ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥದ್ದೇ ಕಷ್ಟವಿರಲಿ... ಸಾವಿನ ನಿರ್ಧಾರವೇಕೆ? ಒಂದು ಕ್ಷಣ ಇದನ್ನು ಓದಿ

Last Updated 3 ಅಕ್ಟೋಬರ್ 2019, 7:03 IST
ಅಕ್ಷರ ಗಾತ್ರ

ಪತಿಯ ದಿಢೀರ್‌ ಸಾವಿನಿಂದ ನೊಂದ ಆ ಮಹಿಳೆ ತನ್ನ ಮಕ್ಕಳು, ಪ್ರೀತಿಯ ನಾಯಿಯ ಸಹಿತ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕಳೆದ ವಾರ ಮಂಗಳೂರಿನಲ್ಲಿ ನಡೆದು ಹೋಗಿದೆ.

ಈ ಘಟನೆಯಲ್ಲಿ ಎಲ್ಲರ ಗಮನ ಸೆಳೆದ್ದು ಸಾಕು ನಾಯಿ. ನೀರಿಗೆ ಬಿದ್ದಿದ್ದ ಒಡತಿಯನ್ನು ಪಾರು ಮಾಡಲು ಆ ಸಾಕು ನಾಯಿ ನದಿಯ ಸೆಳೆತದ ನಡುವೆಯೂ ಹೋರಾಡಿದೆ. ಆದರೆ, ಆಕೆ ಬದುಕುಳಿದಿಲ್ಲ. ಮನುಷ್ಯನಲ್ಲಿ ಮಾತ್ರ ಕಾಣುವ ಆತ್ಮಹತ್ಯೆ ಎಂಬ ವಿಕೃತ ಆಲೋಚನೆ ಪ್ರಾಣಿಗಳಲ್ಲಿದ ಕಾರಣಕ್ಕೋ ಏನೋ ಆ ಶ್ವಾನ ಬದುಕುಳಿದಿದೆ.

ಎಂಥದ್ದೇ ಕಷ್ಟ ಕಾರ್ಪಣ್ಯಗಳ ನಡುವೆಯೂ ಜಗತ್ತಿನ ಸಕಲ ಜೀವಿಗಳೂ ಉಳಿವಿಗಾಗಿಯೇ ಹೋರಾಟ ಮಾಡುತ್ತವೆಯಾದರೂ, ಸಾವಿಗಾಗಿ ಯೋಚಿಸುವುದಿಲ್ಲ. ಆದರೆ, ಯೋಚನಾ ಶಕ್ತಿ ಯೊಂದಿರುವ, ಲೌಕಿಕ ಜಗತ್ತಿನ ಜಂಜಡಗಳನ್ನು ಮನಸ್ಸು, ಬುದ್ಧಿಯ ಆಳಕ್ಕೆ ಇಳಿಸಿಕೊಂಡಿರುವ ಮಾನುಷ್ಯ ಮಾತ್ರ ಈ ವಿಚಿತ್ರ ಆಲೋಚನೆಗಳಿಗೆ ತುತ್ತಾಗುತ್ತಿದ್ದಾನೆ, ಮುಂದುವರಿದು ಬಲವಂತದ ಸಾವು ತಂದುಕೊಳ್ಳುತ್ತಿದ್ದಾನೆ.

ಆತ್ಮಹತ್ಯೆ ನಿರ್ಧಾರಗಳು ಲೌಕಿನ ಜಗತ್ತಿನ ಹಲವು ಸಂಗತಿಗಳಿಂದ ಪ್ರೇರಣೆ ಪಡೆದುಕೊಂಡಿರುತ್ತವೆ. ಅವಮಾನ, ಕೌಟುಂಬಿಕ ಕಲಹಗಳು, ಪ್ರೇಮ ವೈಫಲ್ಯಗಳು, ಆರೋಗ್ಯ ಸಮಸ್ಯೆ... ಇವೇ ಆ ಸಮಸ್ಯೆಗಳು. ಸ್ವಲ್ಪ ಪ್ರಬುದ್ಧವಾಗಿ ಯೋಜಿಸಿದರೆ, ಈ ಎಲ್ಲ ಸಮಸ್ಯೆಗಳಿಗೂ ಪರಿಹಾರಗಳಿರುತ್ತವೆ. ಆದರೆ, ಆತ್ಮಹತ್ಯೆಯತ್ತ ಯೋಚನೆ ಮಾಡುವ ಮನಸ್ಸುಗಳು ಪರಿಹಾರದ ಕಡೆಗೆ ಗಮನವನ್ನೇ ಕೊಡುವುದಿಲ್ಲ. ಆದ್ದರಿಂದಲೇ, ಸಮಸ್ಯೆ ಸಿಲುಕಿದ ವ್ಯಕ್ತಿಯ ವರ್ತನೆಯಲ್ಲಾದ ಬದಲಾವಣೆಗಳನ್ನು ಗಮನಿಸಿ ಸೂಕ್ತ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಆಪ್ತ ಸಮಾಲೋಚನೆ ನೀಡಬೇಕು ಎನ್ನುತ್ತಾರೆ ತಜ್ಞರು.

ಆತ್ಮಹತ್ಯೆ ಬಗ್ಗೆ ಯೋಚನೆ ಮಾಡುವವರನ್ನು ಅದರಿಂದ ಹೊರಗೆ ತರಬೇಕ್ಕೆಂದೇಹಲವು ಸಹಾಯವಾಣಿಗಳು ಕೆಲಸ ಮಾಡುತ್ತಿವೆ. ಸ್ಪಂದನ -8025497777ಗೆ ಕರೆ ಮಾಡಿ ಆಪ್ತ ಸಮಾಲೋಚನೆ ಪಡೆದುಕೊಳ್ಳಬಹುದು. ಇದರ ಜತೆಗೆ ಆರೋಗ್ಯ ಇಲಾಖೆಯ104 ಗೆ ಸಂಪರ್ಕಿಸಬಹುದು.

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಆತ್ಮಹತ್ಯೆ ತಡೆ ಜಾಗೃತಿಗಾಗಿ ಪ್ರತ್ಯೇಕ ವೆಬ್‌ಸೈಟ್‌ಅನ್ನೇ ನಿಭಾಯಿಸುತ್ತಿದೆ. ‘ಗೇಟ್‌ಕೀಪರ್‌’ ಎಂಬ ಪರಿಕಲ್ಪನೆ ಮೂಲಕ ತರಬೇತಿ ಪಡೆದ ಆಪ್ತ ಸಮಾಲೋಚಕರನ್ನು ತಯಾರಿಸುತ್ತಿದೆ ನಿಮ್ಹಾನ್ಸ್‌. ಈ ‘ಗೇಟ್‌ಕೀಪರ್‌’ಗಳು ಇವರು ಖಿನ್ನತೆಗೆ ಒಳಗಾದವರನ್ನು, ಆತ್ಮಹತ್ಯೆ ಕಡೆಗೆ ಯೋಚಿಸುವವರು ಕಂಡು ಬಂದರೆ ಅವರಿಗೆ ಆಪ್ತ ಸಮಾಲೋಚನೆ ನೀಡುತ್ತಾರೆ.

ಆತ್ಮಹತ್ಯೆ ಭಾವನೆ ಯಾಕೆ ಬರುತ್ತದೆ?

ತಾನು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದ ಕೂಡಲೇ ಆ ಕ್ಷಣಕ್ಕೆ ಪರಿಹಾರ ಕಂಡುಕೊಳ್ಳಲು ಹಾತೊರೆಯುವ ಮನಸ್ಸು, ಕೂಡಲೇ ಆತ್ಮಹತ್ಯೆ ಕಡೆಗೆ ಯೋಚನೆ ಮಾಡುತ್ತದೆ. ಆತ್ಮಹತ್ಯೆಯೇ ಪರಿಹಾರ ಎಂಬ ಭ್ರಮಾ ಲೋಕದಲ್ಲಿ ಮನಸ್ಸು ವಿಹರಿಸಲಾರಂಭಿಸುತ್ತದೆ. ಅಂತಿಮವಾಗಿ ಸಾವು ತಂದುಕೊಳ್ಳಲು ಯಾವುದಾದರೂ ಒಂದು ಮಾರ್ಗವನ್ನು ಮನುಷ್ಯ ಕಂಡುಕೊಳ್ಳುತ್ತಾನೆ ಎನ್ನುತ್ತಾರೆ ತಜ್ಞರು.

ವರ್ತನೆಗಳ ಬಗ್ಗೆ ಕಣ್ಣಿಟ್ಟಿರಬೇಕು

ಆತ್ಮಹತ್ಯೆಗೆ ಮನಸ್ಸು ಮಾಡಿದವರು ಸಾಮಾನ್ಯವಾಗಿ ಕುಟುಂಬಸ್ಥರು, ಸ್ನೇಹಿತರಿಂದ ದೂರಾಗುತ್ತಿರುತ್ತಾರೆ. ಆದರೆ, ತಾವು ಸಹಜವಾಗಿದ್ದೇವೆ ಎಂದು ಹೇಳುವ ಮೂಲಕ ಎಲ್ಲರ ಕಣ್ಣಿನಿಂದ ತಪ್ಪಿಸಿಕೊಂಡು ಏಕಾಂತ ಹರಸುತ್ತಿರುತ್ತಾರೆ. ಏಕಾಂತ ಸಿಕ್ಕಾಗ ಅನಾಹುತಕ್ಕೆ ಕೈ ಹಾಕುತ್ತಾರೆ. ಜನರೊಂದಿಗೆ ಒಗಟು ಒಗಟಾಗಿ ಮಾತನಾಡುತ್ತಾರೆ. ಇಂಥ ವರ್ತನೆಯುಳ್ಳ ವ್ಯಕ್ತಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ (ಆಪ್ತಸಮಾಲೋಚನೆ) ನೀಡಬೇಕು. ಏಕಾಂತದಲ್ಲಿರಲು ಬಿಡಬಾರದು. ಮೂಲ ಸಮಸ್ಯೆ ಏನೆಂದು ತಿಳಿದು ಅದಕ್ಕೆ ಪರಿಹಾರ ಕೊಡಿಸಿದ್ದೇ ಆದರೆ ವ್ಯಕ್ತಿ ಸಾವಿನ ಯೋಚನೆಯಿಂದ ಹೊರಗೆ ಬರುತ್ತಾನೆ ಎನ್ನುತ್ತಾರೆ ಆಪ್ತ ಸಮಾಲೋಚಕ ಎಸ್‌. ಗುರುನಾಥ್‌

ಸಾವಿನ ಯೋಚನೆ ಬೇಡ: ಹೀಗೆ ಮಾಡಿ
– ಕಷ್ಟಗಳು ಎಲ್ಲರಿಗೂ ಬರುವಂಥವೇ. ಈ ದಿನ ಕಳೆದರೆ ನಾಳೆ ಎಲ್ಲವೂ ಸರಿಹೋಗುತ್ತದೆ ಎಂದು ಭಾವಿಸಿಕೊಳ್ಳಿ.
– ನೀವು ಜೀವನದಲ್ಲಿ ಸಾಧಿಸಬೇಕು ಎಂದು ಅಂದುಕೊಂಡಿರುವುದನ್ನುಒಮ್ಮೆ ನೆನಪಿಸಿಕೊಳ್ಳಿ.
– ಕಷ್ಟವಾಗಬಹುದು... ಆದರೂ ಮನಸ್ಸನ್ನು ನೀವೇ ಸಾಂತ್ವನಗೊಳಿಸಲು ಪ್ರಯತ್ನಿಸಿ.
– ಕುಟುಂಬಸ್ಥರೊಂದಿಗೆ ಮಾತನಾಡಲು ಕಷ್ಟವಾದರೆ, ಸ್ನೇಹಿತರೊಂದಿಗೆ ಒಮ್ಮೆ ಮನಸ್ಸು ಬಿಚ್ಚಿ ಮಾತನಾಡಿ.
– ಆತ್ಮಹತ್ಯೆಗೆ ನೀವು ಕೊಡುವ ಎಲ್ಲಾ ಕಾರಣಗಳು ಕೇವಲ ನೆಪ. ಬದುಕಲು ಕಾರಣಗಳಿವೆ ಎಂದು ಒಮ್ಮೆ ಯೋಚಿಸಿ

ಆತ್ಮಹತ್ಯೆ ಕುರಿತ ವರದಿ ಮಾಡುವಾಗ ಮಾಧ್ಯಮಗಳು ಅನುಸರಿಸಬೇಕಾದ್ದು

ಆತ್ಮಹತ್ಯೆ ಪ್ರಕರಣಗಳ ವರದಿ ಮಾಡುವಾಗ ಮಾಧ್ಯಮಗಳೂ ಹೊಣೆಗಾರಿಕೆ ಅರಿಯಬೇಕು. ಪ್ರಕರಣಗಳ ವರದಿ ಹೇಗಿರಬೇಕು ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳನ್ನು ರೂಪಿಸಿವೆ. ವರದಿಗಾರರು ಅದನ್ನೊಮ್ಮೆ ಓದಿಕೊಳ್ಳುವುದು ಅಗತ್ಯ. ಪ್ರಕರಣವನ್ನು ವೈಭವೀಕರಿಸಬಾರದು. ಆತ್ಮಹತ್ಯೆ ವಿಧಾನಗಳನ್ನು ಉಲ್ಲೇಖಿಸಬಾರದು. ಅದರ ಕುರಿತು ಪದೇ ಪದೆ ವರದಿಗಳನ್ನು ಬಿತ್ತರಿಸಬಾರದು. ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಬಗ್ಗೆ ವಿಸ್ತೃತ ಮಾಹಿತಿ ನೀಡಬಾರದು. ವರದಿಗಳ ಶೀರ್ಷಿಕೆಗಳು ಪ್ರಚೋದನಕಾರಿಯಾಗಿರಬಾರದು. ವರದಿಗೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಬಳಸಬಾರದು. ಪ್ರಖ್ಯಾತರ ಆತ್ಮಹತ್ಯೆಗಳನ್ನು ವರದಿ ಮಾಡುವಾಗ ಮತ್ತಷ್ಟು ಎಚ್ಚರಿಕೆಯ ನಡೆ ಅನುಸರಿಸಬೇಕು. ಆತ್ಮಹತ್ಯೆ ತಡೆಯುವ, ಸಹಾಯವಾಣಿಯ ಮಾಹಿತಿಗಳನ್ನು ಉಲ್ಲೇಖಿಸಿದರೆ ಉತ್ತಮ.

ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬೇಕೆಂಬ ಪ್ರಶ್ನೆಗೆ ಗೂಗಲ್‌ ಕೂಡ ಸಹಕರಿಸುವುದಿಲ್ಲ!

ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬೇಕೆಂದು ನೀವೇನಾದರೂ ಗೂಗಲ್‌ನಲ್ಲಿ ಜಾಲಾಡಿದರೆ ಅದು ನಿಮಗೆ ಸಹಕರಿಸುವುದಿಲ್ಲ! ಹಾಗೆ ಸರ್ಚ್‌ ಮಾಡಿದರೆAASRA ಎಂಬ ಹೆಲ್ಪ್‌ಲೈನ್‌ ನಂಬರ್‌022 2754 6669 ಅದು ನಿಮಗೆ ತೋರಿಸುತ್ತದೆ.

ರಾಷ್ಟ್ರಮಟ್ಟದ ಸಹಾಯವಾಣಿಗಳಿವು

Roshni (+914066202000), COOJ (+918322252525), Sneha Foundation India (+914424640050), Vandrevala Foundation (18602662345), Connecting (+9199220011220 ಎಂಬ ಸರ್ಕಾರೇತರ ಸಂಸ್ಥೆಗಳು ಆತ್ಮಹತ್ಯೆ ತಡೆಗಾಗಿ ಪರಿಣಾಮಕಾರಿಯಾಗಿ ಆಪ್ತ ಸಮಾಲೋಚನೆ ನಡೆಸುತ್ತಾ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT