ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಅಡ್ಡಮತದ ಭೀತಿ: ಕಾಂಗ್ರೆಸ್‌ ಶಾಸಕರು ಮೌಂಟ್‌ಅಬುಗೆ

ರಾಜ್ಯಸಭೆ ಚುನಾವಣೆ
Last Updated 3 ಜುಲೈ 2019, 17:45 IST
ಅಕ್ಷರ ಗಾತ್ರ

ಅಹಮದಾಬಾದ್‌: ಎರಡು ಸ್ಥಾನಗಳಿಗೆ ನಡೆಯುವ ರಾಜ್ಯಸಭೆ ಉಪಚುನಾವಣೆಯಲ್ಲಿ ಅಡ್ಡಮತದಾನ ತಡೆಯುವ ಉದ್ದೇಶದಿಂದ ಗುಜರಾತ್‌ನ ಕಾಂಗ್ರೆಸ್‌ ಶಾಸಕರನ್ನು ರಾಜಸ್ಥಾನದ ಮೌಂಟ್ಅಬುನಲ್ಲಿರುವ ರೆಸಾರ್ಟ್‌ನಲ್ಲಿರಿಸಲು ನಿರ್ಧರಿಸಲಾಗಿದೆ.

ಜುಲೈ 5ರಂದು ಮತದಾನ ನಡೆಯಲಿದೆ. ಬಿಜೆಪಿಯ ಅಮಿತ್‌ ಶಾ ಮತ್ತು ಸ್ಮೃತಿ ಇರಾನಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಈ ಚುನಾವಣೆ ನಡೆಯುತ್ತಿದೆ.

ಅಡ್ಡಮತದಾನ ಮಾಡುವಂತೆ ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಬಹುದು. ಹೀಗಾಗಿ, ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದು ಮತದಾನ ನಡೆಯುವ ಕೆಲ ಗಂಟೆಗಳ ಮುನ್ನ ಕರೆತರಲು ಉದ್ದೇಶಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

‘2017ರಲ್ಲಿ ಶಾಸಕರನ್ನು ಸೆಳೆಯಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನ ಮಾಡಿತ್ತು. ಸ್ವಲ್ಪಮಟ್ಟಿಗೆ ಈ ಪ್ರಯತ್ನದಲ್ಲಿ ಯಶಸ್ಸು ಸಹ ಸಾಧಿಸಿತ್ತು. ಹೀಗಾಗಿ, ಆಗ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಈ ಬಾರಿಯೂ ಅದೇ ಸನ್ನಿವೇಶ ಪುನರಾವರ್ತನೆಯಾಗುತ್ತಿದೆ. ಬಿಜೆಪಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವುದರಿಂದ ಎರಡು ದಿನಗಳ ಕಾಲ ಶಾಸಕರನ್ನು ಮೌಂಟ್‌ಅಬುನಲ್ಲಿ ಇರಿಸಲಾಗುವುದು’ ಎಂದು ರಾಜ್ಯ ಕಾಂಗ್ರೆಸ್‌ ಘಟಕದ ಮುಖ್ಯ ವಕ್ತಾರ ಮನೀಶ್‌ ದೋಷಿ ತಿಳಿಸಿದ್ದಾರೆ.

‘ಮೌಂಟ್‌ಅಬುನಲ್ಲಿ ಶಾಸಕರಿಗೆ ಶಿಬಿರ ಆಯೋಜಿಸಲಾಗುವುದು. ಮುಂದಿನ ಯೋಜನೆಗಳ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು’ ಎಂದಿದ್ದಾರೆ.

2017ರ ಆಗಸ್ಟ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ 44 ಶಾಸಕರನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಈ ಕಾರ್ಯತಂತ್ರ ಯಶಸ್ವಿಯಾಗಿದ್ದರಿಂದ ಪಕ್ಷದ ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ಜಯ ಸಾಧಿಸಿದ್ದರು.

ಕಾಂಗ್ರೆಸ್‌ ಹೇಳಿಕೆಗೆ ಪ‍್ರತಿಕ್ರಿಯಿಸಿರುವ ಬಿಜೆಪಿ ಮುಖಂಡರು, ‘ಕಾಂಗ್ರೆಸ್‌ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್‌ ಶಾಸಕರನ್ನು ಸೆಳೆಯುವುದಿಲ್ಲ. ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ ಬಹಿರಂಗವಾಗುವ ಕಾರಣಕ್ಕಾಗಿ ಶಾಸಕರನ್ನು ರಾಜ್ಯದಿಂದ ಹೊರಗೆ ಕರೆದೊಯ್ಯುತ್ತಿದೆ’ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ಹಿಂದುಳಿದ ವರ್ಗಗಳ ಘಟಕದ ರಾಜ್ಯ ಕಾರ್ಯದರ್ಶಿ ಜುಗಲ್ಜಿ ಠಾಕೂರ್‌ ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ ವತಿಯಿಂದ ಚಂದ್ರಿಕಾ ಚುಡಾಸಮಾ ಮತ್ತು ಗೌರವ ಪಾಂಡ್ಯ ಅವರನ್ನು ಕಣದಲ್ಲಿದ್ದಾರೆ.

ಗುಜರಾತ್‌ ವಿಧಾನಸಭೆ ಬಲಾಬಲ

182 ಒಟ್ಟು ಸದಸ್ಯರು

100 ಬಿಜೆಪಿ ಸದಸ್ಯರು

71 ಕಾಂಗ್ರೆಸ್‌ ಸದಸ್ಯರು

6 ಖಾಲಿ ಸ್ಥಾನಗಳು

5 ಇತರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT