ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಹಗರಣ ಆರೋಪ: ಜೈಪುರದ ಜಾರಿ ನಿರ್ದೇಶನಾಲಯಕ್ಕೆ ಹಾಜರಾದ ರಾಬರ್ಟ್ ವಾದ್ರಾ

Last Updated 12 ಫೆಬ್ರುವರಿ 2019, 7:34 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ರಾಬರ್ಟ್‌ ವಾದ್ರಾ ಹಾಗೂ ಅವರ ತಾಯಿ ಮೌರೀನ್‌ ಅವರು ಮಂಗಳವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ.ಜೈಪುರದಲ್ಲಿರುವ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಬರುವಾಗ ಪ್ರಿಯಾಂಕಾ ಗಾಂಧಿ ಕೂಡಾ ಇವರ ಜತೆಯಲ್ಲಿದ್ದರು.

ಬೇರೊಂದು ಭೂ ಹಗರಣ ಬಗ್ಗೆ ಕಳೆದ ವಾರ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಾದ್ರಾ ವಿಚಾರಣೆ ನಡೆದಾಗಲೂ ಪ್ರಿಯಾಂಕಾ ವಾದ್ರಾ ಜತೆಗೆ ಬಂದಿದ್ದರು.ಸಂದೇಶವೊಂದನ್ನು ನೀಡುವುದಕ್ಕಾಗಿಯೇ ತಾನು ದೆಹಲಿ ಇ.ಡಿ ಕಚೇರಿಗೆ ಬರುವಾಗ ವಾದ್ರಾಗೆ ಸಾಥ್ ನೀಡಿದ್ದೆ ಎಂದು ಪ್ರಿಯಾಂಕಾ ಹೇಳಿದ್ದರು.

ಇ.ಡಿ ಸಮನ್ಸ್ ನೀಡಿದ್ದರಿಂದ ವಾದ್ರಾ ಸೋಮವಾರವೇ ರಾಜಸ್ಥಾನದ ರಾಜಧಾನಿಗೆ ತಲುಪಿದ್ದರು.ಬಿಕಾನೇರ್ ಜಿಲ್ಲೆಯ ಉಪ ವಿಭಾಗ ಕೊಲಾಯತ್ ಎಂಬಲ್ಲಿ 275 ಎಕರೆ ಭೂ ಹಗರಣದ ಆರೋಪ ವಾದ್ರಾ ಅವರು ಮೇಲಿದೆ.ವಾದ್ರಾ ಮಾಲೀಕತ್ವದ 'ಸ್ಕೈಲೈಟ್‌ ಹಾಸ್ಪಿಟಾಲಿಟಿ' ಸಂಸ್ಥೆಯು ಭೂಮಿಯನ್ನು ಖರೀದಿಸಿರುವ ಬಗ್ಗೆ ವಾದ್ರಾ ಅವರನ್ನು ಇ.ಡಿ ಪ್ರಶ್ನಿಸಲಿದೆ. ಮೂಲಗಳ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿ 55 ಪ್ರಶ್ನೆಗಳನ್ನು ವಾದ್ರಾ ಅವರಿಗೆ ಕೇಳಲಾಗುವುದು ಎಂದು ಹಿರಿಯ ಇ.ಡಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದು ಚುನಾವಣಾ ಗಿಮಿಕ್ - ವಾದ್ರಾ ಫೇಸ್‍ಬುಕ್ ಪೋಸ್ಟ್


ಜಾರಿ ನಿರ್ದೇಶನಾಲಯಕ್ಕೆ ವಿಚಾರಣೆಗಾಗಿ ಹಾಜರಾಗುವ ಮುನ್ನ ರಾಬರ್ಟ್ ವಾದ್ರಾ ಫೇಸ್‍ಬುಕ್‍ನಲ್ಲಿ ಬರಹವೊಂದನ್ನು ಪ್ರಕಟಿಸಿದ್ದಾರೆ.
75ರ ಹರೆಯದ ನನ್ನ ಅಮ್ಮನೊಂದಿಗೆ ನಾನು ಜೈಪುರ್ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದೇನೆ. ಹಿರಿ ವಯಸ್ಸಿನ ಮಹಿಳೆಗೆ ಈ ರೀತಿ ಕಷ್ಟಕೊಡುವ ಮೂಲಕ ಸರ್ಕಾರ ಯಾಕೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಕಾರು ಅಪಘಾತದಲ್ಲಿ ತನ್ನ ಮಗಳನ್ನು, ಸಕ್ಕರೆ ಕಾಯಿಲೆಯಿಂದ ಮಗನನ್ನು ಮತ್ತು ಗಂಡನನ್ನು ಕಳೆದುಕೊಂಡುವವರು ಈಕೆ.ಮೂರು ಸಾವುಗಳ ನಂತರ ಆಕೆಯನ್ನು ನನ್ನ ಕಚೇರಿಯಲ್ಲಿಯೇ ಕೂರಿಸಿಕೊಂಡಿದ್ದೇನೆ.ಆಕೆಯ ಆರೈಕೆ ಮಾಡುವುದಕ್ಕಾಗಿಯೂ ನಾವಿಬ್ಬರೂ ಜತೆಯಾಗಿ ಸಮಯ ಕಳೆಯುವುದಕ್ಕಾಗಿಯೇ ಈ ರೀತಿ ಮಾಡಿದ್ದೇನೆ.ಈಗ ಆಕೆಯ ಮೇಲೆ ಆರೋಪ ಹೊರಿಸಿ ಆಕೆಯನ್ನು ವಿಚಾರಣೆಗಾಗಿ ಕರೆಸಲಾಗಿದೆ.ದೆಹಲಿಯ ಪ್ರಧಾನ ಕಚೇರಿಯಲ್ಲಿ ಮೂರು ದಿನಗಳ ಕಾಲ ನನ್ನ ವಿಚಾರಣೆ ನಡೆದಿದೆ.ನಮ್ಮ ವಿರುದ್ಧ ಏನಾದರೂ ಹಗರಣದ ಆರೋಪವಿದ್ದರೆ ಅದನ್ನು ಸಾಬೀತು ಪಡಿಸಲು ಸರ್ಕಾರ 4 ವರ್ಷ , 8 ತಿಂಗಳು ಯಾಕೆ ತೆಗೆದುಕೊಳ್ಳುತ್ತಿದೆ. ಲೋಕಸಭಾ ಚುನಾವಣೆಯ ಪ್ರಚಾರ ಆರಂಭವಾಗುವುದಕ್ಕಿಂತ ಒಂದು ತಿಂಗಳು ಮುನ್ನ ನನ್ನನ್ನು ವಿಚಾರಣೆಗೆ ಕರೆಸಿಕೊಂಡಿದ್ದಾರೆ.ಇದೊಂದು ಚುನಾವಣಾ ಗಿಮಿಕ್ ಎಂದು ಜನರಿಗೆ ಗೊತ್ತಾಗುವುದಿಲ್ಲ ಎಂದು ಸರ್ಕಾರ ಅಂದುಕೊಂಡಿದೆಯೇ? ನಾನು ಶಿಸ್ತಿನ ವ್ಯಕ್ತಿಯಾಗಿದ್ದು ಕಾನೂನನ್ನು ಪಾಲಿಸುತ್ತೇನೆ. ವಿಚಾರಣೆಗಾಗಿ ನಾನು ಎಷ್ಟು ಗಂಟೆ ಬೇಕಾದರೂ ಸಹಕರಿಸಬಲ್ಲೆ.ನನಗೆ ಮುಚ್ಚಿಡುವಂತದ್ದೇನೂ ಇಲ್ಲ.ನಾನು ಗೌರವದಿಂದಲೇ ಎಲ್ಲ ಪ್ರಶ್ನೆಗೆ ಉತ್ತರಿಸುತ್ತೇನೆ.

ಈ ಸಮಯವೂ ಸರಿದು ಹೋಗುತ್ತದೆ ಮತ್ತು ನನ್ನನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತದೆ.
ಮಾಡಿದ್ದುಣ್ಣೋ ಮಹರಾಯ. ದೇವರು ನಮ್ಮೊಂದಿಗಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT