ ಗೊತ್ತಾಗಲಿಲ್ಲ. ಎರಡನೇ ಬಾರಿ ಹಲವು ಸುಳ್ಳುಗಳನ್ನು ಹೇರಿದರು. ಆದರೆ ದೇಶದ ಜನರು ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಶೀರ್ವಾದ ಮಾಡಿದರು. 

2.18: ಭಾರತದಲ್ಲಿ ಹಲವು ಸಂಪ್ರದಾಯ, ಜಾತಿ, ಪೂಜಾ ಪದ್ಧತಿಯ ಜನರಿದ್ದಾರೆ. ಈ ಯೋಜನೆಯಲ್ಲಿ ನಾನು ಯಾರಿಗೂ ಧರ್ಮ ಕೇಳಲಿಲ್ಲ. ವೈದ್ಯರೂ ಅಷ್ಟೇ, ಧರ್ಮ ಕೇಳಿ ಚಿಕಿತ್ಸೆ ಕೊಡುವುದಿಲ್ಲ. ನನ್ನ ಮೇಲೆ ಏಕೆ ಇಂಥ ಸುಳ್ಳು ಆರೋಪ ಮಾಡ್ತೀರಿ. ಭಾರತವನ್ನು ಹಾಳು ಮಾಡು ಹಿಂಸಾ ವಿನೋದಿಗಳು ನನ್ನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. –ಮೋದಿ

2.16: ಮುಸ್ಲಿಮರನ್ನು ಕಾಗದ, ದಾಖಲೆಗಳು ಬೇಕು ಅಂತ ದಾರಿ ತಪ್ಪಿಸುತ್ತಿದ್ದೀರಿ. ಯೋಜನೆಗಳ ಫಲಾನುಭವಿಗಳನ್ನು ಬಡತನವನ್ನೇ ಮಾನದಂಡವಾಗಿ ಗುರುತಿಸಿದೆವು. ನಮಗೆ ಬೇರೆ ಯಾವುದೇ ಮುಖ್ಯವಾಗಿರಲಿಲ್ಲ. ನಾನು ಯಾವುದೇ ಜಾತಿ, ಧರ್ಮ ನೋಡಲಿಲ್ಲ. ದಾಖಲೆಗಳ ಹೆಸರಿನಲ್ಲಿ ದಾರಿ ತಪ್ಪಿಸುವುದನ್ನು ಇನ್ನಾದರೂ ನಿಲ್ಲಿಸಿ.

2.15: ಉಜ್ವಲಾ ಯೋಜನೆ ತರುವಾಗ ನಾವು ಯಾರನ್ನಾದರೂ ಕೇಳಿದ್ವಾ? ಅವರ ಜಾತಿ ಕೇಳಿದ್ವಾ? ಈಗ ನಾನು ಕಾಂಗ್ರೆಸ್‌ನವರಿಗೆ ಕೇಳಲು ಇಷ್ಟಪಡ್ತೀನಿ. ನೀವು ಯಾಕೆ ದೇಶದ ಜನರಿಗೆ ಸುಳ್ಳು ಹೇಳ್ತಿದ್ದೀರಿ. ಅವರನ್ನು ದಾರಿ ತಪ್ಪಿಸ್ತಿದ್ದೀರಿ. ನಾವು ಕೊಟ್ಟಿದ್ದಷ್ಟೇ ಅಲ್ಲ. ಇನ್ನು ಮುಂದೆಯೂ ಸಾಕಷ್ಟು ಕೊಡ್ತೀವಿ. ದೇಶದ ಎಲ್ಲ ಬಡ ಕುಟುಂಬಗಳಿಗೂ ಉಜ್ವಲಾ ಯೋಜನೆಯ ಫಲ ಸಿಗಲಿದೆ. –ಮೋದಿ

2.13: ದೇವರು ನಿಮಗೆ ಸ್ವಲ್ಪವಾದರೂ ಬುದ್ಧಿ ಕೊಟ್ಟಿದ್ದರೆ ಅದನ್ನು ಉಪಯೋಗಿಸಿ ಅಂತ ಅವರಿಗೆ ಹೇಳ್ಥೀನಿ. ದೇಶದ ಜನರಿಗೆ ಅಧಿಕಾರ ಕೊಡುವ ಮಸೂದೆ ನಾನು ತಂದಿದ್ದರೆ, ಇವರು ಜನರ ಹಕ್ಕು ಕಿತ್ತುಕೊಳ್ಳುವ ಮಸೂದೆ ಅಂತ ಹೇಳ್ತಿದ್ದಾರೆ.  ನಾನು ಸುಳ್ಳು ಹೇಳಿದ್ದರೆ ಚುನಾವಣೆಯಲ್ಲಿ ಸೋಲಿಸ್ತಾರೆ –ಮೋದಿ

2.11: ನಿಮಗೆ ಆಸ್ತಿ ಹಕ್ಕು ಕೊಡುವಾಗ ನಾನು ಯಾರನ್ನಾದರೂ ಕೇಳಿದ್ದನೆ? ನಿಮಗೆ ದಾಖಲೆ ತರಲು ಹೇಳಿದ್ದನೆ? ಕೇಂದ್ರ ಸರ್ಕಾರದ ಈ ಕಾಯ್ದೆಯಿಂದ ಹಿಂದೂ, ಸಿಖ್, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ  ಎಲ್ಲರಿಗೂ ಸಿಕ್ಕಿತು. ನಾನು ಸಬ್‌ ಕಾ ಸಾಥ್, ಸಬ್‌ ವಿಕಾಸ್ ಮಂತ್ರಕ್ಕೆ ಬದ್ಧನಾಗಿದ್ದೇನೆ.

2.10: ನಾನು ದೇಶದ ಎರಡೂ ಸದನ, ಅಲ್ಲಿರುವ ಜನಪ್ರತಿನಿಧಿಗಳಿಗೆ ಆಭಿನಂದನೆ ಸಲ್ಲಿಸುತ್ತೇನೆ ನಿಮ್ಮೊಡನೆ ಸೇರಿ. ಆದರೆ ಸೋದರರೇ ಈ ಮಸೂದೆ ಅಂಗೀಕಾರದ ನಂತರ ಕೆಲ ರಾಜಕೀಯ ಪಕ್ಷಗಳು ಹಲವು ವಿಧದ ವಿಶ್ಲೇಷಣೆ ಮಾಡುತ್ತಿವೆ. ಜನರ ಭಾವನೆಗಳನ್ನು ಬಡಿದೆಬ್ಬಿಸುತ್ತಿವೆ. 

2.08: ದೇಶದ ಜನರ ಭವಿಷ್ಯಕ್ಕಾಗಿ ಲೋಕಸಭೆ, ರಾಜ್ಯಸಭೆಗಳು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದೆ. ದೇಶದ ಸಂಸತ್ತಿಗೆ ಬೆಲೆ ಕೊಡಿ. ದೇಶದ ಜನರು ಚುನಾಯಿಸಿರುವ ಸಂಸದರಿಗೆ ಬೆಲೆ ಕೊಡಿ. 

2.04: ದೆಹಲಿಯಲ್ಲಿ ಶುದ್ಧ ಕುಡಿಯುವ ನೀರು ಸಿಕ್ತಿಲ್ಲ. ಇಲ್ಲಿ ಸರಬರಾಜಾಗುವ ನೀರು ಕುಡಿದರೆ ಅನಾರೋಗ್ಯದ ಭಯ ಕಾಡುತ್ತೆ. ಅದನ್ನು ನಿರಾಕರಿಸುವ ದಾಷ್ಟ್ಯವನ್ನು ಇಲ್ಲಿನ ಸರ್ಕಾರ ತೋರಿಸುತ್ತೆ. ಈಗ ದೆಹಲಿಯಲ್ಲಿ ದೇಶದಲ್ಲಿಯೇ ಅತಿಹೆಚ್ಚು ನೀರು ಶುದ್ಧೀಕರಣ ಯಂತ್ರಗಳು ಪ್ರತಿದಿನ ಮಾರಾಟವಾಗುತ್ತಿವೆ. ದುಡ್ಡು ಕೊಟ್ಟು ನೀರು ಕುಡಿಯುವ ಪರಿಸ್ಥಿತಿ ಇಲ್ಲಿನ ಜನರಿಗೆ ಏಕೆ ಬಂದಿದೆ. ಇದೆಲ್ಲ ಒಂದು ಕಡೆ ಇರಲಿ. ಅನೇಕ ಕಡೆ ನಲ್ಲಿಗಳಲ್ಲಿ ನೀರೇ ಬರುವುದಿಲ್ಲ. ಕೆಲವು ಬಂದರೂ ಕುಡಿಯುವ ಧೈರ್ಯ ಜನರಿಗೆ ಇಲ್ಲ. 

2.04: ಆದರೆ ದೆಹಲಿಯಲ್ಲಿರುವ ರಾಜ್ಯ ಸರ್ಕಾರ ಬಹುದೊಡ್ಡ ಸಮಸ್ಯೆ ಎದುರು ಬಾಯಿ ಮುಚ್ಚಿಕೊಂಡು ಕುಳಿತಿದೆ. ಅದು ಕುಡಿಯುವ ನೀರಿನ ಸಮಸ್ಯೆ.

2.03: ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೂ ನಾವು ಪ್ರಯತ್ನಿಸುತ್ತಿದ್ದೇವೆ. ಸಾವಿರಾರು ಸಿಎನ್‌ಜಿ ಬಂಕ್ ಆರಂಭಿಸಿದ್ದೇವೆ. 

2.02: ನಿಮ್ಮ ಹೆಸರಿನಲ್ಲಿ ರಾಜಕೀಯ ಮಾಡುವವರು ನಿಮ್ಮ ಕಷ್ಟಗಳಿಗೆ ಎಂದಿಗೂ ಸ್ಪಂದಿಸಲಿಲ್ಲ. ದೆಹಲಿಯಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಹೊರ ವರ್ತುಲ ರಸ್ತೆ ನಿರ್ಮಿಸಿದ್ದೇವೆ. ಎಕ್ಸ್‌ಪ್ರೆಸ್‌ ವೇ ಹಲವು ವರ್ಷಗಳಿಂದ ಬಾಕಿಯಿತ್ತು. ಅದನ್ನೂ ನಾವು ಪೂರ್ಣಗೊಳಿಸಿದೆವು. ದೆಹಲಿಯ ಟ್ರಾಫಿಕ್ ಮತ್ತು ಮಾಲಿನ್ಯ ಸಮಸ್ಯೆ ಇದರಿಂದ ಕಡಿಮೆಯಾಗಿದೆ. –ಮೋದಿ

2.00: ನಿಮ್ಮ ರಾಜ್ಯ ಸರ್ಕಾರದ ಮುಖ್ಯಸ್ಥರು ಹೇಗಿದ್ದಾರೆ ಅಂತ ನಾನು ಹೇಳುವುದೇ ಇಲ್ಲ. ವಿರೋಧಗಳ ನಡುವೆಯೂ ಮೆಟ್ರೊ ವಿಸ್ತರಣೆಗೆ ಆದ್ಯತೆ ಕೊಟ್ಟಿದ್ದೇವೆ. ದೆಹಲಿ ಮೆಟ್ರೊದ 4ನೇ ಹಂತದ ಕಾಮಗಾರಿಗೆ ವೇಗ ಕೊಟ್ಟಿದ್ದೇವೆ. ಇಲ್ಲಿನ ರಾಜ್ಯ ಸರ್ಕಾರ ಸಹಕಾರ ಕೊಟ್ಟಿದ್ದರೆ ಈ ಕೆಲಸಗಳು ಮೊದಲೇ ಶುರುವಾಗುತ್ತಿದ್ದವು. –ಮೋದಿ

1.57: ದೆಹಲಿಯ 2000ಕ್ಕೂ ಹೆಚ್ಚು ಸರ್ಕಾರಿ ಬಂಗ್ಲೆಗಳನ್ನು ಖಾಲಿ ಮಾಡಿಸುವ ಜೊತೆಗೆ ಸಾವಿರಾರು ಜನರಿಗೆ ಮನೆ ಹಕ್ಕು ಕೊಟ್ಟೆವು. ನೀವು ನನ್ನ ವಿಐಪಿಗಳು. ನಾನು ಹಿಂದಿನವರಂತೆ ಅಲ್ಲ. ದೆಹಲಿ ಜನರ ಬದುಕು ಸುಲಲಿತವಾಗಬೇಕು. ಸಾರಿಗೆ, ಸಂಪರ್ಕ ಸರಿಯಾಗಬೇಕು ಅನ್ನುವುದು ಕೇಂದ್ರ ಸರ್ಕಾರದ ಆದ್ಯತೆ –ಮೋದಿ

1.54: ಕಡಿಮೆ ಸಮಯದಲ್ಲಿ ತಂತ್ರಜ್ಞಾನದ ಸಹಾಯದಿಂದ ದೆಹಲಿಯ ಸಾವಿರಾರು ಕಾಲೊನಿಗಳ ಗಡಿಗಳನ್ನು ಗುರುತಿಸಿದೆವು. ಇಷ್ಟೇ ಅಲ್ಲ. ಅವೆಲ್ಲವನ್ನೂ ಪೋರ್ಟಲ್‌ನಲ್ಲಿ ಹಾಕಿದ್ದೇವೆ. ಇದು ದೆಹಲಿಯ ವ್ಯಾಪಾರ ವ್ಯವಹಾರವನ್ನು ಹೆಚ್ಚಿಸುತ್ತದೆ –ಮೋದಿ

1.52: ಈ ಥರ ಜನರ ಬದುಕನ್ನು ಕಾಡಲು ಬಿಡುವುದಿಲ್ಲ ಎಂದು ನಿರ್ಧರಿಸಿದೆವು. ಹೀಗಾಗಿಯೇ ಈ ಕೆಲಸವನ್ನು ನಾವು ಸ್ವತಃ ಕೈಗೆತ್ತಿಕೊಂಡೆವು. ಈಗಷ್ಟೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ದೆಹಲಿ ಕಾಲೊನಿಗಳ ಮಸೂದೆಗೆ ಅಂಗೀಕಾರ ಸಿಕ್ಕಿತು. –ನರೇಂದ್ರ ಮೋದಿ.

1.50: ಮನೆಗಳು ಅಕ್ರಮ, ಅನಧಿಕೃತ ಎಂದೆಲ್ಲಾ ಹೇಳುತ್ತಿದ್ದರು. ಹೀಗಾಗಿ ಅವರ ಬದುಕು ಮುರುಟಿಹೋಗಿತ್ತು. ಚುನಾವಣೆ ಬಂದಾಗ ನೆಲಸಮ ಮಾಡುವ ದಿನಾಂಕ ಮುಂದೆ ಹೋಗ್ತಿತ್ತು. ನಿಮಗೆ ಈ ಸಮಸ್ಯೆಗಳಿಂದ ಮುಕ್ತಿ ಕೊಡುವ ಪ್ರಾಮಾಣಿಕತೆಯನ್ನು ಇವರು ತೋರಿಸಲಿಲ್ಲ. –ಮೋದಿ

1.49: ದೆಹಲಿಯ ಜನರನ್ನು ಅವರ ಅಧಿಕಾರದಿಂದ ಯಾರು ದೂರ ಇಟ್ಟಿದ್ದರೋ ಅವರು ನಿಮ್ಮ ನಗು ನೋಡಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ದೆಹಲಿಯ ನಿವಾಸಿಗಳಿಗೆ ಭಯ, ಅನಿಶ್ಚಿತತೆ ಇತ್ತು. ಇದೆಲ್ಲದರ ಜೊತೆಗೆ ಚುನಾವಣೆಯ ಸುಳ್ಳುಗಳನ್ನು ಅವರು ಎದುರಿಸಬೇಕಾಗಿತ್ತು.

1.47: ಜೀವನದ ದೊಡ್ಡ ನೋವು ನಿವಾರಣೆಯಾದರೆ ಅದರ ಖುಷಿ ಹೇಗಿರುತ್ತೆ ಎನ್ನುವುದು ನಿಮ್ಮ ಮುಖ ನೋಡಿದಾಗ ತಿಳಿಯುತ್ತದೆ. ದೆಹಲಿಯ ಲಕ್ಷಾಂತರ ಜನರ ಬದುಕಿನಲ್ಲಿ ಹೊಸಬೆಳಕು ತರುವ ಅವಕಾಶ ನನಗೆ ಮತ್ತು ಬಿಜೆಪಿಗೆ ಸಿಕ್ಕಿದೆ. ಪ್ರಧಾನ ಮಂತ್ರಿ ಉದಯ್ ಯೋಜನೆಯ ಮೂಲಕ ನಿಮ್ಮ ಮನೆಯ ಮೇಲೆ ನಿಮಗೆ ಸಂಪೂರ್ಣ ಅಧಿಕಾರ ಸಿಕ್ಕಿದೆ. –ಮೋದಿ

1.45: ರಾಮಲೀಲಾ ಮೈದಾನ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ದೆಹಲಿಯ ಮೂಲೆಮೂಲೆಗಳಿಂದ ಬಂದಿರುವ ನಿಮಗೆಲ್ಲರಿಗೂ ಧನ್ಯವಾದ –ಮೋದಿ

1.45: ಇಲ್ಲಿ ನೆರದಿರುವ ನಿಮಗೆಲ್ಲರಿಗೂ ಪ್ರಣಾಮ ಎಂದ ಮೋದಿ. ಜನರಿಂದ ಮೋದಿ ಮೋದಿ ಮೋದಿ ಹರ್ಷೋದ್ಗಾರ

1.42: ಮೋದಿ ಭಾಷಣ ಆರಂಭ. ವಿಭಿನ್ನತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯ ಘೋಷಣೆ ಮೊಳಗಿಸಿದ ಮೋದಿ.

1.41: ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿ, ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಭಾಷಣ. ನರೇಂದ್ರ ಮೋದಿ ಹೆಸರು ಮೊಳಗಿಸುತ್ತಿರುವ ಜನರು

1.38: ದೆಹಲಿ ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಭಾಷಣ ಶೀಘ್ರ ಆರಂಭ

1.35: ಆಸ್ತಿ ಹಕ್ಕು ಕಾಯ್ದೆಗಾಗಿ ಪ್ರಧಾನಿಗೆ ಕೃತಜ್ಞತೆ ಅರ್ಪಿಸಿದ ದೆಹಲಿ ನಿವಾಸಿಗಳು

 

ಬಿಜೆಪಿಗೆ ಈ ರ‍್ಯಾಲಿ ಏಕೆ ಮುಖ್ಯ

ರ‍್ಯಾಲಿ ನಡೆಯುವ ರಾಮಲೀಲಾ ಮೈದಾನ್, ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ–ಹಿಂಸಾಚಾರಗಳಿಗೆ ಸಾಕ್ಷಿಯಾದ ದರಿಯಾಗಂಜ್‌ನಿಂದ ಕೇವಲ ಒಂದು ಕಿ.ಮೀ. ದೂರದಲ್ಲಿದೆ.

ಈಚೆಗಷ್ಟೇ ಸಂಸತ್ತು ದೆಹಲಿಯ ಅನಧಿಕೃತ ಕಾಲೊನಿಗಳಲ್ಲಿ ವಾಸವಿರುವವರಿಗೆ ಆಸ್ತಿ ಹಕ್ಕು ನೀಡುವ ಕಾಯ್ದೆಯನ್ನು ಅಂಗೀಕರಿಸಿತ್ತು. ಇಂಥ ಕಾಲೊನಿಗಳಲ್ಲಿ ವಾಸವಿರುವ 11 ಲಕ್ಷ ಮಂದಿಯ ಸಹಿಗಳಿರುವ ಪತ್ರವೊಂದನ್ನು ಪ್ರಧಾನಿಗೆ ಹಸ್ತಾಂತರಿಸುವ ಮೂಲಕ ಕೇಂದ್ರ ಸರ್ಕಾರದ ಈ ತೀರ್ಮಾನವನ್ನು ಬಿಜೆಪಿ ದೆಹಲಿ ಘಟಕವು ಇಂದು ಸ್ವಾಗತಿಸಲಿದೆ. ರ್‍ಯಾಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

‘ದೆಹಲಿಯ 1731 ಅನಧಿಕೃತ ಕಾಲೊನಿಗಳಲ್ಲಿ ವಾಸವಿರುವ 40 ಲಕ್ಷ ನಿವಾಸಿಗಳಿಗೆ ಆಸ್ತಿ ಹಕ್ಕು ನೀಡಿದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲಾಗುವುದು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ದೆಹಲಿಯಲ್ಲಿ ನಡೆಯುತ್ತಿರುವ ಮಹತ್ವದ ವಿದ್ಯಮಾನವಿದು. ದೆಹಲಿ ವಿಧಾನಸಭಾ ಚುನಾವಣೆಗೂ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದು ಬಿಜೆಪಿ ಹಿರಿಯ ನಾಯಕ ವಿಜಯ್ ಗೋಯೆಲ್ ಹೇಳಿದರು.

ಲೋಕಸಭಾ ಚುನಾವಣೆಯ ನಂತರ ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ರ‍್ಯಾಲಿ ಇದು. ಎರಡು ದಶಕಗಳ ನಂತರ ದೆಹಲಿಯಲ್ಲಿ ಅಧಿಕಾರಕ್ಕೆ ಮರಳುವ ಕನಸನ್ನು ಬಿಜೆಪಿ ಕಾಣುತ್ತಿದೆ.

ಬಿಗಿ ಭದ್ರತೆ

ದೆಹಲಿ ಪೊಲೀಸ್ ಮುಖ್ಯಸ್ಥರಾದ ಅಮೂಲ್ಯ ಪಟ್ನಾಯಕ್ ಶನಿವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಭದ್ರತೆಯ ಸ್ಥಿತಿಗತಿ ಪರಿಶೀಲಿಸಿದರು. ರ‍್ಯಾಲಿ ನಡೆಯುವ ಸ್ಥಳಕ್ಕೆ ಹಲವು ಹಂತಗಳ ಭದ್ರತೆ ಕಲ್ಪಿಸಲಾಗಿದೆ. ಎಲ್ಲ ಸಂಪರ್ಕ ರಸ್ತೆಗಳಲ್ಲಿಯೂ ಸಿಸಿಟಿವಿ ಕಣ್ಗಾವಲು ಇದೆ.

ಎನ್‌ಎಸ್‌ಜಿ ಕಮಾಂಡೊಗಳೂ ಸೇರಿದಂತೆ ಸುಮಾರು 5,000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಕ್ಕಪಕ್ಕದ ಕಟ್ಟಡಗಳ ಮೇಲೆ ಸ್ನೈಪರ್‌ಗಳು ಹದ್ದಿನ ಕಣ್ಣಿಟ್ಟು ಕಾಯಲಿದ್ದಾರೆ.  ದೆಹಲಿ–ಗುರುಗ್ರಾಮ ಗಡಿಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು