ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ತೀರ್ಪಿನತ್ತ ಎಲ್ಲರ ಚಿತ್ತ

ನಿವೇಶನ ವಿವಾದದ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌
Last Updated 16 ಅಕ್ಟೋಬರ್ 2019, 19:55 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಬುಧವಾರ ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿದೆ.40 ದಿನಗಳ ವಿಚಾರಣೆ ಮುಕ್ತಾಯಗೊಂಡಿದೆ.

ಯಾವೆಲ್ಲ ವಿಚಾರಗಳನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ತಮ್ಮ ಬೇಡಿಕೆ ಏನು ಎಂಬ ಬಗ್ಗೆ ಲಿಖಿತ ಟಿಪ್ಪಣಿ ಸಲ್ಲಿಸಲು ಕಕ್ಷಿದಾರರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಮೂರು ದಿನಗಳ ಅವಕಾಶ ನೀಡಿದೆ.ನ್ಯಾಯಮೂರ್ತಿಗಳಾದ ಎಸ್‌.ಎ.ಬೊಬ್ಡೆ, ಡಿ.ವೈ. ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌. ಅಬ್ದುಲ್‌ ನಜೀರ್ ಅವರು ಪೀಠದಲ್ಲಿರುವ ಇತರ ನ್ಯಾಯಮೂರ್ತಿಗಳು. ಮುಖ್ಯ ನ್ಯಾಯಮೂರ್ತಿ ಗೊಗೊಯಿ ಅವರು ನ.17ರಂದು ನಿವೃತ್ತಿಯಾಗಲಿದ್ದು, ಅಷ್ಟರೊಳಗೆ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ.

ನಿವೇಶನ ವಿವಾದದ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ತೀರ್ಪು ನೀಡಿತ್ತು. ವಿವಾದಿತ 2.77 ಎಕರೆ ಪ್ರದೇಶವನ್ನು ಕಕ್ಷಿದಾರರಾದ ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ವಿರಾಜಮಾನ್‌ಗೆ ಸಮಾನವಾಗಿ ಹಂಚಿಕೆ ಮಾಡಿತ್ತು. ಅದನ್ನು ಪ್ರಶ್ನಿಸಿ 14 ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು.

ಹಿಂದೂ ಕಕ್ಷಿದಾರರ ವಾದ

ನಿವೇಶನ ತಮ್ಮದು ಎಂದು ಹೇಳಲು ಮುಸ್ಲಿಮರ ಬಳಿಯಲ್ಲಿ ಯಾವುದೇ ದಾಖಲೆ ಇಲ್ಲ. ನಮಾಜ್‌ಗಾಗಿ ಆ ಕಟ್ಟಡವನ್ನು ಬಳಸಲಾಗುತ್ತಿತ್ತು ಎಂಬುದಕ್ಕೂ ಯಾವುದೇ ಪುರಾವೆ ಇಲ್ಲ. ಈಸ್ಟ್‌ ಇಂಡಿಯಾ ಕಂಪನಿಯ 1828ರ ಗಜೆಟಿಯರ್‌ನಲ್ಲಿಯೂ ಪ್ರಾರ್ಥನೆಯ ಯಾವುದೇ ಉಲ್ಲೇಖ ಇಲ್ಲ ಎಂದು ಹಿಂದೂಗಳಪರ ವಕೀಲ ಪಿ.ಎನ್‌. ಮಿಶ್ರಾ ಹೇಳಿದರು.

ನಿರ್ಮೋಹಿ ಅಖಾಡಕ್ಕೆ ಪ್ರಾರ್ಥನೆ ಮತ್ತು ದೇಗುಲ ನಿರ್ವಹಣೆಯ ಹಕ್ಕು ಇದೆ ಎಂದು ವಕೀಲ ಸುಶೀಲ್ ಕುಮಾರ್‌ ಜೈನ್‌ ಹೇಳಿದರು.

1857ರಿಂದ 1934ರವರೆಗೆ ಮುಸ್ಲಿಮರು ಪ್ರಾರ್ಥನೆ ನಡೆಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಆದರೆ, ಅದಾದ ಬಳಿಕ ಅವರು ಅಲ್ಲಿ ಪ್ರಾರ್ಥಿಸುತ್ತಿದ್ದರು ಎಂಬುದಕ್ಕೆ ಯಾವ ಸಾಕ್ಷ್ಯವೂ ಇಲ್ಲ. ಹಿಂದೂಗಳು ಮಾತ್ರ ಅಲ್ಲಿ ಪೂಜೆ ಮುಂದುವರಿಸಿದ್ದಾರೆ ಎಂದು ರಾಮಲಲ್ಲಾ ವಿರಾಜಮಾನ್‌ಪರ ವಕೀಲ ಸಿ.ಎಸ್‌. ವೈದ್ಯನಾಥನ್‌ ವಾದಿಸಿದರು.

ಮುಸ್ಲಿಂ ಕಕ್ಷಿದಾರರ ವಾದ

1992ರ ಡಿಸೆಂಬರ್‌ 6ರಂದು ಧ್ವಂಸವಾದ ಮಸೀದಿಯನ್ನು ಪುನರ್‌ ನಿರ್ಮಿಸುವ ಮತ್ತು ಅಲ್ಲಿ ಪ‍್ರಾರ್ಥನೆ ಸಲ್ಲಿಸುವ ಹಕ್ಕು ಮುಸ್ಲಿಮರಿಗೆ ಇದೆ ಎಂದು ಮುಸ್ಲಿಂ ಕಕ್ಷಿದಾರರ ವಕೀಲ ರಾಜೀವ್‌ ಧವನ್‌ ಹೇಳಿದರು. ಈ ನಿವೇಶನವು ಮುಸ್ಲಿಮರಿಗೆ ಸೇರಿದ್ದು ಎಂದರು. ನಮ್ಮ ಮನವಿ ಇರುವುದು ನಿವೇಶನಕ್ಕೆ ಸಂಬಂಧಿಸಿ ಮಾತ್ರ ಅಲ್ಲ. ಇತರ ಹಲವು ಅಂಶಗಳೂ ಇವೆ. ಇದು ಸಾರ್ವಜನಿಕವಾದ ಮಸೀದಿ. ಎರಡು ಶತಮಾನಕ್ಕೂ ಹೆಚ್ಚಿನ ಅವಧಿಯಿಂದ ಈ ನಿವೇಶನವು ಮುಸ್ಲಿಮರ ಸುಪರ್ದಿಯಲ್ಲಿ ಇದೆ ಎಂದು ವಾದಿಸಿದರು.

ಕಟ್ಟೆಚ್ಚರ

lಅಯೋಧ್ಯೆ ಪಟ್ಟಣದಲ್ಲಿ ಭಾರಿ ಬಂದೋಬಸ್ತ್‌

lಪೊಲೀಸ್‌ ಅಧಿಕಾರಿಗಳ ರಜೆ ರದ್ದು

lಅಯೋಧ್ಯೆಯಲ್ಲಿ ಡ್ರೋನ್ ಹಾರಾಟಕ್ಕೆ ನಿಷೇಧ

lನಾಲ್ವರಿಗಿಂತ ಹೆಚ್ಚು ಜನ ಸೇರುವುದಕ್ಕೆ ನಿರ್ಬಂಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT