ರಫೇಲ್‌ಗೂ ಮುನ್ನ ರಷ್ಯಾ ಜತೆ ಒಪ್ಪಂದಗಳ ಗುತ್ತಿಗೆ ಪಡೆಯಲು ರಿಲಯನ್ಸ್‌ ವಿಫಲ ಯತ್ನ

7
ಮೂರು ಬೃಹತ್ ಒಪ್ಪಂದಗಳ ಗುತ್ತಿಗೆ ಪಡೆಯಲು ಯತ್ನ: ಸರ್ಕಾರಿ ಸ್ವಾಮ್ಯದ ಕಂಪೆನಿಗಳನ್ನೇ ಆಯ್ಕೆ ಮಾಡಿದ್ದ ಮೋದಿ ಸರ್ಕಾರ

ರಫೇಲ್‌ಗೂ ಮುನ್ನ ರಷ್ಯಾ ಜತೆ ಒಪ್ಪಂದಗಳ ಗುತ್ತಿಗೆ ಪಡೆಯಲು ರಿಲಯನ್ಸ್‌ ವಿಫಲ ಯತ್ನ

Published:
Updated:

ನವದೆಹಲಿ: ಫ್ರಾನ್ಸ್‌ ಜತೆಗಿನ ರಫೇಲ್‌ ಒಪ್ಪಂದದ ಗುತ್ತಿಗೆ ಪಡೆಯುವುದಕ್ಕೂ ಮುನ್ನ ರಷ್ಯಾ ಜತೆಗಿನ ಮೂರು ಪ್ರಮುಖ ಒಪ್ಪಂದಗಳ ಗುತ್ತಿಗೆ ಪಡೆಯಲು ‘ರಿಲಯನ್ಸ್ ಡಿಫೆನ್ಸ್’ ಕಂಪೆನಿ ಪ್ರಯತ್ನಿಸಿತ್ತು ಎಂಬುದು ಬೆಳಕಿಗೆ ಬಂದಿದೆ.

ರಫೇಲ್‌ ಒಪ್ಪಂದದ ಬಗ್ಗೆ 2015ರಲ್ಲಿ ಮೊದಲ ಬಾರಿ ಮಾತುಕತೆ ನಡೆದಿದ್ದಾಗ ಪ್ರಧಾನಿ ನರೇಂದ್ರ ಮೋದಿ ಜತೆ ಅನಿಲ್‌ ಅಂಬಾನಿ ಸಹ ಇದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಮೋದಿಯವರು ಮಾಸ್ಕೋಗೆ ತೆರಳಿದ್ದಾಗಲೂ ಅಂಬಾನಿ ಜತೆಗಿದ್ದರು. ಪ್ರಮುಖ ರಕ್ಷಣಾ ಒಪ್ಪಂದಗಳ ಗುತ್ತಿಗೆ ಪಡೆಯುವ ಸಲುವಾಗಿ ಅವರು ಪ್ರಧಾನಿ ಜತೆ ತೆರಳಿದ್ದರು. ಅಂದಾಜು ₹7 ಸಾವಿರ ಕೋಟಿ ಮೊತ್ತದ ‘ಕಮೊವ್ ಕೆಎ–226’ ಲಘು ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಒಪ್ಪಂದದ ಬಗ್ಗೆ ಮಾತುಕತೆ ನಡೆದಿತ್ತು. ಆದರೆ, ಫ್ರಾನ್ಸ್‌ನಂತಲ್ಲದೆ ರಷ್ಯಾವು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್‌ (ಎಚ್‌ಎಎಲ್‌) ಅನ್ನೇ ಗುತ್ತಿಗೆಗೆ ಆಯ್ದುಕೊಂಡಿತ್ತು ಎಂದು ದಿ ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.

ರಷ್ಯಾದ ಮೂಲಗಳು ಹೇಳಿರುವ ಪ್ರಕಾರ, ಖಾಸಗಿ ಕ್ಷೇತ್ರದ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಬೇಕಾದರೆ ಆ ಕಂಪೆನಿಗಳನ್ನು ಸರ್ಕಾರ ಅಧಿಕೃತವಾಗಿ ಶಿಫಾರಸು ಮಾಡಬೇಕು. ಆದರೆ, ಖಾಸಗಿ ಕಂಪೆನಿಯೊಂದನ್ನು ಸರ್ಕಾರ ಅಧಿಕೃತವಾಗಿ ಶಿಫಾರಸು ಮಾಡುವಂತಿಲ್ಲ ಎನ್ನುವ ಮೂಲಕ ಮಾನದಂಡ ಪೂರೈಸುವಲ್ಲಿ ರಿಲಯನ್ಸ್ ವಿಫಲವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಿಲಯನ್ಸ್‌ ಜತೆ ಸಹಭಾಗಿತ್ವ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಮೂರು ತಿಂಗಳ ಮೊದಲು ರಷ್ಯಾ ಸರ್ಕಾರ ರಕ್ಷಣಾ ಸಚಿವಾಲಯಕ್ಕೆ ಸುಳಿವು ನೀಡಿತ್ತು. ಆದರೆ, ನಂತರ ಎಚ್‌ಎಎಲ್‌ ಅನ್ನು ಶಿಫಾರಸು ಮಾಡಲಾಗಿತ್ತು.

ಡಿಸೆಂಬರ್‌ನ ಭೇಟಿ ವೇಳೆ, ಅಂದಾಜು ₹18 ಸಾವಿರ ಕೋಟಿ ವೆಚ್ಚದಲ್ಲಿ ನಾಲ್ಕು ಯುದ್ಧನೌಕೆಗಳನ್ನು ನಿರ್ಮಾಣ ಮಾಡುವ ಒಪ್ಪಂದದ ಬಗ್ಗೆಯೂ ಮಾತುಕತೆ ನಡೆದಿತ್ತು. ರಷ್ಯಾದ ಯುನೈಟೆಡ್ ಶಿಪ್‌ಬ್ಯುಲ್ಡಿಂಗ್ ಕಾರ್ಪೊರೇಷನ್ (ಯುಎಸ್‌ಸಿ) ಜತೆ ಭಾರತದ ಕಡೆಯಿಂದ ಗುತ್ತಿಗೆ ಪಡೆದುಕೊಳ್ಳಲು ರಿಲಯನ್ಸ್ ಮಾತುಕತೆ ನಡೆಸಿತ್ತು. ಆದರೆ, ಕೊನೆಯಲ್ಲಿ ಕೇಂದ್ರವು ಸರ್ಕಾರಿ ಸ್ವಾಮ್ಯದ ಗೋವಾ ಶಿಪ್‌ಯಾರ್ಡ್‌ ಲಿ (ಜಿಎಸ್‌ಎಲ್‌) ಅನ್ನು ಶಿಫಾರಸು ಮಾಡಿತು. ಈ ಒಪ್ಪಂದಕ್ಕೆ ಇನ್ನಷ್ಟೇ ಉಭಯ ರಾಷ್ಟ್ರಗಳು ಸಹಿ ಹಾಕಬೇಕಿದೆ. ಅಕ್ಟೋಬರ್‌ನಲ್ಲಿ ರಷ್ಯಾದ ಅಧ್ಯಕ್ಷರು ಭಾರತಕ್ಕೆ ಆಗಮಿಸುತ್ತಿದ್ದು, ಆಗ ಮತ್ತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಯುದ್ಧನೌಕೆ ನಿರ್ಮಾಣ ಸಹಭಾಗಿತ್ವಕ್ಕೆ ಯುಎಸ್‌ಸಿಯು ರಿಲಯನ್ಸ್‌ ಅನ್ನೇ ಗುರುತಿಸಿತ್ತು. ಆದರೆ, ಸ್ಪರ್ಧಾತ್ಮಕ ವಿಧಾನದ ಹೊರತಾಗಿ ರಕ್ಷಣಾ ಸಚಿವಾಲಯವು ಜಿಎಸ್‌ಎಲ್‌ ಅನ್ನು ಶಿಫಾರಸು ಮಾಡಿತು ಎಂದು ರಿಲಯನ್ಸ್‌ ವಕ್ತಾರರು ನೀಡಿರುವ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

₹35,900 ಕೋಟಿ ಮೊತ್ತದಲ್ಲಿ ‘ಎಸ್‌ 400’ ಕ್ಷಿಪಣಿ ನಿರ್ಮಿಸುವುದಕ್ಕೆ ಸಂಬಂಧಿಸಿ ರಷ್ಯಾ ಜತೆಗಿನ ಮತ್ತೊಂದು ಮಹತ್ವದ ಒಪ್ಪಂದದ ಗುತ್ತಿಗೆ ಪಡೆಯಲೂ ರಿಲಯನ್ಸ್ ಪ್ರಯತ್ನಿಸಿತ್ತು. ಆ ನಿಟ್ಟಿನಲ್ಲಿ ರಷ್ಯಾದ ‘ಅಲ್‌ಮಜ್ ಆಂಟೆ’ ಕಂಪೆನಿ ಜತೆಗೆ ಕರಾರನ್ನೂ ಮಾಡಿಕೊಂಡಿತ್ತು. ಈ ಗುತ್ತಿಗೆಯಲ್ಲಿ ಶೇ 30ರ ಆಫ್‌ಸೆಟ್ ಷರತ್ತನ್ನು ಕಡ್ಡಾಯ ಮಾಡದಿರಲು ಭಾರತ ಸರ್ಕಾರ ನಿರ್ಧರಿಸಿತು. ಇದು ‘ರಿಲಯನ್ಸ್ ಡಿಫೆನ್ಸ್’ ಒಪ್ಪಂದದ ಭಾಗವಾಗುವ ಸಾಧ್ಯತೆಯನ್ನು ಇಲ್ಲವಾಗಿಸಿತು. ‘ಎಸ್‌ 400’ ಕ್ಷಿಪಣಿ ಹೆಚ್ಚು ಸೂಕ್ಷ್ಮ ಮತ್ತು ಅತ್ಯಾಧುನಿಕವಾದದ್ದರಿಂದ ಶೇ 30ರ ಆಫ್‌ಸೆಟ್ ಷರತ್ತನ್ನು ಕಡ್ಡಾಯ ಮಾಡಬಾರದು ಎಂದು ರಷ್ಯಾ ವಾದಿಸಿತ್ತು. ಹೀಗಾಗಿ ರಷ್ಯಾದೊಂದಿಗಿನ ಒಪ್ಪಂದಗಳ ಗುತ್ತಿಗೆ ಪಡೆಯುವ ಯಾವುದೇ ಪ್ರಯತ್ನದಲ್ಲಿ ‘ರಿಲಯನ್ಸ್ ಡಿಫೆನ್ಸ್’ ಯಶಸ್ಸು ಕಾಣಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !