ಶನಿವಾರ, ಫೆಬ್ರವರಿ 22, 2020
19 °C
ನದಿಯಲ್ಲಿ ಮಿಂದೆದ್ದರೆ ಅಂಟುವ ಸೋಂಕು * ಗಂಗಾ ಮಾಲಿನ್ಯ ನಿಯಂತ್ರಣಕ್ಕೆ ಬೇಕಿದೆ ಇನ್ನಷ್ಟು ಒತ್ತು

Explainer | ನಿಯಂತ್ರಣಕ್ಕೆ ಬರಲಿಲ್ಲ ಗಂಗಾ ಮಾಲಿನ್ಯ: ‘ನಮಾಮಿ ಗಂಗೆ’ ಸ್ಥಿತಿಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಮಾಲಯದಿಂದ ಹರಿಯುವ ಗಂಗಾ ನದಿ ಪವಿತ್ರವಾಗಿದ್ದು, ಈ ನದಿಯಲ್ಲಿ ಸ್ನಾನ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಆದರೆ ನದಿಪಾತ್ರದಲ್ಲಿ ಮಾಲಿನ್ಯದ ಪ್ರಮಾಣ ಮಿತಿಮೀರಿದ್ದು, ನದಿಯು ಹಲವು ಬ್ಯಾಕ್ಟೀರಿಯಾಗಳ ತಾಣವಾಗಿದೆ.

ದೊಡ್ಡ ದೊಡ್ಡ ನಗರಗಳನ್ನು ಬಳಸಿ ಹರಿಯುವ ನದಿಗೆ ಆಸ್ಪತ್ರೆ, ಕೈಗಾರಿಕೆ, ಕೃಷಿ ತ್ಯಾಜ್ಯಗಳು ನಿರಂತರವಾಗಿ ಸೇರ್ಪಡೆಯಾಗಿರುವ ಪರಿಣಾಮ ರೋಗನಿರೋಧಕಗಳಿಗೆ (ಆ್ಯಂಟಿಬಯಾಟಿಕ್‌) ಪ್ರತಿರೋಧ ಬೆಳೆಸಿಕೊಂಡಿರುವ ಕೆಲವು ರೀತಿಯ ಬ್ಯಾಕ್ಟೀರಿಯಾಗಳು ನೀರಿನಲ್ಲಿ ತುಂಬಿಕೊಂಡಿವೆ.

ನಗರದ ತ್ಯಾಜ್ಯ, ಪಶುಗಳ ತ್ಯಾಜ್ಯ, ರಸಗೊಬ್ಬರ, ಕೀಟನಾಶಕ, ಲೋಹ ಗಳು, ಸುಟ್ಟ ಶವಗಳ ಬೂದಿಯು ನದಿಗೆ ಸೇರ್ಪಡೆಯಾಗಿ, ಜಗತ್ತಿನ ಮಾಲಿನ್ಯ ಕಾರಕ ನದಿಗಳಲ್ಲಿ ಗಂಗಾ ನದಿ ಕೂಡ ಒಂದೆನಿಸಿಕೊಂಡಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್’ ವರದಿ ಅಭಿಪ್ರಾಯಪಟ್ಟಿದೆ.

ನೀರಿನಲ್ಲಿ ಬ್ಯಾಕ್ಟೀರಿಯಾ ಹೆಚ್ಚಿನ ಮಟ್ಟದಲ್ಲಿದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ ಬಯೊಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಶೇಕ್ ಜಿಯಾವುದ್ದೀನ್ ಅಹಮದ್ ಹೇಳುತ್ತಾರೆ.

ಇದನ್ನೂ ಓದಿ: ಗಂಗೆ ಶುದ್ಧವಾದಾಳೇ: ಡಾ. ಮನೋಜ ಗೋಡಬೋಲೆ ಬರಹ

ಅಹಮದ್ ಅವರ ಸಂಶೋಧನಾ ವಿದ್ಯಾರ್ಥಿಗಳು ಗಂಗೋತ್ರಿಯಿಂದ ಹಿಡಿದು, ನದಿ ಸಮುದ್ರ ಸೇರುವವರೆಗೆ ಪ್ರಮುಖ ಕಡೆಗಳಿಂದ ನೀರಿನ ಮಾದರಿ ಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದಾರೆ. ಪ್ರತಿರೋಧ ಗುಣ ಬೆಳೆಸಿಕೊಂಡಿ ರುವ ಬ್ಯಾಕ್ಟೀರಿಯಾಗಳು ನದಿಯ ಕೆಳಹಂತದಲ್ಲಿ ಕಂಡುಬರುವುದು ಸಾಮಾನ್ಯ. ಅಚ್ಚರಿಯೆಂದರೆ, ನದಿ ಆರಂಭದ ನೂರು ಮೈಲಿಯಲ್ಲೇ ಅವು ಕಂಡುಬಂದಿವೆ. ಉತ್ತರಕಾಶಿ, ಹೃಷಿಕೇಶ, ಹರಿದ್ವಾರದಲ್ಲಿ ಹರಿಯುವ ನೀರಿನಲ್ಲಿ ಇವು ಆಶ್ರಯಪಡೆದಿವೆ. ಈ ಬ್ಯಾಕ್ಟೀರಿಯಾಗಳು ಚಳಿಗಾಲದಲ್ಲಿ ಕಡಿಮೆಯಿರುತ್ತವೆ. ಮೇ, ಜೂನ್‌ ತಿಂಗಳ ಯಾತ್ರಾ ಅವಧಿಯಲ್ಲಿ ಹೆಚ್ಚುತ್ತವೆ.

ಸ್ನಾನಘಟ್ಟಗಳಲ್ಲಿ ಜನರು ಮಿಂದಾಗ ಬ್ಯಾಕ್ಟೀರಿಯಾಗಳು ಜನರಿಗೆ ವರ್ಗವಾಗುತ್ತವೆ. ಹೃಷಿಕೇಶದಲ್ಲಿ ಚಳಿಗಾಲದ ಅವಧಿಯಲ್ಲಿ ಒಂದು ಲಕ್ಷ ಜನರಿದ್ದರೆ, ಯಾತ್ರೆ ಅವಧಿಯಲ್ಲಿ ಈ ಸಂಖ್ಯೆ 5 ಲಕ್ಷ ದಾಟುತ್ತದೆ. ‘ಜನರ ಸಂಪ್ರದಾಯಗಳನ್ನು ನಿಲ್ಲಿಸಿ ಎನ್ನಲು ಸಾಧ್ಯವಿಲ್ಲ. ಆದರೆ ಸರ್ಕಾರವು ಮಾಲಿನ್ಯ ತಡೆಗೆ ಹೆಚ್ಚು ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ಅಹಮದ್.

ಇದನ್ನೂ ಓದಿ: ಗಂಗೆ ಉಳಿಸಲು ಯತ್ನಿಸುತ್ತಿರುವ ಭಗೀರಥ ಸ್ವಾಮಿ ಜ್ಞಾನಸ್ವರೂಪ ಸಾನಂದ

ನಮಾಮಿ ಗಂಗೆ: ಕೆಲವು ಪೂರ್ಣ, ಹಲವು ಅಪೂರ್ಣ

‘ನಮಾಮಿ ಗಂಗೆ’ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಗಂಗಾ ನದಿ ಶುದ್ಧೀಕರಣ ಹಾಗೂ ನದಿ ವ್ಯಾಪ್ತಿಯಲ್ಲಿ ಮಾಲಿನ್ಯದ ಪ್ರಮಾಣವನ್ನು ತಗ್ಗಿಸುವುದು ಯೋಜನೆಯ ಮುಖ್ಯ ಉದ್ದೇಶ. ತ್ಯಾಜ್ಯ ನಿರ್ವಹಣೆ, ನದಿಪಾತ್ರ ಅಭಿವೃದ್ಧಿ, ಅರಣ್ಯೀಕರಣ, ಗ್ರಾಮೀಣ ನೈರ್ಮಲ್ಯ ಸೌಲಭ್ಯ, ಜೀವವೈವಿಧ್ಯ ರಕ್ಷಣೆ ಮೊದಲಾದ ಆಯಾಮಗಳನ್ನು ಯೋಜನೆ ಒಳಗೊಂಡಿದೆ. ಇದೇ ವರ್ಷಾಂತ್ಯಕ್ಕೆ ಯೋಜನೆ ಮುಗಿಯಬೇಕಿದ್ದು, ಹಲವು ಕಾಮಗಾರಿಗಳು ಬಾಕಿಯಿವೆ. ಯೋಜನೆ ಒಳಗೊಂಡಿದ್ದ ಅಂಶಗಳು ಹಾಗೂ ಈವರೆಗೆ ಸಾಧಿಸಿರುವ ಪ್ರಗತಿಯ ಮಾಹಿತಿ ಇಲ್ಲಿದೆ.

ಅನುದಾನ–ವೆಚ್ಚ
₹28,613 ಕೋಟಿ: ಯೋಜನೆಯ ಒಟ್ಟು ಮೊತ್ತ 
₹12,741.42 ಕೋಟಿ: 2014-15ರಿಂದ ಅಕ್ಟೋಬರ್ 2019 ಅವಧಿಯಲ್ಲಿ ಬಜೆಟ್ ಅನುದಾನ
₹8,463.72 ಕೋಟಿ: ಬಿಡುಗಡೆ ಮಾಡಿದ ಅನುದಾನ
₹7,493.60 ಕೋಟಿ: ಯೋಜನೆಯಡಿ ವೆಚ್ಚ ಮಾಡಲಾದ ಮೊತ್ತ

ಇದನ್ನೂ ಓದಿ: ಗಂಗೆಯ ಮೈಲಿಗೆ ತೊಳೆಯುವುದೆಂದು?

ಯೋಜನೆ ನೋಟ
305: ಅನುಮೋದನೆ ನೀಡಲಾದ ಯೋಜನೆಗಳು
109: ಈವರೆಗೆ ಪೂರ್ಣಗೊಂಡಿರುವ ಯೋಜನೆಗಳು

ನಮಾಮಿ ಗಂಗೆ ಯೋಜನೆ ವ್ಯಾಪ್ತಿಯ ರಾಜ್ಯಗಳು
ಉತ್ತರ ಪ್ರದೇಶ
ಉತ್ತರಾಖಂಡ
ಬಿಹಾರ
ಜಾರ್ಖಂಡ್
ಪಶ್ಚಿಮ ಬಂಗಾಳ

ಯೋಜನೆ ಏಳು ಒಳಗೊಂಡಿದೆ?
ತಾಜ್ಯ ನೀರು ಸಂಸ್ಕರಣಾ ಘಟಕ, ಒಳಚರಂಡಿಗಳ ನಿರ್ಮಾಣ
ನದಿಪಾತ್ರ ಅಭಿವೃದ್ಧಿ
ನದಿಯ ಮೇಲ್ಮೈ ಶುದ್ಧೀಕರಣ
ಜೀವವೈವಿಧ್ಯ ರಕ್ಷಣೆ
ಅರಣ್ಯೀಕರಣ
ಕೈಗಾರಿಕಾ ತ್ಯಾಜ್ಯ ಹೊರಹರಿಯುವಿಕೆ ಮೇಲ್ವಿಚಾರಣೆ
ಸಾರ್ವಜನಿಕ ಜಾಗೃತಿ

ಇದನ್ನೂ ಓದಿ: ವಾಚಕರವಾಣಿ | ಗಂಗೆ ಆಗುವಳೇ ಶುದ್ಧಿ?

ಅರಣ್ಯೀಕರಣ

1,34,106: ನದಿ ವ್ಯಾಪ್ತಿಯ ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯೀಕರಣ ಉದ್ದೇಶ 

12 ಸಾವಿರ ಹೆಕ್ಟೇರ್: ಐದು ರಾಜ್ಯಗಳಲ್ಲಿ ವೈಜ್ಞಾನಿಕವಾಗಿ ಅರಣ್ಯೀಕರಣ ಯೋಜನೆ ಜಾರಿ 

ಕೈಗಾರಿಕೆಗಳ ಮೇಲ್ವಿಚಾರಣೆ

1,072: ಗುರುತಿಸಲಾದ ಮಾಲಿನ್ಯಕಾರಕ ಕೈಗಾರಿಕೆಗಳ ಸಂಖ್ಯೆ (2019 ಏಪ್ರಿಲ್)

636: ಸುರಕ್ಷಿತ ತ್ಯಾಜ್ಯ ವಿಲೇವಾರಿ ಮಾರ್ಗಸೂಚಿ ಅನುಸರಿಸಿದ ಕೈಗಾರಿಕೆಗಳು

110: ಮಾರ್ಗಸೂಚಿನ ಅನುಸರಿಸದ ಕೈಗಾರಿಕೆಗಳ ವಿರುದ್ಧ ಕ್ರಮ

215: ಮಾರ್ಗಸೂಚಿ ಪಾಲಿಸಲಾಗದೇ ಸ್ವಯಂ ಬಂದ್‌ ಆದ ಕೈಗಾರಿಕೆಗಳು

ಒಳಚರಂಡಿ, ತ್ಯಾಜ್ಯ ನಿರ್ವಹಣೆ
150: ಒಳಚರಂಡಿ ಮೂಲಸೌಕರ್ಯ ಯೋಜನೆಗಳು
45: ಸೆಪ್ಟೆಂಬರ್ 2019 ಅವಧಿಗೆ ಪೂರ್ಣಗೊಂಡ ಯೋಜನೆಗಳು
61 ಕೋಟಿ ಲೀಟರ್ : ಈಗ ಪ್ರತಿನಿತ್ಯ ಸಂಸ್ಕರಿಸಲಾಗುತ್ತಿರುವ ತ್ಯಾಜ್ಯ ನೀರು
373 ಕೋಟಿ ಲೀಟರ್: ಪ್ರತಿನಿತ್ಯ ತ್ಯಾಜ್ಯ ನೀರು ಸಂಸ್ಕರಣೆ ಗುರಿ
 2,940 ಕಿ.ಮೀ: ಒಳಚರಂಡಿ ಮೂಲಸೌಕರ್ಯ ಜಾಲದ ಉದ್ದ
4,972 ಕಿ.ಮೀ: ಒಳಚರಂಡಿ ಮೂಲಸೌಕರ್ಯ ಜಾಲದ ಉದ್ದ ಗುರಿ

 ಯೋಜನಾ ಪ್ರಗತಿ: ಸರ್ಕಾರ ಹೇಳುವುದೇನು?

*ಮಾಲಿನ್ಯ ತಡೆ ಕ್ರಮಗಳಿಂದಾಗಿ ನದಿಯ ನೀರಿನ ಗುಣಮಟ್ಟ ಉತ್ತಮ. 32 ಜಾಗಗಳಲ್ಲಿ ನೀರಿನಲ್ಲಿರುವ ಆಮ್ಲಜನಕದ ಪ್ರಮಾಣದ ಹೆಚ್ಚಳ

*2019ರ ಜನವರಿ–ಅಕ್ಟೋಬರ್ ಅವಧಿಯಲ್ಲಿ 40 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ ಎಂದು ಅಂದಾಜಿಸಲಾಗಿದೆ

*ಗಂಗಾ ನದಿ ಪುನರುಜ್ಜೀವನ, ಮೀನುಗಾರಿಕೆ ಸಂರಕ್ಷಣೆ, ಗಂಗಾ ನದಿ ಡಾಲ್ಫಿನ್ ಸಂರಕ್ಷಣೆ ಶಿಕ್ಷಣದಂತಹ ಜೀವವೈವಿಧ್ಯ ಸಂರಕ್ಷಣಾ ಯೋಜನೆಗಳು ಆರಂಭ   

*ಡೆಹ್ರಾಡೂನ್, ನರೊರಾ, ಅಲಹಾಬಾದ್, ವಾರಾಣಸಿ ಮತ್ತು ಬಾರಕ್‌ಪುರದಲ್ಲಿ ಜೀವವೈವಿಧ್ಯ ತಳಿ ಸಂರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ

*ನದಿ ಪುನರುಜ್ಜೀವ ಕುರಿತ ವಿಚಾರ ಸಂಕಿರಣ, ರ‍್ಯಾಲಿ, ಸಮಾವೇಶ, ಸಾಮಾಜಿಕ ಜಾಲತಾಣ, ವಸ್ತು ಪ್ರದರ್ಶನಗಳ ಮೂಲಕ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ

*ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹಾಗೂ ಐದು ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ನದಿಯ ನೀರಿನ ಗುಣಮಟ್ಟ ಮೇಲ್ವಿಚಾರಣೆ 

*ನದಿಗೆ ತ್ಯಾಜ್ಯ ಹೊತ್ತುತರುವ 210 ಪ್ರಮುಖ ಚರಂಡಿಗಳು ಉಂಟುಮಾಡುವ ಮಾಲಿನ್ಯದ ಮೇಲೆ ನಿಗಾ

*ಮಾಲಿನ್ಯಕಾರಕ ಕೈಗಾರಿಕೆಗಳಲ್ಲಿ ಮಾರ್ಗದರ್ಶಿ ನಿಯಮಗಳ ಪಾಲನೆ ಹಾಗೂ ಆಧುನೀಕರಣ ಪ್ರಕ್ರಿಯೆ ಪರಿಶೀಲನೆ.

ಇದನ್ನೂ ಓದಿ: ವಾಚಕರವಾಣಿ | ಗಂಗೆ ಶುದ್ಧಿಯಾಗಿದೆ

ನೀರಿನ ವರ್ಗೀಕರಣ

ನದಿಯ ಹರಿವಿನುದ್ದಕ್ಕೂ ಇರುವ ಪ್ರದೇಶಗಳಲ್ಲಿ ಲಭ್ಯವಿರುವ ನೀರಿನ ಗುಣಮಟ್ಟವನ್ನು ಆಧರಿಸಿ, ಗಂಗಾ ನದಿಯ ನೀರನ್ನು ವರ್ಗೀಕರಿಸಲಾಗಿದೆ. ಕುಡಿಯುವ ನೀರು ಲಭ್ಯವಿರುವ ಸ್ಥಳಗಳನ್ನು ‘ಎ’ ಮತ್ತು ‘ಸಿ’ ವರ್ಗಗಳಾಗ ವರ್ಗೀಕರಿಸಲಾಗಿದೆ. ಸ್ನಾನಕ್ಕೆ ಬಳಸಬಹುದಾದ ನೀರು ಲಭ್ಯವಿರುವ ಸ್ಥಳಗಳನ್ನು ‘ಬಿ’ ವರ್ಗದಲ್ಲಿ ಗುರುತಿಸಲಾಗಿದೆ.

ಉತ್ತರಾಖಂಡದ ರುದ್ರಪ್ರಯಾಗ, ದೇವಪ್ರಯಾಗ, ರಿಷಿಕೇಶ ಮತ್ತು ಬಿಜ್ನೂರ್‌ಗಳಲ್ಲಿ ಮಾತ್ರ ‘ಎ’ ಗುಣಮಟ್ಟದ ನೀರು ಲಭ್ಯವಿದೆ. ಆದರೆ, ಶುದ್ಧೀಕರಿಸಿದ ನಂತರವಷ್ಟೇ ಈ ನೀರನ್ನು ಕುಡಿಯಬಹುದು

ರೂರ್ಕಿ, ಹರಿದ್ವಾರ, ಫಾರೂಕ್ಕಾಬಾದ್, ರಾಜಮಹಲ್ ಮತ್ತು ಸಾಹಿಲ್‌ಬಿ ಗಂಜ್‌ ಪ್ರದೇಶಗಳಲ್ಲಿ ಮಾತ್ರ ‘ಬಿ’ ಗುಣಮಟ್ಟದ ನೀರು ಲಭ್ಯವಿದೆ. ಮೂರು ಹಂತದ ಶುದ್ಧೀಕರಣದ ನಂತರ ಮಾತ್ರ ಈ ನೀರನ್ನು ಕುಡಿಯಬಹುದು.

ಬಿಹಾರದ ಪಾಟ್ನಾ ಮತ್ತು ಪಶ್ಚಿಮ ಬಂಗಾಳದ ಹೌರಾ–ಶಿವಪುರಗಳಲ್ಲಿ ನೀರಿನ ಗುಣಮಟ್ಟ ವಿಪರೀತ ಪ್ರಮಾಣದಲ್ಲಿ ಕುಸಿದಿದೆ. ಈ ನೀರು ಕುಡಿಯಲು ಯೋಗ್ಯವೇ ಅಲ್ಲ ಎಂದು ವರ್ಗೀಕರಿಸಲಾಗಿದೆ.

ಗಂಗೆಯ ಒಡಲಿಗೆ ಕೊಳಚೆನೀರು

ಉತ್ತರಾಖಂಡದಲ್ಲಿ 12 ಕೊಳಚೆ ನೀರಿನ ಮಾರ್ಗಗಳು, ಉತ್ತರ ಪ್ರದೇಶದಲ್ಲಿ 60 ಕೊಳಚೆ ನೀರಿನ ಮಾರ್ಗಗಳು, ಬಿಹಾರದಲ್ಲಿ 22 ಕೊಳಚೆ ನೀರಿನ ಮಾರ್ಗಗಳು, ಪಶ್ಚಿಮ ಬಂಗಾಳದಲ್ಲಿ 59 ಕೊಳಚೆ ನೀರಿನ ಮಾರ್ಗಗಳು ಗಂಗಾ ನದಿ ಸೇರುತ್ತವೆ.

ಆಧಾರ–ಮಾಹಿತಿ: ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ರತನ್ ಲಾಲ್ ಕಟಾರಿಯಾ ಅವರು 2019ರ ನವೆಂಬರ್ 29ರಂದು ಲೋಕಸಭೆಗೆ ನೀಡಿದ ಮಾಹಿತಿ; ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಜಾಲತಾಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು