ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ ಕಡಿವಾಣ ಸಡಿಲ: ರಕ್ಷಣಾ ತಯಾರಿ, ಗಣಿ ಕ್ಷೇತ್ರಗಳಲ್ಲಿ ಬಂಡವಾಳಕ್ಕೆ ಅವಕಾಶ

ರಕ್ಷಣಾ ತಯಾರಿ, ಗಣಿ, ಕಲ್ಲಿದ್ದಲು ಕ್ಷೇತ್ರಗಳಲ್ಲಿ ಬಂಡವಾಳಕ್ಕೆ ಅವಕಾಶ
Last Updated 17 ಮೇ 2020, 1:22 IST
ಅಕ್ಷರ ಗಾತ್ರ

ನವದೆಹಲಿ: ರಕ್ಷಣಾ ಸಾಮಗ್ರಿ ತಯಾರಿ, ಕಲ್ಲಿದ್ದಲು, ಗಣಿಗಾರಿಕೆ, ವಿಮಾನಯಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಶನಿವಾರ ಕೈಗೊಂಡಿದ್ದು, ಹಣಕಾಸುಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅದರ ವಿವರಗಳನ್ನು ಪ್ರಕಟಿಸಿದ್ದಾರೆ.

ಕೋವಿಡ್‌ ಪಿಡುಗಿನಿಂದ ತತ್ತರಿಸಿರುವ ದೇಶದ ವಿವಿಧ ಕ್ಷೇತ್ರಗಳ ಪುನಶ್ಚೇತನಕ್ಕೆ ₹20 ಲಕ್ಷ ಕೋಟಿಯ ಪರಿಹಾರ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದರು. ಅದರ ನಾಲ್ಕನೇ ಕಂತಿನ ವಿವರಗಳನ್ನು ಸಚಿವೆ ನೀಡಿದ್ದಾರೆ

ಮೊದಲ ಮೂರು ಕಂತುಗಳಲ್ಲಿ, ವಿವಿಧ ವಲಯಗಳಲ್ಲಿ ನಗದು ಹರಿವು ಏರಿಕೆಯ ಕ್ರಮಗಳು ಇದ್ದವು.

lಬಾಹ್ಯಾಕಾಶ ಅವಕಾಶ: ಉಪಗ್ರಹಗಳು, ಉಡ್ಡಯನ ಮತ್ತು ಬಾಹ್ಯಾಕಾಶ ಆಧರಿತ ಸೇವೆಗಳಲ್ಲಿ ಖಾಸಗಿ ವಲಯದ ಕಂಪನಿಗಳಿಗೆ ಅವಕಾಶ ದೊರೆಯಲಿದೆ. ಇಸ್ರೊದ ಸೌಲಭ್ಯಗಳನ್ನು ಖಾಸಗಿ ಕಂಪನಿಗಳು ಬಳಸಿಕೊಂಡು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು.
*ಅಣುಶಕ್ತಿ: ಕ್ಯಾನ್ಸರ್‌ ಮತ್ತು ಇತರ ರೋಗಗಳ ಚಿಕಿತ್ಸೆಯಲ್ಲಿ ಬಳಸುವ ಐಸೊಟೋಪ್‌ಗಳನ್ನು ಕಡಿಮೆ ದರದಲ್ಲಿ ತಯಾರಿಸುವುದಕ್ಕಾಗಿ ಸಂಶೋಧನಾ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಸರ್ಕಾರ–ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಗೆ ಅನುಮತಿ. ಕೃಷಿ ಸುಧಾರಣೆ ಮತ್ತು ರೈತರ ನೆರವಿಗಾಗಿ ಆಹಾರ ವಸ್ತುಗಳನ್ನು ಹೆಚ್ಚು ಕಾಲ ಸಂರಕ್ಷಿಸಿ ಇಡಬಹುದಾದ ವಿಕಿರಣ ತಂತ್ರಜ್ಞಾನ ಅಧರಿತ ಕೇಂದ್ರಗಳ ಸ್ಥಾಪನೆಗೂ ಪಿಪಿಪಿ ಮಾದರಿಯಲ್ಲಿ ಅವಕಾಶ.

lಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್‌ ವಿತರಣೆ ಕಂಪನಿಗಳ ಖಾಸಗೀಕರಣ. ಇದರ ಯಶಸ್ಸಿನ ಆಧಾರದಲ್ಲಿ ರಾಜ್ಯಗಳು ಕೂಡ ಈ ದಿಸೆಯಲ್ಲಿ ನಿರ್ಧಾರ ಕೈಗೊಳ್ಳಬಹುದು.

ರಕ್ಷಣಾ ಸಾಮಗ್ರಿ: ಎಫ್‌ಡಿಐಗೆ ಕೆಂಪು ಹಾಸು

ರಕ್ಷಣಾ ಸಾಮಗ್ರಿ ಕ್ಷೇತ್ರದಲ್ಲಿ ‘ಭಾರತದಲ್ಲಿ ತಯಾರಿಸಿ’ಗೆ ಒತ್ತು. ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಿತಿ ಶೇ 49ರಿಂದ ಶೇ 74ಕ್ಕೆ ಏರಿಕೆ. ಈ ಕ್ಷೇತ್ರದಲ್ಲಿ ಶೇ ನೂರರಷ್ಟು ಹೂಡಿಕೆಗೂ ಈಗ ಅವಕಾಶ ಇದೆ. ಆದರೆ, ಶೇ 49ಕ್ಕಿಂತ ಹೆಚ್ಚು ಹೂಡಿಕೆಗೆ ಸರ್ಕಾರದ ಅನುಮತಿ ಬೇಕಿತ್ತು. ಈಗ, ಶೇ 74ರವರೆಗೆ ಅನುಮತಿಯ ಅಗತ್ಯ ಇಲ್ಲ. ಕೆಲವು ಆಯುಧಗಳು ಮತ್ತು ಸಾಮಗ್ರಿಗಳ ಆಮದು ನಿಷೇಧ. ಇಂತಹ ಸಾಮಗ್ರಿಗಳನ್ನು ಭಾರತದ ಕಂಪನಿಗಳಿಂದಲೇ ಖರೀದಿಸುವುದು ಕಡ್ಡಾಯ. ಆಮದು ಮಾಡಿಕೊಳ್ಳಲಾಗುತ್ತಿರುವ ಕೆಲವು ಬಿಡಿ ಭಾಗಗಳನ್ನು ಭಾರತದಲ್ಲಿಯೇ ತಯಾರಿಸಲು ಕ್ರಮ. ದೇಶೀಯ ಖರೀದಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಮೊತ್ತ ನಿಗದಿ.

ರಕ್ಷಣಾ ಸಾಮಗ್ರಿ ತಯಾರಿ ಕಾರ್ಖಾನೆ ಮಂಡಳಿಗಳನ್ನು ಉದ್ಯಮವಾಗಿ ಪರಿವರ್ತಿಸಲಾಗುವುದು. ಇದು ಖಾಸಗೀಕರಣ ಅಲ್ಲ, ಬದಲಿಗೆ ಉತ್ತಮ ನಿರ್ವಹಣೆ ಇದರ ಉದ್ದೇಶ. ಕ್ರಮೇಣ, ಷೇರು ಮಾರುಕಟ್ಟೆಯಲ್ಲಿ ನೋಂದಣಿಯೂ ಆಗಲಿದೆ. ಷೇರು ಖರೀದಿಗೆ ಜನರಿಗೆ ಅವಕಾಶ ದೊರೆಯಲಿದೆ.

ವಿಮಾನ ಯಾನಕ್ಕೆ ಹತ್ತಿರದ ಮಾರ್ಗ

ಒಟ್ಟು ವಾಯು ಪ್ರದೇಶದ ಶೇ 60ರಷ್ಟು ಮಾತ್ರ ಈಗ ನಾಗರಿಕ ವಿಮಾನ ಯಾನಕ್ಕೆ ಲಭ್ಯ. ಇನ್ನು ಮುಂದೆ, ಭಾರತದ ವಾಯು ಪ್ರದೇಶದ ಗರಿಷ್ಠ ಬಳಕೆ ಮಾಡಲಾಗುವುದು. ಇದರಿಂದ ನಾಗರಿಕ ವಾಯುಯಾನ ಕ್ಷೇತ್ರಕ್ಕೆ ವರ್ಷಕ್ಕೆ ₹1,000 ಕೋಟಿ ಲಾಭವಾಗಲಿದೆ. ವಾಯುಪ್ರದೇಶದ ನಿರ್ಬಂಧ ಸಡಿಲಿಕೆಯಿಂದಾಗಿ, ಅತ್ಯಂತ ಹತ್ತಿರದ ಮಾರ್ಗದ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಸಾಧ್ಯ. ಇದರಿಂದ ಇಂಧನ ಮತ್ತು ಪ್ರಯಾಣ ಸಮಯ ಉಳಿತಾಯ ಆಗಲಿದೆ. ಪರಿಣಾಮವಾಗಿ ವಿಮಾನ ಯಾನ ಟಿಕೆಟ್‌ ದರವೂ ಕಡಿಮೆಯಾಗಲಿದೆ.

l ಆರು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ಶೀಘ್ರದಲ್ಲೇ ನೀಡಲಾಗುವುದು. ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಒಟ್ಟು 12 ವಿಮಾನ ನಿಲ್ದಾಣಗಳು ಖಾಸಗಿ ಸಂಸ್ಥೆಗಳಿಗೆ ದೊರೆಯಲಿವೆ. ಈ ಮೂಲಕ ಇಲ್ಲಿ ₹13 ಸಾವಿರ ಕೋಟಿ ಹೂಡಿಕೆ ಆಗಲಿದೆ. ವಿಮಾನ ನಿಲ್ದಾಣಗಳಲ್ಲಿ ಜಾಗತಿಕ ದರ್ಜೆಯ ಸೌಲಭ್ಯಗಳು ಪ್ರಯಾಣಿಕರಿಗೆ ದೊರೆಯಲಿವೆ.

l ವಿಮಾನ ನಿರ್ವಹಣೆ, ದುರಸ್ತಿ ಮತ್ತು ನವೀಕರಣಕ್ಕೆ ಉತ್ತೇಜನ. ಈಗಿನ ವಾರ್ಷಿಕ ವಹಿವಾಟು ₹800 ಕೋಟಿ, ಮೂರು ವರ್ಷಗಳಲ್ಲಿ ₹2,000 ಕೋಟಿಗೆ ಏರಿಗೆ ಗುರಿ

lಸಾಮಾಜಿಕ ಮೂಲಸೌಕರ್ಯ: ಆಸ್ಪತ್ರೆಯಂತಹ ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವು ನೀಡುವ ಕಾರ್ಯಸಾಧ್ಯತೆ ಅಂತರ ನಿಧಿಯ ಪ್ರಮಾಣವನ್ನು ಶೇ 20ರಿಂದ ಶೇ 30ಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ₹8,100 ಕೋಟಿ ವಿನಿಯೋಗಿಸಲಾಗುವುದು. ಇದರಿಂದಾಗಿ, ಲಾಭದ ಸಾಧ್ಯತೆ ಕಡಿಮೆ ಇರುವ ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ದೊರೆಯಲಿದೆ.

ಗಣಿಗಾರಿಕೆ ಸೀಮಾತೀತ

ಖನಿಜ ಗಣಿಗಳ ಶೋಧ ಮತ್ತು ಉತ್ಪಾದನೆಯಲ್ಲಿ ಸೀಮಾತೀತವಾದ ವ್ಯವಸ್ಥೆ ಜಾರಿಗೆ ಬರಲಿದೆ. 500 ನಿಕ್ಷೇಪಗಳನ್ನು ಹರಾಜು ಮಾಡಲಾಗುವುದು. ಬಾಕ್ಸೈಟ್‌ ಮತ್ತು ಕಲ್ಲಿದ್ದಲು ಗಣಿಗಳನ್ನು ಜತೆಯಾಗಿ ಹರಾಜು ಹಾಕುವ ವ್ಯವಸ್ಥೆಯೂ ಇದೆ. ಇದರಿಂದ ಅಲ್ಯುಮೀನಿಯಂ ಉದ್ಯಮಕ್ಕೆ ಅನುಕೂಲ ಆಗಲಿದೆ. ಈ ಉದ್ಯಮದ ವಿದ್ಯುತ್‌ ಬಳಕೆ ವೆಚ್ಚ ತಗ್ಗಲಿದೆ.

ಸ್ವ ಬಳಕೆಗಾಗಿ (ಕ್ಯಾಪ್ಟಿವ್‌) ಮತ್ತು ಇತರರ ಬಳಕೆಗಾಗಿ (ನಾನ್‌ ಕ್ಯಾಪ್ಟಿವ್‌) ಎಂಬ ವ್ಯತ್ಯಾಸವನ್ನು ತೆಗೆದು ಹಾಕಲಾಗುವುದು. ಇದರಿಂದ ಗಣಿಗಾರಿಕೆ ಗುತ್ತಿಗೆಯ ವರ್ಗಾವಣೆ, ಹೆಚ್ಚುವರಿ ಖನಿಜದ ಮಾರಾಟಕ್ಕೆ ಅವಕಾಶ ದೊರೆಯಲಿದೆ.

ಕಲ್ಲಿದ್ದಲು ಏಕಸ್ವಾಮ್ಯ ಅಂತ್ಯ

ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸರ್ಕಾರದ ಏಕಸ್ವಾಮ್ಯ ಅಂತ್ಯವಾಗಲಿದೆ. ಖಾಸಗಿ ಕಂಪನಿಗಳಿಗೆ ಗಣಿಗಾರಿಕೆಗೆ ಅವಕಾಶ ದೊರೆಯಲಿದೆ. ಪ್ರತಿ ಟನ್‌ಗೆ ಇಂತಿಷ್ಟು ಶುಲ್ಕ ಎಂಬ ವ್ಯವಸ್ಥೆಯನ್ನು ಬದಲಾಯಿಸಿ, ವರಮಾನ ಹಂಚಿಕೆ ಮಾನದಂಡವನ್ನು ಅನುಸರಿಸಲಾಗುವುದು. ಸುಮಾರು 50 ನಿಕ್ಷೇಪಗಳನ್ನು ಸದ್ಯದಲ್ಲೇ ಹರಾಜು ಹಾಕಲಾಗುವುದು. ಕಲ್ಲಿದ್ದಲಿನ ಮೇಲಿನ ಆಮದು ಅವಲಂಬನೆ ತಗ್ಗಿಸಿ ಸ್ವಾವಲಂಬನೆ ಸಾಧಿಸುವುದು ಉದ್ದೇಶ.

ಕಲ್ಲಿದ್ದಲು ಸಾಗಾಟ ಮೂಲಸೌಕರ್ಯ ನಿರ್ಮಾಣಕ್ಕೆ ಸರ್ಕಾರವು ₹50 ಸಾವಿರ ಕೋಟಿ ಹೂಡಿಕೆ ಮಾಡಲಿದೆ.

ಕಲ್ಲಿದ್ದಲನ್ನು ಅನಿಲ ಮತ್ತು ದ್ರವ ಇಂಧನವಾಗಿ ಪರಿವರ್ತಿಸಲು ಪ್ರೋತ್ಸಾಹ ನೀಡಲಾಗುವುದು. ಇದಕ್ಕಾಗಿ ವರಮಾನ ಹಂಚಿಕೆಯಲ್ಲಿಯೂ ರಿಯಾಯಿತಿ ದೊರೆಯಲಿದೆ. ಕಲ್ಲಿದ್ದಲು ಆಧರಿತ ಮಿಥೇನ್‌ ತಯಾರಿಗೂ ಒತ್ತು ನೀಡಲಾಗುವುದು

***

ಈ ಸುಧಾರಣೆಗಳು ವ್ಯಾಪಾರದ ಹಲವು ಅವಕಾಶಗಳನ್ನು ಸೃಷ್ಟಿಸಲಿವೆ. ಆರ್ಥಿಕ ಪರಿವರ್ತನೆಗೆ ಕೊಡುಗೆ ನೀಡಲಿವೆ

– ನರೇಂದ್ರ ಮೋದಿ, ಪ್ರಧಾನಿ

***

ವಲಸಿಗರು ಸುರಕ್ಷಿತವಾಗಿ ಮನೆ ತಲುಪಲಾಗುತ್ತಿಲ್ಲ. ಬಾಹ್ಯಾಕಾಶಕ್ಕೆ ಹೋಗಲು ಖಾಸಗಿಯವರಿಗೆ ಅನುಮತಿ ನೀಡುವುದಾಗಿ ಹಣಕಾಸು ಸಚಿವೆ ಹೇಳಿದ್ದಾರೆ. ಇದು ವಿಲಕ್ಷಣವಾಗಿದೆ.

– ಜೈರಾಮ್‌ ರಮೇಶ್‌,ಕಾಂಗ್ರೆಸ್‌ ಮುಖಂಡ‌

***

ಲಾಕ್‌ಡೌನ್‌ ಬಳಸಿಕೊಂಡು ಶ್ರೀಮಂತರು, ಬಂಡವಾಳಿಗರ ಕಾರ್ಯಸೂಚಿಯನ್ನು ಏಕಪಕ್ಷೀಯವಾಗಿ ಹೇರುತ್ತಿರುವುದು ಅಮಾನವೀಯ. ದೇಶದ ಸೊತ್ತಿನ ಲೂಟಿ ಸ್ವಾವಲಂಬನೆ ಅಲ್ಲ

– ಸೀತಾರಾಮ್‌ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT