ಮಂಗಳವಾರ, ಡಿಸೆಂಬರ್ 10, 2019
26 °C

ಯುವತಿಗೆ ಕಿರುಕುಳ ಆರೋಪ: ಬಾಲಿವುಡ್ ಗಾಯಕ ಮಿಖಾ ಸಿಂಗ್ ವಿರುದ್ಧ ಪ್ರಕರಣ ದಾಖಲು

ಎಎನ್‍ಐ Updated:

ಅಕ್ಷರ ಗಾತ್ರ : | |

 ನವದೆಹಲಿ: ಬ್ರೆಜಿಲ್ ಮೂಲದ 17ರ ಹರೆಯದ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಾಲಿವುಡ್ ಗಾಯಕ ಮಿಖಾ ಸಿಂಗ್‍ನ್ನು ಶುಕ್ರವಾರ ಯುಎಇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
ಕಿರುಕುಳ ಆರೋಪದಲ್ಲಿ ಗುರುವಾರ ಮಿಖಾ ಅವರನ್ನು ಬಂಧಿಸಿದ ಯುಎಇ ಪೊಲೀಸರು, ತಡರಾತ್ರಿ ಬಂಧಮುಕ್ತಗೊಳಿಸಿದ್ದಾರೆ.

ಬಾಲಕಿಗೆ ಅಶ್ಲೀಲ ಚಿತ್ರಗಳನ್ನು ಕಳಿಸಿದ ಆರೋಪ ಮಿಖಾ ಮೇಲಿದೆ.ನಮ್ಮ ತಂಡ ಪೊಲೀಸ್ ಠಾಣೆಯಲ್ಲಿದ್ದು ಮಿಖಾನನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ಹೇಳಿದ್ದಾರೆ.

ಮಿಖಾ ವಿರುದ್ಧ ಈ ರೀತಿ ಆರೋಪ ಕೇಳಿಬಂದಿರುವುದು ಇದೇ ಮೊದಲೇನೂ ಅಲ್ಲ.  2016ರಲ್ಲಿ ಮಿಖಾ ವಿರುದ್ಧ ಮುಂಬೈಯ ರೂಪದರ್ಶಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ರೂಪದರ್ಶಿ ವಿರುದ್ಧ ಸುಲಿಗೆ ಆರೋಪವನ್ನು ಮಿಖಾ ಮಾಡಿದ್ದರು. ಅದೇ ವರ್ಷ ಮಿಖಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ತನಗೆ ಬಲವಂತವಾಗಿ ಮುತ್ತು ನೀಡಿದ್ದರು ಎಂದು ನಟಿ ರಾಖಿ ಸಾವಂತ್ ಆರೋಪಿಸಿದ್ದರು.

ಇದಕ್ಕಿಂತ ಮುಂಚೆ ಸಂಗೀತ ಕಾರ್ಯಕ್ರಮವೊಂದಲ್ಲಿ ವೈದ್ಯರೊಬ್ಬರಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ಮಿಖಾ, ಜಾಮೀನು ಪಡೆದು ಬಂಧಮುಕ್ತವಾಗಿದ್ದರು.

ಕೆಲವು ವರ್ಷಗಳ ಹಿಂದೆ ಅನುಮತಿ ಮಿತಿಗಿಂತ ಅಧಿಕ ಭಾರತ ಮತ್ತು ವಿದೇಶಿ ದುಡ್ಡನ್ನು ಕೊಂಡೊಯ್ದ ಆರೋಪದಲ್ಲಿ ಮಿಖಾನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ವಶಪಡಿಸಲಾಗಿತ್ತು.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು