ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಮೀಸಲಿನಿಂದ ಪ್ರತಿಕೂಲ ಪರಿಣಾಮ: ಸುಪ್ರೀಂ ಕೋರ್ಟ್‌

Last Updated 30 ಜುಲೈ 2019, 17:53 IST
ಅಕ್ಷರ ಗಾತ್ರ

ನವದೆಹಲಿ: ಶೋಷಣೆಗೆ ಒಳಗಾದ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವುದು ಮೀಸಲಾತಿಯ ಉದ್ದೇಶ. ಆದರೆ, ಮೀಸಲಾತಿ ಪ್ರಮಾಣ ಅತಿಯಾದರೆ ಅದು ಸಮಾನತೆ ಪರಿಕಲ್ಪನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲು ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಬೇಕೇ ಎಂಬುದನ್ನು ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಪರಿಶೀಲಿಸಿತು. ಈ ಸಂದರ್ಭದಲ್ಲಿ ಪೀಠವು ಅತಿ ಮೀಸಲಾತಿಯ ಪರಿಣಾಮಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತು.

ಈ ಹಿಂದೆ, ಸಂವಿಧಾನ ಪೀಠವು ನೀಡಿರುವ ತೀರ್ಪುಗಳ ಆಧಾರದಲ್ಲಿ ಮೀಸಲಾತಿ ವಿಚಾರವನ್ನು ತೀರ್ಮಾನಿಸಬಹುದು ಎಂದು ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜರನಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು.

ಸಂವಿಧಾನ ಪೀಠಕ್ಕೆ ಒಪ್ಪಿಸಬೇಕೇ ಮತ್ತು ಮಧ್ಯಂತರ ಆದೇಶ ನೀಡಬೇಕೇ ಎಂಬ ಎರಡು ವಿಚಾರಗಳನ್ನು ಪರಿಶೀಲಿಸಬೇಕಿದೆ ಎಂದು ಅರ್ಜಿದಾರರಲ್ಲಿ ಒಬ್ಬರ ಪರ ವಕೀಲ ರಾಜೀವ್‌ ಧವನ್‌ ಪ್ರತಿಪಾದಿಸಿದರು. ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುವ ಅಗತ್ಯ ಇದೆ. ಹಾಗಿರುವಾಗ, ಪ್ರಕರಣವನ್ನು ಸಂವಿಧಾನ ಪೀಠಕ್ಕೆ ಒಪ್ಪಿಸುವುದಾದರೆ ಮಧ್ಯಂತರ ಆದೇಶವನ್ನೂ ನೀಡಬೇಕು ಎಂದರು.

ಒಟ್ಟು ಮೀಸಲಾತಿ ಪ್ರಮಾಣವು ಶೇ 50ರಷ್ಟನ್ನು ಮೀರಬಾರದು ಎಂಬ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ‘ಯೂಥ್‌ ಫಾರ್ ಇಕ್ವಾಲಿಟಿ’ ಪರ ವಕೀಲ ಗೋಪಾಲ ಶಂಕರನಾರಾಯಣನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT