ಗುರುವಾರ , ನವೆಂಬರ್ 14, 2019
19 °C

ಆಂಧ್ರದಲ್ಲಿ ಚಳ್ಳಕೆರೆಯ ಐವರ ದುರ್ಮರಣ; ನಟ ಪವನ್ ಕಲ್ಯಾಣ್ ಸಂತಾಪ

Published:
Updated:

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮರೇಡುಮಿಲ್ಲಿ–ಚಿಂಟೂರು ಘಾಟಿಯಲ್ಲಿ ಮಂಗಳವಾರ ಭೀಕರ ಅಪಘಾತ ಸಂಭವಿಸಿದೆ. ಟೆಂಪೊ ಟ್ರಾವಲರ್‌ವೊಂದು ಘಾಟಿಯಿಂದ ಕಂದಕಕ್ಕೆ ಉರುಳಿದ್ದು, ಚಳ್ಳಕೆರೆಯ ಐವರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. 

ಮಂಗಳವಾರ ಬೆಳಗ್ಗೆ 10.30ರಲ್ಲಿ ಈ ದುರಂತ ಸಂಭವಿಸಿದೆ. ಚಿತ್ರದುರ್ಗದಿಂದ ಭದ್ರಾಚಲಂಗೆ ಬಂದಿದ್ದ 12 ಮಂದಿ ಪ್ರವಾಸಿಗರು ಅಲ್ಲಿ ದೇವರ ದರ್ಶನ ಮುಗಿಸಿ, ಪೂರ್ವ ಗೋದಾವರಿಯ ಅಣ್ಣಾವರಂಗೆ ತೆರಳುತ್ತಿದ್ದರು. ಮರೇಡುಮಿಲ್ಲಿ–ಚಿಂಟೂರು ಘಾಟಿಯ ವಾಲ್ಮೀಕಿ ಕೊಂಡ ಎಂಬ ಸ್ಥಳದಲ್ಲಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದು, ಟೆಂಪೊ ಕಂದಕ್ಕೆ ಉರುಳಿದೆ. ಪರಿಣಾಮ ಸ್ಥಳದಲ್ಲೇ 6 ಜನ ಸಾವಿಗೀಡಾದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಬೆಳಗ್ಗೆ 10.30ಕ್ಕೇ ದುರಂತ ಸಂಭವಿಸಿದೆಯಾದರೂ, ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಮಧ್ಯಾಹ್ನದ ನಂತರವೇ. ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಮೊಬೈಲ್‌ ಸಂಪರ್ಕ ಸಾಧ್ಯವಿಲ್ಲದ ಕಾರಣ ಇಷ್ಟು ತಡವಾಗಿ ಮಾಹಿತಿ ತಲುಪಿದೆ. ಅಪಘಾತ ಕಂಡ ಜನ ಅಲ್ಲಿಂದ ಸಂಪರ್ಕ ಪ್ರದೇಶಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. 

‘ಸ್ಥಳಕ್ಕೆ ರಕ್ಷಣಾ ತಂಡ ರವಾನಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಲಿ ಎಂದು ಸ್ಯಾಟಿಲೈಟ್‌ ಫೋನ್‌ ಅನ್ನೂ ನೀಡಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ದುರಂತಕ್ಕೀಡಾಗಿರುವ ವಾಹನದ ಮುಂದೆ ಹೋಗುತ್ತಿದ್ದ, ಕರ್ನಾಟಕದವರೇ ಇದ್ದ ಮತ್ತೊಂದು ವಾಹನದಲ್ಲಿದ್ದವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ,’ ಎಂದು ಪೂರ್ವ ಗೋದಾವರಿ ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿ ಅದ್ನಾನ್‌ ನಯೀಮ್‌ ಅಸ್ಮಿ ತಿಳಿಸಿದ್ದಾರೆ.  

ಮೃತರ ವಿವರ: ಚಳ್ಳಕೆರೆಯ ಕುಂದಂ ರಮೇಶ್‌ (56), ಕುಂದಂ ಅಮೃತವಾಣಿ (48), ಮೇದಾ ಗಾಯತ್ರಮ್ಮ (52), ಪುತ್ರಿ ಮೇದಾ ಶ್ವೇತಾ (25), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮೇದಾ ಶ್ರೀನಿವಾಸಲು (62) ಹಾಗೂ ಮೇದಾ ಮಧುರಾಕ್ಷಮ್ಮ (56) ಮೃತರು. ಶ್ರೇತಾ, ಸೀತಾಲಕ್ಷ್ಮಿ ಹಾಗೂ ರಾಮಲಕ್ಷ್ಮಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರಪ್ರದೇಶದ ಪೆನಗೊಂಡ ವಾಸವಿ ಕ್ಷೇತ್ರಕ್ಕೆ 26 ಜನ ಅ.10ರಂದು ಚಳ್ಳಕೆರೆಯಿಂದ ಪ್ರಯಾಣ ಬೆಳೆಸಿದ್ದರು. ರಾಜಮುಂಡ್ರಿ ಸಮೀಪದ ಮಾರೆಡುಮಿಲ್ಲಿ ಪ್ರವಾಸಿ ತಾಣದಿಂದ ಚಿಂಟೂರು ಕಡೆಗೆ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ವಾಲ್ಮಿಕಿಕೊಂಡ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಟೆಂಪೊ ಕಂದಕಕ್ಕೆ ಉರುಳಿದೆ. ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ರಮೇಶ್‌ ಅವರು ಚಳ್ಳಕೆರೆಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಸಂಬಂಧಿಕರೊಂದಿಗೆ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ವಾಲ್ಮೀಕಿಕೊಂಡ ಘಾಟಿ ರಸ್ತೆ ಹಾಳಾಗಿತ್ತು ಎನ್ನಲಾಗಿದೆ.

 ರಸ್ತೆ ಅಪಘಾತದಿಂದ ಚಳ್ಳಕೆರೆ ತಾಲ್ಲೂಕಿನ ಯಾತ್ರಿಕರು ಮೃತಪಟ್ಟ ಘಟನೆಗೆ ನಟ ಪವನ್ ಕಲ್ಯಾಣ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಟ್ವೀಟ್ ಮಾಡಿರುವ ಅವರು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಆಂಧ್ರಪ್ರದೇಶದ ಸಾರಿಗೆ ಸಚಿವರೂ ಭರವಸೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)