ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಕುಡಿದ್ರೆ ಕೊರೊನಾ ವೈರಸ್ ಗಂಟಲಲ್ಲೇ ಸತ್ತು ಹೋಗುತ್ತೆ: ಕಾಂಗ್ರೆಸ್ ಶಾಸಕ

Last Updated 1 ಮೇ 2020, 5:58 IST
ಅಕ್ಷರ ಗಾತ್ರ

ಜೈಪುರ: ‘ಆಲ್ಕೋಹಾಲ್‌ ಕೈಗೆ ಉಜ್ಜುವುದರಿಂದ ಕೊರೊನಾ ವೈರಸ್ ಸತ್ತುಹೋಗುವುದಾದರೆ ಅದನ್ನು ಕುಡಿದರೆ ಗಂಟಲಲ್ಲೇ ನಾಶವಾಗಬಹುದು’. ಇದು ರಾಜಸ್ಥಾನದ ಸಾಂಗೋದ್ ಶಾಸಕ, ಮಾಜಿ ಸಚಿವ ಭರತ್ ಸಿಂಗ್ ವಾದ!

ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೇಡಿಕೆಯಿಟ್ಟಿರುವುದು ವಿವಾದಕ್ಕೀಡಾಗಿರುವ ಬೆನ್ನಲ್ಲೇ ಸಿಂಗ್ ಈ ವಾದ ಮುಂದಿಟ್ಟಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿರುವ ಅವರು, ಲಾಕ್‌ಡೌನ್ ವೇಳೆ ಮದ್ಯ ಮಾರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡದ ಹಿನ್ನೆಲೆಯಲ್ಲಿ ವೈನ್‌ಶಾಪ್‌ಗಳು ಮುಚ್ಚಿರುವುದರಿಂದ ಸರ್ಕಾರದ ಆದಾಯದ ಬೆನ್ನೆಲುಬೇ ಮುರಿದಂತಾಗಿದೆ ಎಂದು ಉಲ್ಲೇಖಿಸಿದ್ದಾರೆ.

‘ಅಲ್ಕೋಹಾಲ್ ಕೈಗೆ ಉಜ್ಜುವುರಿಂದ ಕೋವಿಡ್–19 ವೈರಸ್ ಸಾಯುವುದಾದರೆ ಅದನ್ನು ಕುಡಿಯುವವರ ಗಂಟಲಿನಲ್ಲೇ ವೈರಸ್ ಸತ್ತುಹೋಗಬಹುದು. ಅಕ್ರಮ ಮದ್ಯ ಸೇವನೆಗಿಂತ ಇದು ಉತ್ತಮ’ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.

ಮದ್ಯದಂಗಡಿಗಳ ತೆರೆಯುವಿಕೆಗೆ ಅವಕಾಶ ನೀಡದೇ ಇರುವುದರಿಂದ ಅಕ್ರಮ ಮದ್ಯ ತಯಾರಿಕೆ, ಮಾರಾಟಕ್ಕೆ ಅವಕಾಶ ನೀಡಿದಂತಾಗುತ್ತದೆ. ಅಕ್ರಮ ಮದ್ಯವು ಜನರನ್ನು ಸಾಯಿಸುವುದು ಮಾತ್ರವಲ್ಲದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟುಮಾಡುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತ್‌ಪುರದಲ್ಲಿ ಅಕ್ರಮ ಮದ್ಯ ಸೇವನೆಯಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಕೆಲವು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನೂ ಅವರು ಉಲ್ಲೇಖಿಸಿದ್ದಾರೆ.

ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. 2020–21ನೇ ಹಣಕಾಸು ವರ್ಷದಲ್ಲಿ ಮದ್ಯ ಮಾರಾಟದಿಂದ ಹೆಚ್ಚಿನ ಆದಾಯ ಸಂಗ್ರಹಿಸಲು ಗುರಿ ನಿಗದಿಪಡಿಸಲಾಗಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಇದು ಸಾಧ್ಯವಾಗದು. ಹೀಗಾಗಿ ರಾಜ್ಯ ಸರ್ಕಾರವು ಮದ್ಯದಂಗಡಿಗಳ ತೆರವಿಗೆ ಅನುಮತಿ ನೀಡಬೇಕು. ಇದರಿಂದ ಮದ್ಯಪ್ರಿಯರಿಗೆ ಮದ್ಯ ಸಿಗುವುದರ ಜತೆಗೆ ಸರ್ಕಾರಕ್ಕೂ ಆದಾಯ ದೊರೆಯಲಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT