ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ರಾಷ್ಟ್ರಪತಿ ಆಳ್ವಿಕೆ ವಾಪಸ್ ಹೇಗೆ?

‘ಭಾರತ ಸರ್ಕಾರ (ಕಾರ್ಯನಿರ್ವಹಣೆ) ನಿಯಮಗಳು, 1961’ರ 12ನೇ ನಿಯಮ
Last Updated 25 ನವೆಂಬರ್ 2019, 8:55 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು,‘ಭಾರತ ಸರ್ಕಾರ (ಕಾರ್ಯನಿರ್ವಹಣೆ) ನಿಯಮಗಳು, 1961’ರ 12ನೇ ನಿಯಮದ ಪ್ರಕಾರ ವಾಪಸ್ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಪ್ರಧಾನಿ, ಸಂಪುಟ ಸಭೆ, ಸಂಸದೀಯ ಸಮಿತಿಗಳು ಮತ್ತು ರಾಷ್ಟ್ರಪತಿಯ ಕಾರ್ಯ ನಿರ್ವಹಣೆಯನ್ನು ಈ ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು 12ನೇ ನಿಯಮವು ಪ್ರಧಾನಿಗೆ ಅಧಿಕಾರ ನೀಡುತ್ತದೆ. ಆದರೆ, ಅದಕ್ಕೂ ಮುನ್ನ ಹಲವು ಕ್ರಮಗಳನ್ನು ಪಾಲಿಸುವುದು ಅನಿವಾರ್ಯ. ಅಂಥ ನಿಯಮಗಳ ವಿವರಣೆ ಇಲ್ಲಿದೆ.

1. ಅತ್ಯಂತ ತುರ್ತು ಸಂದರ್ಭಗಳಲ್ಲೂ ಅಂತರ–ಸಚಿವಾಲಯಗಳ ಸಮಾಲೋಚನೆ ನಡೆಸಬೇಕು. ಎಂತಹದ್ದೇ ಸಂದರ್ಭದಲ್ಲಿ ಸಂಬಂಧಿತ ಕಡತ/ಪ್ರಕರಣವನ್ನು ಪ್ರಧಾನಿಗೆ ನೇರವಾಗಿ ತಲುಪಿಸಬಾರದು. ಬದಲಿಗೆ ಸಂಪುಟ ಕಾರ್ಯದರ್ಶಿ ಮೂಲಕವೇ ಪ್ರಸ್ತಾವವನ್ನು ಪ್ರಧಾನಿಗೆ ತಲುಪಿಸುವುದು ಕಡ್ಡಾಯ.

2.ಸಂಬಂಧಿತ ಸಚಿವಾಲಯ ಅಥವಾ ಇಲಾಖೆಯೇ, ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಪ್ರಸ್ತಾವವನ್ನು ಹೊರಡಿಸಬೇಕು.

3. ಸಂಬಂಧಿತ ವಿಷಯದ ಪೂರ್ಣ ವಿವರವನ್ನು ಪ್ರಸ್ತಾವ ಒಳಗೊಂಡಿರಬೇಕು. ತುರ್ತು ಸಂದರ್ಭ ಎಂಥದ್ದು, 12ನೇ ನಿಯಮದ ಅಡಿ ಕ್ರಮ ಏಕೆ ತೆಗೆದುಕೊಳ್ಳಬೇಕು ಎಂಬುದರ ಅನಿವಾರ್ಯತೆಯನ್ನು ವಿವರಿಸಿರಬೇಕು. ತಕ್ಷಣದಲ್ಲಿ ಸಂಬಂಧಿತ ಪ್ರಾಧಿಕಾರದ ಅನುಮೋದನೆ ಪಡೆಯಲು ಏಕೆ ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟ ಕಾರಣವನ್ನು ವಿವರಿಸಿರಬೇಕು.

4. ಈ ಪ್ರಸ್ತಾವವನ್ನು ಅನುಮೋದನೆಗೆ ಸಲ್ಲಿಸುವ ಮುನ್ನ, ಸಂಬಂಧಿತ ಸಚಿವಾಲಯಗಳ ನಡುವೆ ಸಮಾಲೋಚನೆ ನಡೆದಿದೆ ಮತ್ತು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಸಮಾಲೋಚನೆಯ ವಿವರಗಳನ್ನು ಪ್ರಸ್ತಾವದಲ್ಲಿ ನಮೂದಿಸಬೇಕು. ಇದು, ಈ ಪ್ರಸ್ತಾವವನ್ನು ಸಲ್ಲಿಸುವ ಸಚಿವಾಲಯದ ಕಾರ್ಯದರ್ಶಿಯ ಹೊಣೆ .

5. ವಿಷಯಕ್ಕೆ ಸಂಬಂಧಪಟ್ಟ ಸಚಿವಾಲಯದ ಸಚಿವರು ಇಲ್ಲವೇ ಉಸ್ತುವಾರಿಯ ಅನುಮೋದನೆ ಪಡೆದು, ಸಂಪುಟ ಕಾರ್ಯದರ್ಶಿಯ ಮೂಲಕವೇ ಪ್ರಸ್ತಾವವನ್ನು ಸಲ್ಲಿಸಬೇಕು. ಇದೂ ಸಹ, ಸಂಬಂಧಿತ ಸಚಿವಾಲಯದ ಕಾರ್ಯದರ್ಶಿಯ ಹೊಣೆ.

6. ವಿಷಯಕ್ಕೆ ಸಂಬಂಧಪಟ್ಟ ಖಾತೆಯನ್ನು ಪ್ರಧಾನಿ ಹೊಂದಿದ್ದರೆ, ಆ ಸಚಿವಾಲಯದ ಕಾರ್ಯದರ್ಶಿಯೇ ಈ ಪ್ರಸ್ತಾವವನ್ನು ಸಲ್ಲಿಸಬೇಕು. ಆ ಸಚಿವಾಲಯವು ರಾಜ್ಯ ಸಚಿವರನ್ನು ಹೊಂದಿದ್ದರೆ, ಅವರ ಅನುಮೋದನೆಯನ್ನು ಮೊದಲು ಪಡೆಯಬೇಕು. ನಂತರ ಸಂಪುಟ ಕಾರ್ಯದರ್ಶಿಯ ಮೂಲಕ ಪ್ರಸ್ತಾವವನ್ನು ಸಲ್ಲಿಸಬೇಕು.

7. ಮೇಲಿನ ಎಲ್ಲಾ ಸಂದರ್ಭಗಳಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳಿಗೆ, ನಂತರದಲ್ಲಿ ಸಂಬಂಧಿತ ಸಚಿವಾಲಯ ಅಥವಾ ಸಂಸದೀಯ ಸಮಿತಿಯ ಅನುಮೋದನೆ ಪಡೆಯುವುದು ಅನಿವಾರ್ಯ. ಈ ಅನುಮೋದನೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಸಂಪುಟ ಕಾರ್ಯಾಲಯವು ಹೇಳಿದರೆ ಮಾತ್ರ, ಈ ಪ್ರಕ್ರಿಯೆಯನ್ನು ಕೈಬಿಡಬಹುದು

(ಆಧಾರ: ಭಾರತ ಸರ್ಕಾರದ ಸಂಪುಟ ಕಾರ್ಯಾಲಯ, ಸಂಪುಟ ಬರಹಗಳ ಕೈಪಿಡಿ)

12ನೇ ನಿಯಮದ ಅಡಿ ಕ್ರಮ: ಕಾನೂನು ಸಚಿವ

ನವದೆಹಲಿ: ‘ತುರ್ತು ಸಂದರ್ಭಗಳಲ್ಲಿ ಸಂಪುಟದ ಅನುಮೋದನೆ ಇಲ್ಲದೆಯೇ ಕ್ರಮ ತೆಗೆದುಕೊಳ್ಳಲು ಪ್ರಧಾನಿಗೆ,‘ಭಾರತ ಸರ್ಕಾರದ (ಕಾರ್ಯನಿರ್ವಹಣೆ) ನಿಯಮ 1961’ರ 12 ನಿಯಮವು ಅಧಿಕಾರ ನೀಡುತ್ತದೆ. ಈ ನಿಯಮದ ಪ್ರಕಾರವೇ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆಯುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದರು’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು.

ಸಂಪುಟ ಸಭೆಯ ಅನುಮೋದನೆ ಪಡೆಯದೇ, ರಾಷ್ಟ್ರಪತಿ ಆಳ್ವಿಕೆ ಹಿಂಪಡೆದದ್ದು ಹೇಗೆ ಎಂದು ಕಾಂಗ್ರೆಸ್‌ ಒಡ್ಡಿದ್ದ ಪ್ರಶ್ನೆಗೆ ಉತ್ತರವಾಗಿ, ಪ್ರಸಾದ್ ಅವರು ಈ ವಿವರ ನೀಡಿದ್ದರು.

‘ಕ್ರಮವನ್ನು ತೆಗೆದುಕೊಂಡ ನಂತರ ಸಂಪುಟದ ಅನುಮೋದನೆ ಪಡೆಯಲು 12ನೇ ನಿಯಮವು ಅವಕಾಶ ನೀಡುತ್ತದೆ’ ಎಂದೂ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT