ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆಯಲ್ಲಿ ಮತ್ತೊಬ್ಬ ‘ಪುತ್ರೋದಯ’?

ಉದಯನಿಧಿಯ ಸಕ್ರಿಯ ರಾಜಕೀಯ ಪ್ರವೇಶ ನಿಚ್ಚಳ
Last Updated 10 ಜೂನ್ 2019, 20:15 IST
ಅಕ್ಷರ ಗಾತ್ರ

ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಮತ್ತೊಂದು ಕುಡಿ ಸಕ್ರಿಯ ರಾಜಕಾರಣ ಪ್ರವೇಶಿಸುವುದು ನಿಚ್ಚಳವಾಗಿದೆ. ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರ ಪುತ್ರ ಹಾಗೂ ಚಿತ್ರನಟ ಉದಯನಿಧಿ ಅವರು ಪಕ್ಷದ ಪ್ರಭಾವಿ ಯುವಘಟಕದ ಮುಖ್ಯಸ್ಥ ಪದವಿಗೆ ಸದ್ಯದಲ್ಲೇ ಬಡ್ತಿ ಪಡೆಯುವ ಸಾಧ್ಯತೆಯಿದೆ.

ಹಲವು ಚಿತ್ರಗಳಲ್ಲಿ ನಟಿಸಿರುವ ಉದಯನಿಧಿ, ಸ್ವತಃ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದು, ಚಿತ್ರ ವಿತರಣೆಯನ್ನೂ ಮಾಡಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ತಾರಾ ಪ್ರಚಾರಕರಾಗಿ ರಾಜ್ಯದ ಮೂಲೆ ಮೂಲೆಯನ್ನು ಸುತ್ತಿ ಡಿಎಂಕೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. 2018ರ ಆರಂಭದಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದಿದ್ದ ಅವರು ಹಲವು ಬಾರಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಕ್ಷದಲ್ಲಿ ಯಾವ ಪದವಿ ಇಲ್ಲದಿದ್ದರೂ, ಕನಿಮೊಳಿ ಸೇರಿದಂತೆ ಎಲ್ಲ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು.

ಸ್ಟಾಲಿನ್ ಅವರು ದಶಕಗಳ ಕಾಲ ಮುಖ್ಯಸ್ಥರಾಗಿದ್ದ ಪಕ್ಷದ ಯುವ ಘಟಕದ ಅಧ್ಯಕ್ಷ ಹುದ್ದೆಗೆ ಉದಯನಿಧಿ ಅವರ ನೇಮಕಾತಿಯು ತಿಂಗಳೊಳಗೆ ಮುಗಿಯಲಿದೆ ಎಂದು ಮೂಲಗಳು ತಿಳಿಸಿವೆ. 2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಹುರಿದುಂಬಿಸಿ ಸಜ್ಜುಗೊಳಿಸಲು ಉದಯನಿಧಿ ಅವರನ್ನೇ ಯುವಘಟಕದ ಮುಂದಾಳುವಾಗಿ ನೇಮಿಸಿ ಎಂದು 40ಕ್ಕೂ ಹೆಚ್ಚು ಜಿಲ್ಲೆಗಳ ಕಾರ್ಯದರ್ಶಿಗಳು ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ‘ತಾರಾ ಪ್ರಚಾರಕರಾಗಿ ಹೊರಹೊಮ್ಮಿದ ಉದಯನಿಧಿ ಅವರಿಗೆ ಪಕ್ಷದಲ್ಲಿ ಈಗಾಗಲೇ ಹುದ್ದೆ ನೀಡಬೇಕಿತ್ತು. ಅವರು ಪಾಲ್ಗೊಂಡ ಸಮಾರಂಭಗಳಲ್ಲಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಸದೃಢಗೊಳಿಸಬೇಕಾದರೆ ಉದಯನಿಧಿ ಅವರನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು’ ಎಂದು ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT