ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕಾ ರಾಜಕೀಯ ಪ್ರವೇಶ ಕಾಂಗ್ರೆಸ್‌ ಪಾಲಿಗೆ ಹೊಸ ಭರವಸೆಯಾಗುವುದೇ?

Last Updated 24 ಜನವರಿ 2019, 12:23 IST
ಅಕ್ಷರ ಗಾತ್ರ

‘ನಮ್ಮ ತಂದೆಯ ಬೆನ್ನಿಗೆ ಚೂರಿ ಇರಿದ ವ್ಯಕ್ತಿಗೆ ಮತ ನೀಡುತ್ತೀರಾ?’

1999ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್‌ ಬರೇಲಿಯಿಂದಕಾಂಗ್ರೆಸ್‌ ಪಕ್ಷದ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಅರುಣ್‌ ನೆಹರು ವಿರುದ್ಧಮತದಾರರನ್ನು ಉದ್ದೇಶಿಸಿಪ್ರಿಯಾಂಕಾ ಗಾಂಧಿ ವಾದ್ರಾಪ್ರಚಾರ ಮಾಡಿದ್ದು ಹೀಗೆ. ಪ್ರಿಯಾಂಕಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಮೊದಲ ರ‍್ಯಾಲಿ ಅದು. ಮೊದಲ ರ‍್ಯಾಲಿಯಲ್ಲಿಯೇ ಅವರು ಗಮನ ಸೆಳೆದಿದ್ದರು.

ರಾಜೀವ್‌ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದ ವೇಳೆ ಆಪ್ತ ಸಲಹೆಗಾರರಾಗಿಯೂ,ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದ ಅರುಣ್‌ ನೆಹರು, ರಾಜೀವ್‌ ಅವರ ಸೋದರ ಸಂಬಂಧಿಯೂ ಹೌದು. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದ ಅರುಣ್‌ ನಂತರದ ವಿದ್ಯಮಾನಗಳಿಂದಾಗಿ ಪಕ್ಷ ತೊರೆದಿದ್ದರು. ಹೀಗಾಗಿಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸತೀಶ್‌ ಶರ್ಮಾಗೆ ಮತ ನೀಡುವಂತೆ ಜನರಲ್ಲಿ ಕರೆ ನೀಡಿದ್ದರು.

ಆ ಚುನಾವಣೆಯಲ್ಲಿ ಸತೀಶ್‌ ಶರ್ಮಾ ಜಯಗಳಿಸಿದ್ದರು. ಅರುಣ್‌ ನೆಹರು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು.

ಇದೀಗ ಬರೋಬ್ಬರಿ ಎರಡು ದಶಕಗಳ ಬಳಿಕ ಮತ್ತೆ ಉತ್ತರಪ್ರದೇಶದಲ್ಲಿ ಚುನಾವಣಾ ಜವಾಬ್ದಾರಿ ಹೊರಲಿರುವಪ್ರಿಯಾಂಕಾ, ಇಲ್ಲಿಂದಲೇ ರಾಜಕೀಯಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಅವರಿಗೆ ಉತ್ತರ ಪ್ರದೇಶದ ಪೂರ್ವದ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.‌

2017ರ ಉತ್ತರಪ್ರದೇಶ ವಿಧಾನಸಭೆ ವೇಳೆ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿ ಹಿನ್ನಡೆ ಅನುಭವಿಸಿದ್ದವು. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಕೈಬಿಟ್ಟಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಮಾಯಾವತಿ ಅವರ ಬಿಎಸ್‌ಪಿ ಜತೆಗೆ ಕೈ ಜೋಡಿಸಿದ್ದಾರೆ. ಎಸ್‌ಪಿ–ಬಿಎಸ್‌ಪಿಗೂ ಬಿಜೆಪಿಯನ್ನು ಹಣಿಯುವುದೇ ಮುಖ್ಯ ಉದ್ದೇಶವಾಗಿದೆಯಾದರೂ ಈ ಮೈತ್ರಿಯಿಂದ ಕಾಂಗ್ರೆಸ್‌ ಪಾಲಿಗೆ ಭಾರಿ ಹಿನ್ನಡೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿವೆ. ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಅವರ ಜನಪ್ರಿಯತೆಯನ್ನು ನೆಚ್ಚಿಕೊಂಡಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಜನಪ್ರಿಯತೆ ಕುಸಿದಿದೆ. ಈ ಸಂದರ್ಭದಲ್ಲಿಪ್ರಿಯಾಂಕಾ ರಾಜಕೀಯ ಪ್ರವೇಶ ಪಡೆಯುತ್ತಿರುವುದರಿಂದಕಾರ್ಯಕರ್ತರಲ್ಲಿ ಹುರುಪು ಮೂಡಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವರ್ಚಸ್ಸಿನಲ್ಲಿ ಆಕೆಯ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕಾಣುವವರಿದ್ದಾರೆ. ಪ್ರಿಯಾಂಕಾ ಮುಖ ಕಂಡ ಕೂಡಲೇ ಜನರು ಇಂದಿರಾ ಜತೆ ಹೋಲಿಸಲು ಆರಂಭಿಸುತ್ತಾರೆ. ಆಕರ್ಷಕ ಹತ್ತಿ ಸೀರೆ, ಕೇಶವಿನ್ಯಾಸ, ನಡೆಯುವ ಶೈಲಿ ಎಲ್ಲವೂ ಇಂದಿರಾ ಅವರನ್ನು ನೆನಪಿಸುತ್ತವೆ. ಪ್ರಿಯಾಂಕಾ ಬಗೆಗಿನ ಅಭಿಮಾನಕ್ಕೆ ಈ ಅಂಶವೂ ಕಾರಣ ಆಗಿರಬಹುದು.ಇದು ಕಾಂಗ್ರೆಸ್‌ಗೆ ವರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಿಯಾಂಕಾ ಫೆಬ್ರುವರಿ ಮೊದಲ ವಾರದಲ್ಲಿ ತಮ್ಮ ಜವಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಮುಖ್ಯವಾಗಿ ಪಕ್ಷ ವಹಿಸಿರುವ ಜವಾಬ್ದಾರಿಯಂತೆ ಉತ್ತರಪ್ರದೇಶದ ಪೂರ್ವ ಜಿಲ್ಲೆಗಳಲ್ಲಿ ಪ್ರಿಯಾಂಕಾ ಗಾಂಧಿ ಪಕ್ಷ ಸಂಘಟನೆಯ ಕಾರ್ಯ ಆರಂಭಿಸಿದರೆ ಎಸ್‌ಪಿ–ಬಿಎಸ್‌ಪಿ ಪಕ್ಷಗಳು ತಮ್ಮ ಕಾರ್ಯತಂತ್ರವನ್ನು ಮತ್ತೊಮ್ಮೆ ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ ಎಂಬ ವಿಶ್ಲೇಷಣೆಗಳು ಗರಿಗೆದರಿವೆ. ಪ್ರಿಯಾಂಕಾ ಜನಪ್ರಿಯತೆಯನ್ನು ಪರಿಗಣಿಸಿ ಕಾಂಗ್ರೆಸ್‌ಗೆ ಮತ್ತಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡುವ ಆಲೋಚನೆಯನ್ನುಅಖಿಲೇಶ್‌ ಯಾದವ್‌ ಮಾಡಬಹುದು ಎಂಬ ಕೆಲವು ಲೆಕ್ಕಾಚಾರಗಳು ಹಾಗೂ ಅವುಗಳಿಗೆ (ದೊಡ್ಡ ಪ್ರಮಾಣದ ಮತಗಳಿಕೆ ಶಕ್ತಿಕಾಂಗ್ರೆಸ್‌ಗೆ ಇಲ್ಲ ಎಂಬ ಕಾರಣಕ್ಕೆ) ಮಾಯಾವತಿ ಸೊಪ್ಪು ಹಾಕುವ ಸಾಧ್ಯತೆ ಕಡಿಮೆ ಎನ್ನುವಂತಹ ಮಾತುಗಳೂ ಕೇಳಿಬರುತ್ತಿವೆ.

ರಾಜ್ಯವು ಲೋಕಸಭೆಯ80 ಸ್ಥಾನ ಬಲ ಹೊಂದಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಪ್ರತಿನಿಧಿಸುವ ರಾಯ್‌ ಬರೇಲಿ, ಅಮೇಥಿ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವಅಖಿಲೇಶ್‌ ಯಾದವ್‌ ಹಾಗೂ ಮಾಯಾವತಿ,ತಲಾ 38 ಸ್ಥಾನಗಳನ್ನು ಹಂಚಿಕೊಂಡು ಉಳಿದ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ನೀಡಿದ್ದಾರೆ. ಮೈತ್ರಿವೇಳೆ ಮಾತನಾಡಿದ್ದ ಅಖಿಲೇಶ್‌ ಯಾದವ್‌, ‘ನಮ್ಮ ನಡುವೆ ಯಾವ ವೈರತ್ವವೂ ಇಲ್ಲ. ನಾವು ಸಹಕಾರದೊಂದಿಗೆ ಒಂದಾಗಿದ್ದೇವೆ. ಅವರೂ(ಕಾಂಗ್ರೆಸ್‌) ಕೂಡ ನಮ್ಮೊಡನೆ ಬರಬಹುದು. ಮೂವರ ಬಯಕೆಯೂ ಬಿಜೆಪಿಯನ್ನು ಸೋಲಿಸುವುದು’ ಎಂದಿದ್ದರು.

ಒಂದು ವೇಳೆ ಸ್ಥಾನಗಳ ಹಂಚಿಕೆ ವಿಚಾರದಲ್ಲಿಎಸ್‌ಪಿ–ಬಿಎಸ್‌ಪಿ ಜೊತೆ ಮಾತುಕತೆ ವಿಫಲವಾದರೆ ಕಾಂಗ್ರೆಸ್‌ ಸ್ವತಂತ್ರವಾಗಿಯೇ ಚುನಾವಣೆ ಎದುರಿಸಲಿದೆ. ಪ್ರಿಯಾಂಕಾ ನೇತೃತ್ವದಲ್ಲಿ ಪ್ರಚಾರವನ್ನು ಚುರುಕುಗೊಳಿಸಿ ಅಲ್ಪಸಂಖ್ಯಾತ ಸಮುದಾಯದ ಮತ ವಿಭಜನೆ ತಂತ್ರ ಅನುಸರಿಸಿ ಎಸ್‌ಪಿ–ಬಿಎಸ್‌ಪಿಗೆ ಹಿನ್ನಡೆ ಉಂಟುಮಾಡುವುದು. ಈ ಕಾರ್ಯತಂತ್ರದ ಮೂಲಕ ಮೈತ್ರಿ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದರೆ, ಪಕ್ಷಕ್ಕೆ ಮತ್ತಷ್ಟು ಕ್ಷೇತ್ರಗಳಲ್ಲಿ ಅವಕಾಶ ದೊರೆಯಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ. ಇದನ್ನೇ ಉಲ್ಲೇಖಸಿ ಮಾತನಾಡಿರುವರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ‘ಮೈತ್ರಿಯಲ್ಲಿ ನಮ್ಮನ್ನೂ(ಕಾಂಗ್ರೆಸ್‌ ಪಕ್ಷವನ್ನೂ) ಸೇರ್ಪಡೆಗೊಳಿಸಿಕೊಂಡರೆ, ಬಿಜೆಪಿಯ ಸ್ಥಾನಗಳಿಕೆ ಲೆಕ್ಕಾಚಾರ ಹತ್ತಕ್ಕೆ ಕುಸಿಯಬಹುದು’ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT