ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಕ್ರಮಬದ್ಧತೆ: ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಾಳೆ

Last Updated 8 ಜೂನ್ 2020, 7:22 IST
ಅಕ್ಷರ ಗಾತ್ರ

ನವದೆಹಲಿ: ‘ಆಧಾರ್ ಯೋಜನೆ ಸಂವಿಧಾನ ಬದ್ಧವಾಗಿದೆ’ ಎಂಬ ತೀರ್ಪಿನ ಮರು ಪರಿಶೀಲನೆ ಕೋರಿದ್ದ ವಿವಿಧ 9 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜೂನ್ 9ರಂದು ನಡೆಸಲಿದೆ.

ಬ್ಯಾಂಕ್ ಖಾತೆ, ಮೊಬೈಲ್ ಹಾಗೂ ಶಾಲಾ ದಾಖಲಾತಿ ಸಂದರ್ಭಗಳಲ್ಲಿಯೂ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಅಂಶಗಳು ವಿಚಾರಣೆಗೆ ಬರಲಿವೆ.

ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ, ಅಶೋಕ್ ಭೂಷಣ್, ಎಲ್.ನಾಗೇಶ್ವರ ರಾವ್ ಅವರಿದ್ದ ಪಂಚ ಸದಸ್ಯರ ಪೀಠ ವಿಚಾರಣೆ ನಡೆಸಲಿದೆ. ಸೆ.26,2018ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.

‘ವಿಧಿ 110 (1)ರಲ್ಲಿ ನಿಗದಿಪಡಿಸಲಾದ ಮಾನದಂಡಗಳನ್ನು ಪಾಲಿಸುವಲ್ಲಿ ಆಧಾರ್ ವಿಫಲವಾಗಿದೆ. ನಾಗರಿಕರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಇಂಥ ಕಾಯ್ದೆಯನ್ನು ರಾಜ್ಯಸಭೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರೂಪಿಸಲಾಗಿದೆ. ಇದು, ಸಂವಿಧಾನಕ್ಕೆ ಮಾಡಲಾದ ಮೋಸ’ ಎಂದು ವಕೀಲ ವಿಪಿನ್ ನಾಯರ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ವರ್ಷ ನವೆಂಬರ್ 13ರಂದು ನೀಡಿದ್ಡ ತೀರ್ಪು ಸೇರಿ ಸುಪ್ರೀಂ ಕೋರ್ಟ್‌ನ ಎರಡು ತೀರ್ಪುಗಳನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ವಿವಿಧ ಮಂಡಳಿಗಳ ಸದಸ್ಯರ ಸೇವಾ ನಿಯಮಗಳು, ನೇಮಕ ಕುರಿತು ಕೇಂದ್ರ ರೂಪಿಸಿದ್ದ ನಿಯಮಗಳನ್ನು ತಳ್ಳಿಹಾಕಿ ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ಉನ್ನತ ಪೀಠದ ಪರಿಶೀಲನೆಗೆ ಒಪ್ಪಿಸಿತ್ತು.

ಉಲ್ಲೇಖಿಸಿದ ಮತ್ತೊಂದು ತೀರ್ಪು ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತ 2018ರ ತೀರ್ಪು. ಆದರೆ, ಮುಸ್ಲಿಂ ಮತ್ತು ಪಾರ್ಸಿ ಮಹಿಳೆಯರ ವಿಷಯದಲ್ಲಿ ತಾರತಮ್ಯ ಕುರಿತ ಪ್ರಶ್ನೆ ಇಲ್ಲಿ ಕೇಳಿಬಂದಿತ್ತು. ಈ ತೀರ್ಪನ್ನು ಉನ್ನತ ಪೀಠದ ವಿಚಾರಣೆಗೆ ಒಪ್ಪಿಸಲಾಗಿತ್ತು.

ಈ ಎರಡೂ ಪ್ರಕರಣಗಳ ಹಿನ್ನೆಲೆಯಲ್ಲಿ ಸರ್ವೋಚ್ಛ ಕೋರ್ಟ್ ಮಧ್ಯಂತರ ಅರ್ಜಿ ಐಎ ಸಂಖ್ಯೆ 6225/2019ಕ್ಕೆ ಸಂಬಂಧಿಸಿದಂತೆ ಕೋರ್ಟ್ ತನ್ನ ತೀರ್ಪು ಮರುಪರಿಶೀಲಿಸುವಂತೆ ತಮ್ಮ ಅಭಿಪ್ರಾಯವನ್ನುಮಂಡಿಸಲು ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಆಧಾರ್ ಯೋಜನೆಯು ಕಣ್ಗಾವಲು ಇಡುವುದಿಲ್ಲ ಹಾಗೂ ಖಾಸಗಿತನದ ಹಕ್ಕನ್ನು ಕಸಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 26, 2018ರಂದು ನೀಡಿದ್ದ ಆದೇಶದಲ್ಲಿ ಆಧಾರ್ ಯೋಜನೆಯು ಸಂವಿಧಾನಿಕವಾಗಿ ಬದ್ಧವಾಗಿದೆ ಎಂದು ಹೇಳಿತ್ತು. ಜೊತೆಗೆ ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕ ಮತ್ತು ಶಾಲಾ ದಾಖಲಾತಿಗೆ ಇದರ ಜೋಡಣೆ ಕಡ್ಡಾಯವವಲ್ಲ ಎಂದು ಹೇಳಿತ್ತು.

ಆಗ ಮುಖ್ಯ ನ್ಯಾಯಮೂರ್ತಿಗಳಾಗಿದ್ದದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ, ಆದಾಯ ತೆರಿಗೆ ವಿವರ ದಾಖಲಿಸಲು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಕಡ್ಡಾಯ ಎಂದು ಹೇಳಿತ್ತು.

‘ಅತ್ಯುತ್ತಮ ಆಗಿರುವುದಕ್ಕಿಂತ ಭಿನ್ನವಾಗಿರುವುದು ಉತ್ತಮ. ಅತ್ಯುತ್ತಮ ಆಗಿದ್ದರೆ ನಂಬರ್ ಒನ್ ಎನಿಸಬಹುದು. ಆದರೆ, ವಿಭಿನ್ನವಾಗಿದ್ದರೆ ಪ್ರತ್ಯೇಕವಾಗಿ ಅಸ್ತಿತ್ವ ಕಂಡುಕೊಳ್ಳಬಹುದು’ ಎಂದು ತೀರ್ಪಿನಲ್ಲಿಅಭಿಪ್ರಾಯಪಡಲಾಗಿತ್ತು.

ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಂತೆ ಅಂಗೀಕರಿಸಲಾಗದು. ಇದು, ಸಂವಿಧಾನದ ದೃಷ್ಟಿಯಿಂದ ವಂಚನೆಯಾಗಲಿದೆ ಎಂದರು. ಆದರೆ, ಮುಖ್ಯನ್ಯಾಯಮೂರ್ತಿ ಸೇರಿದಂತೆ ಇತರೆ ನಾಲ್ವರು ಸದಸ್ಯರು ಆಧಾರ್ ಕಾಯ್ದೆಯನ್ನು ಎತ್ತಿಹಿಡಿದಿದ್ದರು.

ಆಧಾರ್ ಮುಖ್ಯ ಉದ್ದೇಶ ಸರ್ಕಾರದ ಯೋಜನೆಗಳ ಲಾಭ ಕೆಳಹಂತದ ಜನರಿಗೆ ತಲುಪಬೇಕು ಎಂಬುದೇ ಆಗಿದೆ. ಸಮುದಾಯದ ದೃಷ್ಟಿಯಿಂದಲೂ ಜನರ ವ್ಯಕ್ತಿತ್ವವನ್ನು ಇದು ಪರಿಗಣಿಸಲಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿ ಹೊಂದಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT