ಪುಲ್ವಾಮಾ ದಾಳಿಗೆ ಸಂಚು ರೂಪಿಸಿದ್ದ ಉಗ್ರನ ಹತ್ಯೆ?

ಮಂಗಳವಾರ, ಮಾರ್ಚ್ 19, 2019
20 °C

ಪುಲ್ವಾಮಾ ದಾಳಿಗೆ ಸಂಚು ರೂಪಿಸಿದ್ದ ಉಗ್ರನ ಹತ್ಯೆ?

Published:
Updated:

ಶ್ರೀನಗರ: ದಕ್ಷಿಣ ಕಾಶ್ಮೀರದ ತ್ರಾಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪುಲ್ವಾಮಾ ದಾಳಿಯ ಸಂಚುಕೋರ ಹತ್ಯೆ ಮಾಡಲಾಗಿದೆ ಎಂದು ಸೇನೆಯ ಅಧಿಕೃತ ಮೂಲಗಳು ತಿಳಿಸಿವೆ.

ಪುಲ್ವಾಮಾ ಜಿಲ್ಲೆಯ ತ್ರಾಲ್‌ನಲ್ಲಿ ಭಾನುವಾರ ಮಧ್ಯರಾತ್ರಿ ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಷೆ ಎ ಮೊಹಮ್ಮದ್‌ (ಜೆಎಎಂ) ಉಗ್ರ ಸಂಘಟನೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅದರಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಮುದಸ್ಸಿರ್‌ ಅಹ್ಮದ್‌ ಖಾನ್‌ ಅಲಿಯಾಸ್‌ ಮೊಹಮ್ಮದ್‌ ಭಾಯಿ ಸಹ ಇದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹತ್ಯೆಗೊಂಡ ಮೂವರು ಉಗ್ರರ ದೇಹಗಳು ಸುಟ್ಟುಕರಕರಾಗಿದ್ದು ಗುರುತು ಪತ್ತೆ ಸಾಧ್ಯವಾಗುತ್ತಿಲ್ಲ ಹಾಗಾಗಿ ಬೇರೆ ರೀತಿಯಲ್ಲಿ ಅವರ ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.

ಪಿಂಗ್ಲಿಷ್‌ ಪ್ರದೇಶದಲ್ಲಿ ಉಗ್ರರು ಇದ್ದಾರೆ ಎಂಬ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಕೈಗೊಂಡಿತು. ಈ ವೇಳೆ ಉಗ್ರರು ಗುಂಡಿನ ದಾಳಿ ಆರಂಭಿಸಿದೆ. ಈ ಗುಂಡಿನ ಚಕಮಕಿಯಲ್ಲಿ ಉಗ್ರರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ

ಈತನಕ ಲಭ್ಯವಾದ ಸಾಕ್ಷ್ಯಗಳನ್ನು ಕ್ರೋಡೀಕರಿಸಿ ದಾಳಿಯ ಹಿಂದೆ ಇದ್ದ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ. 23 ವರ್ಷದ ಮುದಸ್ಸಿರ್‌ ಪುಲ್ವಾಮಾ ಜಿಲ್ಲೆಯವನು. ಈತ ಪದವೀಧರನಾಗಿದ್ದು, ಎಲೆಕ್ಟ್ರೀಷಿಯನ್‌ ಆಗಿ ಕೆಲಸ ಮಾಡುತ್ತಿದ್ದ. ಪುಲ್ವಾಮಾ ದಾಳಿಗೆ ಬಳಸಿದ ವಾಹನ ಮತ್ತು ಸ್ಫೋಟಕಗಳನ್ನು ಈತ ಒದಗಿಸಿದ್ದ. 

2017ರಲ್ಲಿ ಈತ ಜೈಷ್‌ ಎ ಮೊಹಮ್ಮದ್‌ ಸಂಘಟನೆ ಸೇರಿದ್ದ. ಬಹಿರಂಗವಾಗಿ ಕೆಲಸ ಮಾಡುತ್ತಿದ್ದ ಈತನನ್ನು ನೂರ್‌ ಮೊಹಮ್ಮದ್‌ ತಾಂತ್ರೆ ಎಂಬಾತ ಭೂಗತ ಚಟುವಟಿಕೆಗಳಿಗೆ ಹಚ್ಚಿದ. ಈ ತಾಂತ್ರೆಯೇ ಕಾಶ್ಮೀರ ಕಣಿವೆಯಲ್ಲಿ ಜೈಷ್‌ ಸಂಘಟನೆಯನ್ನು ಪುನಶ್ಚೇತನಗೊಳಿಸಿದ ಎಂದು ಹೇಳಲಾಗಿದೆ. 

2017ರ ಡಿಸೆಂಬರ್‌ನಲ್ಲಿ ತಾಂತ್ರೆ ಸತ್ತ. 2018ರ ಜನವರಿ 14ರಂದು ಮುದಸ್ಸಿರ್‌ ಮನೆಯಿಂದ ಪರಾರಿಯಾಗಿ ಜೈಷ್‌ನ ಚಟುವಟಿಕೆಗಳಲ್ಲಿ ಸಕ್ರಿಯನಾದ. ಪುಲ್ವಾಮಾ ದಾಳಿ ನಡೆಸಿದ ಅದಿಲ್‌ ಅಹ್ಮದ್‌ ದರ್‌ ಜತೆಗೆ ಮುದಸ್ಸಿರ್ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಪದವಿ ಪಡೆದ ಬಳಿಕ ಈತ ಒಂದು ವರ್ಷದ ಎಲೆಕ್ಟ್ರೀಷಿಯನ್‌ ಡಿಪ್ಲೊಮಾ ಮಾಡಿದ್ದ. ಈತ ಹಲವು ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ. 2018ರ ಫೆಬ್ರುವರಿಯಲ್ಲಿ ಸುಂಜವನ್‌ ಸೇನಾ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಈತ ಭಾಗಿಯಾಗಿದ್ದ. ಈ ದಾಳಿಯಲ್ಲಿ ಆರು ಯೋಧರು ಮತ್ತು ಒಬ್ಬ ನಾಗರಿಕ ಬಲಿಯಾಗಿದ್ದರು. 

ಲೆತ್‌ಪೋರಾದಲ್ಲಿ ಸಿಆರ್‌ಪಿಎಫ್‌ ಶಿಬಿರದ ಮೇಲೆ 2018ರ ಜನವರಿಯಲ್ಲಿ ದಾಳಿಯಾಗಿತ್ತು. ಅದರಲ್ಲಿ ಐವರು ಸಿಆರ್‌ಪಿಎಫ್‌ ಯೋಧರು ಬಲಿಯಾಗಿದ್ದರು. ಈ ದಾಳಿಯಲ್ಲಿಯೂ ಮುದಸ್ಸಿರ್‌ನ ಕೈವಾಡ ಇದೆ ಎನ್ನಲಾಗಿದೆ. ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವ ಭಾರತೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಮುದಸ್ಸಿರ್‌ನ ಮನೆಯಲ್ಲಿ ಶೋಧ ನಡೆಸಿದೆ.  

ಪುಲ್ವಾಮಾ ದಾಳಿಗೆ ಬಳಸಲಾದ ಮಾರುತಿ ಇಕೊ ವ್ಯಾನ್‌ ಅನ್ನು ದಾಳಿ ನಡೆಸುವುದಕ್ಕೆ ಹತ್ತು ದಿನ ಮೊದಲು ಜೈಷ್‌ನ ಉಗ್ರನೊಬ್ಬ ಖರೀದಿಸಿದ್ದ. ಸಜ್ಜದ್‌ ಭಟ್‌ ಎಂಬ ಜೈಷ್‌ ಉಗ್ರನೊಬ್ಬ ದಾಳಿಯ ಬಳಿಕ ತಲೆಮರೆಸಿಕೊಂಡಿದ್ದಾನೆ. ಈತನೂ ಉಗ್ರಗಾಮಿ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದಾನೆ ಎನ್ನಲಾಗಿದೆ.  

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !