ಭಾನುವಾರ, ಮೇ 31, 2020
27 °C

ತೆಲಂಗಾಣದಲ್ಲಿ ಗೆದ್ದ ಏಕೈಕ ಬಿಜೆಪಿ ಅಭ್ಯರ್ಥಿ ರಾಜ ಸಿಂಗ್ ಬೆಂಕಿಯುಗುಳುವ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲಂಗಾಣ ವಿಧಾನಸಭೆಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸುವ ಏಕೈಕ ನಾಯಕ ರಾಜ ಸಿಂಗ್ ಲೋಧ್ ಬೆಂಕಿಯುಗುಳುವ ನಾಯಕ ಎಂದೇ ಹೆಸರುವಾಸಿ. ಬಿಜೆಪಿಯ ಇತರೆಲ್ಲಾ ನಾಯಕರು ಗೆಲುವಿನ ದಡ ಸೇರಲು ವಿಫಲರಾಗಿದ್ದಾರೆ. ‘ದ್ವೇಷ ಪ್ರೇರಿಸುವ ಭಾಷಣ’ ಮಾಡಿದ ಆರೋಪದ ಮೇಲೆ ಲೋಧ್ ವಿರುದ್ಧ 60 ಪ್ರಕರಣಗಳು ದಾಖಲಾಗಿವೆ.

ಲೋಧ್ ಪರವಾಗಿ ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ಮಾಡಿದ್ದರು. ಬಿಜೆಪಿಯ ತೆಲಂಗಾಣ ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ್ ಮತ್ತು ವಿಸರ್ಜಿತ ವಿಧಾನಸಭೆಯಲ್ಲಿ ಬಿಜೆಪಿ ಶಾಸಕಾಂಗ ನಾಯಕ ಕಿಶನ್‌ರೆಡ್ಡಿ ಕ್ರಮವಾಗಿ ಮುಶೀರಾಬಾದ್ ಮತ್ತು ಅಂಬರ್‌ಪೇಟ್ ಕ್ಷೇತ್ರಗಳಲ್ಲಿ ಸೋತಿದ್ದಾರೆ.

ತೆಲಂಗಾಣದ ಒಟ್ಟು 119 ವಿಧಾನಸಭಾ ಕ್ಷೇತ್ರಗಳ ಪೈಕಿ 118 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು. ಮೈತ್ರಿ ಪಕ್ಷ ಯುವ ತೆಲಂಗಾಣ ಪಾರ್ಟಿಗೆ ಒಂದು ಕ್ಷೇತ್ರ ಬಿಟ್ಟುಕೊಟ್ಟಿತ್ತು.

‘ಬದಲಾವಣೆಗೆ ಮತ ಕೊಡಿ, ಟಿಆರ್‌ಎಸ್ ಮತ್ತು ಕಾಂಗ್ರೆಸ್‌ಗೆ ನಾವು ಪರ್ಯಾಯ’ ಎಂದು ಬಿಜೆಪಿ ಅಬ್ಬರದ ಪ್ರಚಾರ ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಬಹುತೇಕ ಪ್ರಮುಖ ನಾಯಕರು ರಾಜ್ಯದಲ್ಲಿ ಪ್ರಚಾರ ಸಭೆಗಳನ್ನು ನಡೆಸಿದ್ದರು.

2014ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಐದು ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

‘ಜನರ ತೀರ್ಪಿಗೆ ನಾವು ತಲೆಬಾಗುತ್ತೇವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಎಲ್ಲ ರೀತಿ ಸಹಕರಿಸಲಿದೆ’ ಎಂದು ಲಕ್ಷ್ಮಣ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿರುದ್ಯೋಗ, ಕುಟುಂಬದ ಆಡಳಿತ ಮತ್ತು ನಿರಂಕುಶ ಆಡಳಿತದಂಥ ವಿಚಾರಗಳು ಚುನಾವಣೆ ಪ್ರಚಾರದ ವೇಳೆ ಹೆಚ್ಚು ಪ್ರಸ್ತಾಪವಾಗಲಿಲ್ಲ. ಇದಕ್ಕೆ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು ಅವರ ಪ್ರಚಾರ ವೈಖರಿಯೇ ಕಾರಣ. ನಾಯ್ಡು ಅವರ ಪ್ರಚಾರವು ಜನರ ಭಾವನೆಗಳನ್ನು ಬಡಿದೆಬ್ಬಿಸಿತು ಎಂದು ಲಕ್ಷ್ಮಣ್ ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು