ಶುಕ್ರವಾರ, ಜೂನ್ 18, 2021
24 °C

ಪುಣೆಯಲ್ಲಿ ಗೋಡೆ ಕುಸಿತ| ಕೂಲಿಗಾಗಿ ಬಿಹಾರದಿಂದ ಬಂದಿದ್ದ 15 ಕಾರ್ಮಿಕರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಇಲ್ಲಿನ ಕೊಂಧ್ವಾ ಪ್ರದೇಶದಲ್ಲಿರುವ ತಲಾಬ್ ಮಸೀದಿ ಹತ್ತಿರದ ವಸತಿ ಸಮುಚ್ಚಯದ 60 ಅಡಿ ಎತ್ತರದ ಗೋಡೆ ಕುಸಿದಿದ್ದು, ಬಿಹಾರ, ಬಂಗಾಳದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕನಿಷ್ಠ 15 ಜನರು ಮೃತಪಟ್ಟಿರುವ ದುರಂತ ಶನಿವಾರ ಸಂಭವಿಸಿದೆ.

ಪುಣೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆ ಕುಸಿದಿದೆ. ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರಿಗಾಗಿ  ಈ ಗೋಡೆ ಪಕ್ಕದಲ್ಲೇ ಗುಡಿಸಲುಗಳನ್ನು ನಿರ್ಮಿಸಿಕೊಡಲಾಗಿತ್ತು. ಮಧ್ಯರಾತ್ರಿ ರಾತ್ರಿ ಸುಮಾರು 1.45ರ ವೇಳೆ ಕಾಂಪೌಂಡ್‌ ಗೋಡೆ ನೆಲಕ್ಕುರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ 9 ಪುರುಷರು, ಓರ್ವ ಮಹಿಳೆ ಹಾಗೂ ನಾಲ್ಕು ಮಕ್ಕಳು ಸೇರಿ ಒಟ್ಟು 15 ಮಂದಿ ಸಾವಿಗೀಡಾಗಿದ್ದಾರೆ ಎಂದು ಖಚಿತಪಡಿಸಲಾಗಿದ್ದು, ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. 

ಎನ್‌ಡಿಆರ್‌ಎಫ್‌ ತಂಡ ಸ್ಥಳಕ್ಕೆ ಧಾವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಇನ್ನೂ ಇಬ್ಬರು ಮೂವರು ಸಿಲುಕಿರುವ ಸಾಧ್ಯತೆ ಇದೆ.

ಜಿಲ್ಲಾಧಿಕಾರಿ ನವಲ್‌ ಕಿಶೋರ್‌ ರಾಮ್‌ ಅವರು, ‘ಭಾರಿ ಮಳೆಯಿಂದಾಗಿ ಗೋಡೆ ಕುಸಿದಿದೆ. ನಿರ್ಮಾಣ ಕಂಪನಿಯ ಬೇಜಾವಬ್ದಾರಿ ಎದ್ದುಕಾಣುತ್ತಿದೆ. 15 ಜನರು ಮೃತಪಟ್ಟಿರುವುದು ಸಣ್ಣ ಸಂಗತಿಯಲ್ಲ. ಬಹುಶಃ ಮೃತರೆಲ್ಲ ಬಿಹಾರ, ಬಂಗಾಳದಿಂದ ಬಂದಿದ್ದವರಾಗಿರಬಹುದು. ಸರ್ಕಾರ ಅವರಿಗೆ ಅಗತ್ಯ ನೆರವು ನೀಡಲಿದೆ’ ಎಂದು ಹೇಳಿದ್ದಾರೆ.

ಪುಣೆ ಪೋಲಿಸ್‌ ಕಮಿಷನರ್‌ ಕೆ.ವೆಂಕಟೇಶಂ ಅವರು, ‘ದುರಂತಕ್ಕೆ ಕಾರಣ ಏನು ಎಂಬುದರ ಬಗ್ಗೆ ನಮ್ಮ ತಂಡ ಈ ಬಗ್ಗೆ ತನಿಖೆ ನಡೆಸಲಿದೆ. ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿರ್ಮಾಣ ಕಾಮಗಾರಿ ಆರಂಭಿಸುವ ಮುನ್ನ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಪರೀಕ್ಷಿಸಲಿದ್ದೇವೆ’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು