ಬುಧವಾರ, ಜನವರಿ 22, 2020
19 °C
ಪೌರತ್ವ (ತಿದ್ದುಪಡಿ) ಮಸೂದೆ ಖಂಡಿಸಿ ಪ್ರತಿಭಟನೆ

ಅಸ್ಸಾಂ: ಆಕ್ರೋಶ ಸ್ಫೋಟ, ಪೊಲೀಸರ ಗುಂಡಿಗೆ ಮೂರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಪೌರತ್ವ (ತಿದ್ದುಪಡಿ) ಮಸೂದೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯ ಕೇಂದ್ರ ಸ್ಥಾನವಾಗಿರುವ ಅಸ್ಸಾಂನಲ್ಲಿ ಗುರುವಾರ ಆಕ್ರೋಶ ಸ್ಫೋಟಗೊಂಡಿದೆ. ಸಾವಿರಾರು ಮಂದಿ ಕರ್ಫ್ಯೂ ಉಲ್ಲಂಘಿಸಿ ಬೀದಿಗಿಳಿದಿದ್ದಾರೆ. ಸೇನೆಯ ತುಕಡಿಗಳ ಪಥ ಸಂಚಲನಕ್ಕೆ ಸಡ್ಡು ಹೊಡೆದಿರುವ ಪ್ರತಿಭಟನಕಾರರು, ಹಲವೆಡೆ ಪೊಲೀಸರ ಜತೆಗೆ ಘರ್ಷಣೆ ನಡೆಸಿದ್ದಾರೆ.

‘ಕಲ್ಲು ತೂರಾಟ ನಡೆಸಿದ’ ಪ್ರತಿಭಟನಕಾರರ ಮೇಲೆ ಗುವಾಹಟಿಯ ಲಾಲುಂಗ್‌ಗಾಂವ್‌ನಲ್ಲಿ ಪೊಲೀಸರು ಗೋಲಿಬಾರ್‌ ನಡೆಸಿದ್ದಾರೆ. ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. 

ರಾಜ್ಯ ಪೊಲೀಸ್‌ ಮುಖ್ಯಸ್ಥ ಭಾಸ್ಕರ್‌ ಜ್ಯೋತಿ ಮಹಾಂತ ಅವರ ವಾಹನ ಪಡೆ ಮೇಲೆ ಕಲ್ಲು ತೂರಲಾಗಿದೆ. ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಅವರ ಗುವಾಹಟಿಯ ಅಧಿಕೃತ ನಿವಾಸದ ಮೇಲೆಯೂ ಕಲ್ಲು ಎಸೆಯಲಾಗಿದೆ. ಸರ್ಕಾರದ ಕಾನೂನು ಸಲಹೆಗಾರರ ನಿವಾಸವನ್ನು ಜಖಂಗೊಳಿಸಲಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹಲವು ಕಚೇರಿಗಳ ಮೇಲೆಯೂ ದಾಳಿ ನಡೆದಿದೆ. ಚಬುವಾ ಮತ್ತು ಸೂತಿಯಾ ಶಾಸಕರ ಮನೆಗಳ ಮೇಲೆಯೂ ಕಲ್ಲು ತೂರಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಯನ್ನು ಸೇನೆಗೆ ವಹಿಸಲು ನಿರ್ಧರಿಸಲಾಗಿದೆ. 

ಸೇನೆ, ಅರೆ ಸೇನೆ ಮತ್ತು ಪೊಲೀಸ್‌ ಸಿಬ್ಬಂದಿ ಮೂಲೆಮೂಲೆಗಳಲ್ಲಿಯೂ ಬೀಡು ಬಿಟ್ಟಿರುವುದರಿಂದ ಗುವಾಹಟಿ ನಗರವು ಯುದ್ಧ ಭೂಮಿಯಂತಾಗಿದೆ. ಉದ್ರಿಕ್ತ ಗುಂಪುಗಳು ರಸ್ತೆ ತಡೆ ನಡೆಸಿವೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಟೈರ್‌ಗಳನ್ನು ಸುಡಲಾಗಿದೆ. ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ವಾಹನಗಳು ಮತ್ತು ಅಂಗಡಿಗಳನ್ನು ಜಖಂಗೊಳಿಸಲಾಗಿದೆ. ಪ್ರತಿಭಟನಕಾರರು ಭಾರಿ ಸಂಖ್ಯೆಯಲ್ಲಿ ಇರುವುದರಿಂದ ಹಲವು ಭಾಗಗಳಲ್ಲಿ ಭದ್ರತಾ ಸಿಬ್ಬಂದಿ ಅಸಹಾಯಕರಾಗಿ ನಿಂತಿದ್ದರು.

ಗುವಾಹಟಿ ಮತ್ತು ಇತರ ನಗರಗಳ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳು ಅನುರಣಿಸಿವೆ. ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘವು (ಎಎಎಸ್‌ಯು) ಲತಶೀಲ್‌ ಮೈದಾನದಲ್ಲಿ ಭಾರಿ ಸಮಾವೇಶ ಆಯೋಜಿಸಿತ್ತು. ಭದ್ರತಾ ಸಿಬ್ಬಂದಿ ಮತ್ತು ಕರ್ಫ್ಯೂವನ್ನು ಲೆಕ್ಕಕ್ಕೇ ಇಡದ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.

ಹಿಂಸೆಗೆ ಕುಮ್ಮಕ್ಕು ನೀಡುವಂತಹ ದೃಶ್ಯಗಳು ಮತ್ತು ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸುದ್ದಿವಾಹಿನಿಗಳಿಗೆ ಸೂಚನೆ ನೀಡಿದೆ. ಹಿಂಸಾಚಾರದ ದೃಶ್ಯಗಳು ಕೆಲವು ವಾಹಿನಿಗಳಲ್ಲಿ ಪ್ರಸಾರವಾದ ಬಳಿಕ ಈ ಸೂಚನೆ ನೀಡಲಾಗಿದೆ.

ಪ್ರಧಾನಿ ಟ್ವೀಟ್‌ಗೆ ಕಾಂಗ್ರೆಸ್‌ ಲೇವಡಿ

ಈಶಾನ್ಯ ರಾಜ್ಯಗಳ ಜನರ ಹಕ್ಕುಗಳನ್ನು ರಕ್ಷಿಸಲು ತಮ್ಮ ಸರ್ಕಾರ ಬದ್ಧವಾಗಿದೆ, ಹಾಗಾಗಿ ಜನರು ಶಾಂತಿ ಕಾಪಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಆದರೆ, ಈ ಮನವಿಗೂ ಪ್ರತಿಭಟನಕಾರರು ಕಿವಿಕೊಟ್ಟಿಲ್ಲ.

‘ಅಸ್ಸಾಂ ಜನರ ರಾಜಕೀಯ, ಭಾಷಿಕ, ಸಾಂಸ್ಕೃತಿಕ ಮತ್ತು ನೆಲದ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಪೌರತ್ವ (ತಿದ್ದುಪಡಿ) ಮಸೂದೆ ಅಂಗೀಕಾರದಿಂದ ಅಸ್ಸಾಂನ ಸೋದರ ಸೋದರಿಯರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಾನು ಭರವಸೆ ಕೊಡುತ್ತೇನೆ’ ಎಂದು ಅಸ್ಸಾಂ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ. 

ಮೋದಿ ಅವರ ಟ್ವೀಟ್‌ ಅನ್ನು ಲೇವಡಿ ಮಾಡಿ ಕಾಂಗ್ರೆಸ್‌ ಪಕ್ಷವು ಟ್ವೀಟ್‌ ಮಾಡಿದೆ. ‘ಅಸ್ಸಾಂನ ನಮ್ಮ ಸೋದರ ಸೋದರಿಯರು ನಿಮ್ಮ ಭರವಸೆಯ ಸಂದೇಶವನ್ನು ಓದಲಾಗುತ್ತಿಲ್ಲ. ಒಂದು ವೇಳೆ ನಿಮಗೆ ಮರೆತಿದ್ದರೆ ನೆನಪಿಸುತ್ತಿದ್ದೇವೆ, ಅಲ್ಲಿ ಇಂಟರ್‌ನೆಟ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ’ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಹಿಂಸೆಗಿಲ್ಲ ಕಡಿವಾಣ

ಚಬುವಾ ಶಾಸಕ ವಿನೋದ್‌ ಹಜಾರಿಕಾ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಆ ಕಟ್ಟಡದ ಹೊರಗೆ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಇರಿಸಲಾಗಿದೆ. ಶಾಸಕರ ಕಚೇರಿಯೂ ಅದೇ ಕಟ್ಟದಲ್ಲಿತ್ತು. ಅದೂ ಸುಟ್ಟು ಹೋಗಿದೆ. 

ಈ ಪಟ್ಟಣದ ವೃತ್ತ ಕಚೇರಿ ಬೆಂಕಿಗೆ ಆಹುತಿಯಾಗಿದೆ. ಕಾಮರೂಪ ಜಿಲ್ಲೆಯು ಸಂಪೂರ್ಣವಾಗಿ ಬಂದ್ ಆಗಿದೆ. ಶಾಲೆ–ಕಾಲೇಜುಗಳು, ಅಂಗಡಿ, ಕಚೇರಿಗಳು ಮುಚ್ಚಿದ್ದವು. ರಸ್ತೆಯಲ್ಲಿ ವಾಹನಗಳೇ ಇರಲಿಲ್ಲ. 

ಕಲ್ಲು ತೂರಿದ ಮತ್ತು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರನ್ನು ಚದುರಿಸಲು ರಂಗಿಯಾ ಪಟ್ಟಣದಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಲಾಗಿದೆ. ಲಾಠಿ ಪ್ರಹಾರವೂ ನಡೆದಿದೆ. 

ಉರಿದ ನಿಲ್ದಾಣಗಳು

ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಅವರ ತವರು ದಿಬ್ರೂಗಡದ ಚಬುವಾದ ರೈಲು ನಿಲ್ದಾಣಕ್ಕೆ ಬುಧವಾರ ತಡರಾತ್ರಿ ಬೆಂಕಿ ಹಚ್ಚಲಾಗಿದೆ. ತೀನ್‌ಸುಕಿಯಾದ ಪನಿಡೊಲ ರೈಲು ನಿಲ್ದಾಣಕ್ಕೂ ಬೆಂಕಿ ಇರಿಸಲಾಗಿದೆ. ಹಾಗಾಗಿ, ರೈಲ್ವೆ ವಿಶೇಷ ರಕ್ಷಣಾ ಪಡೆಯ (ಆರ್‌ಪಿಎಸ್‌ಎಫ್‌) 12 ತುಕಡಿಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.

‘ವಿವಿಧ ನಿಲ್ದಾಣಗಳಲ್ಲಿ ಸಿಲುಕಿರುವ ಜನರಿಗೆ ನೆರವು ನೀಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿಶೇಷ ರೈಲಿನಲ್ಲಿ ಅವರನ್ನು ಕಳುಹಿಸುವ ಬಗ್ಗೆಯೂ ಯೋಚನೆ ಇದೆ. ಆದರೆ, ಇಂತಹ ರೈಲುಗಳನ್ನೂ ಪ್ರತಿಭಟನಕಾರರು ತಡೆಯಬಹುದು. ಇದು ಪ್ರಯಾಣಿಕರನ್ನು ಅಪಾಯಕ್ಕೆ ತಳ್ಳಬಹುದು ಎಂಬ ಆತಂಕವೂ ಇದೆ’ ಎಂದು ಆರ್‌ಪಿಎಸ್ಎ‌ಫ್‌ ಮುಖ್ಯಸ್ಥ ಅರುಣ್‌ ಕುಮಾರ್‌ ಹೇಳಿದ್ದಾರೆ. 

ಪೊಲೀಸ್‌ ತಲೆದಂಡ

ಪ್ರತಿಭಟನೆ ಮತ್ತು ಹಿಂಸಾಚಾರ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ, ಕೆಲವು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಗುವಾಹಟಿ ಪೊಲೀಸ್‌ ಆಯುಕ್ತ ದೀಪಕ್‌ ಕುಮಾರ್‌ ಅವರನ್ನು ತೆಗೆದು ಮುನ್ನಾ ಪ್ರಸಾದ್‌ ಗುಪ್ತಾ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ. ಇವರು ಎಸ್‌ಪಿಜಿಗೆ ನಿಯೋಜನೆಗೊಂಡಿದ್ದರು. ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಎಡಿಜಿಪಿ) (ಕಾನೂನು–ಸುವ್ಯವಸ್ಥೆ) ಮುಕೇಶ್‌ ಅಗರ್‌ವಾಲ್‌ ಅವರನ್ನು ವರ್ಗಾಯಿಸಲಾಗಿದೆ. ಈ ಹುದ್ದೆಗೆ ಸಿಐಡಿ ಎಡಿಜಿಪಿ ಜಿ.ಪಿ. ಸಿಂಗ್‌ ಅವರನ್ನು ನೇಮಿಸಲಾಗಿದೆ. ಇವರು ಈವರೆಗೆ ಎನ್‌ಐಎಯಲ್ಲಿ ಕೆಲಸ ಮಾಡುತ್ತಿದ್ದರು.  

ಸಂಪರ್ಕ, ಸಂವಹನ ಸ್ಥಗಿತ

– ಅಸ್ಸಾಂನ ಹತ್ತು ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಮತ್ತೆ 48 ತಾಸು ಸ್ಥಗಿತ

– ಅಸ್ಸಾಂ, ತ್ರಿಪುರಾಕ್ಕೆ ಹೋಗುವ ಎಲ್ಲ ರೈಲುಗಳು ರದ್ದು

– ಕಾಮಾಖ್ಯ ಮತ್ತು ಗುವಾಹಟಿ ರೈಲು ನಿಲ್ದಾಣಗಳಲ್ಲಿ ಹಲವು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ

– ಗುವಾಹಟಿ ಸೇರಿ ಈಶಾನ್ಯ ರಾಜ್ಯಗಳಿಗೆ ಹೋಗುವ ಹಲವು ವಿಮಾನಗಳು ರದ್ದಾಗಿವೆ

– ತಲಾ 70 ಯೋಧರಿರುವ ಐದು ತುಕಡಿಗಳನ್ನು ಅಸ್ಸಾಂನಲ್ಲಿ ನಿಯೋಜಿಸಲಾಗಿದೆ

– ಗುವಾಹಟಿ, ತೀನ್‌ಸುಕಿಯಾ, ಜೊರ್ಹಾತ್‌, ದಿಬ್ರುಗಡದಲ್ಲಿ ಈ ತುಕಡಿಗಳು ಪಥಸಂಚಲನ ನಡೆಸಿವೆ

– ಗುವಾಹಟಿ, ದಿಬ್ರೂಗಡದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ, ಜೊರ್ಹಾತ್‌ನಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ

– ಗುರುವಾರವೂ ಪ್ರತಿಭಟನೆ ಮುಂದುವರಿಸಲು ಎಎಸ್‌ಎಸ್‌ಯು ಕರೆ ನೀಡಿದೆ. ಹಾಗಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಭೀತಿ ಉಂಟಾಗಿದೆ

ರಾಷ್ಟ್ರಪತಿ ಅಂಕಿತ

ಪೌರತ್ವ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಅಂಕಿತ ಹಾಕಿದ್ದು, ಈ ಮೂಲಕ ಮಸೂದೆಯು ಕಾಯ್ದೆ ರೂಪ ಪಡೆದುಕೊಂಡಿತು. 

ಗೆಜೆಟ್‌ನಲ್ಲಿ ಗುರುವಾರ ಈ ಕುರಿತು ಅಧಿಸೂಚನೆ ಪ್ರಕಟಣೆಯಾದ ನಂತರಮ, ನೂತನ ಕಾಯ್ದೆ ಜಾರಿಗೆ ಬರಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಮಸೂದೆಯು ರಾಜ್ಯಸಭೆಯಲ್ಲಿ ಬುಧವಾರ ಮತ್ತು ಲೋಕಸಭೆಯಲ್ಲಿ ಸೋಮವಾರ ಅಂಗೀಕಾರಗೊಂಡಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು