ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕುವ ‘ಪಾಶ್’ ಕಾಯ್ದೆ ಜಾರಿಯಾಗಿ ಐದು ವರ್ಷವಾಯ್ತು

ಕಾಯ್ದೆ ಜಾರಿಗೆ ಕಾರಳಾದ ಮಹಿಳೆಗೆ ಮಾತ್ರ ನ್ಯಾಯ ಸಿಗಲಿಲ್ಲ
Last Updated 9 ಡಿಸೆಂಬರ್ 2018, 13:00 IST
ಅಕ್ಷರ ಗಾತ್ರ

ಇಂದಿಗೆ ಸರಿಯಾಗಿ ಐದು ವರ್ಷಗಳ ಹಿಂದೆ‘ಪಾಶ್‌’ ಕಾಯ್ದೆ ಎಂದೇ ಹೆಸರಾದ, ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ (Harassment of Women at Workplace (Prevention, Prohibition and Redressal) Act. POSH Act) ಜಾರಿಯಾಯಿತು. ಚರ್ಚೆಯ ಹಂತದಲ್ಲಿ ಈ ಕಾಯ್ದೆಯು ಉದ್ಯೋಗಸ್ಥ ಮಹಿಳೆಯರಲ್ಲಿ ನೆಮ್ಮದಿಯ ಭಾವ ಮೂಡಿಸುವ ಆಶಯ ಮೂಡಿಸಿದ್ದು ನಿಜ. ಆದರೆ ಇದೀಗ ಭುಗಿಲೆದ್ದ #MeToo ಆಂದೋಲನ ಈ ಕಾಯ್ದೆಯ ಮಿತಿಗಳನ್ನು ಮತ್ತು ಅನುಷ್ಠಾನದ ಹಂತದಲ್ಲಿ ಇರುವ ವಿಪರ್ಯಾಸಗಳನ್ನು ಬಯಲು ಮಾಡಿದೆ.

ವಿಶಾಖ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ರೂಪಿಸಿದ ‘ಪಾಶ್’ ಕಾಯ್ದೆಯು ಅನಪೇಕ್ಷಿತ ಲೈಂಗಿಕ ವರ್ತನೆಗಳು, ದೌರ್ಜನ್ಯ, ಸಲ್ಲದ ಮಾತುಗಾರಿಕೆ ಮತ್ತು ಲೈಂಗಿಕ ದೌರ್ಜನ್ಯವನ್ನು ಕಾನೂನುಬಾಹಿರ ಎಂದು ಘೋಷಿಸಿತು. ಅಪರಾಧಿಗಳು ಮತ್ತು ಸುಳ್ಳು ದೂರು ನೀಡಿದವರಿಗೆ ಶಿಕ್ಷೆಯನ್ನೂ ಘೋಷಿಸಿತು.

ಸುಪ್ರೀಂಕೋರ್ಟ್‌ 1997ರಲ್ಲಿ ನೀಡಿದ ಮಹತ್ವದ ತೀರ್ಪಿನ ಆಧಾರದ ಮೇಲೆ ಈ ಕಾಯ್ದೆ ರೂಪುಗೊಂಡಿದೆ. ವಿಶಾಖ ಮಾರ್ಗದರ್ಶಿ ಸೂತ್ರಗಳು ರೂಪುಗೊಳ್ಳಲು ಸಹ ಇದೇ ತೀರ್ಪು ಕಾರಣ ಎನ್ನುವುದು ಗಮನಾರ್ಹ ಸಂಗತಿ. ರಾಜಸ್ಥಾನದ ಭನ್ವಾರಿದೇವಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತ್ತು ಎನ್ನುವುದು ಗಮನಾರ್ಹ ಸಂಗತಿ.

ಪತಿ ಮೋಹನ್‌ಲಾಲ್ ಪ್ರಜಾಪತ್ ಜೊತೆಗೆ ಭನ್ವಾರಿದೇವಿ
ಪತಿ ಮೋಹನ್‌ಲಾಲ್ ಪ್ರಜಾಪತ್ ಜೊತೆಗೆ ಭನ್ವಾರಿದೇವಿ

ಕಾಯ್ದೆ ರೂಪುಗೊಂಡ ಬಗೆ

ರಾಜಸ್ಥಾನದ ಭತೇರಿ ಗ್ರಾಮದ ದಲಿತ ಮಹಿಳೆ ಭನ್ವಾರಿದೇವಿ ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಭಾಗವಾಗಿ ಮನೆಯಿಂದ ಮನೆಗೆ ಓಡಾಡುತ್ತಾ ಬಾಲ್ಯ ವಿವಾಹದಿಂದ ಆಗುವ ತೊಂದರೆಗಳು, ಕುಟುಂಬ ನಿಯಂತ್ರಣ ವಿಧಾನಗಳು, ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಸ್ತ್ರೀಭ್ರೂಣ ಹತ್ಯೆ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸುತ್ತಿದ್ದರು.

ಮೇಲ್ಜಾತಿಯ ಗುಜ್ಜರ್ ಸಮುದಾಯಕ್ಕೆ ಸೇರಿದ ಒಂಬತ್ತು ತಿಂಗಳ ಮಗುವಿಗೆ ಕುಟುಂಬವೊಂದು ಮದುವೆ ಮಾಡಲು ಮುಂದಾಗುತ್ತಿರುವ ಸಂಗತಿ 1992ರಲ್ಲಿ ಅವರ ಗಮನಕ್ಕೆ ಬಂತು. ಮದುವೆ ತಡೆಗಟ್ಟುವಂತೆ ಭನ್ವಾರಿದೇವಿಗೆ ಆಕೆಯ ಹಿರಿಯ ಅಧಿಕಾರಿಗಳು ಸೂಚಿಸಿದರು. ಮದುವೆ ತಡೆಗಟ್ಟಿದ್ದರೆ ಮೇಲ್ಚಾತಿಗೆ ಸೇರಿದ ಆ ಕುಟುಂಬದಿಂದ ಪ್ರತಿಕಾರದ ಸಾಧ್ಯತೆ ಇರುವ ಬಗ್ಗೆ ಭನ್ವಾರಿದೇವಿ ಆತಂಕ ವ್ಯಕ್ತಪಡಿಸಿದರು.

‘ಈ ಜನರು ಅಪಾಯಕಾರಿ. ನನ್ನ ವಿರುದ್ಧ ಸಿಟ್ಟಿಗೆದ್ದು ಪ್ರತೀಕಾರಕ್ಕೆ ಮುಂದಾಗಬಹುದು’ ಎಂದು ಆಕೆ ಹಿರಿಯ ಅಧಿಕಾರಿಗಳ ಬಳಿ ಆತಂಕ ತೋಡಿಕೊಂಡಿದ್ದರು. ‘ನಾವು ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಹೇಳಿದ್ದ ಅಧಿಕಾರಿ ಪೊಲೀಸ್‌ ಸಿಬ್ಬಂದಿಯನ್ನು ನನ್ನ ಜೊತೆಗೆ ಕಳಿಸಿಕೊಟ್ಟಿದ್ದರು. ಆ ಪೊಲೀಸಪ್ಪ ಮದುವೆಗೆ ಬಂದು ಸ್ವೀಟ್ ತಿಂದು ಹೊರಟುಹೋಗಿದ್ದ’ ಎಂದು ಭನ್ವಾರಿದೇವಿ ಬಿಬಿಸಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.

ಆಕೆಯ ಊಹೆ ನಿಜವಾಗಿತ್ತು. ಗುಜ್ಜರ್ ಕುಟುಂಬ ಇದನ್ನು ಅಷ್ಟು ಸುಲಭವಾಗಿ ಪರಿಗಣಿಸಿರಲಿಲ್ಲ. ಕೆಳಜಾತಿಯ ಒಬ್ಬ ಮಹಿಳೆ ನಮ್ಮ ಜನಾಂಗದ ವಿಚಾರಗಳಲ್ಲಿ ತಲೆ ಹಾಕುತ್ತಿದ್ದಾಳೆ. ಅವಳನ್ನು ಶಿಕ್ಷಿಸಬೇಕು ಎಂದು ತೀರ್ಮಾನಿಸಿತ್ತು. ಗಂಡನೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಐವರು ಆಕೆಯ ಮೇಲೆ ದಾಳಿ ಮಾಡಿದರು. ಗಂಡನನ್ನು ಕೋಲಿನಿಂದ ಚೆನ್ನಾಗಿ ಹೊಡೆದು, ಇಬ್ಬರು ಅವನನ್ನು ನೆಲಕ್ಕೆ ಒತ್ತಿ ಹಿಡಿದಿದ್ದರು. ಉಳಿದ ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿದರು.

ಹೋರಾಟದ ದಿನಗಳಲ್ಲಿ ಭನ್ವಾರಿದೇವಿ (ಮಧ್ಯದಲ್ಲಿರುವವರು)
ಹೋರಾಟದ ದಿನಗಳಲ್ಲಿ ಭನ್ವಾರಿದೇವಿ (ಮಧ್ಯದಲ್ಲಿರುವವರು)

ಈ ಘಟನೆಯ ನಂತರ ಭನ್ವಾರಿದೇವಿ ಸುಮ್ಮನಾಗಲಿಲ್ಲ. ವಿವಿಧ ಮಹಿಳಾಪರ ಸಂಘಟನೆಗಳ ಜೊತೆಗೂಡಿ ನಡೆದಆಕೆಯ ಹೋರಾಟ ವಿಶಾಖ ಮಾರ್ಗದರ್ಶಿ ಸೂತ್ರಗಳ ರಚನೆಗೆ ಕಾರಣವಾಯಿತು. ವಿಶಾಖ ಸೂತ್ರಗಳು ಲೈಂಗಿಕ ದೌರ್ಜನ್ಯವನ್ನು ಕೆಳಕಂಡಂತೆ ವ್ಯಾಖ್ಯಾನಿಸುತ್ತದೆ.

1) ದೈಹಿಕ ಸಂಪರ್ಕ ಮತ್ತು ಲೈಂಗಿಕ ಕ್ರಿಯೆಗೆ ಒತ್ತಾಯಿಸುವುದು

2) ಲೈಂಗಿಕ ಬಯಕೆಗಳನ್ನು ಈಡೇರಿಸಲು ಕೋರಿಕೆ

3) ಲೈಂಗಿಕ ಅಪೇಕ್ಷೆ ಬಿಂಬಿಸುವ ಮಾತು

4) ಪಾರ್ನೊಗ್ರಫಿ (ಅಶ್ಲೀಲ) ದೃಶ್ಯ, ಚಿತ್ರಗಳ ಪ್ರದರ್ಶನ

5) ಅನಪೇಕ್ಷಿತ ಕ್ರಿಯೆ, ನಡವಳಿಕೆ, ಮಾತು

ಕಾಯ್ದೆ ರೂಪುಗೊಂಡ ಬಗೆ

ಸುಪ್ರೀಂಕೋರ್ಟ್‌ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದ ನಂತರ ರಾಷ್ಟ್ರೀಯ ಮಹಿಳಾ ಆಯೋಗವು 2000, 2003, 2004, 2006 ಮತ್ತು 2010ರಲ್ಲಿ ಕೆಲಸದ ಸ್ಥಳಗಳಲ್ಲಿ ಜಾರಿಗೊಳಿಸಬೇಕಾದ ನೀತಿ ಸಂಹಿತೆಗಳನ್ನು ರೂಪಿಸಿತು. 2007ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕೃಷ್ಣ ತೀರ್ಥ್ ‘ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ಯನ್ನು (ಪಾಶ್ ಕಾಯ್ದೆ) ಸಂಸತ್ತಿನಲ್ಲಿ ಮಂಡಿಸಿದರು. 2010ರಲ್ಲಿ ಸಂಪುಟದ ಅನುಮೋದನೆ ದೊರೆಯಿತು. 2012ರ ಸೆಪ್ಟೆಂಬರ್‌ನಲ್ಲಿ ಲೋಕಸಭೆ ಮತ್ತು 2013ರ ಫೆಬ್ರುವರಿಯಲ್ಲಿ ರಾಜ್ಯಸಭೆಗೆ ಅನುಮೋದನೆ ದೊರೆಯಿತು. ಏಪ್ರಿಲ್ 2013ರಂದು ರಾಷ್ಟ್ರಪತಿ ಅಂಕಿತ ದೊರೆಯಿತು. ಡಿಸೆಂಬರ್‌ನಿಂದ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

‘ಪಾಶ್’ ಕಾಯ್ದೆ ಅನೇಕ ವಿಷಯಗಳಲ್ಲಿ ವಿಶಾಖ ಮಾರ್ಗದರ್ಶಿ ಸೂತ್ರಗಳಿಗಿಂತ ಭಿನ್ನವಾಗಿದೆ. ‘ಕೆಲಸದ ಸ್ಥಳ’ ಎನ್ನುವ ಪರಿಭಾಷೆಯನ್ನು ಉದ್ಯೋಗಿ ಕೆಲಸ ಮಾಡುವ ಅವಧಿಯಲ್ಲಿ ಭೇಟಿ ನೀಡುವ ಎಲ್ಲ ಸ್ಥಳಗಳಿಗೂ ವಿಸ್ತರಿಸುತ್ತದೆ. ಕೆಲಸದ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿಂದ ಹಿಂದಿರುಲು ಉದ್ಯೋಗದಾತರು ನೀಡಿರುವ ಸಾರಿಗೆ ವ್ಯವಸ್ಥೆಯನ್ನೂ ಕೆಲಸದ ಸ್ಥಳದ ಪರಿಭಾಷೆಯಲ್ಲಿ ಸೇರಿಸಿಕೊಳ್ಳುತ್ತದೆ.

‘ನೊಂದ ಮಹಿಳೆ’ ಎನ್ನುವ ಪರಿಭಾಷೆಗೆ ವಯಸ್ಸು, ಹುದ್ದೆಯ ವ್ಯತ್ಯಾಸವಿಲ್ಲದೆ ಎಲ್ಲ ಮಹಿಳೆಯರನ್ನೂ ಪರಿಗಣಿಸುತ್ತದೆ. ಮನೆಗೆಲಸದ ಮಹಿಳೆಯರನ್ನೂ ಈ ಕಾಯ್ದೆ ಪರಿಗಣಿಸುತ್ತದೆ. ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ಶಿಕ್ಷೆ ವಿಧಿಸುತ್ತದೆ. ಪದೇಪದೆ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ಲೈಸೆನ್ಸ್ ರದ್ದುಪಡಿಸಲಾಗುತ್ತದೆ. ಜಿಲ್ಲಾವಾರು ದೂರು ಸಮಿತಿಗಳನ್ನು ರೂಪಿಸಲು ಆದೇಶಿಸಿದೆ. ಈ ಸಮಿತಿಗಳಿಗೆ ಸಾಕ್ಷಿಗಳನ್ನು ಸಂಗ್ರಹಿಸಲು ಸಿವಿಲ್ ಕೋರ್ಟ್‌ಗಳಿಗೆ ಇರುವ ಅಧಿಕಾರ ಇರುತ್ತದೆ.

ಇಂದಿನ ಸ್ಥಿತಿ ಏನು?

ಕೆಲ ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ವರದಿ ಮಾಡಲು ಹಿಂದೇಟು ಹಾಕುವ ಮನಸ್ಥಿತಿಯನ್ನು ಬದಲಿಸಲು ಈ ಕಾಯ್ದೆಗೆ ಸಾಧ್ಯವಾಗಲಿಲ್ಲ. ಈ ಕಾಯ್ದೆ ರೂಪುಗೊಳ್ಳಲು ಕಾರಣರಾದ ಭನ್ವಾರಿದೇವಿಯಂಥ ಮಹಿಳೆಯರಿಗೆ ರಕ್ಷಣೆ ಕೊಡುವ ನಿಯಮಗಳನ್ನು ರೂಪಿಸಲಿಲ್ಲ ಎಂಬ ಟೀಕೆಗಳು ಇಂದಿಗೂ ಕೇಳಿ ಬರುತ್ತಿವೆ. ಭನ್ವಾರಿದೇವಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಕೊನೆಗೂ ಶಿಕ್ಷೆಯಾಗಲಿಲ್ಲ. ‘ವೈದ್ಯರು, ಪೊಲೀಸರು, ರಾಜಕಾರಿಣಿಗಳು ಒಗ್ಗೂಡಿ ಆರೋಪಿಗಳನ್ನು ಕಾಪಾಡಿದರು’ ಎಂದು ಮಹಿಳಾಪರ ಹೋರಾಟಗಾರರು ಇಂದಿಗೂ ಆಕ್ರೋಶ ತೋಡಿಕೊಳ್ಳುತ್ತಾರೆ.

ಇದೀಗ ಚರ್ಚೆಯಾಗುತ್ತಿರುವ #MeToo ಥರದ ಆಂದೋಲನಗಳು ಈ ಕಾಯ್ದೆಯಲ್ಲಿರುವ ದೊಡ್ಡ ಬಿರುಕುಗಳನ್ನು ಎತ್ತಿ ತೋರಿಸಿವೆ. ಈ ಕಾಯ್ದೆಯು ಹಳೆಯ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾರದು ಎನ್ನುವುದು ದೊಡ್ಡ ಮಿತಿ ಎನಿಸಿದೆ. #MeToo ಲೈಂಗಿಕ ದೌರ್ಜನ್ಯ ಸಂವಾದವನ್ನು ಜೀವಂತವಾಗಿರಿಸಿದೆ. ಆದರೆ ದಿನ ಕಳೆದಂತೆ ಅದರ ಬಿಸಿ ಕಡಿಮೆಯಾಗುತ್ತದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಆಸ್ಪದ ಇಲ್ಲದಂಥ ವಾತಾವರಣ ರೂಪಿಸಬೇಕು ಎಂಬ ಆಶಯ ಮಾತ್ರ ಹಾಗೆಯೇ ಉಳಿದುಬಿಟ್ಟಿದೆ.

(ಮಾಹಿತಿ: ಬಿಬಿಸಿ, ದಿ ಪ್ರಿಂಟ್‌, ವಿಕಿಪಿಡಿಯಾ ಜಾಲತಾಣಗಳು. ಅನುವಾದ: ಡಿ.ಎಂ.ಘನಶ್ಯಾಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT