ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಮಸೀದಿಗಳ ಹೊರಗೆ ಕಾಣಿಸಿಕೊಂಡಿರುವ ಪೋಸ್ಟರ್‌ಗಳು l ಭಯ ಪಡಿಸುವ ಯತ್ನ– ಪೊಲೀಸ್‌

ಕಾಶ್ಮೀರ ಸ್ತಬ್ಧಗೊಳಿಸಲು ಉಗ್ರರ ಪ್ರಯತ್ನ

Published:
Updated:
Prajavani

ಶ್ರೀನಗರ: ರಾಜ್ಯದಲ್ಲಿ ಸಂಪೂರ್ಣ ಬಂದ್‌ ಆಚರಿಸುವಂತೆ ನಾಗರಿಕರನ್ನು ಒತ್ತಾಯಿಸುವಂಥ ಪೋಸ್ಟರ್‌
ಗಳು ನಗರದ ಕೆಲವು ಮಸೀದಿಗಳ ಹೊರಗೆ ಕಾಣಿಸಿಕೊಂಡಿವೆ. ಉಗ್ರಸಂಘಟನೆಗಳವರು ಇದನ್ನು ಅಂಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ಕಾರಿ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬಾರದು, ಅಂಗಡಿ ಮುಂಗಟ್ಟು ತೆರೆಯಬಾರದು ಎಂದು ಪೋಸ್ಟರ್‌ಗಳಲ್ಲಿ ಎಚ್ಚರಿಸಲಾಗಿದೆ. ಎಂದು ಅಂಥ ಪೋಸ್ಟರ್‌ ಕಂಡ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರು ಭಯವನ್ನು ಬಿಟ್ಟು, ಮುಕ್ತವಾಗಿ ಓಡಾಡಲು ಆರಂಭಿಸಿದ್ದಾರೆ. ಇದನ್ನು ಇಷ್ಟಪಡದ ಉಗ್ರರು ಜನರಲ್ಲಿ ಭಯವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ’ ಎಂದು ‍ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದರು.

‘ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ ಜಿಲ್ಲೆಗಳ ಕೆಲವು ಉಗ್ರರು ತಮ್ಮ ಸಂಘಟನೆಯ ಜಾಲದ ಸಹಾಯದಿಂದ ಶ್ರೀನಗರವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ನಗರದ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂಘಟನೆಯವರೇ ಗುರುವಾರ ಸಂಜೆ ನಗರದ ಹೊರವಲಯದಲ್ಲಿ ವ್ಯಾಪಾರಿಯೊಬ್ಬರನ್ನು ಗುಂಡಿಟ್ಟು ಕೊಂದಿದ್ದರು’ ಎಂದು ಅವರು ತಿಳಿಸಿದರು.

ಶ್ರೀನಗರದಲ್ಲಿ ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಕೆಲವು ವ್ಯಾಪಾರಿಗಳು ಅಂಗಡಿಗಳನ್ನು ತೆರೆದು ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ನೆರವಾಗುತ್ತಿದ್ದರು. ಆದರೆ ಗುರುವಾರ ಸಂಜೆ ನಡೆದ ವ್ಯಾಪಾರಿಯ ಹತ್ಯೆಯ ನಂತರ ಇತರ ವ್ಯಾಪಾರಿಗಳೂ ಅಂಗಡಿ ಬಾಗಿಲು ತೆರೆಯಲು ಭಯಪಡುವಂತಾಗಿದೆ.

ನಿಧನದ ಮಾಹಿತಿಯೂ ಪತ್ರಿಕೆಯ ಮೂಲಕ: ಕಾಶ್ಮೀರದ ಕೆಲವು ಭಾಗಗಳಲ್ಲಿ ಈಗಲೂ ಸಂವಹನ ಮಾಧ್ಯಮಗಳ ಮೇಲೆ ನಿರ್ಬಂಧ ಇರುವುದರಿಂದ ಆಪ್ತರು, ಸಂಬಂಧಿಕರ ಬಗ್ಗೆ ಮಾಹಿತಿ ತಿಳಿಯಲು ಜನರು ಪರದಾಡುವಂತಾಗಿದೆ. ಆತ್ಮೀಯರು ಸತ್ತರೆ ಆ ವಿಚಾರವನ್ನು ತಿಳಿಯಲು ಪತ್ರಿಕೆಗಳ ನಿಧನ ವಾರ್ತೆ ಅಂಕಣವನ್ನು ಅವಲಂಬಿಸುವ ಅನಿವಾರ್ಯತೆ ಇದೆ.

‘ನನ್ನ ಸೋದರ ಸಂಬಂಧಿಯ ಕುಟುಂಬದವರು ಹಳೆಯ ಶ್ರೀನಗರದಲ್ಲಿ ನೆಲೆಸಿದ್ದಾರೆ. ನಿರ್ಬಂಧ ಜಾರಿ ನಂತರ ನಾವು ಅವರನ್ನು ಭೇಟಿಮಾಡಿಲ್ಲ. ಕಳೆದ ಕೆಲವು ತಿಂಗಳಿಂದ ಸಂಬಂಧಿಕರೊಬ್ಬರು ಆರೋಗ್ಯ ಸರಿ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದರು. ಅವರು ನಿಧನ ಹೊಂದಿದ ವಿಚಾರ ಮೂರು ದಿನಗಳ ನಂತರ ತಿಳಿಯಿತು. ಆ ನಂತರ ನಾವು ಅವರ ಮನೆಗೆ ಧಾವಿಸಿದೆವು. ಅವರ ಅಂತ್ಯಕ್ರಿಯೆಯಲ್ಲಿ ಸಂಬಂಧಿಕರು ಯಾರೂ ಇರಲಿಲ್ಲ. ನೆರೆಕರೆಯವರೆಲ್ಲ ಸೇರಿಕೊಂಡು ಆ ಕಾರ್ಯ ಮುಗಿಸಿದರು’ ಎಂದು ಆದಿಲ್‌ ಅಹ್ಮದ್‌ ಎಂಬುವರು ಹೇಳಿದರು.

575 ಮಂದಿ ಸೇನೆಗೆ ಸೇರ್ಪಡೆ

ಒಂದು ವರ್ಷ ಅವಧಿಯ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ ಜಮ್ಮು ಕಾಶ್ಮೀರದ 575 ಯುವಕರು ಅಧಿಕೃತವಾಗಿ ಶನಿವಾರ ಭಾರತೀಯ ಸೇನೆಯನ್ನು ಸೇರಿದರು.ಇವರು ನಡೆಸಿದ ನಿರ್ಗಮನ ಪಥಸಂಚಲನಕ್ಕೆ ಅವರ ಕುಟುಂಬದವರು, ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಾಕ್ಷಿಯಾದರು. ‘ನನಗೆ ತುಂಬ ಖುಷಿಯಾಗಿದೆ. ನಮ್ಮ ಪಾಲಕರು ಹೆಮ್ಮೆಪಡುತ್ತಿದ್ದಾರೆ. ನನ್ನ ತಂದೆಯೂ ಸೇನೆಯಲ್ಲಿದ್ದರು. ಅವರ ಸಮವಸ್ತ್ರವೇ ನನ್ನನ್ನು ಸೇನೆಗೆ ಸೇರಲು ಪ್ರೇರೇಪಿಸಿದೆ’ ಎಂದು ಸೇನೆಗೆ ಸೇರ್ಪಡೆಯಾದ ಶ್ರೀನಗರದ ಯುವಕ ವಸೀಮ್‌ ಮೀರ್‌ ಹೇಳಿದರು.

ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಶಾ

ಸಿಲ್ವಾಸ: ಕಾಶ್ಮೀರ ವಿಚಾರದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ನಿಲುವನ್ನು ಟೀಕೆಗೆ ಒಳಪಡಿಸಿರುವ ಗೃಹಸಚಿವ ಅಮಿತ್‌ ಶಾ, ‘ಪಾಕಿಸ್ತಾನವು ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ರಾಹುಲ್‌ ಅವರು ಕಾಶ್ಮೀರ ವಿಚಾರವಾಗಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಇಂಥ ಹೇಳಿಕೆ ನೀಡಿರುವ ರಾಹುಲ್‌ ಬಗ್ಗೆ ಕಾಂಗ್ರೆಸ್‌ಗೆ ನಾಚಿಕೆ ಆಗಬೇಕು’ ಎಂದರು.

‘ರಾಹುಲ್‌ ಅವರು ನೀಡುವ ಹೇಳಿಕೆಗಳು ಭಾರತವಿರೋಧಿ ಚಟುವಟಿಕೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ರಾಷ್ಟ್ರದ ಹಿತಾಸಕ್ತಿಯ ವಿಚಾರ ಬಂದಾಗ ಪಕ್ಷ ರಾಜಕಾರಣದಿಂದ ಮೇಲೆದ್ದು ಪ್ರತಿಕ್ರಿಯಿಸುವುದು ಭಾರತದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ನೀವು ಅದನ್ನು ಮುರಿಯುತ್ತಿದ್ದೀರಿ. ನೀವು ಮತಬ್ಯಾಂಕ್‌ ರಾಜಕಾರಣ ಮಾಡಿದರೆ ಜನರು ಅದರ ಆಧಾರದಲ್ಲೇ ನಿಮ್ಮ ಮೌಲ್ಯಮಾಪನ ಮಾಡುತ್ತಾರೆ’ ಎಂದು ಶಾ ಹೇಳಿದರು.

ಆಂತರಿಕ ವಿಚಾರ: ಎಂಕ್ಯುಎಂ

ಲಂಡನ್‌: ‘ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಪಡಿಸಿದ್ದು ಭಾರತದ ಆಂತರಿಕ ವಿಚಾರ’ ಎಂದು ಪಾಕಿಸ್ತಾನದ ಮುತ್ತಹೀದ್‌ ಕ್ವಾಮಿ ಮೂವ್‌ಮೆಂಟ್‌ನ (ಎಂಕ್ಯುಎಂ) ಸಂಸ್ಥಾಪಕ ಅಲ್ತಾಫ್‌ ಹುಸೇನ್‌ ಹೇಳಿದ್ದಾರೆ.

ಅಲ್ತಾಫ್‌ ಅವರು 1990ರಿಂದ ಪಾಕಿಸ್ತಾನದಿಂದ ದೇಶಭ್ರಷ್ಟರಾಗಿ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಈಗ ಬ್ರಿಟನ್‌ನ ಪೌರತ್ವ ಹೊಂದಿದ್ದರೂ ಪಾಕಿಸ್ತಾನದ ದೊಡ್ಡ ರಾಜಕೀಯ ಪಕ್ಷಗಳಲ್ಲಿ ಒಂದಾದ ಎಂಕ್ಯುಎಂ ಮೇಲೆ ಈಗಲೂ ಬಲವಾದ ಹಿಡಿತ ಹೊಂದಿದ್ದಾರೆ.

ಶನಿವಾರ ಅವರು, ಅಲ್ತಾಫ್‌, ‘ ಪಾಕಿಸ್ತಾನದ ಸರ್ಕಾರಗಳು ಹಾಗೂ ಸೇನೆ 72 ವರ್ಷಗಳಿಂದ ದೇಶದ ಜನರನ್ನು ಹಾದಿ ತಪ್ಪಿಸಿದೆ. ಭಾರತಕ್ಕೆ ಪ್ರತ್ಯುತ್ತರ ನೀಡಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು  (ಪಿಒಕೆ) ಸಂಪೂರ್ಣ ಪಾಕಿಸ್ತಾನದೊಳಗೆ ಸೇರಿಸುವ ಧೈರ್ಯ ತೋರಿಸಲಿ’ ಎಂದು ಪಾಕಿಸ್ತಾನ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

Post Comments (+)