ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ವಿಡಿಯೊ ಸಂದೇಶ ಪ್ರಮುಖಾಂಶಗಳು: ದೀಪ ಬೆಳಗಿ ಒಗ್ಗಟ್ಟು ಪ್ರದರ್ಶಿಸಿ

Last Updated 3 ಏಪ್ರಿಲ್ 2020, 6:50 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವಿರುದ್ಧ ದೇಶದ ಒಗ್ಗೂಡಿದ ಹೋರಾಟವನ್ನು ದೀಪ ಬೆಳಗುವುದರ ಮೂಲಕ ಪ್ರದರ್ಶಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೊ ಸಂದೇಶದ ಮೂಲಕ ಹೇಳಿದ್ದಾರೆ. ಏಪ್ರಿಲ್‌ 5, ಭಾನುವಾರ ಎಲ್ಲರೂ ತಮ್ಮ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ರಾತ್ರಿ 9 ಗಂಟೆಗೆ ಸರಿಯಾಗಿ, ಒಂಬತ್ತು ನಿಮಿಷಗಳು ದೀಪ, ಮೇಣದ ಬತ್ತಿ, ಟಾರ್ಚ್‌ ಅಥವಾ ಮೊಬೈಲ್‌ ಫ್ಲ್ಯಾಶ್‌ಲೈಟ್‌ ಬೆಳಗುವಂತೆ ಕರೆ ನೀಡಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಡೆಗೆ ಕಠಿಣವಾದ ಕ್ರಮಗಳು, ಪ್ರಸ್ತುತ ದೇಶದ ಸ್ಥಿತಿಯ ಕುರಿತು ಮಾಹಿತಿ ಅಥವಾ ಲಾಕ್‌ಡೌನ್‌ ವಿಸ್ತರಿಸುವ ಘೋಷಣೆ ಮಾಡಲಿದ್ದಾರೆ ಎಂದೆಲ್ಲ ನಿರೀಕ್ಷೆಗಳು ಹರಡಿತ್ತು. ಆದರೆ ಪ್ರಧಾನಿ ಮೋದಿ, ಕೊರೊನಾ ಹರಡಿರುವ ಅಂಧಕಾರವನ್ನು ದೀಪ ಬೆಳಗುವುದರ ಮೂಲಕ ತೊಡೆದು ಹಾಕೋಣ ಎಂದು ದೇಶದ ಜನರಿಗೆ ತಿಳಿಸಿದರು. ಮಾರ್ಚ್‌ 22ರಂದು ಜನತಾ ಕರ್ಫ್ಯೂ ದಿನ ಚಪ್ಪಾಳೆ ತಟ್ಟುವ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಮುಂದಾಳುಗಳಿಗೆ ಧನ್ಯವಾದ ತಿಳಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆ 9ಕ್ಕೆ ನೀಡಿದ ವಿಡಿಯೊ ಸಂದೇಶದ ಪ್ರಮುಖಾಂಶಗಳು:

* ಕತ್ತಲೆ ತೊಲಗಿಸಬೇಕು

ದೇಶದ ಎಲ್ಲರೂ ಒಂದೇ ಸಮಯಕ್ಕೆ ಮನೆಯ ಮಹಡಿಗಳಲ್ಲಿ ನಿಂತು ಏಪ್ರಿಲ್‌ 5ರಂದು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳು ದೀಪ ಬೆಳಗಿಸಬೇಕು. ಕೊರೊನಾ ವೈರಸ್‌ ವಿರುದ್ಧದ ಹೋರಾಟವನ್ನು 130 ಕೋಟಿ ಜನರು ಒಗ್ಗಟ್ಟಿನಿಂದ ನಡೆಸುತ್ತಿರುವುದನ್ನು ದೀಪ, ಮೇಣದ ಬತ್ತಿ, ಟಾರ್ಚ್‌ ಅಥವಾ ಮೊಬೈಲ್‌ ಫ್ಲ್ಯಾಶ್‌ಲೈಟ್‌ ಬೆಳಗುವ ಮೂಲಕ ಸಾರಬೇಕು.

* ಲಕ್ಷ್ಮಣ ರೇಖೆ ದಾಟದಿರಿ

ದೀಪ ಬೆಳಗಿ ಒಗ್ಗಟ್ಟು ಪ್ರದರ್ಶಿಸಲು ಎಲ್ಲರೂ ಗುಂಪು ಸೇರ ಬಾರದು. ಎಲ್ಲರೂ ತಮ್ಮ ಮನೆಗಳಲ್ಲಿಯೇ ಇದನ್ನು ಆಚರಿಸಬೇಕು ಹಾಗೂ ಅಲ್ಲಿಯೂ ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಯಾರಿಂದ ಯಾರಿಗೂ, ಎಲ್ಲಿಯೂ ತೊಂದರೆ ಉಂಟಾಗಬಾರದು. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

* ಭಾರತದ 'ಚಪ್ಪಾಳೆ' ಜಗತ್ತಿಗೆ ಮಾದರಿ

ಕೋವಿಡ್‌–19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರಿಗೆ ಮಾರ್ಚ್ 22ರಂದು ನೀವು ಧನ್ಯವಾದ ಅರ್ಪಿಸಿದ ರೀತಿ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿದೆ. ಆರೋಗ್ಯ ಚಿಕಿತ್ಸೆ ನೀಡುತ್ತಿರುವವರು, ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿರುವವರು, ಅಧಿಕಾರಿಗಳು ಸೇರಿದಂತೆ ಕಠಿಣ ಸಮಯದಲ್ಲೂ ಜನರಿಗಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ತಿಳಿಸಲಾಯಿತು. ಜನತಾ ಕರ್ಫ್ಯೂ ಮತ್ತು ಒಂದೇ ಸಮಯಕ್ಕೆ ಎಲ್ಲರೂ ಘಂಟೆ, ಜಾಗಟೆ ಬಾರಿಸಿ, ತಟ್ಟೆ ಬಡಿದು ಸವಾಲಿನ ಸಮಯದಲ್ಲೂ ದೇಶದ ಒಗ್ಗಟ್ಟನ್ನು ಸಾರಿದಿರಿ ಎಂದು ಮೋದಿ ಹೇಳಿದರು.

* ಒಗ್ಗಟ್ಟಿನ ಬಲವಿದೆ, ಏಕಾಂಗಿಗಳಲ್ಲ

ನಾವು ಮನೆಯೊಳಗೇ ಉಳಿದಿದ್ದೇವೆ, ಒಂಟಿಯಾಗಿದ್ದೇವೆ, ವೈರಸ್‌ ವಿರುದ್ಧದ ಯುದ್ಧದಲ್ಲಿ ಒಬ್ಬರೇ ಹೇಗೆ ಹೋರಾಡಲು ಸಾಧ್ಯವಾಗುತ್ತದೆ? ಎಂಬ ಪ್ರಶ್ನೆ ನಿಮ್ಮ ಮೂಡಿರಬಹುದು. ಆದರೆ, ನಾವು ಯಾರೂ ಒಂಟಿಯಲ್ಲ. ದೇಶದ ಎಲ್ಲ 130 ಕೋಟಿ ಜನರೂ ಜೊತೆಗಿದ್ದೇವೆ. ದೀಪ ಬೆಳಗಿಸಿಹೊರಡುವ ಪ್ರಕಾಶದಿಂದನಮ್ಮ ಮನದಲ್ಲಿ ನಾವು ಒಂಟಿಯಲ್ಲ ಎಂಬ ಸಂಕಲ್ಪ ಮಾಡಿ ಎಂದಿದ್ದಾರೆ.

* ಜನರು, ಆಡಳಿತಗಳಿಂದ ಉತ್ತಮ ಕಾರ್ಯ

ದೇಶದಾದ್ಯಂತ ಲಾಕ್‌ಡೌನ್‌ ಆಚರಣೆಯಲ್ಲಿ ಶಿಸ್ತು ತೋರಿರುವ ಜನರನ್ನು ಪ್ರಧಾನಿ ಮೋದಿ ಹೊಗಳಿದರು. ಕೊರೊನಾ ವೈರಸ್‌ ತಡೆಗಟ್ಟುವ ನಿಲ್ಲಿನಲ್ಲಿ ಎದುರಾಗಿರುವಲಾಕ್‌ಡೌನ್‌ ಬಿಕ್ಕಟ್ಟನ್ನು ನಿತ್ಯವೂ ಯಶಸ್ವಿಯಾಗಿ ಪರಿಹರಿಸುತ್ತಿರುವ ಅಧಿಕಾರಿಗಳು, ಆಡಳಿತ ಹಾಗೂ ಸರ್ಕಾರಗಳಿಗೆ ಧನ್ಯವಾದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT