ಬುಧವಾರ, ಜನವರಿ 22, 2020
19 °C

ಈಶಾನ್ಯ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳಿಗೆ ಕಾಂಗ್ರೆಸ್ ಕಾರಣ: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಮ್ಕಾ (ಜಾರ್ಖಂಡ್): ಪೌರತ್ವ ಕಾಯ್ದೆ ಹೆಸರಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್ ಕಾರಣ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್‌ನ ಡಮ್ಕಾದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಭಟನೆಯನ್ನು ಯಾರು ನಡೆಸುತ್ತಿದ್ದಾರೆ, ಮತ್ತು ಯಾರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದನ್ನು ನೀವು ಈಗ ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಹೇಳಿದ್ದಾರೆ.

ಇಲ್ಲಿ ನೆರೆದಿರುವ ನೀವು ಯಾವುದೇ ಹಿಂಸಾತ್ಮಕ ಕೃತ್ಯದಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ನಿಮಗೆ ಧನ್ಯವಾದ ತಿಳಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿದ ನಂತರ, ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರ ಪಾಕಿಸ್ತಾನ ಭಾರತದ ಹೊರಗೆ ಇತರೆ ರಾಷ್ಟ್ರಗಳ ರಾಯಭಾರಿ ಕಚೇರಿಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಅದೇ ಕೆಲಸವನ್ನು ಕಾಂಗ್ರೆಸ್ ದೇಶದ ಈಶಾನ್ಯ ರಾಜ್ಯಗಳಲ್ಲಿ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಹಿಂಸಾತ್ಮಕ ಕೃತ್ಯದಲ್ಲಿ ನೀವು ಭಾಗಿಯಾಗಿಲ್ಲದಿರುವುದಕ್ಕೆ ಅಸ್ಸಾಂನ ನನ್ನ ಸಹೋದರಿ ಹಾಗೂ ಸಹೋದರರಿಗೆ ಧನ್ಯವಾದಗಳು. ಕಾಂಗ್ರೆಸ್ ಮತ್ತು ಆ ಪಕ್ಷದ ಬೆಂಬಲಿಗರು ಪ್ರತಿಭಟನೆಯ ಬೆಂಕಿಯನ್ನು ಹರಡುತ್ತಾರೆ. ಅದು ಸಾಧ್ಯವಾಗದಿದ್ದರೆ, ಅವರೇ ಬೆಂಕಿ ಹಚ್ಚಲು ಆರಂಭಿಸುತ್ತಾರೆ ಎಂದು ಆರೋಪಿಸಿದರು.

ಮೇಘಾಲಯ ಹಾಗೂ ನಾಗಾಲ್ಯಾಂಡ್ ಗಳಲ್ಲಿ ಭಾನುವಾರವೂ ಕರ್ಫ್ಯೂ ಮುಂದುವರಿದಿದೆ. 

ದೆಹಲಿ, ಪಶ್ಚಿಮಬಂಗಾಳಗಳಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಆದರೆ, ಪೊಲೀಸರ ಪ್ರಕಾರ, ಅಸ್ಸಾಂನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಲ್ಲದೆ, ಇಬ್ಬರು ಯುವಕರು ಮೃತಪಟ್ಟಿರುವುದಾಗಿ ಸುದ್ದಿಹರಿದಾಡಿದ್ದರೂ ಪೊಲೀಸರು ಖಚಿತಪಡಿಸಿಲ್ಲ ಎಂದು ಎನ್ ಡಿಟಿವಿ ವರದಿ ಮಾಡಿವೆ.

ಇದನ್ನೂ ಓದಿ: ಈಶಾನ್ಯ ರಾಜ್ಯಗಳ ರಾಜಕೀಯ ಸಂದೇಶ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಈಶಾನ್ಯ ರಾಜ್ಯಗಳಲ್ಲಿ  ಪ್ರತಿಭಟನೆಗಳು ಭಾನುವಾರ ತೀವ್ರ ಸ್ವರೂಪದಲ್ಲಿ ನಡೆಯದಿದ್ದರೂ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು