ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ 2.0 ಸರ್ಕಾರಕ್ಕೆ ಒಂದು ವರ್ಷ: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಪತ್ರ

Last Updated 30 ಮೇ 2020, 2:34 IST
ಅಕ್ಷರ ಗಾತ್ರ

ನವದೆಹಲಿ: ಜನರ ವಾತ್ಸಲ್ಯವು ಹೊಸ ಶಕ್ತಿ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಪತ್ರ ಬರೆದಿರುವ ಅವರು, ಸರ್ಕಾರ ಜಾರಿಗೆ ತಂದ ಯೋಜನೆಗಳು, ಸಾಧನೆಗಳು, ಪ್ರಮುಖ ನಿರ್ಧಾರಗಳು, ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟ ಇತ್ಯಾದಿ ವಿಚಾರಗಳನ್ನು ಉಲ್ಲೇಖಿಸಿದ್ದಾರೆ.

‘ಮತ್ತೊಮ್ಮೆ ನಾನು ದೇಶದ 130 ಕೋಟಿ ಜನರಿಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ನಮಿಸುತ್ತೇನೆ. ಸಾಮಾನ್ಯ ದಿನಗಳಲ್ಲಾದರೆ ನಾನು ನಿಮ್ಮ ನಡುವೆ ಇರುತ್ತಿದ್ದೆ. ಆದರೆ ಸದ್ಯದ ಪರಿಸ್ಥಿತಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಪತ್ರದ ಮೂಲಕ ನಿಮ್ಮ ಆಶೀರ್ವಾದ ಕೋರುತ್ತಿದ್ದೇನೆ’ ಎಂದು ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜನರ ವಾತ್ಸಲ್ಯ, ಸದ್ಭಾವನೆ ಮತ್ತು ಸಕ್ರಿಯ ಸಹಕಾರ ಹೊಸ ಶಕ್ತಿ ಮತ್ತು ಸ್ಫೂರ್ತಿ ನೀಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಪ್ರಜಾಪ್ರಭುತ್ವದ ಸಂಘಟಿತ ಶಕ್ತಿಯನ್ನು ನೀವು ತೋರಿಸಿರುವುದು ಇಡೀ ವಿಶ್ವಕ್ಕೆ ಮಾರ್ಗದರ್ಶನ ಎಂದು ಜನರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು, ಮೊದಲ ಅವಧಿಯ ಸರ್ಕಾರದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳನ್ನು, ನಿರ್ದಿಷ್ಟ ದಾಳಿ ಇತ್ಯಾದಿ ವಿಚಾರಗಳನ್ನು ಮೋದಿ ಉಲ್ಲೇಖಿಸಿದ್ದಾರೆ.

2019ರಲ್ಲಿ ಮತ್ತೆ ಬಹುಮತದ ಸರ್ಕಾರಕ್ಕಾಗಿ ಮತ ನೀಡಿದಕ್ಕೆ ಪ್ರಧಾನಿಯವರು ಜನರಿಗೆ ಮತ್ತೊಮ್ಮೆ ವಂದನೆ ಸಲ್ಲಿಸಿದ್ದಾರೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಇದನ್ನು ಒಪ್ಪಿದ ದೇಶದ 130 ಕೋಟಿ ಜನ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯೆಯ ವಿವಾದಿತ ಪ್ರದೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ತ್ರಿವಳಿ ತಲಾಕ್ ನಿಷೇಧ ಇತ್ಯಾದಿ ವಿಚಾರಗಳನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್‌ಡೌನ್‌ನಿಂದ ದೇಶದ ಆರ್ಥಿಕ ಚಟುವಟಿಕೆ ಮೇಲಾದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ₹20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದನ್ನೂ ಮೋದಿ ಉಲ್ಲೇಖಿಸಿದ್ದಾರೆ. ಈ ಪ್ಯಾಕೇಜ್ ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

2019ರ ಮೇ 30ರಂದು ಮೋದಿಯವರು ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆ ದಿನ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಎಂದು ಅವರು ಬಣ್ಣಿಸಿದ್ದಾರೆ. ಹಲವು ದಶಕಗಳ ಬಳಿಕ ಜನರು ಪೂರ್ಣ ಬಹುಮತದ ಸರ್ಕಾರ ರಚಿಸಲು ನೆರವಾಗಿದ್ದಾರೆ. ಹೀಗಾಗಿ ಆ ದಿನ ಮಹತ್ವದ್ದು ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT