ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ರಾಜೀನಾಮೆ | ವಿಚಾರಣೆ ಮುಗಿಸಿ ನಾಳೆಗೆ ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

Last Updated 16 ಜುಲೈ 2019, 10:21 IST
ಅಕ್ಷರ ಗಾತ್ರ

ನವದೆಹಲಿ:ರಾಜೀನಾಮೆ ಅಂಗೀಕರಿಸಲು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಾಂಗ್ರೆಸ್‌–ಜೆಡಿಎಸ್‌ನ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿದ್ದು, ಬುಧವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಿದೆ.

ಬುಧವಾರ ಬೆಳಿಗ್ಗೆ 10.30ಕ್ಕೆ ತಾನು(ಪೀಠ) ತೀರ್ಪು ನೀಡುವವರೆಗೆ ಹಿಂದೆ ನೀಡಿದ್ದ ಯಥಾಸ್ಥಿತಿ ಆದೇಶವನ್ನು ಮುಂದುವರಿಸುವಂತೆ ಪೀಠ ಹೇಳಿದೆ.

ಅರ್ಜಿಯ ಸಾಂವಿಧಾನಿಕ ಅಂಶಗಳ ಕುರಿತು ನಡೆದ ಪರ–ವಿರೋಧ ವಾದ ಮಂಡನೆಯಲ್ಲಿ ಶಾಸಕರ ಪರವಾಗಿ ವಕೀಲ ಮುಕುಲ್‌ ರೋಹಟಗಿ, ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರ ಪರವಾಗಿ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪರವಾಗಿ ವಕೀಲ ರಾಜೀವ್‌ ಧವನ್‌ ವಾದ ಮಂಡನೆ ಮಾಡಿದರು.

ಪ್ರಕರಣಕುರಿತು ನ್ಯಾಯಾಲಯ ನೀಡುವ ಯಾವುದೇ ಆದೇಶವೂ ಐತಿಹಾಸಿಕವಾಗಲಿದೆ ಮತ್ತು ಕರ್ನಾಟಕದ ಮೈತ್ರಿ ಸರ್ಕಾರದ ಅಳಿವು ಉಳಿವನ್ನೂ ನಿರ್ಧರಿಸಲಿದೆ.

ರಾಜೀನಾಮೆ ಅಂಗೀಕರಿಸಲು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರು ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ರಾಜೀನಾಮೆ ಅಂಗೀಕರಿಸಲು ನಿರ್ದೇಶನ ನೀಡಬೇಕೆಂದು ಕೋರಿ ಕಾಂಗ್ರೆಸ್‌–ಜೆಡಿಎಸ್‌ನ 10 ಬಂಡಾಯ ಶಾಸಕರು ಸುಪ್ರೀಂ ಕೊರ್ಟ್‌ ಮೆಟ್ಟಿಲೇರಿದ್ದರು.

ಅಂದು ಅರ್ಜಿ ವಿಚಾರಣೆ ನಡೆಸಿದ್ದ ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠ, ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೆ ಹಾಗೂ ಅನರ್ಹಗೊಳಿಸುವ ಯಾವ ಕ್ರಮವನ್ನೂ ಸ್ಪೀಕರ್‌ ಕೈಗೊಳ್ಳದೆ ಮಂಗಳವಾರದವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಆದೇಶಿಸಿತ್ತು.

ಇದಾದ ನಂತರದ ಬೆಳವಣಿಗೆಯಲ್ಲಿ ವೈತ್ರಿ ನಾಯಕರು ಇತರ ಬಂಡಾಯ ಶಾಸಕರ ಮನವೊಲಿಕೆಯಲ್ಲಿ ತೊಡಗಿದ್ದರು. ರಾಜೀನಾಮೆ ಹಿಂಪಡೆಯುವಂತೆ ಒತ್ತಡ ಹೆಚ್ಚುತ್ತಿದ್ದಂತೆ ಇತರ ಐವರು ಶಾಸಕರು ಸುಪ್ರೀಂ ಕೊರ್ಟ್‌ ಮೆಟ್ಟಿಲೇರಿ, 10 ಶಾಸಕರ ಅರ್ಜಿಯ ಜತೆಗೆ ನಮ್ಮ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ್ದ ನ್ಯಾಯಾಲಯ, ವಿಚಾರಣೆ ನಡೆಸಲು ಸಮ್ಮತಿಸಿ ಸೂಚಿಸಿತ್ತು.

ಇಂದು ಬೆಳಿಗ್ಗೆ 11ಕ್ಕೆ ವಿಚಾರಣೆಯನ್ನು ಆರಂಭಿಸಿದ ಪೀಠ ಮಧ್ಯಾಹ್ನ 3.35ರ ವರೆಗೆ ವಿಸ್ತೃತವಾಗಿ ವಾದ–ಪ್ರತಿವಾದವನ್ನು ಆಲಿಸಿತು. ತೀರ್ಪನ್ನು ನಾಳೆಗೆ ಕಾಯ್ದಿರಿಸಿತು.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT