ಬುಧವಾರ, ಜೂನ್ 3, 2020
27 °C

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಆಗಸ್ಟ್‌ 31ರೊಳಗೆ ಪ್ರಕಟಿಸಿ: ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಬೇಕು, ಆಗಸ್ಟ್‌ 31ರೊಳಗೆ ತೀರ್ಪು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ. 

ಈ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ಉಮಾ ಭಾರತಿ ವಿರುದ್ಧ ವಿಚಾರಣೆ ನಡೆಯುತ್ತಿದೆ. ರಾಜಕೀಯವಾಗಿ ಅತಿಸೂಕ್ಷ್ಮವಾಗಿರುವ ಈ ಪ್ರಕರಣದಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ನೀಡಲಾಗಿದ್ದ ಕಾಲಾವಕಾಶ ವಿಸ್ತರಣೆ ಕೋರಿ ಸಿಬಿಐ ವಿಶೇಷ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಈ ಆದೇಶ ನೀಡಿದೆ.  

‘ನ್ಯಾಯಾಧೀಶ ಎಸ್‌.ಕೆ.ಯಾದವ್‌ ಅವರು ನಿಯಮಾನುಸಾರ ವಿಚಾರಣೆಯನ್ನು ಮುಂದುವರಿಸಬೇಕು. ಸಾಕ್ಷ್ಯಗಳನ್ನು ದಾಖಲಿಸಲು ಹಾಗು ವಿಚಾರಣೆ ಸಂದರ್ಭದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್‌‌ ಸೌಲಭ್ಯವನ್ನು ಬಳಸಿಕೊಳ್ಳಬೇಕು’ ಎಂದು ನ್ಯಾಯಮೂರ್ತಿಗಳಾದ ಆರ್‌.ಎಫ್‌.ನಾರಿಮನ್‌ ಹಾಗೂ ಸೂರ್ಯಕಾಂತ್‌ ಅವರಿದ್ದ ನ್ಯಾಯಪೀಠ ತಿಳಿಸಿದೆ. 

‘2020ರ ಮೇ 6ರಂದು ಸಲ್ಲಿಸಲಾಗಿರುವ ಪತ್ರವನ್ನು ಗಣನೆಗೆ ತೆಗೆದುಕೊಂಡು, ವಿಚಾರಣೆ ಹಾಗೂ ತೀರ್ಪು ಪ್ರಕಟಿಸುವ ದಿನಾಂಕವನ್ನು 2020 ಆಗಸ್ಟ್‌ 31ರವರೆಗೆ ವಿಸ್ತರಿಸುತ್ತೇವೆ. ವಿಚಾರಣೆ ಪೂರ್ಣಗೊಳಿಸಲು ಎಲ್ಲ ರೀತಿಯ ಪ‍್ರಯತ್ನವನ್ನು ಯಾದವ್‌ ಅವರು ಮಾಡುತ್ತಿದ್ದಾರೆ ಎಂದು ತಿಳಿದಿದೆ. ಹೊಸ ಗಡುವಿನ ಅನ್ವಯ ಆಗಸ್ಟ್‌ 31ರೊಳಗೆ ತೀರ್ಪು ಪ್ರಕಟಿಸಬೇಕು. ಇನ್ನೊಂದು ಬಾರಿ ಗಡುವು ವಿಸ್ತರಣೆ ಇಲ್ಲ’ ಎಂದು ಪೀಠ ತಿಳಿಸಿದೆ.

ಸಾಕ್ಷ್ಯ ಸಂಗ್ರಹವಾಗಿಲ್ಲ: ‘ವಿಚಾರಣೆಗೆ 9 ತಿಂಗಳ ಕಾಲಾವಕಾಶ ನೀಡಿದರೂ, ಸಾಕ್ಷ್ಯಾಧಾರ ಸಂಗ್ರಹವಾಗಿಲ್ಲ ಎನ್ನುವುದು ಯಾದವ್‌ ಅವರು ಬರೆದ ಪತ್ರದಿಂದ ತಿಳಿದುಬಂದಿದೆ. ವಿಡಿಯೊ ಕಾನ್ಫರೆನ್ಸಿಂಗ್‌ ಸೌಲಭ್ಯ ಲಭ್ಯವಿದ್ದು, ಸಾಕ್ಷಿಗಳ ವಿಚಾರಣೆ ಮತ್ತು ದಾಖಲೆಗೆ ಇದನ್ನು ಯಾದವ್‌ ಅವರು ಉಪಯೋಗಿಸಿಕೊಳ್ಳಬೇಕು’ ಎಂದು ಪೀಠ ಸೂಚಿಸಿದೆ.

ಲಾಕ್‌ಡೌನ್‌ನಿಂದ ವಿಳಂಬ
9 ತಿಂಗಳೊಳಗಾಗಿ ಈ ವಿಚಾರಣೆಯ ತೀರ್ಪು ಪ್ರಕಟಿಸಲು ಸಿಬಿಐ ವಿಶೇಷ ನ್ಯಾಯಾಧೀಶರಿಗೆ 2019 ಜುಲೈ 19ರಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಈ ಆದೇಶದಂತೆ 2020ರ ಏಪ್ರಿಲ್‌ ಒಳಗೆ ತೀರ್ಪು ಹೊರಬೀಳಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ವಿಚಾರಣೆ ವಿಳಂಬವಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು