ಸೋಮವಾರ, ಜುಲೈ 13, 2020
29 °C

ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸಿದ್ಧವಾಗುತ್ತಿರುವ ಯೋಧರು; ಅದೇ ಅವರ ಕೊನೆಯ ಫೋಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Kashmir

ನವದೆಹಲಿ: ಕಮಾಂಡೊಗಳ ವಿಶೇಷ ಪಡೆಯೊಂದು ಕಾಶ್ಮೀರದ ಕುಪ್ವಾರದ ಹಿಮಬೆಟ್ಟಗಳ ಮೇಲೆ ಹೆಲಿಕಾಪ್ಟರ್‌ನಿಂದ ಇಳಿಯುತ್ತಿರುವ ದೃಶ್ಯವೊಂದು ಏಪ್ರಿಲ್ 4ರಂದು 12.45ಕ್ಕೆ ಕ್ಯಾಮೆರಾದಲ್ಲಿ  ಸೆರೆಯಾಗಿತ್ತು. ಹೆಲಿಕಾಪ್ಟರ್‌ನಿಂದ ಒಬ್ಬ ಯೋಧ ಇಳಿಯುತ್ತಿದ್ದರೆ ಸೊಂಟದವರೆಗೆ ಹಿಮದಲ್ಲಿ ಮುಳುಗಿರುವ ಯೋಧರೊಬ್ಬರು ಅಲ್ಲಿ ನಿಂತಿರುವ ದೃಶ್ಯವಾಗಿತ್ತು ಅದು. ಅಂದಹಾಗೆ 4 ಪಾರಾ ಪಡೆಯ ಸೈನಿಕರ ಕೊನೆಯ ಫೋಟೊ ಇದಾಗಿತ್ತು. ವಿಶೇಷವೆಂದರೆ ಇದೇ ತಂಡ  2016ರಲ್ಲಿ ನಡೆದ ನಿರ್ದಿಷ್ಟ ದಾಳಿಯಲ್ಲಿ ಪಾಲ್ಗೊಂಡಿತ್ತು.

ಒಂದು ದಿನದ ನಂತರ ಎಲ್ಲ ಐದು ಯೋಧರು ಹುತಾತ್ಮರಾಗಿದ್ದರು. ಇವರು ಹುತಾತ್ಮರಾಗುವ ಮುನ್ನ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ನಾಲ್ವರು ಉಗ್ರರನ್ನು ಸದೆಬಡಿದಿದ್ದರು.

ಉಗ್ರರ ವಿರುದ್ಧದ ಕಾರ್ಯಾಚರಣೆಗಾಗಿ ಕಮಾಂಡೊಗಳು ವಿಶೇಷ ಪಡೆಯ ಎರಡು ತಂಡಗಳನ್ನು ನಿಯೋಜಿಸಲಾಗಿತ್ತು. ಮರುದಿನ ಈ ಎರಡು ತಂಡಗಳನ್ನು ವಿಭಜಿಸಿ, ಕಾರ್ಯತಂತ್ರ ರೂಪಿಸಲಾಗಿತ್ತು.

ಇದೆಲ್ಲ ಮುಗಿದ ಮೇಲೆ ಏಪ್ರಿಲ್ 5ರಂದು ನಾಲ್ವರು ಉಗ್ರರನ್ನು ಕಮಾಂಡೊಗಳು ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಉಗ್ರರು ಐವರು ಯೋಧರನ್ನು ಹತ್ಯೆ ಮಾಡಿದರು. ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರ ಜತೆ ನಡೆದ ಭೀಕರ ಕಾಳಗ ಇದಾಗಿತ್ತು. ಐದನೇ ಉಗ್ರನೊಬ್ಬ ಗಡಿ ನಿಯಂತ್ರಣ ರೇಖೆ ಬಳಿ ಓಡಿದ್ದು, ಅಲ್ಲಿದ್ದ ಬೆಟಾಲಿಯನ್ ತಕ್ಷಣವೇ ಆತನನ್ನು ಹತ್ಯೆ ಮಾಡಿದೆ ಎಂದು ಕಾಶ್ಮೀರಲ್ಲಿರುವ ಕಮಾಂಡರ್ ಲೆ.ಜನರಲ್ ಬಿ.ಎಸ್ ರಾಜು ಹೇಳಿದ್ದಾರೆ.

ಉಗ್ರರ ವಿರುದ್ಧದ ಈ ಕಾರ್ಯಾಚರಣೆಗೆ 'ರಂಗ್‌ದೂರಿ ಬೆಹಕ್ ' ಎಂದು ಹೆಸರಿಡಲಾಗಿತ್ತು  ಏಪ್ರಿಲ್ 1ರಂದು ಈ ಕಾರ್ಯಾಚರಣೆ ಆರಂಭವಾಗಿತ್ತು. ಅಂದರೆ ವಿಶೇಷ ಪಡೆಯ ಕಮಾಂಡೋಗಳು ಹುತಾತ್ಮರಾಗುವುದಕ್ಕಿಂತ 3 ದಿನ ಮುನ್ನ. ಗಡಿ ನಿಯಂತ್ರಣ ರೇಖೆ ದಾಟಿ ಉಗ್ರರು ಒಳಸುಳಿದ್ದಾರೆ ಎಂಬ ಮಾಹಿತಿ ಲಭಿಸಿದ ಕೂಡಲೇ ಕುಪ್ವಾರಾದಲ್ಲಿ ಯೋಧರ ಪಡೆ ನಿಯೋಜಿಸಲಾಗಿತ್ತು. ಏಪ್ರಿಲ್ 3 ಸಂಜೆ 4.30ರಂದು ಮತ್ತು ಏಪ್ರಿಲ್ 4, ಸಂಜೆ 6.30ರಂದು ಯೋಧರು ಅಲ್ಲಿ ಅಭ್ಯಾಸ ನಡೆಸಿದ್ದರು. 

ತಾವು ಅಲ್ಲಿರುವುದು ಯೋಧರಿಗೆ ತಿಳಿದಿದೆ ಎಂಬುದನ್ನು ಅರಿತ ಉಗ್ರರು ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಆಳವಾದ ಕಣಿವೆಯೊಂದಕ್ಕೆ ಎಸೆದಿದ್ದರು ಅಂತಾರೆ ಲೆ.ಜನರಲ್ ರಾಜು. ಅಷ್ಟೊತ್ತಿಗೆ ಯೋಧರು ಕಾರ್ಯಾಚರಣೆ ಆರಂಭಿಸಿದ್ದರು.

ಉತ್ತರದ ಕಡೆ ಇರುವ ಗಡಿ ನಿಯಂತ್ರಣ ರೇಖೆ ಮತ್ತು ಶಂಶಾಬರಿ ರೇಂಜ್ ನಡುವಿನ ಪ್ರದೇಶವನ್ನು ಯೋಧರು ಸುತ್ತುವರಿಯುವ ಮೂಲಕ ಉಗ್ರರನ್ನು ಯಶಸ್ವಿಯಾಗಿ ಪ್ರತ್ಯೇಕವಾಗಿರಿಸಿದರು. ಆಮೇಲೆ ಅವರನ್ನು ಮುಗಿಸಲು ವಿಶೇಷ ಪಡೆಯನ್ನು ಕರೆಯಲಾಯಿತು. 
ಉಗ್ರರು ಇರುವ ಪ್ರದೇಶದ ಬಳಿಯಲ್ಲಿಯೇ ವಿಶೇಷ ಪಡೆಯ ಕಮಾಂಡೊಗಳನ್ನು  ಹೆಲಿಕಾಪ್ಟರ್‌ನಲ್ಲಿ ಕರೆತಂದು ಇಳಿಸಿದ್ದೆವು. ಆ ಪ್ರದೇಶದಲ್ಲಿ ಕಾರ್ಯಾಚರಣೆ  ಮಾಡುವುದು ಸವಾಲಾಗಿತ್ತು. ಹಿಮದಿಂದ ಆವೃತವಾದ ಪ್ರದೇಶದಲ್ಲಿ ಪ್ರತಿಯೊಂದು ಹೆಜ್ಜೆಯೂ ಜಾರುತ್ತಿತ್ತು.

ಏಪ್ರಿಲ್ 5 ರಂದು ಮುಂಜಾನೆ ವಿಶೇಷ ಪಡೆಗಳ ತಂಡವು ಹಿಮದ ಆವರಣಕ್ಕೆ ಕಾಲಿಟ್ಟಿತು. ಅಲ್ಲಿ ಯಾವುದೇ ಬೆಂಬಲವಿಲ್ಲದೆ ನಡೆದಾಡುವುದು ಕಷ್ಟ. ಇಬ್ಬರು ಯೋಧರ ಭಾರಕ್ಕೆ ಆ ಹಿಮದ ಗೋಡೆ ಮುರಿದು ಬಿತ್ತು. ಇಬ್ಬರು ಯೋಧರು ಜಾರಿ ಬಿದ್ದರು ಎಂದು ಎರಡನೇ ತಂಡದಲ್ಲಿದ್ದ ಪಾರಾ ಕಮಾಂಡೊ ಒಬ್ಬರು ಹೇಳಿದ್ದಾರೆ. ಇದೆಲ್ಲ ನಡೆಯುವಾಗ ಎರಡನೇ ತಂಡ ಸ್ವಲ್ಪ ದೂರದಲ್ಲೇ ಇತ್ತು.
 ಹೀಗೆ ಯೋಧರು ಜಾರಿ ಬಿದ್ದದ್ದು ಉಗ್ರರ ಅಡಗುತಾಣದ ಬಳಿಯೇ ಆಗಿತ್ತು. ತಕ್ಷಣವೇ ಅಲ್ಲಿ ಗುಂಡು ಹಾರಾಟ ಶುರುವಾಯಿತು. ನಮ್ಮ ಯೋಧರ ರಕ್ಷಣೆಗಾಗಿ ಅಲ್ಲಿ ಉಳಿದ ತಂಡವೂ ದೌಡಾಯಿತು. ಆಗ ಉಗ್ರರು  ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಯೋಧರು ದಾಳಿ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದರು. ಮರುದಿನ ಬೆಳಗ್ಗೆ ನೋಡಿದಾಗ ಸುಬೇದಾರ್ ಉಗ್ರನೊಬ್ಬನ ಮೇಲೆ ಬಿದ್ದಿರುವುದನ್ನು ನೋಡಿದೆ ಎಂದು ಹೆಸರು ಹೇಳಲಿಚ್ಛಿಸದ ಕಮಾಂಡೊ ಒಬ್ಬರು ಹೇಳಿದ್ದಾರೆ.

ಸುಬೇದಾರ್ ಸಂಜೀವ್ ಕುಮಾರ್, ಹಲಾವ್ದಾರ್ ದಾವೇಂದ್ರ ಸಿಂಗ್, ಸಿಪಾಯ್ ಬಲ್ ಕೃಷನ್, ಸಿಪಾಯ್ ಅಮಿತ್ ಕುಮಾರ್ ಮತ್ತು ಸಿಪಾಯ್ ಚತ್ರಪಾಲ್ ಸಿಂಗ್ -ಈ ಯೋಧರು ಉಗ್ರರನ್ನು ಸದೆ ಬಡಿದು ಹುತಾತ್ಮರಾಗಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು