ಶುಕ್ರವಾರ, ಜನವರಿ 24, 2020
28 °C
ಮೆರವಣಿಗೆ, ರಾಷ್ಟ್ರಪತಿಗೆ ಪತ್ರ ಬರೆಯುವ ಮೂಲಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಚಿಂತನೆ

ವಿದ್ಯಾರ್ಥಿಗಳಿಗೆ ಬೆಂಬಲ: ವಿವಿಧ ರಾಜಕೀಯ ಪಕ್ಷಗಳ ಚಿಂತನೆ, ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಲು ರಾಜಕೀಯ ಪಕ್ಷಗಳು ಹಲವು ಯೋಜನೆಗಳನ್ನು ಸಿದ್ಧಪಡಿಸುತ್ತಿವೆ. ಹಳೆ ವಿದ್ಯಾರ್ಥಿಗಳಿಂದ ಪ್ರತಿಭಟನಾ ಮೆರವಣಿಗೆ, ಜೆಎನ್‌ಯು ಹಳೆವಿದ್ಯಾರ್ಥಿಗಳೂ ಆಗಿರುವ ಸಂಸದರಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪತ್ರ, ಹಳೆವಿದ್ಯಾರ್ಥಿಗಳ ನಿಯೋಗದಿಂದ ರಾಷ್ಟ್ರಪತಿ ಭೇಟಿ... ಇವು ಕೆಲವು ಯೋಜನೆಗಳು.

ವಿದ್ಯಾರ್ಥಿಗಳನ್ನು ಬೆಂಬಲಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿರೋಧಪಕ್ಷಗಳು ಈಗಾಗಲೇ ಚರ್ಚೆ ಆರಂಭಿಸಿವೆ. ವಿದ್ಯಾರ್ಥಿ ಹೋರಾಟದ ನಾಯಕತ್ವ ವಹಿಸಿಕೊಳ್ಳುವುದರ ಬದಲು, ಅವರಿಗೆ ಹೊರಗಿನಿಂದ ಬೆಂಬಲ ನೀಡಿ, ಆ ಮೂಲಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಯೋಜನೆ ರೂಪಿಸುತ್ತಿವೆ.

ಈ ನಡುವೆ, ಭಾನುವಾರ ರಾತ್ರಿ ನಡೆದ ಘಟನೆಯ ಬಗ್ಗೆ ರಾಜಕೀಯ ಪಕ್ಷಗಳ ಮಧ್ಯೆ ಆರೋಪ ಪ್ರತ್ಯಾರೋಪಗಳು ಸಹ ಆರಂಭವಾಗಿವೆ.

ಗುರಿಯಾಗಿಸಿ ಹಲ್ಲೆ: ‘ಕ್ಯಾಂಪಸ್‌ ಒಳಗೆ ನುಗ್ಗಿದ್ದ ಗೂಂಡಾಗಳು ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸಿದ್ದಲ್ಲದೆ ನನ್ನನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದರು’ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಆಯಿಷಿ ಘೋಷ್‌ ಆರೋಪಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಸೋಮವಾರ ಮನೆಗೆ ಕಳುಹಿಸಲಾಗಿದೆ.

‘ಅದು ವ್ಯವಸ್ಥಿತ ದಾಳಿ. ಆಯ್ದ ವ್ಯಕ್ತಿಗಳ ಮೇಲೆಯೇ ದಾಳಿ ನಡೆದಿದೆ. ಹಿಂಸಾಚಾರ ನಡೆಯುತ್ತಿದ್ದರೂ ಭದ್ರತಾ ಸಿಬ್ಬಂದಿ ಸುಮ್ಮನಿದ್ದರು. ಆದ್ದರಿಂದ ಸಂಚಿನಲ್ಲಿ ಅವರೂ ಶಾಮೀಲಾಗಿದ್ದರು
ಎಂಬುದು ಸ್ಪಷ್ಟ. ಪ್ರತಿಭಟನೆಯನ್ನು ಹತ್ತಿಕ್ಕಲು ಆರ್‌ಎಸ್‌ಎಸ್‌ ಹಿನ್ನೆಲೆಯ ಕೆಲವು ಉಪನ್ಯಾಸಕರು ಹಿಂಸೆಗೆ ಪ್ರಚೋದನೆ ನೀಡುತ್ತಲೇ ಇದ್ದರು’ ಎಂದು ಆಯಿಷಿ ಆರೋಪಿಸಿದ್ದಾರೆ.

ಶಾಂತಿ ಕದಡುವ ಯತ್ನ: ಜಾವಡೇಕರ್‌

‘ಕಾಂಗ್ರೆಸ್‌, ಎಎಪಿ ಹಾಗೂ ಎಡಪಕ್ಷಗಳು ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿವೆ’ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಆರೋಪಿಸಿದರು.

‘ವಿರೋಧಪಕ್ಷಗಳ ಕೆಲವರು ದೇಶದಲ್ಲಿ ವಿಶೇಷವಾಗಿ ವಿಶ್ವವಿದ್ಯಾಲಯಗಳಲ್ಲಿ ಹಿಂಸಾಚಾರ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಘಟನೆ ನಡೆದಾಗ ಕೆಲವು ರಾಜಕಾರಣಿಗಳು ಸ್ಥಳದಲ್ಲಿದ್ದರು ಎಂಬುದು ಸಂಚಿನ ಹಿಂದೆ ಇವರ ಕೈವಾಡವಿದೆ ಎಂಬುದನ್ನು ಪುಷ್ಟೀಕರಿಸುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕಾಗಿದೆ’ ಎಂದು ಜಾವಡೇಕರ್‌ ಟ್ವೀಟ್‌ ಮಾಡಿದ್ದಾರೆ.

‘ಘಟನೆ ನಡೆದು ಹತ್ತು ನಿಮಿಷಗಳಲ್ಲಿ ಯೋಗೇಂದ್ರ ಯಾದವ್‌ ಹಾಗೂ ಇತರರು ಸ್ಥಳಕ್ಕೆ ತಲುಪಿದ್ದಾರೆ. ಇದು ಹೇಗೆ ಸಾಧ್ಯ’ ಎಂದು ಜಾವಡೇಕರ್‌ ಪ್ರಶ್ನಿಸಿದ್ದಾರೆ.

ವಿ.ವಿ.ಗಳಲ್ಲಿ ಪ್ರತಿಭಟನೆ

ಜೆಎನ್‌ಯು ಘಟನೆಯನ್ನು ಖಂಡಿಸಿ ದೇಶದ ವಿವಿಧ ವಿಶ್ವವಿದ್ಯಾಲಯಗಳು ಮಾತ್ರವಲ್ಲದೆ ಬ್ರಿಟನ್‌ನ ಆಕ್ಸ್‌ಫರ್ಡ್‌ ಹಾಗೂ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲೂ ಪ್ರತಿಭಟನೆಗಳು ನಡೆದಿವೆ.

ಪುದುಚೇರಿ, ಬೆಂಗಳೂರು, ಹೈದರಾಬಾದ್‌, ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ, ಮುಂಬೈ ವಿಶ್ವವಿದ್ಯಾಲಯ, ಬನಾರಸ್‌ ಹಿಂದು ಯುನಿವರ್ಸಿಟಿ ಸೇರಿದಂತೆ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ವಿದ್ಯಾರ್ಥಿಗಳು ಶಾಂತಿಯುತ ಮೆರವಣಿಗೆ ನಡೆಸುವ ಮೂಲಕ ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ.

ಮುಂಬೈಯಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ ಗೇಟ್‌ವೇ ಆಫ್‌ ಇಂಡಿಯಾದ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆಗೆ ಎನ್‌ಸಿಪಿ ನಾಯಕರು ಬೆಂಬಲ ನೀಡಿದ್ದಾರೆ.

ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ವಿಚಾರಸಂಕಿರಣವೊಂದರಲ್ಲಿ ಹರಿಯಾಣದ ಸ್ಪೀಕರ್‌ ಜ್ಞಾನ್‌ಚಂದ್‌ ಗುಪ್ತಾ ಅವರ ಭಾಷಣಕ್ಕೆ ಕೆಲವು ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುವ ಮೂಲಕ ಅಡ್ಡಿಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು