ಟಿಕ್‌ ಟಾಕ್‌ ಆ್ಯಪ್‌ ನಿಷೇಧಿಸಲು ಕೇಂದ್ರಕ್ಕೆ ಮದ್ರಾಸ್‌ ಹೈಕೋರ್ಟ್‌ ಸೂಚನೆ

ಶುಕ್ರವಾರ, ಏಪ್ರಿಲ್ 26, 2019
21 °C

ಟಿಕ್‌ ಟಾಕ್‌ ಆ್ಯಪ್‌ ನಿಷೇಧಿಸಲು ಕೇಂದ್ರಕ್ಕೆ ಮದ್ರಾಸ್‌ ಹೈಕೋರ್ಟ್‌ ಸೂಚನೆ

Published:
Updated:

ಚೆನ್ನೈ: ದೇಶದ ಯುವ ಜನರನ್ನು ಹೆಚ್ಚು  ಆಕರ್ಷಿಸುತ್ತಿರುವ ಚೀನಾ ಮೂಲದ ಟಿಕ್‌ ಟಾಕ್‌ ಮೊಬೈಲ್ ಆ್ಯಪ್‌ ಡೌನ್‌ಲೋಡ್‌ ಮಾಡುವುದನ್ನು ನಿಷೇಧ ಮಾಡುವಂತೆ ಮದ್ರಾಸ್‌ ಹೈಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. 

‘ಅಶ್ಲೀಲ ಮತ್ತು ಅಸಭ್ಯ ವಿಡಿಯೋಗಳು ಈ ಆ್ಯಪ್‌ನಲ್ಲಿವೆ. ಇದರಲ್ಲಿರುವ ವಿಡಿಯೋಗಳು ವ್ಯಕ್ತಿಯ ಖಾಸಗಿತನವನ್ನು ಹರಣ ಮಾಡುತ್ತಿವೆ,‘ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್‌, ಟಿಕ್‌ ಟಾಕ್‌ನಿಂದ ಮಾಡಲಾದ ವಿಡಿಯೋಗಳನ್ನು ಪ್ರಸಾರ ಮಾಡದಂತೆಯೂ ಮಾಧ್ಯಮಗಳಿಗೂ ಸೂಚನೆ ನೀಡಿದೆ. 

‘ಆಶ್ಲೀಲ, ಸ್ಥಳೀಯ ಸಂಸ್ಕೃತಿಗೆ ದಕ್ಕೆಯಾಗುವ, ಮಕ್ಕಳ ಮೇಲಿನ ದೌರ್ಜನ್ಯದಂಥ ಸಂಗತಿಗಳು ಇರುವುದರಿಂದ ಟಿಕ್‌ ಟಾಕ್‌ ಮೊಬೈಲ್‌ ಆ್ಯಪ್‌ ಅನ್ನು ರದ್ದು ಮಾಡಬೇಕು,’ ಎಂದು ಕೋರಿ ಮದುರೈ ಮೂಲದ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರೂ ಆದ ಮುತ್ತುಕುಮಾರ್‌ ಎಂಬುವರು ಮದ್ರಾಸ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎನ್‌. ಕೃಪಾಕರನ್‌ ಮತ್ತು ಎಸ್‌. ಎಸ್‌. ಸುಂದರ್‌ ಅವರಿರುವ ದ್ವಿಸದಸ್ಯ ಪೀಠ ಟಿಕ್‌ ಟಾಕ್‌ ಆ್ಯಪ್‌ ಡೌನ್‌ಲೋಡ್‌ ಮಾಡುವುದನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.

ಜತೆಗೇ, ಮಕ್ಕಳನ್ನು ಅಂತರ್ಜಾಲ ವ್ಯಸನಿಗಳಾಗದಂತೆ ಮಾಡಲು ಅಮೆರಿಕದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ‘ಮಕ್ಕಳ ಅಂತರ್ಜಾಲ ಖಾಸಗಿತನದ ಸಂರಕ್ಷಣಾ ಕಾಯಿದೆ’ಯನ್ನು ಜಾರಿಗೊಳಿಸಲು ಸಾಧ್ಯವೇ ಎಂದೂ ಪ್ರಶ್ನಿಸಿದೆ. ಈ ಬಗ್ಗೆ ಇದೇ 16ರ ಒಳಗೆ ಉತ್ತರಿಸುವಂತೆಯೂ ಕೋರ್ಟ್‌ ಸೂಚನೆ ನೀಡಿದೆ. 

ಇದಕ್ಕೂ ಮೊದಲು ಫೆಬ್ರುವರಿಯಲ್ಲಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯ ಶಾಸಕ ತಮೀಮುನ್‌ ಅನ್ಸಾರಿ ಅವರು ಟಿಕ್‌ ಟಾಕ್‌ ಅನ್ನು ರಾಜ್ಯದಲ್ಲಿ ನಿರ್ಬಂಧಿಸುವಂತೆ ವಿಧಾನಸಭೆಯಲ್ಲೇ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಲ್ಲಿನ ಐಟಿ ಇಲಾಖೆ ಸಚಿವ, ಕೇಂದ್ರದೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದರು. 

ಚೀನಾದ  Beijing ByteDance Co. ಮಾಲೀಕತ್ವದ ಟಿಕ್‌ ಟಾಕ್‌ ಜಗತ್ತಿನಾದ್ಯಂತ ಐವತ್ತು ಕೋಟಿಗೂ ಮಿಗಿಲಾದ ಗ್ರಾಹಕರನ್ನು ಹೊಂದಿದೆ. ಅಲ್ಲದೆ, ಜಗತ್ತಿನಲ್ಲಿ ಹೆಚ್ಚು ಡೌನ್‌ಲೋಡ್‌ಗೊಂಡ ಆ್ಯಪ್‌ಗಳ ಪೈಕಿ ಟಿಕ್‌ ಟಾಕ್‌ ನಾಲ್ಕನೇ ಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

 • 25

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !