ಗುರುವಾರ , ಏಪ್ರಿಲ್ 2, 2020
19 °C
₹ 8 ಲಕ್ಷ ಕೋಟಿ ಅನುದಾನಕ್ಕೆ ಸಂಸತ್‌ನ ವಿಪತ್ತು ನಿರ್ವಹಣೆ ಸಮಿತಿ ಶಿಫಾರಸು

ಕೊರೊನಾ ವೈರಸ್‌ ಭೀತಿ| ಕೇಂದ್ರದಿಂದ ‘ವಿಶೇಷ ಪ್ಯಾಕೇಜ್’?

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಸೋಂಕು ತಡೆಗೆ ‘ಲಾಕ್‌ಡೌನ್‌’ ಘೋಷಿಸಿದ ನಂತರ ಸಂಕಷ್ಟ ಎದುರಿಸುವ ಸಾರ್ವಜನಿಕರ ನೆರವಿಗಾಗಿ ‘ವಿಶೇಷ ಪ್ಯಾಕೇಜ್‌’ ಘೋಷಿಸುವಂತೆ ಸಂಸತ್‌ನ ವಿಪತ್ತು ನಿರ್ವಹಣೆ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಸೇವೆಯೂ ಒಳಗೊಂಡಂತೆ ಜನಜೀವನ ನಿರ್ವಹಣೆಗೆ ನೆರವಾಗುವಂತೆ ದೊಡ್ಡ ಮಟ್ಟದ ಪ್ಯಾಕೇಜ್‌ ನೀಡುವಂತೆ ಸಂಸದ ಜಯಂತ್‌ ಸಿನ್ಹಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಸಲಹೆ ನೀಡಿದ್ದು, ಸರ್ಕಾರವು ಈ ವರದಿ ಆಧರಿಸಿ ಪ್ಯಾಕೇಜ್‌ ಘೋಷಿಸುವ ಸಾಧ್ಯತೆ ಇದೆ.

ಸೋಂಕು ತಡೆ ನಿಟ್ಟಿನಲ್ಲಿ ಮನೆಗಳಿಂದ ಹೊರಬರದಂತೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದಲ್ಲಿ, ಕೃಷಿ ಕೂಲಿ, ಗೂಡಂಗಡಿ ವ್ಯಾಪಾರ, ಚಿಕ್ಕಪುಟ್ಟ ಉದ್ಯೋಗ ಅವಲಂಬಿಸಿರುವ ಬಡ ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಯನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಮಿತಿ ನೀಡಿರುವ ಪ್ರಮುಖ ಸಲಹೆಯಾಗಿದೆ.

ರಾಜ್ಯದ ಹಿರಿಯ ಸಂಸದರೊಬ್ಬರು ಸೇರಿದಂತೆ ಒಟ್ಟು 8 ಜನರ ಈ ಸಮಿತಿಯು ಕಳೆದ ಬುಧವಾರದಿಂದ ನಾಲ್ಕೈದು ಬಾರಿ ಸಭೆ ಸೇರಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರವೇ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಮೂಲಕ ಈ ಸಲಹೆಗಳನ್ನು ನೀಡಿದೆ. ಕೊರೊನಾ ತಡೆಗೆ ಸಮರೋಪಾದಿಯ ಕ್ರಮ ಕೈಗೊಳ್ಳಲು ಆಯಾ ರಾಜ್ಯಗಳಿಗೆ ಕೂಡಲೇ ಹೆಚ್ಚುವರಿ ಅನುದಾನ ಘೋಷಿಸ
ಬೇಕು. ಈ ವರ್ಷ ಬಾಕಿ ಉಳಿಸಿಕೊಳ್ಳಲಾದ ಜಿಎಸ್‌ಟಿ ನಷ್ಟ ಪರಿಹಾರ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ತಿಳಿಸಿದೆ.

130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಾದ್ಯಂತ ಕೊರೊನಾ ಹರಡಿದರೆ ನಿಯಂತ್ರಣ ಕಷ್ಟಸಾಧ್ಯ. ಹಾಗಾಗಿ, ಚೀನಾ, ಇರಾನ್‌, ಸ್ಪೇನ್‌, ಇಟಲಿ ಮಾದರಿಯಲ್ಲಿ ಜನರನ್ನು ಮನೆಯಲ್ಲೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಮನೆಯಲ್ಲೇ ಇರುವ ಜನತೆಗೆ ಅಗತ್ಯ ಸೌಲಭ್ಯ ಒದಗಿಸಲು ನೆರವಾಗುವಂತೆ ₹ 6ರಿಂದ ₹ 8 ಲಕ್ಷ ಕೋಟಿ ಹಣವನ್ನು ಮೀಸಲಿರಿಸಬೇಕು ಎಂದೂ ಸಮಿತಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು