ಭಾನುವಾರ, ಜೂಲೈ 12, 2020
29 °C

ಜಮ್ಮು ಕಾಶ್ಮೀರ: ಹುರಿಯತ್‌ನಿಂದ ಹೊರನಡೆದ ಗಿಲಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಹುರಿಯತ್‌ ಕಾನ್ಫರೆನ್ಸ್‌ನ ಎಲ್ಲಾ ಚಟುವಟಿಕೆಗಳಿಂದ ದೂರ ಸರಿದಿರುವುದಾಗಿ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್‌ಅಲಿ ಶಾ ಗಿಲಾನಿ (90) ಸೋಮವಾರ ಘೋಷಿಸಿದ್ದಾರೆ. ಈ ಸಂಘಟನೆಯನ್ನು ಸ್ವತಃ ಗಿಲಾನಿ ಅವರೇ  2003ರಲ್ಲಿ ಆರಂಭಿಸಿದ್ದರು.

‘ಗಿಲಾನಿ ಅವರು ಹುರಿಯತ್‌ ಕಾನ್ಫರೆನ್ಸ್‌ ವೇದಿಕೆಯಿಂದ ಸಂಪೂರ್ಣವಾಗಿ ಪ್ರತ್ಯೇಕಗೊಂಡಿದ್ದಾರೆ’ ಎಂದು ಅವರ ವಕ್ತಾರ ಮಾಧ್ಯಮಗಳಿಗೆ ಕಳುಹಿಸಿರುವ ನಾಲ್ಕು ಸಾಲುಗಳ ಪ್ರಕಟಣೆ ಹಾಗೂ ಧ್ವನಿ ಸಂದೇಶದಲ್ಲಿ ತಿಳಿಸಿದ್ದಾರೆ.

ಹುರಿಯತ್‌ನ ಆಜೀವ ಅಧ್ಯಕ್ಷರಾಗಿ ನೇಮಕಗೊಂಡಿರುವ ಗಿಲಾನಿ ಅವರು ವಿಸ್ತಾರವಾದ ಪತ್ರದ ಮೂಲಕ ತನ್ನ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಇತರ ಸಹಯೋಗಿ ಸಂಘಟನೆಗಳ ನಾಯಕರಿಗೆ ತಿಳಿಸಿದ್ದಾರೆ.

‘ಸಂಘಟನೆಯ ಪಾಕ್‌ ಆಕ್ರಮಿತ ಕಾಶ್ಮೀರದ ಸದಸ್ಯರ ಮೇಲಿನ ಹಲವು ಆರೋಪಗಳ ವಿಚಾರಣೆ ನಡೆಸಲಾಗುತ್ತಿದೆ. ಇಂಥ ಪ್ರತಿನಿಧಿಗಳ ಚಟುವಟಿಕೆಗಳು ಅಲ್ಲಿ ಶಾಸನಸಭೆಗೆ ಪ್ರವೇಶ ಪಡೆಯುವುದಕ್ಕಷ್ಟೇ ಸೀಮಿತವಾಗಿವೆ. ಕೆಲವು ಸದಸ್ಯರನ್ನು ಉಚ್ಚಾಟಿಸಲಾಗಿದ್ದರೆ ಇನ್ನೂ ಕೆಲವರು ತಮ್ಮದೇ ಬಣದ ಸಭೆಗಳನ್ನು ನಡೆಸುತ್ತಿದ್ದಾರೆ. ಸಂಘಟನೆಯ ಅಲ್ಲಿನ ಪ್ರತಿನಿಧಿಗಳು ಕೈಗೊಳ್ಳುವ ತೀರ್ಮಾನಗಳನ್ನು  ಇಲ್ಲಿ ನೀವು ಸಭೆ ನಡೆಸಿ ಅಂಗೀಕರಿಸುತ್ತಿದ್ದೀರಿ’ ಎಂದು ಗಿಲಾನಿ ಅವರು ಸಂಘಟನೆಯ ಇತರ ನಾಯಕರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಟೀಕಿಸಿದ್ದಾರೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯದ ಮರು ವಿಂಗಡಣೆ ಪ್ರಕ್ರಿಯೆ ಬಳಿಕ ಸಂಘಟನೆ ನಿಷ್ಕ್ರಿಯವಾಗಿದೆ ಎಂದು ಉಲ್ಲೇಖಿಸಿದ ಗಿಲಾನಿ, ‘ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ನಾನು ಹಲವು ಸಂದೇಶಗಳನ್ನು ಕಳುಹಿಸಿದ್ದರೂ, ನನ್ನ ಪ್ರಯತ್ನಗಳೆಲ್ಲಾ ವ್ಯರ್ಥವಾದವು. ನೀವು ಎಲ್ಲಾ ಮಿತಿಗಳನ್ನು ಮೀರಿರುವಿರಿ ಮತ್ತು ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದೀರಿ’ ಎಂದೂ ಪತ್ರದಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು