ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಂಚಿಯ ನಿರ್ಭಯಾ’ ಹತ್ಯೆ; ಯುವಕ ದೋಷಿ

ಸಿಬಿಐ ನ್ಯಾಯಾಲಯ ಪ್ರಕಟ: ಇಂದು ಶಿಕ್ಷೆ ಪ್ರಮಾಣ ಪ್ರಕಟ
Last Updated 20 ಡಿಸೆಂಬರ್ 2019, 19:51 IST
ಅಕ್ಷರ ಗಾತ್ರ

ನವದೆಹಲಿ: ‘ರಾಂಚಿಯ ನಿರ್ಭಯಾ’ ಎಂದೇ ಗುರುತಿಸಲಾಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ 23 ವರ್ಷದ ಯುವಕ ರಾಹುಲ್‌ ರಾಜ್‌ ತಪ್ಪಿತಸ್ಥ ಎಂದು ರಾಂಚಿಯಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಘೋಷಿಸಿದೆ.

ವಿಶೇಷ ಸಿಬಿಐ ನ್ಯಾಯಾಧೀಶ ಎ.ಕೆ. ಮಿಶ್ರಾ ಈ ತೀರ್ಪು ನೀಡಿದ್ದಾರೆ. ಅಪರಾಧಿಗೆ ಶಿಕ್ಷೆ ನೀಡುವ ಪ್ರಮಾಣವನ್ನು ನ್ಯಾಯಾಲಯ ಶನಿವಾರ ಪ್ರಕಟಿಸಲಿದೆ.

ರಾಂಚಿಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್‌ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿತ್ತು. ವಿದ್ಯಾರ್ಥಿನಿಯ ನಗ್ನ ದೇಹ 2016ರ ಡಿಸೆಂಬರ್‌ 16ರ ಬೆಳಿಗ್ಗೆ ಬೂಟಿ ಬಸ್ತಿ ಪ್ರದೇಶದಲ್ಲಿದ್ದ ಸಂತ್ರಸ್ತೆಯ ಮನೆಯಲ್ಲೇ ಪತ್ತೆಯಾಗಿತ್ತು. ಈ ಮನೆಯಲ್ಲಿ ವಿದ್ಯಾರ್ಥಿನಿ ಒಬ್ಬಳೇ ವಾಸವಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು ಎನ್ನುವುದು ಪೊಲೀಸ್‌ ತನಿಖೆಯ ಸಂದರ್ಭದಲ್ಲಿ ಗೊತ್ತಾಗಿತ್ತು.

ಈ ಪ್ರಕರಣ ರಾಂಚಿಯ ವಿದ್ಯಾರ್ಥಿ ಸಮೂಹದಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು. ಈ ಕೃತ್ಯ ಖಂಡಿಸಿ ಸ್ಥಳೀಯರು ಮತ್ತು ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣವನ್ನು ‘ರಾಂಚಿಯ ನಿರ್ಭಯಾ’ ಎಂದೇ ಕರೆಯಲಾಗಿತ್ತು. ಹತ್ಯೆ ನಡೆದ 15 ತಿಂಗಳ ಬಳಿಕ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ, ಆಗ ಕೃತ್ಯವೆಸಗಿದ ಆರೋಪಿಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

2018ರ ಮಾರ್ಚ್‌ 28ರಂದು ಪ್ರಕರಣ ದಾಖಲಿಸಿಕೊಂಡ ಸಿಬಿಐ, ಆರೋಪಿ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು. ವಿದ್ಯಾರ್ಥಿನಿ ವಾಸಿಸುತ್ತಿದ್ದ ಪ್ರದೇಶದ ಜನರನ್ನು ವಯಸ್ಸಿನ ಆಧಾರದ ಮೇಲೆ ವಿವಿಧ ಗುಂಪುಗಳನ್ನಾಗಿ ಮಾಡಲಾಗಿತ್ತು. ಕೊನೆಗೆ 10 ಮಂದಿ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತು. ಇವರಲ್ಲಿ ರಾಹುಲ್‌ ರಾಜ್ ಒಬ್ಬನಾಗಿದ್ದ. ಇದೇ ಪ್ರದೇಶದಲ್ಲಿ ವಾಸವಾಗಿದ್ದ ಈತ, ವಿದ್ಯಾರ್ಥಿನಿ ದೇಹ ಪತ್ತೆಯಾದ ನಂತರ ನಾಪತ್ತೆಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಈತ ಹತ್ತು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಸಿಬಿಐ ಪತ್ತೆ ಮಾಡಿತು. ಪಟ್ನಾದಲ್ಲಿ ಅಪ್ತಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಸಹ ನಡೆಸಿದ್ದ. ಐದು ಕೃತ್ಯಗಳಲ್ಲಿ ಭಾಗಿಯಾಗಿದ್ದ ರಾಹುಲ್‌ ರಾಜ್‌ನನ್ನು ಲಖನೌ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಬಿಐ ರಾಹುಲ್‌ನನ್ನು ತಮ್ಮ ವಶಕ್ಕೆ ಪಡೆದು, ಮೂರು ತಿಂಗಳಲ್ಲಿ ಆರೋಪಪಟ್ಟಿ ದಾಖಲಿಸಿತ್ತು. ನವೆಂಬರ್‌ 8ರಿಂದ ವಿಶೇಷ ನ್ಯಾಯಾಲಯ ಪ್ರತಿ ದಿನ ವಿಚಾರಣೆ ನಡೆಸಿ ಆರೋಪಿ ರಾಹುಲ್‌ ರಾಜ್‌ ತಪ್ಪಿತಸ್ಥ ಎಂದು ಶುಕ್ರವಾರ ತೀರ್ಪು ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT