ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಇಪಿ | ಹೊರಗುಳಿಯಲು ನಿರ್ಧಾರ: ರೈತರು, ಕಾರ್ಮಿಕರ ವಿರೋಧಕ್ಕೆ ಮನ್ನಣೆ

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಯಿಂದ
Last Updated 4 ನವೆಂಬರ್ 2019, 18:52 IST
ಅಕ್ಷರ ಗಾತ್ರ

ಚೀನಾವನ್ನು ಒಳಗೊಂಡ ವಿಶ್ವದ ಅತ್ಯಂತ ದೊಡ್ಡ ವಾಣಿಜ್ಯ ಒಕ್ಕೂಟದ ಭಾಗವಾಗುವುದರಿಂದ ಭಾರತದ ಆರ್ಥಿಕತೆಗೆ ಧಕ್ಕೆಯಾಗಲಿದೆ ಎಂದು ರೈತರು, ಕಾರ್ಮಿಕರು ಮತ್ತು ವಿರೋಧ ಪಕ್ಷಗಳು ವ್ಯಕ್ತಪಡಿಸಿದ್ದ ಆತಂಕವನ್ನು ಕೇಂದ್ರ ಸರ್ಕಾರವು ಪರಿಗಣಿಸಿದೆ. ರೈತರು ಮತ್ತು ಕಾರ್ಮಿಕರ ಆತಂಕವನ್ನು ಆರ್‌ಸಿಇಪಿ ಶೃಂಗಸಭೆಯಲ್ಲಿ ಕೇಂದ್ರ ಸರ್ಕಾರವು ಪ್ರಸ್ತಾಪಿಸಿತು. ಆದರೆ ಈ ಆತಂಕಗಳಿಗೆ ಆರ್‌ಸಿಇಪಿ ಕರಡು ಒಪ್ಪಂದದಲ್ಲಿ ಸೂಕ್ತ ಪರಿಹಾರ ದೊರೆಯಲಿಲ್ಲ. ಹೀಗಾಗಿ ಒಕ್ಕೂಟದಿಂದಲೇ ದೂರ ಉಳಿಯುವ ನಿರ್ಧಾರವನ್ನು ಭಾರತ ಸರ್ಕಾರ ಮಾಡಿದೆ.

ಪ್ರತಿಭಟನೆಗೆ ಬಾಗಿದ ಸರ್ಕಾರ
ಒಪ್ಪಂದವು ಜಾರಿಯಾದರೆ ಆಸಿಯಾನ್ ರಾಷ್ಟ್ರಗಳು ಮತ್ತು ಚೀನಾದಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಸರಕುಗಳು ಭಾರತಕ್ಕೆ ಆಮದಾಗುತ್ತವೆ. ಭಾರತದಲ್ಲಿ ತಯಾರಾಗುವ ಸರಕುಗಳಿಗಿಂತ ಕಡಿಮೆ ಬೆಲೆಯಲ್ಲಿ ಇವು ಲಭ್ಯವಾಗಬಹುದು.ಇದರಿಂದ ಭಾರತೀಯ ವಸ್ತುಗಳಿಗೆ ಬೇಡಿಕೆ ಕುಸಿದು, ಭಾರತದ ತಯಾರಿಕಾ ವಲಯಕ್ಕೆ ಧಕ್ಕೆಯಾಗುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು. ಲೋಹದ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಆರ್‌ಸಿಇಪಿ ಒಪ್ಪಂದದಿಂದ ಹೊರಗೆ ಇಡುವಂತೆ ಈ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದವು.

‘ಆಸಿಯಾನ್‌ ರಾಷ್ಟ್ರಗಳಿಂದಹಾಲಿನ ಉತ್ಪನ್ನಗಳೂ ಕಡಿಮೆ ಬೆಲೆಯಲ್ಲಿ ಆಮದಾಗುವುದರಿಂದ ಭಾರತದಲ್ಲಿನ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿದೆ. ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತ ಮತ್ತು ಗ್ರಾಮೀಣ ಕುಟುಂಬಗಳ ಜೀವನೋಪಾಯಕ್ಕೆ ಇದರಿಂದ ಹೊಡೆತ ಬೀಳಲಿದೆ’ ಎಂದು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು. ಈ ಒಪ್ಪಂದಕ್ಕೆ ಕರ್ನಾಟಕ ಹಾಲು ಒಕ್ಕೂಟ ಮತ್ತು ಗುಜರಾತ್‌ನ ಅಮುಲ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಹೈನುಗಾರಿಕೆಗೆ ಧಕ್ಕೆಯಾಗುವಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಹೇಳಿತ್ತು.

ವ್ಯಾಪಾರ ಕೊರತೆಗೆ ಯುಪಿಎ ಕಾರಣ: ಕೇಂದ್ರ
‘ಆಸಿಯಾನ್‌ ರಾಷ್ಟ್ರಗಳ ಜತೆ ಭಾರತವು ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾಡಿಕೊಂಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಂಡ ಈ ಒಪ್ಪಂದಗಳಿಂದ ಭಾರತದ ಆರ್ಥಿಕತೆಗೆ ಧಕ್ಕೆಯಾಗಿದೆ. ಈ ದೇಶಗಳ ಜತೆಗಿನ ಭಾರತದ ವ್ಯಾಪಾರ ಕೊರತೆ ವಿಪರೀತ ಪ್ರಮಾಣದಲ್ಲಿ ಹಿಗ್ಗಿದೆ. ಭಾರತವು ಆರ್‌ಸಿಇಪಿ ಒಕ್ಕೂಟ ಸೇರಿದ್ದರೆ, ವ್ಯಾಪಾರ ಕೊರತೆ ಮತ್ತಷ್ಟು ಹಿಗ್ಗುತ್ತಿತ್ತು. ಹೀಗಾಗಿ ಒಕ್ಕೂಟವನ್ನು ತಿರಸ್ಕರಿಸಲಾಯಿತು. ಈ ಮೂಲಕ ನರೇಂದ್ರ ಮೋದಿ ಸರ್ಕಾರವು ವಿಶ್ವದ ಎದುರು ತನ್ನ ಸಾಮರ್ಥ್ಯ ತೋರಿದೆ’ ಎಂದು ಕೇಂದ್ರ ಹೇಳಿದೆ.

ಮೋದಿ ಸರ್ಕಾರದ ‘ಪೂರ್ವ ನೀತಿ’ಗೆ ಹಿನ್ನಡೆ
ಆಗ್ನೇಯ ಏಷ್ಯಾ ರಾಷ್ಟ್ರಗಳು ಮತ್ತು ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ವಾಣಿಜ್ಯ ಸಂಬಂಧವನ್ನು ವೃಧ್ಧಿಸುವ ಉದ್ದೇಶದಿಂದ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ‘ಪೂರ್ವ ನೀತಿ’ಯನ್ನು ರೂಪಿಸಿತ್ತು.ಆಸಿಯಾನ್ ರಾಷ್ಟ್ರಗಳು, ಜಪಾನ್‌, ನ್ಯೂಜಿಲೆಂಡ್‌, ಚೀನಾ ಮತ್ತು ಆಸ್ಟ್ರೇಲಿಯಾಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಈ ರಾಷ್ಟ್ರಗಳು ಆರ್‌ಸಿಇಪಿ ಒಕ್ಕೂಟದಲ್ಲಿವೆ. ಈಗ ಆರ್‌ಸಿಇಪಿ ಒಕ್ಕೂಟದಿಂದ ಭಾರತವು ಹೊರಗೆ ಉಳಿದಿದೆ. ಹೀಗಾಗಿ ರಾಷ್ಟ್ರಗಳ ಜತೆ ಈಗ ಜಾರಿಯಲ್ಲಿರುವ ವಾಣಿಜ್ಯ ಒಪ್ಪಂದಗಳಷ್ಟೇ ಮುಂದುವರಿಯಲಿವೆ. ಆ ಒಪ್ಪಂದಗಳನ್ನು ಮೇಲ್ದರ್ಜೆಗೆ ಏರಿಸುವ ಮತ್ತು ಹೊಸ ಒಪ್ಪಂದಗಳನ್ನು ರಚಿಸಿಕೊಳ್ಳಲು ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಭಾರತದ ‘ಪೂರ್ವ ನೀತಿ’ಗೆ ಹಿನ್ನಡೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಈಗ ಜಾರಿಯಲ್ಲಿರುವ ಒಪ್ಪಂದಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್, ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದಾರೆ. ದಕ್ಷಿಣ ಚೀನಾ ಸಮುದ್ರ ಮತ್ತು ಇಂಡೊ–ಪೆಸಿಫಿಕ್‌ ಪ್ರದೇಶವನ್ನು ಹಾದು ಹೋಗುವ ಸಮುದ್ರ ಮಾರ್ಗದಲ್ಲಿ ವಾಣಿಜ್ಯ ವಹಿವಾಟು ಹೆಚ್ಚಿಸುವ ಪ್ರಸ್ತಾಪವನ್ನು ಮೋದಿ ಇರಿಸಿದ್ದಾರೆ. ಆದರೆ ಈ ಪ್ರಸ್ತಾವಕ್ಕೆ ಉಳಿದ ರಾಷ್ಟ್ರಗಳು ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಭಾರತವು ಆರ್‌ಸಿಇಪಿ ಒಕ್ಕೂಟ ಸೇರಲಿ ಎಂದು ಒತ್ತಡ ನಿರ್ಮಿಸುವ ಉದ್ದೇಶದಿಂದ, ಈ ಪ್ರಸ್ತಾಪವನ್ನು ಕಡೆಗಣಿಸುವ ಸಾಧ್ಯತೆಯೇ ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

**

₹ 7.3 ಲಕ್ಷ ಕೋಟಿ: 2018–19ರಲ್ಲಿ ಆಸಿಯಾನ್‌ ರಾಷ್ಟ್ರಗಳ ಜತೆ ಭಾರತದ ವ್ಯಾಪಾರ ಕೊರತೆ.ಆರ್‌ಸಿಇಪಿ ಸೇರಿದರೆ ಭಾರತದ ವ್ಯಾಪಾರ ಕೊರತೆ ಮತ್ತಷ್ಟು ಹೆಚ್ಚುವ ಆತಂಕವಿತ್ತು

**

ಇದು ನಮ್ಮದೇ ಸಾಧನೆ ಎಂದು ಮೋದಿ ಮತ್ತು ಶಾ ಬಿಂಬಿಸುತ್ತಿದ್ದಾರೆ. ಆರ್‌ಸಿಇಪಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ಆರಂಭಿಸಿದ್ದರಿಂದಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತು.
ರಣದೀಪ್‌ ಸಿಂಗ್‌ ಸುರ್ಜೇವಾಲ, ಕಾಂಗ್ರೆಸ್‌ ವಕ್ತಾರ

**

ಭಾರತದ ಹಿತಾಸಕ್ತಿ ದೃಷ್ಟಿಯಿಂದ ಆರ್‌ಸಿಇಪಿ ನಿಯಮಗಳನ್ನು ಪರಾಮರ್ಶೆ ಮಾಡಲಾಯಿತು. ಅದರಲ್ಲಿ ಸಕಾರಾತ್ಮಕವಾದ ಉತ್ತರ ದೊರೆಯಲಿಲ್ಲ. ಗಾಂಧೀಜಿ ತತ್ವಗಳು ಮಾತ್ರವಲ್ಲ ನನ್ನ ಆತ್ಮಸಾಕ್ಷಿ ಸಹಈ ಒಕ್ಕೂಟವನ್ನು ಸೇರುವುದಕ್ಕೆ ವಿರುದ್ಧವಿದೆ. ಹೀಗಾಗಿ ಒಕ್ಕೂಟಕ್ಕೆ ಸೇರಲಿಲ್ಲ
–ನರೇಂದ್ರ ಮೋದಿ,ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT