ಮಂಗಳವಾರ, ಫೆಬ್ರವರಿ 25, 2020
19 °C
ಆರ್‌ಒ ಶುದ್ಧೀಕರಣ ಯಂತ್ರಕ್ಕೆ ಕಡಿವಾಣ: ಕೇಂದ್ರ ಪರಿಸರ ಸಚಿವಾಲಯಕ್ಕೆ ಎನ್‌ಜಿಟಿ ಆದೇಶ

ನೀರಿನ ಫಿಲ್ಟರ್‌ಗಳಿಗೆ ಹಸಿರು ಪೀಠ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ರಿವರ್ಸ್‌ ಆಸ್ಮಾಸಿಸ್’ (ಆರ್‌ಒ) ನೀರು ಶುದ್ಧೀಕರಣ ಉಪಕರಣಗಳ ಬಳಕೆಯನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮತ್ತೆ ಆದೇಶಿಸಿದೆ.

ಆರ್‌ಒ ಉಪಕರಣಗಳು ನೀಡುವ ಶುದ್ಧೀಕರಿಸಿದ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಎನ್‌ಜಿಟಿ ಈ ಕ್ರಮ ತೆಗೆದುಕೊಳ್ಳಲು ಮೊದಲ ಕಾರಣ. ಅಲ್ಲದೆ ಈ ಉಪಕರಣಗಳು ವಿಪರೀತ ಪ್ರಮಾಣದಲ್ಲಿ ನೀರನ್ನು ವ್ಯರ್ಥ ಮಾಡುತ್ತವೆ ಎಂಬುದು ಎರಡನೇ ಕಾರಣ.

ದೇಶದಲ್ಲಿ ಮಾರಾಟವಾಗುತ್ತಿ ರುವ ಆರ್‌ಒ ಉಪಕರಣಗಳು ವಿಪ ರೀತ ಪ್ರಮಾಣದಲ್ಲಿ ನೀರನ್ನು ವ್ಯರ್ಥ ಮಾಡು ತ್ತವೆ. ಇವುಗಳ ಬಳಕೆಗೆ ನಿಯಂತ್ರಣ ಹೇರಬೇಕು ಎಂದು ಸಲ್ಲಿಸ ಲಾಗಿದ್ದ ಅರ್ಜಿಯ ವಿಚಾರಣೆ ನಂತರ ಎನ್‌ಜಿಟಿ 2019ರ ಮೇನಲ್ಲಿ ಈ ಆದೇಶ ನೀಡಿತ್ತು.

ಈ ಆದೇಶದ ವಿರುದ್ಧ ‘ವಾಟರ್ ಕ್ವಾಲಿಟಿ ಇಂಡಿಯಾ ಅಸೋಸಿಯೇಷನ್‌’ ಸುಪ್ರೀಂ ಕೋರ್ಟ್‌ನ ಮೆಟ್ಟಿಲು ಏರಿತ್ತು. ಆದರೆ ಎನ್‌ಜಿಟಿ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಹೀಗಾಗಿ ತನ್ನ ಆದೇಶವನ್ನು ಅತ್ಯಂತ ತ್ವರಿತವಾಗಿ ಅನುಷ್ಠಾನಕ್ಕೆ ತರುವಂತೆ ಎನ್‌ಜಿಟಿ, ಕೇಂದ್ರ ಪರಿಸರ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಈ ಆದೇಶವನ್ನು ಅನುಷ್ಠಾನಗೊಳಿಸಲು ಕೇಂದ್ರ ಪರಿಸರ ಸಚಿವಾ ಲಯವು ನಾಲ್ಕು ತಿಂಗಳ ಕಾಲಾವಕಾಶ ಕೇಳಿದೆ. ಎರಡೇ ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ಹಸಿರು ಪೀಠ ಆದೇಶಿಸಿದೆ.

ತಜ್ಞರ ಸಮಿತಿ ಶಿಫಾರಸು, ಎನ್‌ಜಿಟಿ ಆದೇಶ

ಅರ್ಜಿದಾರರ ಪ್ರತಿಪಾದನೆಯನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ಎನ್‌ಜಿಟಿ ರಚಿಸಿತ್ತು. 2018ರ ಡಿಸೆಂಬರ್‌ನಲ್ಲೇ ಈ ಸಮಿತಿ  ವರದಿಯನ್ನು ಸಲ್ಲಿಸಿತ್ತು. ಈ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ಎನ್‌ಜಿಟಿ ಈ ಆದೇಶ ನೀಡಿತ್ತು

* ನಗರಪಾಲಿಕೆಗಳು, ನಗರಸಭೆ ಮತ್ತು ಪುರಸಭೆಗಳು ಕೊಳವೆ ಮಾರ್ಗದ ಮೂಲಕ ನೀರು ಪೂರೈಕೆ ಮಾಡುತ್ತಿದ್ದರೆ, ಅಂತಹ ಪ್ರದೇಶಗಳಲ್ಲಿ ಆರ್‌ಒ ಉಪಕರಣಗಳ ಬಳಕೆಯ ಅವಶ್ಯಕತೆ ಇಲ್ಲ

* ನೀರು ವಿಪರೀತ ಪ್ರಮಾಣದಲ್ಲಿ ಗಡಸು ಆಗಿದ್ದರೆ (ಪ್ರತಿ ಲೀಟರ್‌ ನೀರಿನಲ್ಲಿ ಕರಗಿರುವ ಘನವಸ್ತುಗಳ ಪ್ರಮಾಣ 500 ಮಿಲಿಗ್ರಾಂಗಿಂತಲೂ ಹೆಚ್ಚು ಇದ್ದರೆ) ಮಾತ್ರ ಆರ್‌ಒ ಶುದ್ಧೀಕರಣದ ಅವಶ್ಯಕತೆ ಇದೆ. ದೇಶದ ಬಹುತೇಕ ನಗರಗಳಲ್ಲಿ ಈ ಉಪಕರಣಗಳ ಬಳಕೆ ಬೇಕಿಲ್ಲ

* ಶುದ್ಧೀಕರಣ ಯಂತ್ರವು ಬಳಸುವ ನೀರಿನಲ್ಲಿ ಕನಿಷ್ಠ ಶೇ 60ರಷ್ಟು ನೀರು ಶುದ್ಧೀಕರಣಗೊಂಡು ದೊರೆಯಬೇಕು  

* ಆರ್‌ಒ ಉಪಕರಣಗಳು ಶುದ್ಧೀಕರಿಸಿದ ಪ್ರತಿ ಲೀಟರ್‌ ನೀರಿನಲ್ಲಿ ತಲಾ 150 ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶ ಇರಬೇಕು

* ಪ್ರತಿ ಲೀಟರ್‌ ನೀರಿನಲ್ಲಿ ಕರಗಿರುವ ಘನವಸ್ತುಗಳ ಪ್ರಮಾಣ 500 ಮಿಲಿಗ್ರಾಂಗಿಂತಲೂ ಕಡಿಮೆ ಇದ್ದರೆ, ಅಂತಹ ಸಂದರ್ಭದಲ್ಲಿ ಯುವಿ ನೀರು ಶುದ್ಧೀಕರಣ (ಅಲ್ಟ್ರಾ ವಾಯ್ಲೆಟ್‌ ವಾಟರ್ ಫ್ಯೂರಿಫಯರ್) ಬಳಸಬಹುದು

 

ವಿಪರೀತ ನೀರು ವ್ಯರ್ಥ

ಭಾರತದಲ್ಲಿ ಮಾರಾಟವಾಗುತ್ತಿರುವ ಆರ್‌ಒ ಉಪಕರಣಗಳು ಬಳಸುವ ನೀರಿನಲ್ಲಿ ಶುದ್ಧೀಕರಿಸಿದ ನೀರಿನ ಪ್ರಮಾಣ ಶೇ20–35ರಷ್ಟು ಮಾತ್ರ. ಅಂದರೆ, ಶೇ 65–80ರಷ್ಟು ನೀರನ್ನು ವ್ಯರ್ಥವಾಗುತ್ತದೆ. ಪ್ರತಿ ಲೀಟರ್‌ ನೀರಿನಲ್ಲಿ ಕರಗಿರುವ ಘನವಸ್ತುಗಳ ಪ್ರಮಾಣ 600 ಮಿಲಿಗ್ರಾಂನಷ್ಟು ಇದ್ದರೂ ಆ ನೀರನ್ನು ಕುಡಿಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಹೀಗೆ ಕುಡಿಯಲು ಯೋಗ್ಯವಾದ ನೀರನ್ನು ಆರ್‌ಒ ಉಪಕರಣದ ಮೂಲಕ ಶುದ್ಧೀಕರಿಸಿದರೆ, ಅದರಲ್ಲಿ ಶೇ 80ರಷ್ಟು ನೀರು ವ್ಯರ್ಥವಾಗುತ್ತದೆ. ಹೀಗಾಗಿ ಎಲ್ಲೆಡೆ ಆರ್‌ಒ ಉಪಕರಣಗಳ ಬಳಕೆ ಅವಶ್ಯಕತೆ ಇಲ್ಲ ಎಂದು ತಜ್ಞರ ಸಮಿತಿ ತನ್ನ ವರದಿಯಲ್ಲಿ ವಿವರಿಸಿತ್ತು.

ಹೀಗೆ ಆರ್‌ಒ ಉಪಕರಣಗಳು ಹೊರಚೆಲ್ಲುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ. ಈ ವ್ಯರ್ಥ ನೀರಿನಲ್ಲಿ ಖನಿಜಾಂಶಗಳು ವಿಪರೀತ ಪ್ರಮಾಣದಲ್ಲಿ ಇರುತ್ತವೆ. ಈ ನೀರನ್ನು ಹರಿದು ಹೋಗುವ ಕೊಳವೆ ಮಾರ್ಗವು ತುಕ್ಕು ಹಿಡಿಯುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ನೀರನ್ನು ಗಿಡಗಳಿಗೆ ಹಾಯಿಸಿದರೆ, ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ಈ ನೀರಿನ ಬಳಕೆಯನ್ನು ನಿಷೇಧಿಸಬೇಕು ಎಂದು ಸಮಿತಿಯು ಹೇಳಿತ್ತು.

ಈ ನೀರನ್ನು ನೆಲಕ್ಕೆ ಬಿಟ್ಟರೆ, ಅದು ಅಂತರ್ಜಲವನ್ನು ಸೇರುತ್ತದೆ. ಇದರಿಂದ ಅಂತರ್ಜಲ ಕಲುಷಿತವಾಗುತ್ತದೆ. ಹೀಗಾಗಿ ಈ ನೀರನ್ನು ಸಂಸ್ಕರಿಸಿ, ಹೊರಬಿಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಇದು ಕಡ್ಡಾಯವಾಗಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ನಿಯಮಗಳನ್ನು ರೂಪಿಸಿ ಎಂದು ಕೇಂದ್ರ ಪರಿಸರ ಸಚಿವಾಲಯಕ್ಕೆ ಎನ್‌ಜಿಟಿ ಆದೇಶಿಸಿದೆ.

 

ಖನಿಜಾಂಶ ಕೊರತೆ ಅಪಾಯ

ನೀರಿನಲ್ಲಿ ಕರಗಿರುವ ಘನ ವಸ್ತುಗಳ ಜತೆಗೆ, ಮಾನವನಿಗೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶಗಳನ್ನೂ ಆರ್‌ಒ ಉಪಕರಣಗಳು ತೆಗೆದು ಹಾಕುತ್ತವೆ. ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಇಲ್ಲದ ನೀರನ್ನು ಕುಡಿಯುವುದರಿಂದ, ಮಾನವ ದೇಹದಲ್ಲಿ ಈ ಖನಿಜಾಂಶಗಳ ಕೊರತೆ ಉಂಟಾಗುತ್ತದೆ ಎಂದು ತಜ್ಞರ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಈ ಎರಡೂ ಖನಿಜಾಂಶಗಳ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಮೂಳೆ ಮತ್ತು ಹಲ್ಲುಗಳು ದುರ್ಬಲವಾಗುತ್ತವೆ. ಹೃದಯಬಡಿತದಲ್ಲಿ ಏರುಪೇರು, ಅಧಿಕ ರಕ್ತದೊತ್ತಡದ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಅವಶ್ಯಕತೆ ಇಲ್ಲದಿರುವ ಪ್ರದೇಶಗಳಲ್ಲಿ ಆರ್‌ಒ ಉ‍ಪಕರಣಗಳನ್ನು ಬಳಸಬಾರದು. ನೀರಿನಲ್ಲಿರುವ ಇತರ ಮಲಿನ ಪದಾರ್ಥಗಳನ್ನು ತೆಗೆದುಹಾಕಲು ಬೇರೆ ಶುದ್ಧೀಕರಣ ಉಪಕರಣಗಳ ಬಳಕೆಯನ್ನು ಉತ್ತೇಜಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿತ್ತು.

‘ಆಯಾ ಪ್ರದೇಶದಲ್ಲಿ ಲಭ್ಯವಿರುವ ನೀರಿನಲ್ಲಿ ಕರಗಿರುವ ಘನ ವಸ್ತುಗಳ ಪ್ರಮಾಣವನ್ನು ಪರಿಶೀಲಿಸಿ, ಅವುಗಳನ್ನು ಶುದ್ಧೀಕರಿಸಲು ಯಾವ ‘ಫಿಲ್ಟರ್‌’ ಮತ್ತು ‘ಫ್ಯೂರಿಫಯರ್‌’ ಬಳಸಬೇಕು ಎಂಬುದನ್ನು ಗುರುತಿಸುವ ಕೆಲಸವನ್ನು ಸ್ಥಳೀಯ ಸಂಸ್ಥೆಗಳು (ನಗರ ಪಾಲಿಕೆ, ನಗರಸಭೆ, ಪುರಸಣಭೆ ಮತ್ತು ಗ್ರಾಮ ಪಂಚಾಯಿತಿ) ಮಾಡಬೇಕು. ಅನಗತ್ಯವಾಗಿ ಆರ್‌ಒ ಉಪಕರಣಗಳ ಮೂಲಕ ಶುದ್ಧೀಕರಿಸಿದ ನೀರನ್ನು ಕುಡಿಯುವುದರಿಂದ ಆಗುವ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಈ ಸಂಸ್ಥೆಗಳು ಮಾಡಬೇಕು’ ಎಂದು ಎನ್‌ಜಿಟಿ ತನ್ನ ಆದೇಶದಲ್ಲಿ ವಿವರಿಸಿದೆ.

 

ಶುದ್ಧೀಕರಣ ಸಾಧನ

ದೇಶದಲ್ಲಿ ನೀರು ಶುದ್ಧೀಕರಣ ಮಾಡುವ ಹಲವು ವಿಧಗಳ ಉಪಕರಣಗಳು ಬಳಕೆಯಲ್ಲಿವೆ. ನೀರಿನಲ್ಲಿರುವ ಗಡಸುತನ ಹಾಗೂ ಲೋಹದ ಅಂಶಗಳ ಪ್ರಮಾಣವನ್ನು ಆಧರಿಸಿ, ಶುದ್ಧೀಕರಣಕ್ಕೆ ಯಾವ ವಿಧದ ಉಪಕರಣ ಅಗತ್ಯ ಎಂಬುದನ್ನು ನಿರ್ಧರಿಸಲಾಗುತ್ತದೆ.

ರಿವರ್ಸ್‌ ಆಸ್ಮಾಸಿಸ್‌ (ಆರ್‌ಒ)

ತೆಳುವಾದ ಸಿಂಥೆಟಿಕ್‌ ಪೊರೆಯುಳ್ಳ ಪಿಲ್ಟರ್‌ನಲ್ಲಿ ಗಡಸು ನೀರನ್ನು ಪಂಪ್‌ ಮಾಡುವ ಮೂಲಕ ನೀರಿನಲ್ಲಿರುವ ಆರ್ಸೆನಿಕ್‌, ಫ್ಲೋರೈಡ್‌, ಕ್ಲೋರಿನ್‌, ನೈಟ್ರೇಟ್‌, ಸಲ್ಫೇಟ್‌ ಮತ್ತಿತರ ರಾಸಾಯನಿಕ ಪದಾರ್ಥಗಳನ್ನು ಬೇರ್ಪಡಿಸುವ ವಿಧಾನ ಇದು. ಈ ಪ್ರಕ್ರಿಯೆಯಲ್ಲಿ ರಾಸಾಯನಿಕ ಪದಾರ್ಥಗಳು ಪಿಲ್ಟರ್‌ ಪೊರೆಗಳಲ್ಲೇ ಉಳಿದು, ಶುದ್ಧೀಕರಣಗೊಂಡ ನೀರು ಬಳಕೆಗೆ ಲಭ್ಯವಾಗುತ್ತದೆ.

ಏನು ಪ್ರಯೋಜನ?

* ಗಡಸು ಹಾಗೂ ಲವಣಯುಕ್ತ ನೀರು ಹೆಚ್ಚಾಗಿರುವ ಪ್ರದೇಶಗಳಲ್ಲಿ ನೀರಿನಲ್ಲಿರುವ ಬಹುತೇಕ ರಾಸಾಯನಿಕ ಬೇರ್ಪಡಿಸುತ್ತದೆ

* ನೀರಿನಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ

* ನೀರಿನ ದುರ್ವಾಸನೆಯನ್ನು ಹೋಗಲಾಡಿಸಿ, ರುಚಿಯನ್ನು ಹೆಚ್ಚಿಸುತ್ತದೆ

* ನಿರ್ವಹಣೆ ಸುಲಭ 

ಅನನುಕೂಲ ಏನು?

* ಶುದ್ಧೀಕರಣ ಪ್ರಕ್ರಿಯೆಯಲ್ಲಿ ಅಧಿಕ ಪ್ರಮಾಣದ ನೀರು ಪೋಲಾಗುತ್ತದೆ. ಚರಂಡಿಗೆ ಹರಿದುಹೋಗುವ ಈ ನೀರು ಅಧಿಕ ಪ್ರಮಾಣದ ರಾಸಾಯನಿಕಗಳಿಂದ ಕೂಡಿರುತ್ತದೆ

ಯುವಿ (ಅಲ್ಟ್ರಾವಾಯ್ಲೆಟ್‌)

ಯುವಿ ಅಥವಾ ಅಲ್ಟ್ರಾವಾಯ್ಲೆಟ್‌ ಉಪಕರಣವು ನೀರಿನಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಆದರೆ, ರಾಸಾಯನಿಕಗಳನ್ನು ಹೊರಹಾಕುವ ಸೌಲಭ್ಯ ಈ ಉಪಕರಣದಲ್ಲಿ ಇಲ್ಲ. ಉಪಕರಣದಲ್ಲಿರುವ ಯುವಿ ಲ್ಯಾಂಪ್‌ ಮೂಲಕ ನೀರನ್ನು ಹಾಯಿಸಿ, ಶುದ್ಧೀಕರಿಸಲಾಗುತ್ತದೆ. ಯುವಿ ಲ್ಯಾಂಪ್‌ ಮೂಲಕ ನೀರು ಹಾದು ಹೋಗುವಾಗ ಅದರಲ್ಲಿನ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಾಣು ಜೀವಿಗಳು ಅಲ್ಟ್ರಾವಾಯ್ಲೆಟ್‌ ಬೆಳಕಿನ ಸಂಪರ್ಕಕ್ಕೆ ಬಂದು ನಾಶವಾಗುತ್ತವೆ. ಸತ್ತ ಜೀವಾಣುಗಳು ನೀರಿನಲ್ಲೇ ಉಳಿಯುತ್ತವೆಯಾದರೂ ಅವುಗಳಿಂದ ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯಾಗದು.

ಏನು ಪ್ರಯೋಜನ?

* ನದಿ ನೀರಿನಂತಹ ಕಡಿಮೆ ಪ್ರಮಾಣದ ಟಿಡಿಎಸ್‌ (ಟೋಟಲ್‌ ಡಿಸೋಲ್ವ್ಡ್‌ ಸಾಲಿಡ್ಸ್‌) ಇರುವ ನೀರಿನ ಶುದ್ಧೀಕರಣಕ್ಕೆ ಸಹಕಾರಿ

* ನಿರ್ವಹಣೆ ವೆಚ್ಚ ತುಂಬಾ ಕಡಿಮೆ. ವರ್ಷಕ್ಕೆ ಒಂದು ಸಲವಷ್ಟೇ ಯುವಿ ಲ್ಯಾಂಪ್‌ ಬದಲಿಸುವ ಪ್ರಮೇಯ ಎದುರಾಗುವ ಸಾಧ್ಯತೆ

* ಈ ಉಪಕರಣದಿಂದ ಒಂದೇ ನಿಮಿಷದಲ್ಲಿ 2ರಿಂದ 4 ಲೀಟರ್‌ನಷ್ಟು ಶುದ್ಧೀಕರಿಸಿದ ನೀರು ಬಳಕೆಗೆ ಲಭ್ಯ. ಇದಕ್ಕೆ ಹೋಲಿಸಿದರೆ, ಇತರ ವಿಧಾನಗಳಲ್ಲಿ ನೀರು ಶುದ್ಧೀಕರಿಸುವ ಪ್ರಕ್ರಿಯೆ ಬಲು ನಿಧಾನ

* ಶುದ್ಧೀಕರಣದ ಪ್ರಕ್ರಿಯೆಯಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ. ನೀರಿನಲ್ಲಿರುವ ಖನಿಜಗಳನ್ನು ತೆಗೆದು ಹಾಕುವುದಿಲ್ಲ. ರುಚಿಯಲ್ಲೂ ಬದಲಾವಣೆ ಮಾಡುವುದಿಲ್ಲ. ಪರಿಸರಕ್ಕೆ ಹೆಚ್ಚು ಪೂರಕ

ಅನನುಕೂಲ ಏನು?

* ಅಲ್ಟ್ರಾವಾಯ್ಲೆಟ್‌ ಬೆಳಕಿನಿಂದ ಸತ್ತ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಾಣು ಜೀವಿಗಳು ನೀರಿನಲ್ಲೇ ಉಳಿಯುತ್ತವೆ. ಕೆಲವೊಮ್ಮೆ ಬೆಳಕಿನ ಸಂಪರ್ಕಕ್ಕೆ ಬಾರದ ಸೂಕ್ಷ್ಮಾಣು ಜೀವಿಗಳು ಶುದ್ಧೀಕರಣ ಪ್ರಕ್ರಿಯೆ ನಂತರವೂ ಜೀವಂತವಾಗಿ ಉಳಿಯುತ್ತವೆ

* ನೀರು ದುರ್ವಾಸನೆಯಿಂದ ಕೂಡಿದ್ದರೆ ಶುದ್ಧೀಕರಣದ ಬಳಿಕವೂ ಅದೇ ವಾಸನೆ ಉಳಿಯುತ್ತದೆ. ರಾಸಾಯನಿಕಗಳನ್ನೂ ಬೇರ್ಪಡಿಸುವುದಿಲ್ಲ. ಗಡಸು ನೀರಿನ ಶುದ್ಧೀಕರಣಕ್ಕೆ ಪೂರಕವಲ್ಲ

 

ಅಲ್ಟ್ರಾಫಿಲ್ಟರೇಷನ್‌ (ಯುಎಫ್‌)

ಈ ಉಪಕರಣದಲ್ಲಿರುವ ಸಿಂಥೆಟಿಕ್‌ ಪಿಲ್ಟರ್‌ನಲ್ಲಿರುವ ಎಳೆಗಳು ನೀರಿನಲ್ಲಿರುವ ಘನ ಪದಾರ್ಥಗಳನ್ನು ಬೇರ್ಪಡಿಸುತ್ತವೆ. ಯುಎಫ್‌ ಪಿಲ್ಟರ್‌ನಲ್ಲಿ ನೀರು ಹಾಯಿಸಿದಾಗ ಅದರಲ್ಲಿರುವ ಘನ ಪದಾರ್ಥಗಳು ಹಾಗೂ ಬ್ಯಾಕ್ಟೀರಿಯಾ ಗಳಿಗೆ ಅಲ್ಲಿರುವ ಎಳೆಗಳು ‘ಬಲೆ’ ಬೀಸಿ ಹಿಡಿದು ಹಾಕುತ್ತವೆ. ಆರ್‌ಒ ಹಾಗೂ ಯುಎಫ್‌ ಉಪಕರಣಗಳು ಹೆಚ್ಚು–ಕಡಿಮೆ ಒಂದೇ ತೆರನಾಗಿ ಕಾರ್ಯ ನಿರ್ವಹಿಸುತ್ತವೆ. ಆದರೆ, ಆರ್‌ಒದಲ್ಲಿ ಅತ್ಯಂತ ಸೂಕ್ಷ್ಮ ಪದಾರ್ಥಗಳೂ ನೀರಿನಿಂದ ಬೇರ್ಪಡುತ್ತವೆ.

ಏನು ಪ್ರಯೋಜನ?

* ರಾಸಾಯನಿಕದಿಂದ ಕಲುಷಿತಗೊಳ್ಳದಿರುವ ನೀರಿನ ಶುದ್ಧೀಕರಣಕ್ಕೆ ಈ ಉಪಕರಣ ಹೆಚ್ಚು ಉಪಯುಕ್ತ. ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಬೇರ್ಪಡಿಸುತ್ತದೆ

* ವಿದ್ಯುತ್‌ ಸಂಪರ್ಕವಿಲ್ಲದೆ ಕಾರ್ಯ ನಿರ್ವಹಿಸುತ್ತದೆ. ನೀರು ಕಡಿಮೆ ಒತ್ತಡದಲ್ಲಿ ಪೂರೈಕೆ ಆಗುತ್ತಿದ್ದರೂ ಕಾರ್ಯ ನಿರ್ವಹಿಸುತ್ತದೆ

ಅನನುಕೂಲ ಏನು?

* ನೀರಿನಲ್ಲಿರುವ ರಾಸಾಯನಿಕ ಅಂಶಗಳನ್ನು ಬೇರ್ಪಡಿಸುವುದಿಲ್ಲ. ಶುದ್ಧೀಕರಣದ ಬಳಿಕವೂ ನೀರಿನ ಗಡಸುತನ ಹಾಗೇ ಉಳಿದಿರುತ್ತದೆ. ಹೀಗಾಗಿ ಕೊಳವೆ ಬಾವಿಯ ನೀರು ಶುದ್ಧೀಕರಣ ಸಾಧ್ಯವಿಲ್ಲ

* ಮೇಲಿಂದ ಮೇಲೆ ಉಪಕರಣವನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ನೀರು ಅಶುದ್ಧವಾಗಿಯೇ ಹೊರಬರುವ ಸಾಧ್ಯತೆ ಇದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು