ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯ್‌ಬರೇಲಿ: ಸೋನಿಯಾ ನಾಮಪತ್ರ ಸಲ್ಲಿಕೆ

Last Updated 11 ಮೇ 2019, 10:03 IST
ಅಕ್ಷರ ಗಾತ್ರ

ರಾಯ್‌ಬರೇಲಿ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ಬೃಹತ್ ರೋಡ್‌ಶೋ ಮೂಲಕ ತೆರಳಿ ಅವರು ನಾಮಪತ್ರ ಸಲ್ಲಿಸಿದರು. ಪಕ್ಷದ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಸೋನಿಯಾ ಅವರಿಗೆ ಜಯಘೋಷ ಮಾಡುತ್ತಾ, ಮಾರ್ಗದುದ್ದಕ್ಕೂ ಜೊತೆಯಾದರು. ಸೋನಿಯಾ ಅವರು ಇದ್ದ ವಿಶೇಷ ವಾಹನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು.

ನೀಲಿ ಬಣ್ಣದ ಬಾವುಟಗಳೇ ಮೆರವಣಿಗೆ ಯುದ್ದಕ್ಕೂ ರಾರಾಜಿಸುತ್ತಿದ್ದವು. ಕಾಂಗ್ರೆಸ್ ಭರವಸೆ ನೀಡಿರುವ ‘ನ್ಯಾಯ್’ ಯೋಜನೆ ಕುರಿತ ಫಲಕಗಳನ್ನು ಕಾರ್ಯಕರ್ತರು ಪ್ರದರ್ಶಿಸಿದರು. ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ, ಅಳಿಯ ರಾಬರ್ಟ್ ವಾದ್ರಾ ಇದ್ದರು.

ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಪೂಜೆಯಲ್ಲಿ ಪ್ರಿಯಾಂಕಾ, ಅವರ ಮಕ್ಕಳಾದ ರೆಹಾನ್, ಮಿರಾಯಾ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಸೋನಿಯಾ ಅವರು ಸತತ ಐದನೇ ಬಾರಿಗೆ ರಾಯ್‌ಬರೇಲಿಯಿಂದ ಮರು ಆಯ್ಕೆ ಬಯಸಿದ್ದಾರೆ. ಮೇ 6ರಂದು ಇಲ್ಲಿ ಮತದಾನ ನಡೆಯಲಿದ್ದು, ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ದಿನೇಶ್ ಪ್ರತಾಪ್ ಸಿಂಗ್ ಅವರು ಸೋನಿಯಾ ಎದುರಾಳಿಯಾಗಿದ್ದಾರೆ. ಎಸ್‌ಪಿ ಹಾಗೂ ಬಿಎಸ್‌ಪಿ ಇಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

2004, 2006ರ ಉಪಚುನಾವಣೆ, 2009 ಹಾಗೂ 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸೋನಿಯಾ ಇಲ್ಲಿಂದ ಗೆದ್ದು ಬಂದಿದ್ದಾರೆ.

ಮೋದಿ ಅಜೇಯ ಅಲ್ಲ: ಸೋನಿಯಾ
ಪ್ರಧಾನಿ ನರೇಂದ್ರ ಮೋದಿ ಅವರು ಅಜೇಯರೇನಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

‘ಮೋದಿ ಅವರನ್ನು ಸೋಲಿಸಲು ಸಾಧ್ಯ, ನಾವು ಸೋಲಿಸುತ್ತೇವೆ. ವಾಜಪೇಯಿಗೆ ಸೋಲಿಲ್ಲ ಎಂಬ ರೀತಿಯ ಗ್ರಹಿಕೆಯು 2004ರಲ್ಲೂ ಇತ್ತು. ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಲಿಸಲಾಗದು ಎಂದೇ ಬಿಂಬಿಸಿದ್ದರೂ, ನಾವು ಅವರನ್ನು ಸೋಲಿಸಿದೆವು’ ಎಂದು ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ರಾಹುಲ್, ಮೋದಿ ಅವರು ಸೊಕ್ಕಿನ ನಾಯಕ ಎಂದು ಆರೋಪಿಸಿದ್ದಾರೆ. ‘ಅಹಂಕಾರ ಇರುವ ಪ್ರತಿ ನಾಯಕನೂ ತಾನು ಸೋಲುವುದಿಲ್ಲ ಎಂಬ ಭ್ರಮೆಯಲ್ಲಿರುತ್ತಾನೆ. ಆದರೆ ಅವನೂ ಸೋಲುತ್ತಾನೆ’ ಎಂದು ರಾಹುಲ್ ಹೇಳಿದ್ದಾರೆ.

‘ನನ್ನ ತಾಯಿ ಮಾದರಿ’
ಸೋನಿಯಾ ಅವರು ತಮ್ಮ ಮತಕ್ಷೇತ್ರದ ಜನರ ಮೇಲೆ ಇಟ್ಟುಕೊಂಡಿರುವ ಪ್ರೀತಿಯನ್ನು ನೋಡಿ ಎಲ್ಲ ರಾಜಕಾರಣಿಗಳೂ ಕಲಿಯಬೇಕಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

‘ರಾಯ್‌ಬರೇಲಿ ಜನರ ಬಗ್ಗೆ ನನ್ನ ತಾಯಿ ಹೊಂದಿರುವ ಅಕ್ಕರೆಯನ್ನು ಎಲ್ಲ ರಾಜಕಾರಣಿಗಳು ಕಲಿಯಬೇಕಿದೆ. ಸಾರ್ವಜನಿಕ ಸೇವೆ ಹಾಗೂ ಬದ್ಧತೆಯೇ ರಾಜಕಾರಣದ ನಿಜವಾದ ಅರ್ಥ’ ಎಂದು ಟ್ವಿಟರ್‌ನಲ್ಲಿ ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT