ಶನಿವಾರ, ಸೆಪ್ಟೆಂಬರ್ 25, 2021
25 °C
ಲೋಪದೋಷ ಸರಿಪಡಿಸಿ ರಾಜ್ಯ ಸರ್ಕಾರ ರೂಪಿಸಿದ್ದ ಕಾಯ್ದೆ

ಪರಿಶಿಷ್ಟ ನೌಕರರ ಬಡ್ತಿಯಲ್ಲಿ ಮೀಸಲಾತಿ: ಸಾಮಾಜಿಕ ನ್ಯಾಯ.. ಸಮಾನತೆಯ ಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ಕೆಲವು ಲೋಪದೋಷಗಳು ಮತ್ತು ನ್ಯೂನತೆಗಳ ಆಧಾರದಲ್ಲಿ ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌, ಲೋಪಗಳನ್ನು ಸರಿಪಡಿಸಿ ಸರ್ಕಾರ ರೂಪಿಸಿರುವ ನೂತನ ಕಾಯ್ದೆಯನ್ನು ಪುರಸ್ಕರಿಸಿ ಶುಕ್ರವಾರ ಮಹತ್ವದ ಆದೇಶ ನೀಡಿದೆ.

‘ಬಡ್ತಿಗೆ ಮೀಸಲಾತಿ ನಿಯಮ ಅನುಸರಿಸುವಾಗ ಸರ್ಕಾರಿ ಹುದ್ದೆಗಳಲ್ಲಿ ಆಯಾ ಸಮುದಾಯಗಳಿಗೆ ದೊರೆತಿರುವ ಪ್ರಾತಿನಿಧ್ಯ, ಹಿಂದುಳಿದಿರುವಿಕೆ ಮತ್ತು ಆಡಳಿತ ದಕ್ಷತೆಯಂತಹ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯ’ ಎಂದು ಆದರ್ಶಕುಮಾರ್‌ ಗೋಯೆಲ್‌ ಹಾಗೂ ಯು.ಯು. ಲಲಿತ್‌ ಅವರಿದ್ದ ದ್ವಿಸದಸ್ಯ ಪೀಠ 2017ರ ತನ್ನ ತೀರ್ಪಿನಲ್ಲಿ ಸೂಚಿಸಿತ್ತು.

ಈ ಕಾಯ್ದೆಗೆ ಪರ್ಯಾಯವಾಗಿ ಸರ್ಕಾರ 2018ರಲ್ಲಿ ರೂಪಿಸಿದ್ದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ಶುಕ್ರವಾರ ಹೊರಬಿದ್ದಿರುವ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಹಾಗೂ ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠವು, ಸಾಮಾಜಿಕ ನ್ಯಾಯದ ತಳಹದಿಯ ಕುರಿತು ಟಿಪ್ಪಣಿಯನ್ನು ನೀಡಿದೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ವ್ಯವಸ್ಥೆಗಳಲ್ಲಿ ಸಮಾಜದ ಎಲ್ಲ ವರ್ಗದ ಪ್ರಾತಿನಿಧಿತ್ವ ಇರುವುದು ಸೂಕ್ತ. ಸಂವಿಧಾನದ ಆಶಯವೂ ಅದೇ ಆಗಿದೆ. ಒಬ್ಬ ಅರ್ಹ ಅಭ್ಯರ್ಥಿ ಎಂದರೆ ಆತ ಪ್ರತಿಭಾವಂತ ಮತ್ತು ಯಶಸ್ಸನ್ನು ಸಾಧಿಸಿದವನು ಎಂಬ ಅರ್ಥವಲ್ಲ. ಬದಲಿಗೆ, ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳನ್ನೂ ಪ್ರಗತಿಯತ್ತ ಕೊಂಡೊಯ್ಯುವ ಸಾಂವಿಧಾನಿಕ ಆಶಯಕ್ಕೆ ಆತ ಬದ್ಧವಾಗಿ ಇರಬೇಕಾಗುತ್ತದೆ’ ಎಂಬ ಅಂಶವನ್ನು ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿದೆ.

ಈ ರೀತಿಯ ಆಚರಣೆಗಳಿಂದ ಮಾತ್ರ ಆಡಳಿತ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯ ಖಾತರಿಪಡಿಸಿಕೊಳ್ಳಲು ಸಾಧ್ಯ. ಸೌಲಭ್ಯಗಳು ಮತ್ತು ಸಂಕಷ್ಟಗಳ ವಿನಿಮಯಯೇ ಸಾಮಾಜಿಕ ನ್ಯಾಯದ ತಿರುಳು. ಎಲ್ಲರ ಒಳಗೊಳ್ಳುವಿಕೆಯ ತತ್ವವನ್ನು ಅನುಸರಿಸುವ ಮೂಲಕ ಇದನ್ನು ಪಾಲಿಸಬೇಕು. ಸಂವಿಧಾನವೂ ಇದನ್ನೇ ಸೂಚಿಸುತ್ತದೆ. ಸಮಾನತೆಯು ಒಳಗೊಳ್ಳುವಿಕೆಯ ಭಾಗವಾಗಿದೆ ಎಂದು ತೀರ್ಪು ಒತ್ತಿ ಹೇಳಿದೆ.

ಪ್ರಕರಣದ ಸಾರ: 1976ರಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗೆ ನೇಮಕಗೊಂಡು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ಬಯಸಿದ್ದ ಸಾಮಾನ್ಯ ವರ್ಗಗಳ ನೌಕರರನ್ನು ಕಡೆಗಣಿಸಿ, 1987ರಲ್ಲಿ ಅದೇ ಹುದ್ದೆಗೆ ನೇಮಕಗೊಂಡ ಪರಿಶಿಷ್ಟ ಜಾತಿಯ ನೌಕರರಿಗೆ ಬಡ್ತಿ ನೀಡಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿ 2017ರ ಫೆಬ್ರುವರಿ 9ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಬಡ್ತಿಯಲ್ಲಿ ಮೀಸಲಾತಿ ಅನುಸರಿಸುವ ರಾಜ್ಯ ಸರ್ಕಾರದ ಕಾಯ್ದೆಯನ್ನೇ ಈ ತೀರ್ಪು ರದ್ದುಪಡಿಸಿತ್ತು.

ಬಡ್ತಿಯ ಸೌಲಭ್ಯ ಪಡೆದು ಈಗಾಗಲೇ ನಿವೃತ್ತರಾಗಿರುವವರಿಗೆ ಈ ತೀರ್ಪು ಅನ್ವಯವಾಗದು. ಸೇವೆಯಲ್ಲಿರುವವರಿಗೆ ಮೀಸಲಾತಿ ಪ್ರಕಾರ ನೀಡಲಾಗಿರುವ ಬಡ್ತಿಯನ್ನು ಹಂಗಾಮಿ ಎಂದು ಪರಿಗಣಿಸಿ, ಮರು ವಿಮರ್ಶೆಗೆ ಒಳಪಡಿಸಬೇಕು. ಈ ತೀರ್ಪಿನ ಪ್ರಕಾರ ಮೂರು ತಿಂಗಳೊಳಗೆ ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಪೀಠ ನಿರ್ದೇಶನ ನೀಡಿತ್ತು.

ಆದರೆ, ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿದ್ದ ರಾಜ್ಯ ಸರ್ಕಾರವು ಪರಿಶಿಷ್ಟ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ನೂತನ ಕಾಯ್ದೆ ಜಾರಿ ಮಾಡಿತ್ತು.

ಎಂ.ನಾಗರಾಜ್‌ ಪ್ರಕರಣ: ಮೀಸಲಾತಿಯಡಿ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ಸಾಂದರ್ಭಿಕ ಹಿರಿತನ ನೀಡುವ ಅವಕಾಶ ಕಲ್ಪಿಸುವುದಕ್ಕೆ ಹಾಗೂ 1978ರ ಏಪ್ರಿಲ್ 27ರಿಂದ ನೀಡಲಾಗಿರುವ ಸಾಂದರ್ಭಿಕ ಸೇವಾ ಹಿರಿತನವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಬಡ್ತಿಯಲ್ಲಿ ಮೀಸಲಾತಿ ಅನುಸರಿಸುವ ಕಾಯ್ದೆ– 2002’ ರೂಪಿಸಿತ್ತು.

ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಎಂ.ನಾಗರಾಜ್ ಮತ್ತಿತರರು 2002ರಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೇ ಸ್ವರೂಪದ ಇತರ ವ್ಯಾಜ್ಯಗಳನ್ನು ಒಳಗೊಂಡಿದ್ದ ಮೇಲ್ಮನವಿಗಳೊಂದಿಗೆ ನಾಗರಾಜ್ ಅವರ ಅರ್ಜಿಯನ್ನೂ ಸೇರಿಸಿ ಸಂವಿಧಾನಪೀಠದ ವಿಚಾರಣೆಗೆ ವಹಿಸಲಾಗಿತ್ತು.

2006ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ವಿವಿಧ ರಾಜ್ಯಗಳು ರೂಪಿಸಿದ್ದ ಕಾಯ್ದೆಗಳಿಗೆ ಸಂಬಂಧಿಸಿದ ಪ್ರತ್ಯೇಕ ವ್ಯಾಜ್ಯಗಳನ್ನು ಆಯಾ ಹೈಕೋರ್ಟ್‌ಗಳ ವಿಚಾರಣೆಗೆ ವಾಪಸ್‌ ಕಳಿಸಿತ್ತು.

ಬಿ.ಕೆ. ಪವಿತ್ರ ಅರ್ಜಿ: 2002ರ ಕರ್ನಾಟಕ ಸರ್ಕಾರದ ಪ್ರಶ್ನಿತ ಕಾಯ್ದೆಯನ್ನು ಎತ್ತಿ ಹಿಡಿದು ರಾಜ್ಯ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮೀಸಲಾತಿಯ ಪ್ರಕಾರ ನೀಡಲಾಗುವ ಕ್ಷಿಪ್ರಗತಿಯ ಬಡ್ತಿಯಲ್ಲಿ ಅಭ್ಯರ್ಥಿಗಳು 45ನೇ ವಯಸ್ಸಿಗೆ 3ನೇ ಹಂತವನ್ನು ಮತ್ತು ಎರಡು ಅಥವಾ- ಮೂರು ವರ್ಷಗಳ ನಂತರ ನಾಲ್ಕು, ಐದು ಹಾಗೂ ಆರನೇ ಹಂತ ತಲುಪುತ್ತಾರೆ. ಸಾಮಾನ್ಯ ವರ್ಗದ ಮೂಲಕ ಬಡ್ತಿ ಹೊಂದಿದವರು 56ನೇ ವಯಸ್ಸಿಗೆ 3ನೇ ಹಂತ ತಲುಪುತ್ತಾರೆ. 4ನೇ ಹಂತ ತಲುಪುವ ಮುನ್ನವೇ ಸೇವೆಯಿಂದ ನಿವೃತ್ತರಾಗುತ್ತಾರೆ. ಇದು ತಾರತಮ್ಯಕ್ಕೆ ಎಡೆಮಾಡುತ್ತದೆ. ಮೀಸಲು ಅಭ್ಯರ್ಥಿಗಳ ಪ್ರಾತಿನಿಧ್ಯ ಶೇ 36ರಿಂದ ಶೇ 100ರ ತನಕ ಏರುತ್ತದೆ ಎಂದು ಅರ್ಜಿದಾರರು ಮೇಲ್ಮನವಿಯಲ್ಲಿ ವಿವರಿಸಿದ್ದರು.

ನೂತನ ಕಾಯ್ದೆ: ಬಡ್ತಿ ಮೀಸಲಾತಿ ಕಾಯ್ದ ರದ್ದಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ನೂತನ ಕಾಯ್ದೆ ರೂಪಿಸಿದ್ದ ರಾಜ್ಯ ಸರ್ಕಾರ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಿತ್ತು.

ಬೆಳಗಾವಿಯ ಸುವರ್ಣಸೌಧದಲ್ಲಿ ಕಳೆದ 2018ರ ಜುಲೈನಲ್ಲಿ ನಡೆದಿದ್ದ ಮುಂಗಾರು ಅಧಿವೇಶನದ ಸಂದರ್ಭ ನೂತನ ಕಾಯ್ದೆಗೆ ಅನುಮೋದನೆ ಪಡೆಯಲಾಗಿತ್ತು. ನಂತರ ರಾಷ್ಟ್ರಪತಿಯವರು ಕಾಯ್ದೆಗೆ ಅಂಕಿತ ಹಾಕಿದ್ದರು.

ಆದರೆ, 2017ರ ಫೆಬ್ರುವರಿ 9ರ ತೀರ್ಪನ್ನು ಜಾರಿಗೊಳಿಸದೆ ನ್ಯಾಯಾಂಗ ನಿಂದನೆ ಎಸಗಲಾಗಿದೆ ಎಂದು ದೂರಿ ಮೇಲ್ಮನವಿ ಸಲ್ಲಿಕೆಯಾಗಿದ್ದರಿಂದ ಹಾಗೂ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿದ್ದ ಪ್ರಕರಣದ ವಿಚಾರಣೆ ನಡೆದಿದ್ದರಿಂದ ಸರ್ಕಾರ ನೂತನ ಕಾಯ್ದೆ ಜಾರಿ ಮಾಡಿರಲಿಲ್ಲ.

ವಿಚಾರಣೆ ಸುದೀರ್ಘ ಅವಧಿಗೆ ಮುಂದುವರಿದಿದ್ದರಿಂದ 2019ರ ಫೆಬ್ರುವರಿ 25ರಂದು ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದ್ದ ಸರ್ಕಾರ, ಫೆಬ್ರುವರಿ 27ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಮುಂಬಡ್ತಿಗೆ ಆದೇಶ ಹೊರಡಿಸಿತ್ತು.

ಈ ಆದೇಶವನ್ನೂ ಪ್ರಶ್ನಿಸಿದ್ದರಿಂದ ಕಳೆದ ಮಾರ್ಚ್‌ 1ರಂದು ಸುಪ್ರೀಂ ಕೋರ್ಟ್‌, ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು.

ಅರ್ಜಿದಾರರ ಪರ ಹಿರಿಯ ವಕೀಲರಾದ ರಾಜೀವ್‌ ಧವನ್‌, ಕುಮಾರ್‌ ಪರಿಮಳ್‌, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ಇಂದಿರಾ ಜೈಸಿಂಗ್‌, ದಿನೇಶ್‌ ದ್ವಿವೇದಿ, ನಿದೇಶ್‌ ಗುಪ್ತಾ, ರಾಜ್ಯ ಸರ್ಕಾರದ ಪರ ಬಸವಪ್ರಭು ಪಾಟೀಲ, ಮುಕುಲ್‌ ರೋಹಟಗಿ ವಾದ ಮಂಡಿಸಿದ್ದರು.

ಇದನ್ನೂ ಓದಿ: ಬಡ್ತಿ ಮೀಸಲಿಗೆ ‘ಸುಪ್ರೀಂ’ ಅಸ್ತು: ಪರಿಶಿಷ್ಟ ಜಾತಿ ಪಂಗಡಗಳ ನೌಕರರು ನಿರಾಳ

ಬಡ್ತಿಯಲ್ಲಿ ಮೀಸಲಾತಿ ನೀತಿ ಅನುಸರಿಸುವಾಗ ಹಿಂದುಳಿದಿರುವಿಕೆ, ಪ್ರಾತಿನಿಧ್ಯದ ಕೊರತೆ ಹಾಗೂ ದಕ್ಷತೆಯ ಮಾಹಿತಿ ಪರಿಗಣಿಸುವಂತೆ ಕೋರ್ಟ್‌ ತೀರ್ಪು ಸೂಚಿಸಿದೆ.

ಆದರೆ, ಈ ಬಗ್ಗೆ ಸ್ಪಷ್ಟತೆಯೇ ಇಲ್ಲ ಎಂದೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ವಕೀಲರಾದ ಇಂದಿರಾ ಜೈಸಿಂಗ್‌ ವಿಚಾರಣೆ ವೇಳೆ ಪ್ರತಿಪಾದಿಸಿದ್ದರು.

ಆದೇಶ ಪಾಲನೆಗೆ ಸರ್ಕಾರ ಮೌಖಿಕ ಸೂಚನೆ
ಬೆಂಗಳೂರು: ‘ಕರ್ನಾಟಕ ಮೀಸಲಾತಿ ಅಧಿನಿಯಮ–2018’ ಅನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿರುವುದರಿಂದ ಹಿಂಬಡ್ತಿ ಹೊಂದಿರುವ ಎಸ್‌ಸಿ/ಎಸ್‌ಟಿ ನೌಕರರಿಗೆ ಈ ಹಿಂದಿನ ಹುದ್ದೆಗಳಿಗೇ ಮರಳಿ ನೇಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಗೆ ರಾಜ್ಯ ಸರ್ಕಾರ ಮೌಖಿಕ ಸೂಚನೆ ನೀಡಿದೆ.

ತೀರ್ಪಿನ ಪ್ರತಿ ನಮಗೆ ಸಿಕ್ಕಿದೆ. ಕಾನೂನು ಇಲಾಖೆ ಅದರ ಪರಿಶೀಲನೆ ನಡೆಸುತ್ತಿದೆ. ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಎಸ್‌ಸಿ ಮತ್ತು ಎಸ್‌ಟಿ ನೌಕರರ ಬಡ್ತಿಯನ್ನು ರಕ್ಷಿಸಲು ಮೌಖಿಕವಾಗಿ ಸೂಚನೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ಈ ವರ್ಗಕ್ಕೆ ಸೇರಿದ 40 ಸಾವಿರ ನೌಕರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸುಪ್ರೀಂಕೋರ್ಟ್‌ನ ಈ ಹಿಂದಿನ ಆದೇಶ ಜಾರಿ ಮಾಡಿದ್ದರಿಂದ ಬಹಳಷ್ಟು ನೌಕರರು ಹಿಂಬಡ್ತಿ ಪಡೆದಿದ್ದರು. ಇನ್ನೂ ಕೆಲವರು ಬಡ್ತಿಯಿಂದ ವಂಚಿತರಾಗಿದ್ದರು. ಇದಕ್ಕೆ ಮುಖ್ಯ ಕಾರಣ ಪ್ರಾತಿನಿಧ್ಯ, ಹಿಂದುಳಿದಿರುವಿಕೆ ಮತ್ತು ಒಟ್ಟಾರೆ ದಕ್ಷತೆಯನ್ನು ನಿರ್ಧರಿಸುವ ದತ್ತಾಂಶವನ್ನು ನ್ಯಾಯಾಲಯಕ್ಕೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿತ್ತು.

ಸುಪ್ರೀಂಕೋರ್ಟ್‌ನ ಹಿಂದಿನ ಆದೇಶವನ್ನು ಜಾರಿ ಮಾಡಿದ್ದರಿಂದ 2017ರಿಂದ ಈಚೆಗೆ ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಸುಮಾರು 3,700 ನೌಕರರು ಹಿಂಬಡ್ತಿ ಪಡೆದಿದ್ದರು. 5,000 ನೌಕರರ ಬಡ್ತಿಯನ್ನು ತಡೆ ಹಿಡಿಯಲಾಗಿತ್ತು. 

ಈ ಬೆಳವಣಿಗೆಯ ಬಗ್ಗೆ ಅದೇ ಸಮುದಾಯಕ್ಕೆ ಸೇರಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಎಸ್‌ಸಿ/ಎಸ್‌ಟಿ ನೌಕರರಿಗೆ ನ್ಯಾಯ ಸಿಗದೇ ಇದ್ದರೆ ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಒಡ್ಡಿದ್ದರು. ಸಚಿವ ಸಂಪುಟ ಸಭೆಯಲ್ಲೂ ಈ ಕುರಿತು ವಾಗ್ವಾದ ನಡೆದಿತ್ತು. ಸಚಿವರ ಒತ್ತಡದಿಂದ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.

 ಎಸ್‌ಸಿ/ಎಸ್‌ಟಿ ನೌಕರರಿಗೆ ರಕ್ಷಣೆ ಒದಗಿಸುವ ಉದ್ದೇಶದ ಕರ್ನಾಟಕ ಮೀಸಲಾತಿ ಅಧಿನಿಯಮ–2018ಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಧಾನಮಂಡಲದಲ್ಲಿ ಒಪ್ಪಿಗೆ ಸಿಕ್ಕಿತ್ತು.

ಸುಪ್ರೀಂಕೋರ್ಟ್‌ನಲ್ಲಿ ಪುನರ್‌ ಪರಿಶೀಲನಾ ಅರ್ಜಿ ಇದ್ದ ಕಾರಣ ಅಧಿಸೂಚನೆ ಜಾರಿಗೆ ತರಲು ಸರ್ಕಾರ ಹಿಂದೇಟು ಹಾಕಿತ್ತು.

ಮರು ಪರಿಶೀಲನಾ ಅರ್ಜಿಗೆ ಅವಕಾಶ
ನವದೆಹಲಿ: ಶುಕ್ರವಾರ ಹೊರಬಿದ್ದಿರುವ ತೀರ್ಪಿನ ಮರು ಪರಿಶೀಲನೆ ಕೋರಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. 2017ರ ತೀರ್ಪಿನ ಮೂಲಕ ಕಾಯ್ದೆ ರದ್ದುಪಡಿಸಿದ್ದ ಪೀಠದಲ್ಲಿ ನ್ಯಾಯಮೂರ್ತಿ ಯು.ಯು ಲಲಿತ್ ಇದ್ದರು. ಈಗ ತೀರ್ಪು ನೀಡಿರುವ ಪೀಠದಲ್ಲೂ ಅವರೇ ಮುಖ್ಯಸ್ಥರಾಗಿದ್ದಾರೆ. ಅವರೊಂದಿಗೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಇದ್ದಾರೆ. ತೀರ್ಪಿನ ಮರು ಪರಿಶೀಲನಾ ಅರ್ಜಿಯು ಸಲ್ಲಿಕೆಯಾದಲ್ಲಿ ಇದೇ ಪೀಠ ವಿಚಾರಣೆ ನಡೆಸಲಿದೆ.

**

ಸುಪ್ರೀಂಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇನೆ. ನಮ್ಮ ಸರ್ಕಾರ ಸಾಂವಿಧಾನಿಕ ಚೌಕಟ್ಟಿನಲ್ಲಿ ಸರ್ಕಾರಿ ನೌಕರರ ಹಿತರಕ್ಷಣೆಗೆ ಬದ್ಧವಾಗಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

**

ಇದು ಐತಿಹಾಸಿಕ ತೀರ್ಪು. ಲಕ್ಷಾಂತರ ಎಸ್‌ಸಿ/ಎಸ್‌ಟಿ ನೌಕರರಿಗೆ ಇದರಿಂದ ಪ್ರಯೋಜನ ಆಗುತ್ತದೆ. ನಮ್ಮ ತಂಡ ಈ ನಿಟ್ಟಿನಲ್ಲಿ ಮಾಡಿರುವ ಕೆಲಸಕ್ಕೆ ನ್ಯಾಯಾಲಯದ ಮನ್ನಣೆ ನೀಡಿದೆ.
-ಸಿ.ಎಸ್‌.ರತ್ನಪ್ರಭಾ, ನಿವೃತ್ತ ಮುಖ್ಯ ಕಾರ್ಯದರ್ಶಿ

**

ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ನಾವಿಟ್ಟ ಪ್ರಮುಖ ಹೆಜ್ಜೆಗೆ ನ್ಯಾಯಾಲಯದ ಮನ್ನಣೆ ನೀಡಿ ತೀರ್ಪು ನೀಡಿದೆ.
-ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

**

ವ್ಯತಿರಿಕ್ತ ತೀರ್ಪಿನಿಂದ ಸಾಮಾನ್ಯ ವರ್ಗದ ನೌಕರರು ಮೊದಲಿದ್ದ ಸ್ಥಿತಿಗೇ ಬಂದು ನಿಂತಿದ್ದೇವೆ. ಏಕಪಕ್ಷೀಯ ತೀರ್ಪು ನೀಡಲಾಗಿದೆ.
-ಬಿ.ಕೆ. ಪವಿತ್ರ, ಅರ್ಜಿದಾರರು 

**

ನ್ಯಾಯಾಲಯದ ತೀರ್ಪಿನಿಂದ ಶೇ 82ರಷ್ಟಿರುವ ‘ಅಹಿಂಸಾ’ ವರ್ಗಕ್ಕೆ ಅನ್ಯಾಯವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನೆ ಅರ್ಜಿ ಸಲ್ಲಿಸುತ್ತೇವೆ.
-ಎಂ.ನಾಗರಾಜ್‌, ಅಧ್ಯಕ್ಷರು, ಅಹಿಂಸಾ ಒಕ್ಕೂಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು