ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದ ಅವಂತಿಪೋರಾದಲ್ಲಿ ಉಗ್ರರ ದಾಳಿ: ಹುತಾತ್ಮ ಯೋಧರ ಸಂಖ್ಯೆ 49ಕ್ಕೆ ಏರಿಕೆ

ಸಿಆರ್‌ಪಿಎಫ್‌ ಬಸ್‌ಗೆ ಸ್ಫೋಟಕಗಳಿದ್ದ ಸ್ಕಾರ್ಪಿಯೊ ಡಿಕ್ಕಿ
Last Updated 15 ಫೆಬ್ರುವರಿ 2019, 14:28 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರು ಬಹುದಿನಗಳ ಬಳಿಕ ಅತ್ಯಂತ ಘೋರ ಕೃತ್ಯ ಎಸಗಿದ್ದಾರೆ.ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿ ನಡೆಸಿದ ದಾಳಿಯಲ್ಲಿಹುತಾತ್ಮರಾದ ಯೋಧರ ಸಂಖ್ಯೆ ಶುಕ್ರವಾರ 49ಕ್ಕೆ ಏರಿದೆ.

ಬಸ್‌ನಲ್ಲಿ ಇದ್ದ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಫೋಟಗೊಂಡ ಬಸ್‌ನಲ್ಲಿ44 ಸಿಬ್ಬಂದಿ ಇದ್ದರು ಎನ್ನಲಾಗಿದೆ. ಆದರೆ ಎಷ್ಟು ಜನರಿದ್ದರು ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಲ್ಲ. ಸ್ಫೋಟದ ಸಂದರ್ಭದಲ್ಲಿ ಹೆದ್ದಾರಿಯ ವಿವಿಧೆಡೆ ಬೇರೆ ಬೇರೆ ಬಸ್‌ಗಳಲ್ಲಿ ಸಿಆರ್‌ಪಿಎಫ್‌ನ 2,547 ಸಿಬ್ಬಂದಿ ಸಂಚರಿಸುತ್ತಿದ್ದರು. ಇವರಲ್ಲಿ ಹಲವು ಮಂದಿ ರಜೆ ಕಳೆದು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರ–ಜಮ್ಮು ಹೆದ್ದಾರಿಯ ಅವಂತಿಪೋರಾ ಎಂಬಲ್ಲಿ ಗುರುವಾರ ಅಪರಾಹ್ನ 3.15ರ ಹೊತ್ತಿಗೆ ಈ ದಾಳಿ ನಡೆದಿದೆ.

ಸ್ಫೋಟಕಗಳಿದ್ದ ಎಸ್‌ಯುವಿ ಬಸ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಭಾರಿ ಸ್ಫೋಟ ಉಂಟಾಗಿದೆ. ಜೈಷ್‌–ಎ–ಮೊಹಮ್ಮದ್‌ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.ಜೈಷ್‌ನ ವಕ್ತಾರ ಸ್ಥಳೀಯ ಸುದ್ದಿ ಸಂಸ್ಥೆ ಜಿಎನ್‌ಎಸ್‌ಗೆ ಹೇಳಿಕೆಯೊಂದನ್ನು ನೀಡಿದ್ದಾನೆ. ಸ್ಫೋಟದಲ್ಲಿ ಸಿಆರ್‌ಪಿಎಫ್‌ನ ಹತ್ತಾರು ವಾಹನಗಳು ಭಸ್ಮವಾಗಿವೆ ಎಂದು ಹೇಳಿಕೊಂಡಿದ್ದಾನೆ.

ಗಾಯಗೊಂಡವರನ್ನು ಶ್ರೀನಗರದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಗೊಂಡ ಬಸ್‌ ಸಂಪೂರ್ಣ ಛಿದ್ರವಾಗಿದ್ದು ಕಬ್ಬಿಣದ ಗುಡ್ಡೆಯಂತೆ ಕಾಣಿಸುತ್ತಿದೆ. ಘಟನೆ ನಡೆದ ಸ್ಥಳದ ಸುತ್ತಲೂ ಮನುಷ್ಯ ದೇಹದ ಭಾಗಗಳು ಚೆದುರಿ ಹೋಗಿವೆ.

ಕಾರು ಡಿಕ್ಕಿ ಹೊಡೆಸಿದ ಉಗ್ರನನ್ನು ಪುಲ್ವಾಮಾ ಸಮೀಪದ ಕಾಕಾಪೋರಾದ ಅದಿಲ್ ಅಹ್ಮದ್‌ ಎಂದು ಗುರುತಿಸಲಾಗಿದೆ. ಈತ 2018ರಲ್ಲಿ ಜೈಷ್‌ ಸಂಘಟನೆ ಸೇರಿದ್ದ.

ಸ್ಫೋಟದ ಬಳಿಕ ಆ ಪ್ರದೇಶದಲ್ಲೆಲ್ಲ ದಟ್ಟ ಹೊಗೆ ಆವರಿಸಿತ್ತು. ಜನರು ಆ ಸ್ಥಳದಿಂದ ದೂರ ಓಡುತ್ತಿದ್ದ ದೃಶ್ಯಗಳು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಭದ್ರತಾ ಪಡೆಗಳು ಶೋಧ ನಡೆಸುತ್ತಿವೆ.

2–3 ದಿನಗಳಿಂದ ಪ್ರತಿಕೂಲ ಹವಾಮಾನದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯ ಯೋಧರು ಗುರುವಾರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರು. ಸ್ಫೋಟಕ್ಕೆ ತುತ್ತಾದ ಬಸ್‌ ಸಿಆರ್‌ಪಿಎಫ್‌ನ 76ನೇ ಬೆಟಾಲಿಯನ್‌ಗೆ ಸೇರಿದ್ದಾಗಿದೆ. ಹೆದ್ದಾರಿಯಲ್ಲಿ ಈ ಸಂದರ್ಭದಲ್ಲಿ ಸಿಆರ್‌ಪಿಎಫ್‌ನ ಒಟ್ಟು 78 ವಾಹನಗಳು ಸಂಚರಿಸುತ್ತಿದ್ದವು.

ಅತಿ ಘೋರ ಕೃತ್ಯ

ಇತ್ತೀಚಿನ ದಶಕಗಳಲ್ಲಿನ ಅತ್ಯಂತ ಭೀಕರವಾದ ದಾಳಿ ಇದು. 2001ರ ಅಕ್ಟೋಬರ್ 1ರಂದು ಮೂವರು ಉಗ್ರರು ಸ್ಫೋಟಕ ತುಂಬಿದ್ದಟಾಟಾ ಸುಮೊವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸಂಕೀರ್ಣದ ಗೇಟ್‌ಗೆ ಡಿಕ್ಕಿ ಹೊಡೆಸಿದ್ದರು. ಈ ಸ್ಫೋಟದಲ್ಲಿ 38 ಮಂದಿ ಜೀವ ಕಳೆದುಕೊಂಡಿದ್ದರು.

2016ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ನಾಲ್ವರು ಉಗ್ರರು ನುಸುಳಿ ದಾಳಿ ನಡೆಸಿದ್ದರು. ಇದರಲ್ಲಿ 18 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ, ಗಡಿ ದಾಟಿ ಹೋಗಿದ್ದ ಭಾರತದ ಯೋಧರು ನಿರ್ದಿಷ್ಟ ದಾಳಿ ನಡೆಸಿ ಉಗ್ರರ ಹಲವು ಶಿಬಿರಗಳನ್ನು ನಾಶ ಮಾಡಿದ್ದಾರೆ. ಗುರುವಾರದ ದಾಳಿಯು ಈ ಎಲ್ಲದಕ್ಕಿಂತ ಭೀಕರವಾಗಿದೆ.

***

ಇದು ಹೇಡಿತನದ ತುಚ್ಛ ಕೃತ್ಯ. ನಮ್ಮ ದಿಟ್ಟ ಭದ್ರತಾ ಸಿಬ್ಬಂದಿಯ ತ್ಯಾಗ ವ್ಯರ್ಥವಾಗಿ ಹೋಗಲು ಬಿಡುವುದಿಲ್ಲ.

–ನರೇಂದ್ರ ಮೋದಿ, ಪ್ರಧಾನಿ

***

100 ಕೆ.ಜಿ ಸ್ಫೋಟಕ

*ಸ್ಕಾರ್ಪಿಯೊದಲ್ಲಿ 100 ಕೆ.ಜಿ.ಗೂ ಹೆಚ್ಚು ಸ್ಫೋಟಕ ಇದ್ದಿರಬಹುದು ಎಂದು ಅಂದಾಜು.

* ಶ್ರೀನಗರ ಸೇರಿ ಕಾಶ್ಮೀರದಾದ್ಯಂತ ಕಟ್ಟೆಚ್ಚರ

* ಭದ್ರತಾ ಸಂಸ್ಥೆಗಳ ನೆಲೆಗಳ ಮೇಲೆ ನಿಗಾಕ್ಕೆ ಸೂಚನೆ

* ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಂದ ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ

* ಶುಕ್ರವಾರ ಬೆಳಿಗ್ಗೆ ಶ್ರೀನಗರ ತಲುಪಲಿರುವ ಎನ್‌ಐಎ ತಂಡ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT